
ಬಾಲಿವುಡ್‌ನ 'ಬಾಬಾ' ಸಂಜಯ್ ದತ್ ತಮ್ಮ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಸಿನಿಕರಿಯರ್‌ನ ಮೈಲಿಗಲ್ಲು ಎನಿಸಿದ 'ಖಳ್ ನಾಯಕ್' ಚಿತ್ರದ ಸೀಕ್ವೆಲ್‌ನಲ್ಲಿ ಅವರು ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ, 'ಖಳ್ ನಾಯಕ್ ರಿಟರ್ನ್ಸ್' ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಸಂಜಯ್ ದತ್ ಅವರ ರಗಡ್ ಲುಕ್ ಎಲ್ಲರ ಗಮನ ಸೆಳೆದಿದೆ.
ಅಭಿಮಾನಿಗಳನ್ನು ಸೆಳೆದ ಫಸ್ಟ್ ಲುಕ್
ಟೀಸರ್‌ನಲ್ಲಿ ಸಂಜಯ್ ದತ್ ತುಂಬಾನೇ ಗಂಭೀರ ಮತ್ತು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿನ ಆಕ್ರಮಣಕಾರಿ ಹಾವಭಾವ, ಹಿಂಸೆ ಮತ್ತು ಗೊಂದಲದಲ್ಲಿ ಮುಳುಗಿರುವ ಪಾತ್ರದ ಸುಳಿವು ನೀಡುತ್ತದೆ. ಈ ಲುಕ್ ನೋಡಿದ ಅಭಿಮಾನಿಗಳಿಗೆ 1993ರ ಬ್ಲಾಕ್‌ಬಸ್ಟರ್ ಚಿತ್ರದ ನೆನಪಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಈ ಟೀಸರ್ ಜೊತೆಗೆ ಸಂಜಯ್ ದತ್, "Kuch kahaani khatam nahi hoti... woh dobara shuru hoti hai. 'Khalnayak Returns'" (ಕೆಲವು ಕಥೆಗಳು ಮುಗಿಯುವುದಿಲ್ಲ... ಅವು ಮತ್ತೆ ಶುರುವಾಗುತ್ತವೆ. 'ಖಳ್ ನಾಯಕ್ ರಿಟರ್ನ್ಸ್') ಎಂದು ಬರೆದುಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಈ ಟೀಸರ್ ಅನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಚಿತ್ರದ ಪೋಸ್ಟರ್‌ಗಳನ್ನೂ ಬಿಡುಗಡೆ ಮಾಡಲಾಗಿದ್ದು, ಸಂಜಯ್ ದತ್ ಪಾತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಪೋಸ್ಟರ್ ಜೊತೆಗೆ, "Har kahaani ka ek waqt hota hai...aur uska waqt aa gaya hai. 'Khalnayak Returns'" (ಪ್ರತಿ ಕಥೆಗೂ ಒಂದು ಸಮಯವಿರುತ್ತದೆ... ಮತ್ತು ಅದರ ಸಮಯ ಬಂದಿದೆ. 'ಖಳ್ ನಾಯಕ್ ರಿಟರ್ನ್ಸ್') ಎಂಬ ಸಾಲುಗಳನ್ನು ಹಂಚಿಕೊಳ್ಳಲಾಗಿದೆ.
ಪಾತ್ರವರ್ಗ ಮತ್ತು ಕಥೆಯ ವಿವರ ನಿರೀಕ್ಷೆಯಲ್ಲಿ
ಸದ್ಯಕ್ಕೆ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸುವುದು ಖಚಿತವಾಗಿದೆ. ಆದರೆ, ಉಳಿದ ಪಾತ್ರವರ್ಗ ಮತ್ತು ಕಥೆಯ ಬಗ್ಗೆ ನಿರ್ಮಾಪಕರು ಇನ್ನೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ನಿರ್ಮಾಣ ಮತ್ತು ಹಕ್ಕುಗಳು
ಜಿಯೋ ಸ್ಟುಡಿಯೋಸ್, ಆಸ್ಪೆಕ್ಟ್ ಎಂಟರ್‌ಟೈನ್‌ಮೆಂಟ್, ಮತ್ತು ಥ್ರೀ ಡೈಮೆನ್ಷನ್ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ 'ಖಳ್ ನಾಯಕ್ ರಿಟರ್ನ್ಸ್' ನಿರ್ಮಾಣವಾಗುತ್ತಿದೆ. ಆಸ್ಪೆಕ್ಟ್ ಗ್ಲೋಬಲ್ ವೆಂಚರ್ಸ್‌ನ ಮನರಂಜನಾ ವಿಭಾಗವಾದ ಆಸ್ಪೆಕ್ಟ್ ಪ್ರೊಡಕ್ಷನ್, ಈ ಬಹುನಿರೀಕ್ಷಿತ ಚಿತ್ರದ ನಿರ್ಮಾಣ ಹಕ್ಕುಗಳನ್ನು ಅಧಿಕೃತವಾಗಿ ಪಡೆದುಕೊಂಡಿದೆ.
1993ರಲ್ಲಿ ಸುಭಾಷ್ ಘಾಯ್ ನಿರ್ದೇಶನದಲ್ಲಿ ತೆರೆಕಂಡ 'ಖಳ್ ನಾಯಕ್' ಬಾಲಿವುಡ್ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿ ಉಳಿದಿದೆ. ಸಂಜಯ್ ದತ್, ಜಾಕಿ ಶ್ರಾಫ್ ಮತ್ತು ಮಾಧುರಿ ದೀಕ್ಷಿತ್ ಅವರ ಅದ್ಭುತ ನಟನೆ, ಹಿಟ್ ಹಾಡುಗಳು ಮತ್ತು ಬಿಗಿಯಾದ ಕಥೆಯಿಂದಾಗಿ ಈ ಚಿತ್ರ ಅಂದಿನ ಕಾಲದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿತ್ತು. ಇಂದಿಗೂ ಈ ಸಿನಿಮಾ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.