
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮೈದಾನದಲ್ಲಿದ್ದಾಗ ಹಾಗೂ ಮೈದಾನದಾಚೆಗೆ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇನ್ನು ಕೇರಳ ಮೂಲದ ಕ್ರಿಕೆಟಿಗನಿಗೆ ದೇಶಾದ್ಯಂತ ಅಪ್ಪಟ ಅಭಿಮಾನಿಗಳ ದಂಡೇ ಇದೆ. ಇನ್ನು ಸಂಜು ಸ್ಯಾಮ್ಸನ್, ದಕ್ಷಿಣ ಭಾರತದ ಸಿನಿಮಾ ದಂತಕಥೆ ರಜಿನಿಕಾಂತ್ ಅವರ ಅಪ್ಪಟ ಅಭಿಮಾನಿ ಎನ್ನುವುದು ಸದ್ಯ ಗುಟ್ಟಾಗಿಯೇನೂ ಉಳಿದಿಲ್ಲ. ಇದೀಗ ಸಂಜು, ಇತ್ತೀಚೆಗಷ್ಟೇ ತೆರೆ ಕಂಡಿರುವ ರಜಿನಿಕಾಂತ್ ಅವರ ನಟನೆಯ ಜೈಲರ್ 2 ಸಿನಿಮಾಗಾಗಿ ಸಂಪೂರ್ಣ ಎರಡು ಥಿಯೇಟರ್ ಬುಕ್ ಮಾಡುವ ಮೂಲಕ ತಲೈವಾ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಸಂಜು ಸ್ಯಾಮ್ಸನ್, ತಮ್ಮ ಕುಟುಂಬ, ಸ್ನೇಹಿತರು ಹಾಗೂ ಟೀಮ್‌ಮೇಟ್ಸ್‌ಗಳ ಜತೆ ಜೈಲರ್ 2 ಸಿನಿಮಾ ವೀಕ್ಷಿಸಲು ಇಡೀ ಥಿಯೇಟರ್ ಅನ್ನೇ ಸಂಪೂರ್ಣವಾಗಿ ಬುಕ್ ಮಾಡಿ ಗಮನ ಸೆಳೆದಿದ್ದಾರೆ. ಈ ಕುರಿತಂತೆ ಮಾತನಾಡಿರುವ ಸಂಜು, 'ನನಗೆ ರಜಿನಿಕಾಂತ್ ಸಿನಿಮಾ ನೋಡುವುದೆಂದರೇ ತುಂಬಾನೆ ಇಷ್ಟ. ನಾನು ಪ್ರತಿಸಲವೂ ಮತ್ತೆ ರಜಿನಿಕಾಂತ್ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎನ್ನುವುದನ್ನು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತೇನೆ. ಈ ಸಲ ಒಂದು ದಿನ ತಡವಾಯಿತು. ನಿನ್ನೆ ಡೆಲ್ಲಿಯಲ್ಲಿ ಒಂದು ಕಾರ್ಯಕ್ರಮವಿದ್ದಿದ್ದರಿಂದ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ' ಎಂದು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಹೇಳಿದ್ದಾರೆ.
'ಇಂದು ನನ್ನ ಅದೃಷ್ಟಕ್ಕೆ ಇಡೀ ಥಿಯೇಟರ್ ಬುಕ್ ಮಾಡಲು ಸಾಧ್ಯವಾಯಿತು. ನಾನಿಂದು ನನ್ನ ಸ್ನೇಹಿತರನ್ನು ಸಿನಿಮಾ ನೋಡಲು ಆಹ್ವಾನಿಸಿದ್ದೇನೆ. ನನ್ನ ಪತ್ನಿ ಕೂಡಾ ಸಿನಿಮಾ ನೋಡಲು ನನ್ನ ಜತೆಯಾಗಲಿದ್ದಾರೆ. ದೊಡ್ಡ ಸ್ಕ್ರೀನ್‌ನಲ್ಲಿ ರಜಿನಿಕಾಂತ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ನಾನು ತುದಿಗಾಲಿನಲ್ಲಿ ನಿಂತಿದ್ದೇನೆ' ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಇನ್ನು ಇದೇ ವಳೆ ಸಂಜು ಸ್ಯಾಮ್ಸನ್, ಟೀಂ ಇಂಡಿಯಾದ ಹಲವು ಆಟಗಾರರಿಗೆ ತಮಿಳು ಅರ್ಥವಾಗುತ್ತದೆ. ಹೀಗಾಗಿ ತಂಡದಲ್ಲಿರುವ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ತಾವು ಈ ಜೈಲರ್ ಸಿನಿಮಾ ನೋಡಲು ಆಗಮಿಸುವಂತೆ ಆಹ್ವಾನಿಸಿದ್ದಾಗಿಯೂ ತಿಳಿಸಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಸಿನಿಮಾವು, 2023ರಲ್ಲಿ ತೆರೆ ಕಂಡ ಜೈಲರ್ ಸಿನಿಮಾದ ಸೀಕ್ವೆಲ್ ಆಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ಅವರು 'ಟೈಗರ್ ಮುತ್ತುವೇಲ್ ಪಾಂಡಿಯನ್' ಎಂಬ ತಮ್ಮ ಐಕಾನಿಕ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ನಿವೃತ್ತ ಕಾನೂನು ಜಾರಿ ಅಧಿಕಾರಿಯಾಗಿರುವ ಅವರು, ಅನಿವಾರ್ಯವಾಗಿ ಮತ್ತೆ ಕಣಕ್ಕಿಳಿಯಬೇಕಾಗುತ್ತದೆ. ಈ ಚಿತ್ರವು ಭರ್ಜರಿ ಆಕ್ಷನ್ ದೃಶ್ಯಗಳು, ರಜನಿಕಾಂತ್‌ಗೇ ವಿಶಿಷ್ಟವಾದ ಶೈಲಿ ಮತ್ತು ದೇಶಾದ್ಯಂತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಅದ್ಭುತ ಸಂಗೀತವನ್ನು ಒಳಗೊಂಡಿದೆ. ಸಿನಿಮಾ ತೆರೆಕಂಡ ಆರಂಭಿಕ ಐದು ದಿನಗಳಲ್ಲೇ ಜೈಲರ್ 2 ಸಿನಿಮಾವೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.