ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ಪೋಷಕ ನಟಿ ಲಲಿತಮ್ಮ (65) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ ಎರಡು ಮುಕ್ಕಾಲು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಗರದ 'ಅಮ್ಮನ ಮಡಿಲು' ಆಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಮಾರು ಎರಡೂವರೆ ತಿಂಗಳ ಹಿಂದೆ ಲಲಿತಮ್ಮ ಅವರಿಗೆ ಪಾರ್ಶ್ವವಾಯು (Stroke) ಉಂಟಾಗಿತ್ತು. ಅಂದಿನಿಂದ ಅವರು ಹಾಸಿಗೆ ಹಿಡಿದಿದ್ದರು. ವಯೋಸಹಜ ಕಾಯಿಲೆ ಹಾಗೂ ಪಾರ್ಶ್ವವಾಯುವಿನಿಂದಾಗಿ ಚಲನವಲನವಿಲ್ಲದೆ ಹಾಸಿಗೆಯಲ್ಲೇ ದಿನ ದೂಡುತ್ತಿದ್ದ ಅವರನ್ನು ಆಶ್ರಮದ ಸಿಬ್ಬಂದಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಕಲಾ ಜಗತ್ತಿನಲ್ಲಿ ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದ ಲಲಿತಮ್ಮ ಅವರು, ಸುಮಾರು 50ಕ್ಕೂ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ತಾಯಿ, ಅಜ್ಜಿ ಹಾಗೂ ನೆರೆಹೊರೆಯವರ ಪಾತ್ರಗಳಿಗೆ ತಮ್ಮ ನೈಜ ಅಭಿನಯದ ಮೂಲಕ ಜೀವ ತುಂಬಿದ್ದರು. ಚಿತ್ರರಂಗದಲ್ಲೂ ಸಕ್ರಿಯರಾಗಿದ್ದ ಅವರು, ದುನಿಯಾ ವಿಜಯ್ ಅಭಿನಯದ 'ಜಂಗ್ಲಿ', ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಸುಂಟರಗಾಳಿ' ಹಾಗೂ ದಿಗಂತ್ ನಟನೆಯ 'ಲೈಫು ಇಷ್ಟೇನೆ' ಸೇರಿದಂತೆ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು.
ತೆರೆಯ ಮೇಲೆ ನೂರಾರು ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಲಲಿತಮ್ಮ ಅವರ ನಿಜ ಜೀವನ ಮಾತ್ರ ತೀರಾ ನೋವಿನಿಂದ ಕೂಡಿತ್ತು. ಅವರಿಗೆ ಗಂಡ ಅಥವಾ ಮಕ್ಕಳಿರಲಿಲ್ಲ. ಜೀವನದ ಕೊನೆಯ ದಿನಗಳಲ್ಲಿ ಯಾರ ಆಸರೆಯೂ ಇಲ್ಲದೆ ತೀವ್ರ ಸಂಕಷ್ಟದಲ್ಲಿದ್ದ ಇವರನ್ನು 'ಅಮ್ಮನ ಮಡಿಲು' ಆಶ್ರಮವು ಆಶ್ರಯ ನೀಡಿ ಪೋಷಿಸುತ್ತಿತ್ತು.
ಲಲಿತಮ್ಮ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಕಿರುತೆರೆ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಹಿರಿಯ ಜೀವದ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.