
ಮಡಿಕೇರಿ (ಡಿ. 22): ಭಾರೀ ಮಳೆಯಿಂದಾಗಿ ಕೊಡಗು ಅಕ್ಷರಶಃ ನಡುಗಿ ಹೋಗಿದೆ. ಹಿಂದೆಂದೂ ಕಾಣದ ದುರಂತ ಸಂಭವಿಸಿದೆ. ಮಳೆ ನಿಂತರೂ ಹನಿ ನಿಲ್ಲದು ಎಂಬಂತೆ ಅಲ್ಲಿನ ಕೆಲವು ಜನರು ಇನ್ನೂ ಸಂಕಷ್ಟಕ್ಕೊಳಗಾಗಿದ್ದಾರೆ.
ಇವರಿಗೆ ಸಹಾಯ ಹಸ್ತ ಚಾಚುವಲ್ಲಿ ‘ಪೀಪಲ್ ಫಾರ್ ಪೀಪಲ್’ ತಂಡದವರು ಮುಂದಾಗಿದ್ದಾರೆ. ಈಗಾಗಲೇ ‘ಪೀಪಲ್ ಫಾರ್ ಪೀಪಲ್’ ತಂಡದವರು ಮಲ್ಲತ್ ಹಳ್ಳಿಯ ಕಲಾಗ್ರಾಮದಲ್ಲಿ ಕೊಡಗಿನ ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ‘ಕೊಡಗಿಗಾಗಿ ರಂಗಸಪ್ತಾಹ’ ಹಾಗೂ ‘ಕೊಡಗಿಗಾಗಿ ರಂಗೋತ್ಸವ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಕೊಡಗಿನ ನೊಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥ ಕನ್ನಡದ ‘ಸಾವಿತ್ರಿ ಬಾಯಿ ಪುಲೆ’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳ 23, ಭಾನುವಾರದಂದು ಸಂಜೆ 6 ಘಂಟೆಗೆ, ನಗರದ ಕರ್ನಾಟಕ ಚಲನಚಿತ್ರ ಕಲಾವಿದರ ಒಕ್ಕೂಟದ ಅಡಿಟೋರಿಯಂ, ಚಾಮರಾಜಪೇಟೆಯಲ್ಲಿ ನಡೆಯಲಿದೆ.
ಈ ಪ್ರದರ್ಶನಕ್ಕೆ ಕೊಡಗಿನ ನೊಂದ ಹೆಣ್ಣು ಮಕ್ಕಳು, ನಾಡಿನ ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರು, ದಲಿತಪರ ಚಿಂತಕರು ಸೇರಿದಂತೆ ಎಲ್ಲಾ ಬಗೆಯ ನಾಯಕರು ಆಗಮಿಸಲಿದ್ದಾರೆ. ಬ್ರಿಟಿಷರಿಂದ “ಭಾರತದ ಮೊದಲ ಮಹಿಳಾ ಶಿಕ್ಷಕಿ” ಎಂಬ ಬಿರುದನ್ನು ಪಡೆದಿರುವ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನಾಧಾರಿತ ಚಿತ್ರವಾಗಿದೆ.
ಈ ‘ಸಾವಿತ್ರಿಬಾಯಿ ಪುಲೆ-ಪ್ರೈಡ್ ಆಫ್ ನೇಶನ್’. ಈ ಚಿತ್ರದಲ್ಲಿ ತಾರಾ ‘ಸಾವಿತ್ರಿಬಾಯಿ’ ಪಾತ್ರದಲ್ಲಿ ಮತ್ತು ಮಹಾತ್ಮ ಜ್ಯೋತಿಬಾ ಫುಲೆ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.
ಬ್ರಿಟಿಷರ ಆಳ್ವಿಕೆ ಸಂದರ್ಭದ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದರೆ ಅದು ಸವಾಲಿನ ಸಂಗತಿ. ಅಂಥ ಕೆಲಸವನ್ನು ಮಾಡಿ ತೋರಿಸಿದವರು ಸಾವಿತ್ರಿಬಾಯಿ. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು, ಮಧ್ಯಾಹ್ನ ಊಟ ನೀಡಿದರೆ ಆ ನೆಪದಲ್ಲಾದರೂ ಮಕ್ಕಳು ಶಾಲೆಗೆ ಬರುತ್ತಾರೆ ಎಂಬುದನ್ನು ಅರಿತಿದ್ದ ಅವರು, ದೇಣಿಗೆ ಸಂಗ್ರಹಿಸಿ ಶಾಲೆಯಲ್ಲಿ ಊಟ ಹಾಕುತ್ತಿದ್ದರು. ಇಂಥ ಮಹಾನ್ ವ್ಯಕ್ತಿಯ ಕಥೆಯನ್ನು ಚಿತ್ರವನ್ನಾಗಿ ಮಾಡಿದ್ದಾರೆ ನಿರ್ದೇಶಕರಾದ ವಿಶಾಲ್ ರಾಜ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.