ವೈರಲ್‌ ಆಗಿದೆ ಶ್ರೀಮಂತನ ರೈತ ಗೀತೆ!

By Web DeskFirst Published Apr 11, 2019, 10:42 AM IST
Highlights

ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದ ಕಾರಣಕ್ಕೆ ಸಾಕಷ್ಟುಕುತೂಹಲ ಮೂಡಿಸಿರುವ ‘ಶ್ರೀಮಂತ’ ಚಿತ್ರದ ರೈತ ಗೀತೆ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ರೈತ ಅಂದರೆ ಹಬ್ಬ, ಉತ್ಸವ, ಸಂಭ್ರಮ, ಸಂತೋಷ ಎಂಬುದಾಗಿ ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿರುವ ಈ ಗೀತೆಗೆ ಹೆಸರಾಂತ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ ಧ್ವನಿ ನೀಡಿದ್ದಾರೆ. ಯುಗಾದಿ ಹಬ್ಬದಂದು ಇದು ಸೋಷಲ್‌ ಮೀಡಿಯಾ ಮೂಲಕ ಬಿಡುಗಡೆ ಆಗಿದೆ.

ಬಿಡುಗಡೆಯಾದ ಕ್ಷಣದಿಂದಲೇ ಸೋಷಲ್‌ ಮೀಡಿಯಾದಲ್ಲಿ ಅದು ವೈರಲ್‌ ಆಗಿದೆ. ಸಾಕಷ್ಟುಮಂದಿ ಹಾಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರಿಗಾಗಿಯೇ ಇಷ್ಟುಚೆಂದದ ಹಾಡು ನೀಡಿರುವುದು ವಿಶೇಷವಾಗಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ನಾರಾಯಣಪ್ಪ ನಿರ್ಮಿಸಿ, ಹಾಸನ್‌ ರಮೇಶ್‌ ನಿರ್ದೇಶಿಸಿರುವ ಈ ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದೆ. ಶ್ರೀಮಂತ ಎನ್ನುವ ಟೈಟಲ್‌ ಕೇಳಿದವರೆಲ್ಲ ನಿಜಕ್ಕೂ ಶ್ರೀಮಂತ ಯಾರು ಎನ್ನುತ್ತಿದೆ. ಅದಕ್ಕೆ ಉತ್ತರವಾಗಿ ಈ ದೇಶದ ರೈತನೇ ಶ್ರೀಮಂತ ಎನ್ನುತ್ತಿದೆ ಚಿತ್ರತಂಡ.

 

‘ನಾಡಿನ ಜೀವ ಅಂದ್ರೆ ರೈತ. ಬಿತ್ತನೆ ಮಾಡಿ, ಬೆಳೆ ಬೆಳೆಸಿ, ಜನರಿಗೆ ಆಹಾರ ನೀಡುವ ರೈತನಿಗೆ ಯಾವ ಕಿರೀಟ, ಪದ್ಮಶ್ರೀ ಇಲ್ಲ. ಆತ ನಂಬಿಕೆಯಿಂದ ಬಿತ್ತನೆ ಮಾಡುತ್ತಾನೆ, ಬೆಳೆ ಬಂದರೆ ಕೊಯ್ಲು ಮಾಡಿ ಜಗಕ್ಕೆ ನೀಡುತ್ತಾನೆ. ಆದರೂ ಕಾಲ ಕಾಲಕ್ಕೂ ಈ ರೈತನನ್ನು ಆಳುವವರೇ ಹೆಚ್ಚಿದ್ದಾರೆ. ಆತ ಮಾತ್ರ ಅಲ್ಲೇ ಇದ್ದಾನೆ. ಅಂತಹ ರೈತನೇ ವಾಸ್ತವದಲ್ಲಿ ಶ್ರೀಮಂತ’ಎನ್ನುತ್ತಾರೆ ಹಂಸಲೇಖ. ಅದಕ್ಕೆ ತಕ್ಕಂತೆ ರೈತರಿಗಾಗಿಯೇ ಹಂಸಲೇಖ ಬರೆದ ಈ ರೈತ ಗೀತೆಯು ಸಿನಿಪ್ರಿಯರ ಮನ ಸೂರೆಗೊಳ್ಳುತ್ತಿದೆ.

 

click me!