
ಬೆಂಗಳೂರು ಬಾಲಿವುಡ್ ನಟಿ ತಾಪ್ಸೀ ಪನ್ನು, ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗಳಿಗೆ ಕಾರಣವಾಗುತ್ತವೆ. ಈಗ, ತಾಪ್ಸೀ ಅವರ ಮತ್ತೊಂದು ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಿಂದಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ತಾಪ್ಸೀ ಭಾಗವಹಿಸಿದ್ದ ಟಾಕ್ ಶೋನ ರಾಪಿಡ್ ಫೈರ್ ರೌಂಡ್‌ನಲ್ಲಿ, ಆಂಕರ್ ಒಂದು ಪ್ರಶ್ನೆ ಕೇಳಿದರು. ನಿಮ್ಮ ನೆಚ್ಚಿನ ರಾಜಕೀಯ ನಾಯಕ ಯಾರು ಎನ್ನುವುದು ಆ ಪ್ರಶ್ನೆಯಾಗಿತ್ತು. ಇದಕ್ಕಾಗಿ ಎರಡು ಆಯ್ಕೆಗಳನ್ನು ಮುಂದಿನ ಸ್ಕ್ರೀನ್ ಮೇಲೆ ತೋರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಫೋಟೋಗಳು ಸ್ಕ್ರೀನ್ ಮೇಲೆ ಬಂದವು. ಹೆಚ್ಚು ಯೋಚಿಸದೆ, ತಾಪ್ಸೀ ಮುಂದೆ ಬಂದು ನರೇಂದ್ರ ಮೋದಿಯವರ ಚಿತ್ರವನ್ನು ಮುಟ್ಟಿದರು.
ಇದನ್ನು ನೋಡಿದ ಅಲ್ಲಿದ್ದ ಪ್ರೇಕ್ಷಕರಲ್ಲಿ ಕೆಲವರು ಚಪ್ಪಾಳೆ ತಟ್ಟಿದರು. ಆದರೆ, ನಂತರ ತಾಪ್ಸೀ ಹೇಳಿದ ಮಾತೇ ಈ ವಿಡಿಯೋ ವೈರಲ್ ಆಗಲು ಕಾರಣ. "ನನಗೆ ಈ ದೇಶದಲ್ಲಿ ಇನ್ನೂ ಬದುಕಬೇಕು," ಎಂದು ನಟಿ ಹೇಳಿದರು. 22 ಸೆಕೆಂಡುಗಳ ಈ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇನ್ನು ತಾಪ್ಸಿ ಪನ್ನು ಅವರ ಈ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ. ಮಾರುತಿ ನೈನಾ ಎನ್ನುವವರು ಇದು ಕೇವಲ ಅಭಿಪ್ರಾಯವಲ್ಲ. ಈಗಿನ ಪರಿಸ್ಥಿತಿಯ ಬಗ್ಗೆ ಅವರಾಡಿರುವ ಕಹಿ ಸತ್ಯ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಮತ್ತೋರ್ವ ನೆಟ್ಟಿಗ, ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಿಯಾದರೇ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಹೀಗೆ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಫ್ರೀ ವಿಲ್ಲೆ ಎನ್ನುವ ನೆಟ್ಟಿಗರೊಬ್ಬರು, ಆಕೆಯ ಮೇಲಿನ ಗೌರವ ನನಗೆ ನಾಲ್ಕು ಪಟ್ಟು ಹೆಚ್ಚಾಯಿತು. ಇದನ್ನು ಹೇಳೋಕೆ ಧೈರ್ಯ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ನಿತ್ಯಾ ಎನ್ನುವವರು ನಿಮಗೆ ನಾಚಿಕೆಯಾಗಬೇಕು. ಸತ್ಯದ ಪರ ಹಾಗೂ ಜನರ ಪರ ನಿಲ್ಲಿ ಎಂದು ಟೀಕಿಸಿದ್ದಾರೆ.
ಈ ಹಿಂದೆಯೂ ತಾಪ್ಸೀ ಪನ್ನು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 2019ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ಅವಕಾಶ ಸಿಕ್ಕರೆ ಏನು ಹೇಳುತ್ತೀರಿ ಎಂದು ಕೇಳಲಾಗಿತ್ತು. ಅದಕ್ಕೆ ಅವರು, "ಇಂದು ದೇಶದಲ್ಲಿ ಗುಂಪು ಹಲ್ಲೆ ಮತ್ತು ಇತರ ಹಲವು ಘಟನೆಗಳು ನಡೆಯುತ್ತಿವೆ. ಅವಕಾಶ ಸಿಕ್ಕರೆ, ರಾಷ್ಟ್ರೀಯತೆ ಎಂದರೆ ಏನೆಂದು ದೇಶಕ್ಕೆ ತಿಳಿಸುವಂತೆ ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ. ನಾವು ಅವರನ್ನು ನಮ್ಮ ನಾಯಕರೆಂದು ಪರಿಗಣಿಸುತ್ತೇವೆ. ಅವರು ನಿಜವಾದ ರಾಷ್ಟ್ರೀಯತೆ ಏನೆಂದು ಹೇಳಿದರೆ, ಅವರನ್ನು ಹಿಂಬಾಲಿಸುವವರು ಅದನ್ನು ಕೇಳುತ್ತಾರೆ. ಇದು ಅವರ ಮುಂದಿನ ಪೀಳಿಗೆಯವರ ಮೇಲೆ ಪ್ರಭಾವ ಬೀರಬಹುದು," ಎಂದು ತಾಪ್ಸೀ ಪನ್ನು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.