ಅಂದು ಧ್ವನಿಗಾಗಿ ಗೇಲಿ, ಇಂದು ಅದೇ ಧ್ವನಿಗೆ ಫಿದಾ: ಕಂಚಿನ ಕಂಠವಿರುವ ಈ ನಟನ ಬಗ್ಗೆ ನಿಮಗೆಷ್ಟು ಗೊತ್ತು?

Published : Nov 14, 2026, 03:29 PM IST
Arjun Das

ಸಾರಾಂಶ

ಒಂದು ಕಾಲದಲ್ಲಿ ಮುಜುಗರಕ್ಕೆ ಕಾರಣವಾಗಿದ್ದ ಧ್ವನಿಯೇ ಇಂದು ತಮ್ಮ ಗುರುತಾಗಿದೆ ಎಂದು ಹೇಳಿರುವ ಅರ್ಜುನ್ ದಾಸ್ ಅವರ ಬಾಲ್ಯದ ಅನುಭವ, ಆತ್ಮವಿಶ್ವಾಸ ಮತ್ತು ಜೀವನದ ಸ್ಫೂರ್ತಿದಾಯಕ ಮಾತುಗಳ ಕುರಿತ ವರದಿ ಇಲ್ಲಿದೆ.

ಚಿತ್ರರಂಗದಲ್ಲಿ ಕೆಲವರ ಪ್ರತಿಭೆಯೇ ಅವರ ಗುರುತಾಗಿ ಬಿಡುತ್ತದೆ. ಅಂತಹವರಲ್ಲಿ ನಟ ಅರ್ಜುನ್ ದಾಸ್ ಕೂಡ ಒಬ್ಬರು. ಅವರ ಗಂಭೀರ ಹಾಗೂ ವಿಶಿಷ್ಟ ಧ್ವನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ‘ಕೈದಿ’, ‘ಮಾಸ್ಟರ್’ ಸಿನಿಮಾಗಳಲ್ಲಿನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಅವರು, ಹಾಲಿವುಡ್‌ನ ಜನಪ್ರಿಯ ಸಿನಿಮಾ ‘ದಿ ಲಯನ್ ಕಿಂಗ್’ನ ತಮಿಳು ಆವೃತ್ತಿಯಲ್ಲಿ ಮುಫಾಸಾ ಪಾತ್ರಕ್ಕೆ ಧ್ವನಿ ನೀಡುವ ಮೂಲಕವೂ ಮೆಚ್ಚುಗೆ ಗಳಿಸಿದ್ದಾರೆ.

ಆದರೆ ಇಂದು ಅಭಿಮಾನಿಗಳು ಮೆಚ್ಚುವ ಇದೇ ಧ್ವನಿ ಒಂದು ಕಾಲದಲ್ಲಿ ಅವರಿಗೆ ಮುಜುಗರ ಮತ್ತು ನೋವಿಗೆ ಕಾರಣವಾಗಿತ್ತಂತೆ! ಇತ್ತೀಚೆಗೆ ಪರ್ಲೆ ಮಾನಿ ನಡೆಸಿಕೊಡುವ ‘ಪರ್ಲೆ ಮಾನಿ ಶೋ’ನಲ್ಲಿ ಭಾಗವಹಿಸಿದ್ದ ಅರ್ಜುನ್ ದಾಸ್, ತಮ್ಮ ಬಾಲ್ಯದ ದಿನಗಳ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ 18ನೇ ವಯಸ್ಸಿನ ಅರ್ಜುನ್‌ಗೆ ಕೇವಲ 10ರಿಂದ 15 ನಿಮಿಷ ಮಾತನಾಡುವ ಅವಕಾಶ ಸಿಕ್ಕರೆ ಏನು ಹೇಳುತ್ತೀರಿ ಎಂಬ ನಿರೂಪಕಿಯ ಪ್ರಶ್ನೆಗೆ ಅವರು ನೀಡಿದ ಉತ್ತರ ಈಗ ಗಮನ ಸೆಳೆಯುತ್ತಿದೆ.

ಧ್ವನಿ, ದೇಹದ ತೂಕದ ವಿಚಾರದಲ್ಲಿ ಎದುರಿಸಿದ್ದರು ಅಣಕ!

ಚಿಕ್ಕ ವಯಸ್ಸಿನಲ್ಲಿ ತಮ್ಮ ದಪ್ಪ ಧ್ವನಿ ಹಾಗೂ ದೇಹದ ತೂಕದ ಕಾರಣದಿಂದ ಸಾಕಷ್ಟು ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಗಿದ್ದಾಗಿ ಅರ್ಜುನ್ ದಾಸ್ ಹೇಳಿದ್ದಾರೆ. ಅತಿಯಾದ ತೂಕದ ಜೊತೆಗೆ ಇತರರಿಗಿಂತ ಭಿನ್ನವಾಗಿದ್ದ ಗಂಭೀರ ಧ್ವನಿ ಅವರ ಪಾಲಿಗೆ ಅಂದು ದೊಡ್ಡ ಮುಜುಗರದ ಸಂಗತಿಯಾಗಿತ್ತಂತೆ. ಈ ಕಾರಣಕ್ಕೆ ಹಲವರು ಅವರನ್ನು ತಮಾಷೆ ಮಾಡುತ್ತಿದ್ದರು. ಧ್ವನಿಯ ವಿಚಾರದಲ್ಲಿ ಅವಮಾನಿಸುವುದರ ಜೊತೆಗೆ ದೇಹದ ತೂಕವನ್ನೂ ಗೇಲಿ ಮಾಡುತ್ತಿದ್ದರಂತೆ.

ಅಂದಿನ ದಿನಗಳನ್ನು ನೆನಪಿಸಿಕೊಂಡ ಅರ್ಜುನ್, ತಮ್ಮ 18ನೇ ವಯಸ್ಸಿನ ಸ್ವರೂಪಕ್ಕೆ ಒಂದು ಮಾತು ಹೇಳಬೇಕೆಂದರೆ, ಇತರರ ಟೀಕೆಗಳಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳಬೇಡ, ಗಟ್ಟಿಯಾಗಿ ನಿಲ್ಲು, ಎಲ್ಲವೂ ಒಂದು ದಿನ ಸರಿಯಾಗುತ್ತದೆ ಎಂದು ಧೈರ್ಯ ತುಂಬುತ್ತಿದ್ದೆ ಎಂದಿದ್ದಾರೆ. ಅಂದು ಯಾರಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದೆಯೋ, ಅದೇ ಧ್ವನಿಗೆ ಮುಂದೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಆಗಲೇ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ.

‘ನಾನು ಸಾಕಷ್ಟು ಸಮರ್ಥನೇ?’ ಎಂಬ ಪ್ರಶ್ನೆಯೇ ‘ಜಾನ್ ಡೋ’ ಸಿನಿಮಾದ ಆಕರ್ಷಣೆ!

ತಮ್ಮ ಜೀವನದಲ್ಲಿ ಎದುರಿಸಿದ ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯ ಅನುಭವಗಳೇ ‘ಜಾನ್ ಡೋ’ ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದತ್ತ ತಮ್ಮನ್ನು ಹೆಚ್ಚು ಆಕರ್ಷಿಸಿದವು ಎಂದು ಅರ್ಜುನ್ ಹೇಳಿದ್ದಾರೆ. ಈ ಸಿನಿಮಾದ ಪ್ರಮುಖ ವಿಚಾರವೇ, ‘ನಾನು ಸಾಕಷ್ಟು ಸಮರ್ಥನೇ?’ ಎಂಬ ಪ್ರಶ್ನೆ. ಈ ಪ್ರಶ್ನೆ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ತಂದೆ-ತಾಯಿ, ಸಂಗಾತಿ, ಸಹೋದರ-ಸಹೋದರಿ ಅಥವಾ ಸ್ನೇಹಿತರಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಇಂತಹ ಅನುಮಾನವನ್ನು ಎದುರಿಸುತ್ತಾರೆ.

ನಾವು ಸಾಕಾಗುವುದಿಲ್ಲವೇನೋ ಎಂಬ ಭಾವನೆ ಹಲವರನ್ನು ಕಾಡುತ್ತದೆ. ಆದರೆ ಒಬ್ಬ ವ್ಯಕ್ತಿಗೆ ತಾನು ಸಾಕು, ತನ್ನಲ್ಲಿಯೂ ಮೌಲ್ಯವಿದೆ ಎಂಬ ಭರವಸೆಯನ್ನು ನೀಡುವವರು ಬಹಳ ಕಡಿಮೆ ಎಂದು ಅರ್ಜುನ್ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನವರಿಗೆ ಅವರ ಮೌಲ್ಯವನ್ನು ಆಗಾಗ ನೆನಪಿಸುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ತಮ್ಮನ್ನು ತಾವು ನಂಬುವಂತೆ ಪ್ರೋತ್ಸಾಹಿಸಬೇಕು ಎಂಬ ಸಂದೇಶವನ್ನೂ ಅವರು ಹಂಚಿಕೊಂಡಿದ್ದಾರೆ.

‘ರಾಕಿ’ ಸಿನಿಮಾದ ಡೈಲಾಗ್‌ ಅರ್ಜುನ್‌ಗೆ ದೊಡ್ಡ ಸ್ಫೂರ್ತಿ!

ಬಾಲ್ಯದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದರೂ, ಇಂದು ಅರ್ಜುನ್ ದಾಸ್ ತಮ್ಮದೇ ಆದ ಗಟ್ಟಿಯಾದ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಅದಕ್ಕೆ ಅವರಿಗೆ ಸ್ಫೂರ್ತಿ ನೀಡುತ್ತಿರುವುದು ‘ರಾಕಿ’ ಸಿನಿಮಾದ ಪ್ರಸಿದ್ಧ ಮಾತು. ಈ ಮಾತನ್ನೇ ಅವರು ತಮ್ಮ ಮೊಬೈಲ್ ವಾಲ್‌ಪೇಪರ್ ಆಗಿಯೂ ಇಟ್ಟುಕೊಂಡಿದ್ದಾರಂತೆ. 'ನೀವು ಎಷ್ಟು ಬಲವಾಗಿ ಹೊಡೆಯುತ್ತೀರಿ ಎಂಬುದಕ್ಕಿಂತ, ಎಷ್ಟು ಬಲವಾದ ಹೊಡೆತಗಳನ್ನು ತಡೆದುಕೊಂಡು ಮತ್ತೆ ಮುಂದೆ ಸಾಗುತ್ತೀರಿ ಎಂಬುದೇ ಮುಖ್ಯ' ಎಂಬುದು ಆ ಮಾತಿನ ಅರ್ಥ.

ಇನ್ನು ತಮ್ಮ ಬದುಕಿನ ಕಷ್ಟದ ಸಮಯದಲ್ಲಿ ತಂದೆ-ತಾಯಿಯೇ ದೊಡ್ಡ ಆಸರೆಯಾಗಿದ್ದರು ಎಂದು ಅರ್ಜುನ್ ಸ್ಮರಿಸಿದ್ದಾರೆ. ಹೊರಗಿನವರ ಟೀಕೆಗಳಿಗೆ ಕಿವಿಗೊಡದೆ, ತಲೆತಗ್ಗಿಸಿ ಕಷ್ಟಪಟ್ಟು ಕೆಲಸ ಮಾಡುತ್ತಾ, ನಮ್ಮ ಮೇಲೆ ನಮಗೆ ನಂಬಿಕೆ ಇಟ್ಟು ಮುನ್ನಡೆಯಬೇಕು ಎಂಬುದು ಅವರ ಮಾತು. ಒಂದು ಕಾಲದಲ್ಲಿ ಅಣಕಕ್ಕೆ ಕಾರಣವಾಗಿದ್ದ ಧ್ವನಿಯೇ ಇಂದು ಅರ್ಜುನ್ ದಾಸ್ ಅವರ ದೊಡ್ಡ ಶಕ್ತಿಯಾಗಿದೆ. ಟೀಕೆಗಳನ್ನು ಮೆಟ್ಟಿನಿಂತು ತಮ್ಮದೇ ಆದ ಗುರುತು ಮೂಡಿಸಿರುವ ಅವರ ಬದುಕಿನ ಪಯಣ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವ ಅನೇಕರಿಗೆ ಸ್ಫೂರ್ತಿಯಾಗುವುದರಲ್ಲಿ ಸಂದೇಹವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿದ ಅತ್ಯಂತ ಕಿರಿಯ ನಿರ್ದೇಶಕ: ಶಂಕರ್ ನಾಗ್ ನಿರ್ದೇಶನದ ಕೊನೆಯ ಚಿತ್ರದ ರೋಚಕ ಸಂಗತಿಗಳು
ಲಂಬೋದರ 2.0 ಸಿನಿಮಾ ವಿಮರ್ಶೆ: ನಗಿಸುತ್ತಲೇ ಡಿಜಿಟಲ್ ಜಗತ್ತಿನ ಕರಾಳ ಮುಖ ತೆರೆದಿಟ್ಟ ಸಿಂಪಲ್ ಸುನಿ!