ಆ ಹಾಡು ಹಾಡಲು ನರಕಯಾತನೆ ಅನುಭವಿಸಿದ್ದೆ: ರೆಕಾರ್ಡಿಂಗ್ ಮಧ್ಯೆ ಅಂದು ಎಸ್‌ಪಿಬಿಗೆ ಆಗಿದ್ದೇನು?

Published : Oct 23, 2026, 06:31 PM IST
SP Balasubrahmanyam

ಸಾರಾಂಶ

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ‘ಗೀತಾಂಜಲಿ’ ಚಿತ್ರದ ‘ಓ ಪಾಪ ಲಾಲಿ’ ಹಾಡಿನ ರೆಕಾರ್ಡಿಂಗ್ ವೇಳೆ ಎದುರಿಸಿದ್ದ ಧ್ವನಿ ಸಮಸ್ಯೆ, ಶಸ್ತ್ರಚಿಕಿತ್ಸೆಗೂ ಮುನ್ನದ ಆತಂಕ, ಹಳೆಯ ಸಂದರ್ಶನದಲ್ಲಿ ಹಂಚಿಕೊಂಡಿದ್ದ ಅನುಭವಗಳು ಇಲ್ಲಿವೆ.

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ (SPB) ತಮ್ಮ ಅದ್ಭುತ ಕಂಠಸಿರಿಯಿಂದ ಕೋಟ್ಯಂತರ ಸಂಗೀತಪ್ರಿಯರ ಮನಗೆದ್ದವರು. ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ವೃತ್ತಿಜೀವನದಲ್ಲಿ ಹಲವು ಸವಾಲುಗಳನ್ನೂ ಎದುರಿಸಿದ್ದರು. ಇದೀಗ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಅವರು ಹಂಚಿಕೊಂಡಿದ್ದ ಅನುಭವಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿವೆ. ಅದರಲ್ಲೂ, ಒಂದು ಹಾಡಿನ ರೆಕಾರ್ಡಿಂಗ್ ವೇಳೆ ಧ್ವನಿಯ ಸಮಸ್ಯೆಯಿಂದ ತಾವು ಅನುಭವಿಸಿದ ಕಷ್ಟವನ್ನು ಅವರು ವಿವರಿಸಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ.

‘ಓ ಪಾಪ ಲಾಲಿ’ ಹಾಡುವಾಗ ಧ್ವನಿಯೇ ಕೈಕೊಟ್ಟಿತ್ತು!

ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮ್ಮ ಸುದೀರ್ಘ ಸಂಗೀತ ಪಯಣದಲ್ಲಿ ಅಸಂಖ್ಯಾತ ಸ್ಮರಣೀಯ ಗೀತೆಗಳನ್ನು ಹಾಡಿದ್ದಾರೆ. ಆದರೆ, ಕೆಲವು ಹಾಡುಗಳನ್ನು ರೆಕಾರ್ಡ್ ಮಾಡುವ ಸಂದರ್ಭ ಅವರು ತೀವ್ರ ಸಂಕಷ್ಟವನ್ನೂ ಎದುರಿಸಿದ್ದರು. ಈ ಕುರಿತು ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಾಳು, ಮಣಿರತ್ನಂ ನಿರ್ದೇಶನದ ‘ಗೀತಾಂಜಲಿ’ ಚಿತ್ರದ ಹಾಡುಗಳ ರೆಕಾರ್ಡಿಂಗ್ ವೇಳೆ ತಮಗಾದ ಕಠಿಣ ಅನುಭವವನ್ನು ನೆನಪಿಸಿಕೊಂಡಿದ್ದರು.

‘ಗೀತಾಂಜಲಿ’ ಚಿತ್ರದ ‘ಓ ಪಾಪ ಲಾಲಿ’ ಹಾಡನ್ನು ತೆಲುಗು ಮತ್ತು ಮಲಯಾಳಂ ಆವೃತ್ತಿಗಳಲ್ಲಿ ರೆಕಾರ್ಡ್ ಮಾಡುವಾಗ ತಮ್ಮ ಧ್ವನಿ ಸರಿಯಾಗಿ ಸಹಕರಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದರು. ಧ್ವನಿಯ ತಂತುಗಳಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಹಾಡಲು ತೀವ್ರ ತೊಂದರೆಯಾಗುತ್ತಿತ್ತು. ಒಂದೊಂದು ಪದವನ್ನು ಸ್ಪಷ್ಟವಾಗಿ ಉಚ್ಚರಿಸುವುದಕ್ಕೂ ಕಷ್ಟಪಡಬೇಕಾಗಿತ್ತು. ಹೀಗಾಗಿ ರೆಕಾರ್ಡಿಂಗ್ ಮಧ್ಯೆ ವಿರಾಮ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.

ಹಾಡನ್ನು ಸರಿಯಾಗಿ ಹಾಡಲಾಗದೆ ತಮ್ಮ ಮೇಲೆಯೇ ತಮಗೆ ಅಸಹನೆ ಮತ್ತು ಕೋಪ ಬರುತ್ತಿತ್ತು ಎಂದು ಬಾಳು ಹೇಳಿಕೊಂಡಿದ್ದರು. ಆ ಸಮಯದಲ್ಲಿ ಅನುಭವಿಸಿದ ನೋವನ್ನು ಅವರು ನರಕಯಾತನೆಗೆ ಹೋಲಿಸಿದ್ದರು. ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಗಾಯಕನಿಗೆ ತನ್ನ ಕಂಠವೇ ಕೈಕೊಟ್ಟಾಗ ಎದುರಾಗುವ ಮಾನಸಿಕ ವೇದನೆ ಎಷ್ಟಿರಬಹುದು ಎಂಬುದಕ್ಕೆ ಅವರ ಅನುಭವವೇ ಸಾಕ್ಷಿ.

ಮನೆಯಲ್ಲಿ ಕೂಡ ನೆಮ್ಮದಿ ಇರಲಿಲ್ಲ!

ಧ್ವನಿಯ ಸಮಸ್ಯೆಯೊಂದೇ ಅಲ್ಲದೆ, ಆ ದಿನಗಳಲ್ಲಿ ಮನೆಯಲ್ಲಿಯೂ ನೆಮ್ಮದಿ ಇರಲಿಲ್ಲ ಎಂದು ಎಸ್.ಪಿ.ಬಿ. ನೆನಪಿಸಿಕೊಂಡಿದ್ದರು. ಕುಟುಂಬದ ಕೆಲವರು ಮೂಢನಂಬಿಕೆಗಳ ಕಾರಣದಿಂದ ಪೂಜೆ, ಪುನಸ್ಕಾರಗಳನ್ನು ಮಾಡಿಸುವಂತೆ ಒತ್ತಾಯಿಸುತ್ತಿದ್ದರು. ತಾನು ಅದಕ್ಕೆ ಒಪ್ಪದಿದ್ದರೂ, ತಮ್ಮ ಮಾತನ್ನು ಅವರು ನಂಬುತ್ತಿರಲಿಲ್ಲ ಎಂದು ಹೇಳಿದ್ದರು.

ಸುಮಾರು ನಾಲ್ಕು ತಿಂಗಳ ಕಾಲ ಈ ಸಮಸ್ಯೆ ಅವರನ್ನು ಕಾಡಿತ್ತು. ಪ್ರತಿದಿನವೂ ಹಾಡುಗಳ ರೆಕಾರ್ಡಿಂಗ್‌ಗಾಗಿ ಕರೆಗಳು ಬರುತ್ತಿದ್ದವು. ಆದರೆ, ತಮಗೆ ಹಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಿರ್ಮಾಪಕರಿಗೆ ತಿಳಿಸುವುದೇ ದೊಡ್ಡ ಸವಾಲಾಗಿತ್ತು. ಕೊನೆಗೆ, ತಮ್ಮ ಆರೋಗ್ಯದ ಪರಿಸ್ಥಿತಿಯನ್ನು ವಿವರಿಸಿ, ತಮಗಾಗಿ ಕಾಯಬೇಡಿ; ಬೇಕಿದ್ದರೆ ಬೇರೆ ಗಾಯಕರಿಂದ ಹಾಡಿಸಿಕೊಳ್ಳಿ ಎಂದು ನಿರ್ಮಾಪಕರಿಗೆ ಸೂಚಿಸಿದ್ದರಂತೆ.

‘ಶಸ್ತ್ರಚಿಕಿತ್ಸೆ ಮಾಡಿಸಬೇಡಿ’ ಎಂದಿದ್ದ ಲತಾ ಮಂಗೇಶ್ಕರ್!

ಧ್ವನಿಯ ಸಮಸ್ಯೆಗೆ ಚಿಕಿತ್ಸೆ ಪಡೆಯುವ ವಿಚಾರದಲ್ಲಿಯೂ ಬಾಳು ಗೊಂದಲಕ್ಕೆ ಸಿಲುಕಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರೂ, ಶಸ್ತ್ರಚಿಕಿತ್ಸೆಯಿಂದ ಧ್ವನಿಯೇ ಶಾಶ್ವತವಾಗಿ ಕಳೆದುಹೋಗಬಹುದು ಎಂದು ಕೆಲವರು ಎಚ್ಚರಿಸಿದ್ದರು. ಈ ಸಮಯದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಬಾಳು ಅವರಿಗೆ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದರಂತೆ.

ಧ್ವನಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ತಿಳಿದ ಬಳಿಕ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಸಲಹೆ ನೀಡಿದ್ದರು ಎಂದು ಬಾಳು ತಮ್ಮ ಸಂದರ್ಶನದಲ್ಲಿ ವಿವರಿಸಿದ್ದರು. ಧ್ವನಿಗೆ ಸಂಬಂಧಿಸಿದ ಸಣ್ಣ ಅಂಗಾಂಶಕ್ಕೆ ಹಾನಿಯಾದರೂ ಹಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರಂತೆ. ಆದರೆ, ಎಲ್ಲ ಅಂಶಗಳನ್ನು ಪರಿಗಣಿಸಿದ ಬಳಿಕ ಎಸ್.ಪಿ.ಬಿ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದರು.

ಆಪರೇಷನ್ ಬಳಿಕ ಧ್ವನಿ ಕೇಳಿ ಅಚ್ಚರಿಪಟ್ಟಿದ್ದ ಬಾಳು!

ಕೊನೆಗೂ ಎಸ್.ಪಿ.ಬಿ. ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು. ಪ್ರಜ್ಞೆ ಮರಳಿದ ಬಳಿಕ ತಮ್ಮ ಧ್ವನಿಯನ್ನು ಪರೀಕ್ಷಿಸಿಕೊಂಡಾಗ, ಮೊದಲಿಗಿಂತ ಹೆಚ್ಚು ಆರಾಮವಾಗಿ ಹಾಡಲು ಸಾಧ್ಯವಾಗುತ್ತಿರುವುದನ್ನು ಕಂಡು ಅವರಿಗೆ ಅಚ್ಚರಿಯ ಜೊತೆಗೆ ನೆಮ್ಮದಿಯೂ ಉಂಟಾಯಿತು. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯಿಂದ ಹೊರಬಂದ ಅನುಭವ ಅವರಲ್ಲಿ ಹೊಸ ಭರವಸೆಯನ್ನು ಮೂಡಿಸಿತ್ತು.

ತಮ್ಮ ಆರಂಭದ ದಿನಗಳ ಹಾಡುಗಳನ್ನು ಕೇಳಿದಾಗ ಕೆಲವೊಮ್ಮೆ ತಮಗೇ ಕಿರಿಕಿರಿಯಾಗುತ್ತದೆ ಎಂದೂ ಬಾಳು ತಮಾಷೆಯಾಗಿ ಹೇಳಿಕೊಂಡಿದ್ದರು. ಅಷ್ಟೊಂದು ಆರಂಭಿಕ ಹಂತದಲ್ಲಿದ್ದರೂ ಚಿತ್ರರಂಗ ತಮ್ಮನ್ನು ಸಹಿಸಿಕೊಂಡು ಅವಕಾಶಗಳನ್ನು ನೀಡಿದ್ದಕ್ಕೆ ಅಚ್ಚರಿಯಾಗುತ್ತದೆ ಎಂಬ ಭಾವನೆಯನ್ನೂ ವ್ಯಕ್ತಪಡಿಸಿದ್ದರು.

ಲತಾ ಮಂಗೇಶ್ಕರ್, ಪಿ. ಸುಶೀಲಾ ಅವರಿಂದ ಕಲಿತ ಪಾಠವೇನು?

ಸಂದರ್ಶನದಲ್ಲಿ ಬಾಳು ಅವರು ಲತಾ ಮಂಗೇಶ್ಕರ್ ಮತ್ತು ಪಿ. ಸುಶೀಲಾ ಅವರಂತಹ ದಿಗ್ಗಜ ಗಾಯಕರನ್ನು ಮೆಚ್ಚಿಕೊಂಡಿದ್ದರು. ವಿಶೇಷವಾಗಿ, ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವ ಅವರ ಸಾಮರ್ಥ್ಯದಿಂದ ತಾವು ಸಾಕಷ್ಟು ಕಲಿತಿದ್ದಾಗಿ ತಿಳಿಸಿದ್ದರು. ಇಂದಿನ ಕೆಲವು ಗಾಯಕರ ಹಾಡುಗಾರಿಕೆಯಲ್ಲಿ ಅಕ್ಷರಗಳ ಸ್ಪಷ್ಟ ಉಚ್ಚಾರಣೆಗೆ ಕಡಿಮೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದ್ದರು. ಹಾಡುಗಳಲ್ಲಿ ಪದಗಳನ್ನು ಸ್ಪಷ್ಟವಾಗಿ ಹೇಳುವುದಕ್ಕಿಂತ, ಅವುಗಳನ್ನು ಎಳೆದು ಹಾಡುವ ಶೈಲಿ ಫ್ಯಾಷನ್ ಆಗುತ್ತಿರುವುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಇನ್ನು ಸಾವಿರಾರು ಹಾಡುಗಳ ಮೂಲಕ ಸಂಗೀತಪ್ರಿಯರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಈ ಅನುಭವ, ಒಬ್ಬ ಗಾಯಕನ ವೃತ್ತಿಜೀವನದಲ್ಲಿ ಎದುರಾಗಬಹುದಾದ ಕಠಿಣ ಸವಾಲುಗಳನ್ನು ನೆನಪಿಸುತ್ತದೆ. ಧ್ವನಿಯ ಸಮಸ್ಯೆ ಎದುರಾದರೂ ಧೈರ್ಯ ಕಳೆದುಕೊಳ್ಳದೆ ಅದನ್ನು ಎದುರಿಸಿದ ಅವರ ಪಯಣ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ ಒಬ್ಬ ಹೀರೋ ಜೊತೆ 3 ಸಿನಿಮಾಗಳಲ್ಲಿ ನಟಿಸಬೇಕಿತ್ತು: ಕಿಚ್ಚನ 'ಹುಚ್ಚ' ನಟಿ ರೇಖಾ ಹೇಳಿದ್ದೇನು?
ಪ್ರಿಯಾನೇ ನನಗೆ ದುಡ್ಡು ಕೊಡ್ತಿದ್ರು, ಪೆಟ್ರೋಲ್​ ಹಾಕಿಸಿ ಬೈಕ್​ ಕೊಟ್ಟು ಹೋಗ್ತಿದ್ರು- ಆ ದಿನಗಳ ನೆನೆದ ಕಿಚ್ಚ