ಸರಿಗಮಪ ಚಾಂಪಿಯನ್ ಆದ ವಿಶ್ವ ಪ್ರಸಾದ್

First Published May 29, 2018, 9:10 PM IST
Highlights

ಇದು ಜೀ ಕನ್ನಡ ವಾಹಿನಿಯ ಸೀಜನ್ 14ರ ಸರಿಗಮಪ ಚಾಂಪಿಯನ್ ವಿಶ್ವಪ್ರಸಾದ್ ಗಾಣಿಗ ಮಾತು. 2015ರಲ್ಲಿ ಈಟಿವಿ ಕನ್ನಡದ ಎದೆತುಂಬಿ ಹಾಡುವೆನು, 2017ರಲ್ಲಿ ತಮಿಳಿನ ಸರಿಗಮಪ ಸ್ಪರ್ಧೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದ ವಿಶ್ವಪ್ರಸಾದ ಈಗ ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ.

- ಮಂಜುನಾಥ ಗದಗಿನ ಬೆಳಗಾವಿ, ಕನ್ನಡಪ್ರಭ
ಬೆಂಗಳೂರು[ಮೇ.29]: 'ಹಿಂದೆ ಸಾಕಷ್ಟು ವೇದಿಕೆಗಳಲ್ಲಿ ಹಾಡಿ ಗೆದ್ದಿದ್ದೆ. ತಮಿಳಿನ ಸರಿಗಮಪ ಚಾಂಪಿಯನ್ ಆಗಿದ್ದೆ. ಆದರೆ ಇಂದು ಹಂಸಲೇಖ ಸರ್ ನನ್ನ ಕೈ ಹಿಡಿದು ಎತ್ತಿ ನೀನೇ ವಿನ್ನರ್ ಎಂದ ಕ್ಷಣ ನನ್ನ ಜೀವನವೇ
ಸಾರ್ಥಕ ಎನ್ನಿಸಿಬಿಟ್ಟಿತು. ಆ ಕ್ಷಣ ನನ್ನ ಪಾಲಿಗೆ ಮರೆಯಲಾಗದ ರಸ ಘಳಿಗೆ' ಇದು ಜೀ ಕನ್ನಡ ವಾಹಿನಿಯ ಸೀಜನ್ 14ರ ಸರಿಗಮಪ ಚಾಂಪಿಯನ್ ವಿಶ್ವಪ್ರಸಾದ್ ಗಾಣಿಗ ಮಾತು. 2015ರಲ್ಲಿ ಈಟಿವಿ ಕನ್ನಡದ ಎದೆತುಂಬಿ ಹಾಡುವೆನು, 2017ರಲ್ಲಿ ತಮಿಳಿನ ಸರಿಗಮಪ ಸ್ಪರ್ಧೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದ ವಿಶ್ವಪ್ರಸಾದ ಈಗ ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ.
ಹದಿಮೂರರ ಪೋರನ ಗೆಲುವಿನ ಹಾದಿ :
ಮೂಲತಃ ಬೆಳಗಾವಿ ಖಾನಾಪುರ ತಾಲೂಕಿನ ಇಟಗಿಯವನಾದ ವಿಶ್ವಪ್ರಸಾದ್ ಇಂಜಿನಿಯರ್ ಆಗಬೇಕು ಎಂದು ಕನಸು ಕಂಡಿದ್ದವನು. ಸಂಗೀತದ ಗಂಧ ಗಾಳಿಯೇ ಇಲ್ಲದ ವಾತಾವರಣದಲ್ಲಿ ಟಿವಿ, ರೇಡಿಯೋಗಳಲ್ಲಿ ಬರುತ್ತಿದ್ದ ಹಾಡುಗಳನ್ನು ಕೇಳುತ್ತಾ, ಮನನ ಮಾಡುತ್ತಾ ಇರಬೇಕಾದರೆ ತಂದೆ-ತಾಯಿಗಳು ಇವನ ಹಾಡುಗಾರಿಕೆಯನ್ನು ಮೆಚ್ಚಿ ಬೆಳಗಾವಿಯ ಸಂಗೀತ ಶಾಲೆಗೆ ಸೇರಿಸುತ್ತಾರೆ. ದಿನವೂ ಬರೋಬ್ಬರಿ 40 ಕಿ.ಮೀ ಪ್ರಯಾಣ ಮಾಡಿ ಸಂಗೀತ ಕಲಿತು, 2016ರಲ್ಲಿ ಮುಂಬೈನಲ್ಲಿ ನಡೆದ 'ವಾಯ್ಸ್ ಇಂಡಿಯಾ ಕಿಡ್ಸ್' ಸ್ಪರ್ಧೆಯಲ್ಲಿ ಭಾಗವಹಿಸಿ ಒಳ್ಳೆಯ ಪ್ರದರ್ಶನ ನೀಡಿದಾಗಲೇ ಎ.ಆರ್. ರೆಹಮಾನ್ ವಿಶ್ವನ ಹಾಡುಗಾರಿಕೆಯನ್ನು ಮೆಚ್ಚಿ 'ಡ್ರೀಮ್ಸ್', 'ಮರ್ಸೆಲ್ಸ್' ಮೊದಲಾದ ಚಿತ್ರಗಳಲ್ಲಿ ಹಾಡಲು ಅವಕಾಶ ನೀಡಿದ್ದು. ಅಂದಿನಿಂದಲೂ ಹದಿಮೂರರ ಈ ಪೋರನದ್ದು ಗೆಲುವಿನ ಹಾದಿಗಳೇ.

ಇದು ಕಠಿಣ ಸ್ಪರ್ಧೆ:
'ಈ ಸೀಜನ್‌ನಲ್ಲಿ ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ನನ್ನಲ್ಲಿ ಇತ್ತು. ಆದರೆ ಜ್ಞಾನೇಶ್, ತೇಜಸ್ ಶಾಸ್ತ್ರಿ, ಅಭಿಜಾತ, ಕೀರ್ತನಾ ಮೊದಲಾದವರು ತುಂಬಾ ಟಫ್ ಕಾಂಪಿಟೇಷನ್ ನೀಡಿದರು. ಅವರ ಮುಂದೆ ಗೆಲ್ಲುತ್ತೇನಾ? ಎನ್ನುವ ಸಣ್ಣ ಅನುಮಾನವೂ ನನ್ನ ಮುಂದೆ ಬಂದುಹೋಗಿತ್ತು. ಸತತ ಪ್ರಯತ್ನ, ಹಿಂದಿನ ಸ್ಪರ್ಧೆಗಳಲ್ಲಿ ಬಂದಿದ್ದ ಆತ್ಮವಿಶ್ವಾಸದಿಂದ ಗೆದ್ದು ಬಂದೆ.  ವಾರದಲ್ಲಿ ಶನಿವಾರ ಅಥವಾ ಭಾನುವಾರ ಹಾಡಬೇಕಿತ್ತು. ಇದಕ್ಕಾಗಿ 3-4 ದಿನ ಅಭ್ಯಾಸ ಮಾಡುತ್ತಿದ್ದೆವು. ಮೊದಲಿಗೆ ಯಾವ ರೌಂಡ್ ಇದೆ ಎಂದು ತಿಳಿಸುತ್ತಿದ್ದರು. ಅಂದರೆ, ಭಕ್ತಿಗೀತೆ, ಲವ್ ಸಾಂಗ್ ಹೀಗೆ ಬೇರೆ ಬೇರೆ ವಿಭಾಗಗಳಿರುತ್ತಿದ್ದವು. ಅದಕ್ಕೆ ತಕ್ಕಂತೆ ನಾವುಗಳು ನಮಗೆ ಇಷ್ಟವಾದ ಹತ್ತು ಹಾಡುಗಳ ಲಿಸ್ಟ್ ನೀಡುತ್ತಿದ್ದೆವು. ಈ ವೇಳೆ ಸುಚೇತನ್ ಸರ್ ನಮ್ಮ ಧ್ವನಿಗೆ ಒಪ್ಪುವ ಸಾಂಗ್ ಆಯ್ಕೆ ಮಾಡಿ ಕೊಡುತ್ತಿದ್ದರು. ನಾವುಗಳು ಆ ಹಾಡನ್ನು ಬರೆದುಕೊಂಡು, ಲಿರಿಕ್ಸ್‌ಗೆ ತಕ್ಕಂತೆ ಅಭ್ಯಾಸ ಮಾಡುತ್ತಿದ್ದೆವು. ಮಧ್ಯೆ ಮೆಂಟರ್ಸ್ ನಮ್ಮ ತಪ್ಪು ಒಪ್ಪುಗಳನ್ನು ತಿದ್ದುತ್ತಿದ್ದರು. ಕಾರ್ಯಕ್ರಮದ ಹಿಂದಿನ ದಿನ ವಾದ್ಯ ಮೇಳದವರೊಂದಿಗೆ ಪ್ರಾಕ್ಟೀಸ್ ಮಾಡುತ್ತಿದ್ದೆವು. ನಂತರ ದಿಗ್ಗಜರ ಮುಂದೆ, ನೂರಾರು ಆಡಿಯನ್ಸ್ ಮಧ್ಯೆ ಹಾಡುವುದು ಸವಾಲಿನ ಕೆಲಸವಾಗಿತ್ತು. ಆದರೂ ಗೆಲ್ಲಬೇಕೆಂಬ ಛಲದೊಂದಿಗೆ ಭರ್ಜರಿಯಾಗಿ ಹಾಡುತ್ತಿದ್ದೆ. ಈ ವೇಳೆ ತೀರ್ಪುಗಾರರು ನೀಡುತ್ತಿದ್ದ ಸಲಹೆ, ಆಡಿಯನ್ಸ್ ಚಪ್ಪಾಳೆ ಸದ್ದು ಮತ್ತುಷ್ಟು ಹುರುಪು, ಹುಮ್ಮಸ್ಸು ನೀಡುತ್ತಿತ್ತು. ಅಷ್ಟೇ ಅಲ್ಲದೇ ಹಾಡುವಾಗ ನಮ್ಮ ಚಿತ್ತ ಬೇರೆ ಕಡೆ ಹೋಗಬಾರದು
ಎಂದು ಕಾರ್ಯಕ್ರಮಕ್ಕೂ ಮುನ್ನ ಯೋಗಾಸನ ಮಾಡಿಸುತ್ತಿದ್ದರು. ಕಡೆ ಕ್ಷಣಗಳಲ್ಲಿ ಇದು ಸಾಕಷ್ಟು ಸ್ಥೈರ್ಯ ತಂದುಕೊಡುತ್ತಿತ್ತು’ ಎಂದು ತನ್ನ ಗೆಲುವಿನ ಹಿಂದಿನ ದಾರಿಯನ್ನು ತೆರೆದಿಡುತ್ತಾರೆ ವಿಶ್ವಪ್ರಸಾದ್. 

ಸರಿಗಮಪ ಸೀಜನ್ 14 ಮುಗಿದಿದೆ. ಬೆಳಗಾವಿಯ ಪೋರ ವಿಶ್ವಪ್ರಸಾದ ಗೆಲುವಿನ ನಗೆ ಬೀರಿ ಕನ್ನಡಿಗರ ಪಾಲಿಗೆ ಭವಿಷ್ಯದ ಭರವಸೆಯ ಗಾಯಕನಾಗಿದ್ದಾನೆ. ಹೊಸ ಗೆಲುವಿನಿಂದ ಅನೇಕ ಅವಕಾಶಗಳ ಬಾಗಿಲು ಈಗಾಗಲೇ ತೆರೆದುಕೊಂಡಿವೆ. ಈ ಹಿಂದೆಯೇ ಎಆರ್ ರೆಹಮಾನ್ ಮೆಚ್ಚಿಕೊಂಡು ತಮ್ಮ ಚಿತ್ರಗಳಲ್ಲಿ ಹಾಡುವ ಅವಕಾಶ ನೀಡಿದ್ದರು. ಈಗ ವಿಜಯಪ್ರಕಾಶ್ ವಿಶ್ವನ ಪ್ರತಿಭ ಮೆಚ್ಚಿ ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗುತ್ತಿದ್ದಾರೆ.

ಮಗನ ಆಸೆಗೆ ಅಪ್ಪನ ಬೆಂಬಲ
'ನನಗೆ ನನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇತ್ತು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ಕಡೆ ತುಂಬಾ ಆಸಕ್ತಿ ತೋರಿಸಿದ. ನಮ್ಮ ಆಸೆಗಿಂತ ಅವನ ಆಸಕ್ತಿ ಮುಖ್ಯ ಎಂದು ಮನವರಿಕೆ ಮಾಡಿಕೊಂಡ ಮೇಲೆ ಅವನನ್ನು ಸಂಗೀತ ಶಾಲೆಗೆ ಸೇರಿಸಿದ್ವಿ. ಇಂದು ಅವನು ಡಾಕ್ಟರ್, ಇಂಜಿನಿಯರ್ ಆಗಿದ್ದರೆ ಆಗುತ್ತಿದ್ದ ಸಂತೋಷಕ್ಕಿಂತ ಹೆಚ್ಚೇ ಸಂತೋಷವಾಗಿದೆ’ ಎನ್ನುತ್ತಾರೆ ವಿಶ್ವನ ತಂದೆ. 

ವಿಜಯ ಪ್ರಕಾಶ್ ಸಾಥ್
'ಆಸ್ಟ್ರೇಲಿಯಾದ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಜೂನ್ 16ರಂದು ಸಂಗೀತ ಕಾರ್ಯಕ್ರಮ ಇದೆ. ನನ್ನ ಹಾಡನ್ನು ಕೇಳಿರುವ ವಿಜಯಪ್ರಕಾಶ ಸರ್ ನನಗೂ ಅಲ್ಲಿ ಹಾಡಲು ಬಾ ಎಂದು ಕರೆದು ಅವಕಾಶದ ಜೊತೆಗೆ ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ. ಅಲ್ಲಿಗೆ ತಮಿಳು ಸರಿಗಮಪದ ಸೀನಿಯರ್ಸ್ ಚಾಂಪಿಯನ್ಸ್ ಕೂಡಾ ಬರ್ತಾ ಇದ್ದಾರೆ. ನನಗೆ ಅವರ ಜೊತೆ ಹಾಡುವ ಅವಕಾಶ ಸಿಕ್ಕಿದೆ. ಒಂದು ಒಳ್ಳೆಯ ಅವಕಾಶವನ್ನು ಮಿಸ್ ಮಾಡಿಕೊಳ್ಳದೇ ನನ್ನ ಹಾಡಿನ ಶಕ್ತಿಯನ್ನು ತೋರುತ್ತೇನೆ’ ಎನ್ನುವ ಸರಿಗಮಪ ಚಾಂಪಿಯನ್ ವಿಶ್ವಪ್ರಸಾದ್‌ಗೆ ನಿಮ್ಮದೊಂದು ಮೆಚ್ಚುಗೆ, ಹಾರೈಕೆ ಇರಲಿ. 

click me!