
ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಸದ್ಯ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಅವರು ತಮ್ಮ ಹೊಸ ಸಿನಿಮಾ 'ರಾಕಾ' ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಸಿನಿಮಾದ ಬಹುತೇಕ ಭಾಗವನ್ನು ಮುಂಬೈನಲ್ಲಿ ಚಿತ್ರತಂಡ ಚಿತ್ರೀಕರಿಸಲಿದೆ. ಹೀಗಾಗಿ, ಅಲ್ಲು ಅರ್ಜುನ್ ಮುಂದಿನ ಕೆಲವು ವರ್ಷಗಳ ಕಾಲ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ಮುಂಬೈನ ಜುಹು ಪ್ರದೇಶದಲ್ಲಿ ಒಂದು ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದಿದ್ದಾರೆ. ಇದರೊಂದಿಗೆ ಅವರು ಬಾಲಿವುಡ್‌ನ ಕೆಲವು ಸ್ಟಾರ್‌ಗಳಿಗೆ ನೆರೆಮನೆಯವರಾಗಿದ್ದಾರೆ.
ಅಲ್ಲು ಅರ್ಜುನ್ ಎಷ್ಟು ಬಾಡಿಗೆ ಕೊಡ್ತಾರೆ?
ಮಿಡ್-ಡೇ ವರದಿಯ ಪ್ರಕಾರ, ಅಲ್ಲು ಅರ್ಜುನ್ ಮುಂಬೈನ ಪ್ರತಿಷ್ಠಿತ ಜುಹು ತಾರಾ ರೋಡ್‌ನಲ್ಲಿರುವ 5BHK ಅಪಾರ್ಟ್‌ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಅವರು ಮೂರು ವರ್ಷಗಳ ಲೀಸ್ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ತಿಂಗಳು ಬರೋಬ್ಬರಿ 16 ಲಕ್ಷ ರೂಪಾಯಿ ಬಾಡಿಗೆ ಪಾವತಿಸಲಿದ್ದಾರೆ. ಈ ಅಪಾರ್ಟ್‌ಮೆಂಟ್ 6,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಒಂದು ಸಣ್ಣ ಸ್ವಿಮ್ಮಿಂಗ್ ಪೂಲ್ ಮತ್ತು ನಾಲ್ಕು ಕಾರ್ ಪಾರ್ಕಿಂಗ್ ಜಾಗವನ್ನು ಹೊಂದಿದೆ. ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾ ಹಾಗೂ ಮಕ್ಕಳಾದ ಅಯಾನ್ ಮತ್ತು ಅರ್ಹಾಗಾಗಿ ಸಮುದ್ರಕ್ಕೆ ಮುಖ ಮಾಡಿರುವ ಮನೆಯನ್ನು ಬಯಸಿದ್ದರಂತೆ. ಶಾಲಾ ರಜಾದಿನಗಳಲ್ಲಿ ಮಕ್ಕಳು ಅವರ ಜೊತೆ ಇರಲಿದ್ದಾರೆ. ಅಲ್ಲದೆ, ಅಲ್ಲು ಅರ್ಜುನ್‌ಗೆ ಸಾಕಷ್ಟು ಹಸಿರು, ಪ್ರಶಾಂತ ವಾತಾವರಣ ಹಾಗೂ ಸಮುದ್ರದ ಅಲೆಗಳ ಸದ್ದು ಕೇಳಿಸುವಂತಹ ಜಾಗ ಬೇಕಿತ್ತಂತೆ. ಅವರ 'ರಾಕಾ' ಸಿನಿಮಾ ಹಾಗೂ ಲೋಕೇಶ್ ಕನಗರಾಜ್ ಜೊತೆಗಿನ ಇನ್ನೊಂದು ಪ್ರಾಜೆಕ್ಟ್‌ನ ಶೂಟಿಂಗ್ ಮುಂಬೈನಲ್ಲೇ ನಡೆಯಲಿದೆ ಎಂಬ ಮಾಹಿತಿ ಇದೆ.
ಮುಂಬೈನಲ್ಲಿ ಅಲ್ಲು ಅರ್ಜುನ್ ಪಕ್ಕದ ಮನೆಯವರು ಯಾರು?
ವರದಿಗಳ ಪ್ರಕಾರ, ಮುಂಬೈನಲ್ಲಿ ಅಲ್ಲು ಅರ್ಜುನ್ ಅವರು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಹಾಗೂ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ದಂಪತಿಗೆ ನೆರೆಮನೆಯವರಾಗಲಿದ್ದಾರೆ. ಅಂದಹಾಗೆ, ಅಲ್ಲು ಅರ್ಜುನ್‌ಗೆ ಹೈದರಾಬಾದ್‌ನಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯಿದೆ. 'ಬ್ಲೆಸ್ಸಿಂಗ್' ಎಂದು ಹೆಸರಿಡಲಾಗಿರುವ ಈ ಮನೆ ಜುಬಿಲಿ ಹಿಲ್ಸ್‌ನಲ್ಲಿದೆ. 8,000 ಚದರ ಅಡಿ ವಿಸ್ತೀರ್ಣದ ಈ ಬಿಳಿ ಬಣ್ಣದ ಬಂಗಲೆಯಲ್ಲಿ ಸ್ವಿಮ್ಮಿಂಗ್ ಪೂಲ್, ಸರಳವಾದ ಇಂಟೀರಿಯರ್ ಮತ್ತು ದೊಡ್ಡದಾದ ಪೋರ್ಚ್ ಇದೆ.
ನಿರ್ದೇಶಕ ಅಟ್ಲಿ ಅವರ 'ರಾಕಾ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ದೀಪಿಕಾ ತಾವು ಗರ್ಭಿಣಿ ಎಂದು ಘೋಷಿಸಿದ್ದರು. ಗರ್ಭಿಣಿಯಾಗಿದ್ದರೂ ಅವರು ಶೂಟಿಂಗ್ ಮುಂದುವರಿಸಲಿದ್ದಾರೆ. ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾವಾಗಿದ್ದು, ಮೊದಲು ಆಕ್ಷನ್ ದೃಶ್ಯಗಳ ಚಿತ್ರೀಕರಣಕ್ಕೆ ಆದ್ಯತೆ ನೀಡಲಾಗುವುದು. ವರದಿಗಳ ಪ್ರಕಾರ, ದೀಪಿಕಾ ಅವರ ಅನುಕೂಲಕ್ಕಾಗಿ ಅಲ್ಲು ಅರ್ಜುನ್ ಮುಂಬೈನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. ಈ ಸಿನಿಮಾದ ಬಜೆಟ್ ಬರೋಬ್ಬರಿ 800 ಕೋಟಿ ರೂಪಾಯಿ ಆಗಿದ್ದು, ಮೃಣಾಲ್ ಠಾಕೂರ್, ಜಾನ್ವಿ ಕಪೂರ್, ಮತ್ತು ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.