
ನಟ ಸಿಂಬು ಯುವ ವಯಸ್ಸಿನಲ್ಲಿ ಸೂಪರ್-ಸ್ಲಿಮ್ ಆಗಿದ್ದರು. ಆದರೆ 2010ರ ನಂತರ, ಅವರ ದೇಹದ ತೂಕ 101 ಕೆ.ಜಿ.ಗೆ ಏರಿತ್ತು. ಇದು ಅವರಿಗಿಂತ ಹೆಚ್ಚಾಗಿ ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ, ಸಿಂಬು ಸುಮಾರು 30 ಕೆ.ಜಿ. ತೂಕ ಇಳಿಸಿಕೊಂಡು ಮತ್ತೆ 70 ಕೆ.ಜಿ.ಗೆ ಬಂದು ಹಳೆಯ ಫಿಟ್ ಲುಕ್‌ಗೆ ಮರಳಿದರು. ಈ ಬದಲಾವಣೆಯಲ್ಲಿ ಅವರ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸಿದೆ.
ಸಿಂಬು ತಮ್ಮ ಕೆಲವು ಸಂದರ್ಶನಗಳಲ್ಲಿ, "ನನ್ನ ಫೇವರಿಟ್ ಫುಡ್ ಬಿರಿಯಾನಿ... ಆದರೆ ವಯಸ್ಸಾದಂತೆ ಯಾವ ಆಹಾರ ನಮಗೆ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ. ಯುವ ವಯಸ್ಸಿನಲ್ಲಿ ಏನನ್ನು ತಿಂದರೂ ದೇಹ ಅದನ್ನು ನಿಭಾಯಿಸುತ್ತದೆ. ಆದರೆ 30–40 ವರ್ಷಗಳ ನಂತರ ಕಾರ್ಬೋಹೈಡ್ರೇಟ್, ಎಣ್ಣೆಯುಕ್ತ ಆಹಾರ ಮತ್ತು ಭಾರಿ ಮಾಂಸಾಹಾರಗಳು ದೇಹದಲ್ಲಿ ಶೇಖರವಾಗುತ್ತವೆ. ಇದನ್ನು ಅರಿತ ಸಿಂಬು, ತಮ್ಮ ಆಹಾರವನ್ನು ಸಂಪೂರ್ಣವಾಗಿ ಸಸ್ಯಹಾರಕ್ಕೆ ಬದಲಾಯಿಸಿಕೊಂಡರು.
ಸಿಂಬು ಹೇಳುವಂತೆ, "ಮಾಂಸಾಹಾರ ತಿಂದ ನಂತರ ನನಗೆ ಹೊಟ್ಟೆ ಭಾರವಾದ ಅನುಭವವಾಗುತ್ತದೆ. ಆದರೆ ಸಸ್ಯಹಾರ ತಿಂದರೆ ಹಗುರ ಎನಿಸುತ್ತದೆ." ಈಗ ಅವರ ಮೆನುವಿನಲ್ಲಿ ನಿಂಬೆ, ಕರಿಬೇವು, ಬೆಳ್ಳುಳ್ಳಿ, ಸೌತೆಕಾಯಿಯಂತಹ ಕಡಿಮೆ ಉಪ್ಪು-ಸೋಡಿಯಂ ಇರುವ ಅಡುಗೆಗಳು ಮಾತ್ರ ಇವೆಯಂತೆ. ಇದು ಕೊಬ್ಬು ಮತ್ತು ಉಪ್ಪಿನಾಂಶವನ್ನು ಕಡಿಮೆ ಮಾಡಿ, ದೇಹದ ಚುರುಕುತನವನ್ನು ಹೆಚ್ಚಿಸುತ್ತದೆ.
"ಅನ್ನ-ಸಾರು ಇಲ್ಲದೆ ಊಟ ಸೇರಲ್ಲ" ಎನ್ನುವ ಲಕ್ಷಾಂತರ ಜನರಿಗೆ ಸಿಂಬು ಒಂದು ದೊಡ್ಡ ಹೆಲ್ತ್ ಟಿಪ್ ನೀಡುತ್ತಾರೆ. ಮೊದಲು ಮೊಟ್ಟೆ, ಬೀನ್ಸ್, ತರಕಾರಿ ಸಲಾಡ್, ರಾಜ್ಮಾದಂತಹ ಪ್ರೊಟೀನ್‌ಯುಕ್ತ ಆಹಾರಗಳಿಂದ ಹೊಟ್ಟೆಯನ್ನು 50% ತುಂಬಿಸಿಕೊಂಡು, ನಂತರ ಅನ್ನವನ್ನು ತಿನ್ನಿ ಎನ್ನುತ್ತಾರೆ ಸಿಂಬು. ಹೀಗೆ ಮಾಡಿದರೆ, ಅನ್ನದ ಪ್ರಮಾಣ ತಾನಾಗಿಯೇ ಕಡಿಮೆಯಾಗುತ್ತದೆ. ರುಚಿಗೂ ಮೋಸವಿಲ್ಲ, ಆದರೆ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಹೊರೆ ಗಣನೀಯವಾಗಿ ಇಳಿಯುತ್ತದೆ.
ರಾತ್ರಿ ಹೊತ್ತು ಬಿರಿಯಾನಿ, ಪಾಯಸ, ಜಂಕ್ ಫುಡ್‌ನಂತಹ ಭಾರಿ ಊಟ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ರಾತ್ರಿ ಸ್ವಲ್ಪ ಹಸಿದುಕೊಂಡೇ ಮಲಗಿದರೆ, ದೇಹದಲ್ಲಿರುವ ಕೊಬ್ಬು ಕರಗಲು ಸಹಾಯವಾಗುತ್ತದೆ ಎನ್ನುತ್ತಾರೆ ಸಿಂಬು. ಭರ್ಜರಿ ಊಟ ಮಾಡಿ ತಕ್ಷಣ ಟಿವಿ ನೋಡುತ್ತಾ ಮಲಗಿದರೆ, ಅದು ದೇಹದಲ್ಲಿ ಕೊಬ್ಬಾಗಿ ಶೇಖರಣೆಯಾಗುತ್ತದೆ. ಇದನ್ನು ಅರಿತ ಸಿಂಬು, ರಾತ್ರಿ ಊಟವನ್ನು ಹಗುರವಾದ ಪ್ರೊಟೀನ್-ತರಕಾರಿ ಆಧಾರಿತ ಆಹಾರಕ್ಕೆ ಬದಲಾಯಿಸಿ, ಅನ್ನ, ತೆಂಗಿನಕಾಯಿ, ತುಪ್ಪದಂತಹ ಪದಾರ್ಥಗಳನ್ನು ಕಡಿಮೆ ಮಾಡಿದ್ದಾರೆ.
ಈ ಸಣ್ಣ ಸಣ್ಣ ಬದಲಾವಣೆಗಳನ್ನು ಒಟ್ಟಾಗಿ ಪಾಲಿಸಿದರೆ, ಸಿಂಬುರಂತೆ ನೀವೂ ತೂಕ ಇಳಿಸಿಕೊಳ್ಳಬಹುದು. ಅಳೆದು ತೂಗಿ ಊಟ, ಸರಿಯಾದ ಸಮಯ, ಕ್ಯಾಲೋರಿ ಎಣಿಕೆ, ಹಗುರವಾದ ಸಸ್ಯಹಾರಿ ಆಹಾರ, ಹೆಚ್ಚು ನೀರು, ಕಡಿಮೆ ಉಪ್ಪು, ಹೆಚ್ಚು ವಾಕಿಂಗ್. ಇದೇ ಸಿಂಬು ಅವರ ಸದ್ಯದ ಫಿಟ್ನೆಸ್ ಫಾರ್ಮುಲಾ. ಹಾಗಾಗಿ, ಬಿರಿಯಾನಿಗೆ ನೋ ಎಂದು ಹೇಳಿ, ಸಪ್ಪೆ ಊಟ ಮಾಡುವ ಸಿಂಬು ಸಸ್ಯಹಾರಕ್ಕೆ ಬದಲಾದ ರಹಸ್ಯ ಬೇರೇನೂ ಅಲ್ಲ... ದೇಹದ ಮಾತನ್ನು ಕೇಳಿ ಮಾಡುವ ಸಣ್ಣ ಸಣ್ಣ ಹೊಂದಾಣಿಕೆಗಳಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.