
ಸರ್ವಶ್ರೀ ನಿರ್ಮಾಣ, ಅಭಿಲಾಷ್ ಗೌಡ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಅವರ ಪ್ರಕಾರ ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಬ್ರೇಕ್ ನಂತರ ಆಗುವ ಬದಲಾವಣೆಗಳೇ ಚಿತ್ರದ ಕತೆ. ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಅತೀ ಹೆಚ್ಚು ಬಳಕೆ ಆಗುವ ಮಾತು ಒಂದು ಸಣ್ಣ ಬ್ರೇಕ್ ನಂತರ. ಅಲ್ಲಿ ಬ್ರೇಕ್ ನಂತರ ಆಗುವ ಬದಲಾವಣೆಗಳನ್ನೇ ಜೀವನಕ್ಕೆ ಹೋಲಿಕೆ ಮಾಡಿ, ಈ ಕತೆ ಹೆಣೆದಿದ್ದಾರಂತೆ ನಿರ್ದೇಶಕರು.
ಈ ಚಿತ್ರ ಈಗ ಕತೆ ಜತೆಗೆ ಒಂದೆರಡು ಡೈಲಾಗ್ ಕಾರಣಕ್ಕೆ ವಿವಾದಕ್ಕೆ ಸಿಲುಕಿದೆ. ಟ್ರೇಲರ್ ನೋಡಿದವರು ಕೆಲವರು ಚಿತ್ರವನ್ನು ಬಿಡುಗಡೆ ಮಾಡದಂತೆ ಎಚ್ಚರಿಕೆ ನೀಡಿದ್ದಾರಂತೆ. ಬಿಡುಗಡೆ ಮಾಡುವುದೇ ಆಗಿದ್ದರೆ, ಆಕ್ಷೇಪಾರ್ಹ ಡೈಲಾಗ್ ಕತ್ತರಿಸಿ ಅಂತಲೂ ಒತ್ತಾಯಿಸಿದ್ದಾರಂತೆ. ಸುದ್ದಿಗೋಷ್ಠಿಯೊಂದಿಗೆ ಮಾಧ್ಯಮದ ಮುಂದೆ ಬಂದಾಗ ಚಿತ್ರ ತಂಡವೇ ಈ ವಿಚಾರ ಬಹಿರಂಗ ಪಡಿಸಿತು. ಒಂದು ವೃತ್ತಿಯನ್ನು ಅವಮಾನಿಸಲಾಗಿದೆ ಅನ್ನೋದು ಅವರ ಆಕ್ಷೇಪ. ಅದು ಹಾಗಿಲ್ಲ ಅಂತ ಸಮಜಾಯಿಷಿ ಕೊಟ್ಟಿದ್ದೇವೆ. ಅದೇ ಕಾರಣಕ್ಕೆ ಯಾವುದೇ ಆತಂಕವಿಲ್ಲದೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇವೆ ಎಂದು ನಿರ್ದೇಶಕ ಅಭಿಲಾಷ್ ಗೌಡ ಹೇಳಿದರು.
ಯಾರನ್ನೋ ನೋಯಿಸುವ, ಅವಮಾನಿಸುವ ಡೈಲಾಗ್ ಇದ್ದರೆ , ಅದನ್ನು ಕಿತ್ತು ಹಾಕುವುದರಲ್ಲಿ ತಪ್ಪೇನು ಎಂಬ ಪ್ರಶ್ನೆಗೆ ನಿರ್ದೇಶಕರು ತಮ್ಮದೇ ವಾದ ಮಂಡಿಸಿದರು. ಸೆನ್ಸಾರ್‌ನವರೇ ಕೇಳಿಲ್ಲ, ಇವರು ಯಾರು ಎನ್ನುವುದು ಅವರ ವಾದವಾಗಿತ್ತು. ಕೊನೆಗೆ ಚಿತ್ರ ತೆರೆಕಂಡು ವಿವಾದಕ್ಕೊಳಗಾದರೂ ಪರವಾಗಿಲ್ಲ, ಆಗ ಏನ್ ಮಾಡ್ಬೇಕೋ ನೋಡ್ತೀವಿ ಎನ್ನುವುದರೊಂದಿಗೆ ನಿರ್ದೇಶಕರು ಚಿತ್ರದ ಕತೆ ಮತ್ತು ಡೈಲಾಗ್ ಸಮರ್ಥಿಸಿಕೊಂಡರು.
ಒಂದು ಹಳ್ಳಿ, ಅಲ್ಲಿನಾ ನಾಲ್ಕು ಜನ ಸ್ನೇಹಿತರು. ಅವರ ನಿತ್ಯದ ಬದುಕು, ತರ್ಲೆ, ಸಂಕಟ ಇತ್ಯಾದಿ ಘಟನೆಗಳನ್ನೇ ಆಧಾರವಾಗಿಟ್ಟು ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ಅಭಿಲಾಷ್ ಗೌಡ. ಲವ್, ಸಸ್ಪೆನ್ಸ್, ಕಾಮಿಡಿ ಈ ಚಿತ್ರದ ಹೈಲೈಟ್ ಅಂತಲೂ ಅವರು ಹೇಳುತ್ತಾರೆ. ಚಿತ್ರಕ್ಕೆ ಹಿತನ್ ಹಾಸನ್ ಕತೆ ಮತ್ತು ಸಂಗೀತ ನೀಡಿದ್ದಾರೆ. ನಾಗರಾಜ್ ಉಪ್ಪುಂದ ಛಾಯಾಗ್ರಹಣ ಮಾಡಿದ್ದಾರೆ. ಬೇಬಿ ನಾಗರಾಜ್ ಸಂಕಲನ ಚಿತ್ರಕ್ಕಿದೆ. ಹಿತನ್ ಹಾಸನ್ ಚಿತ್ರದ ಪ್ರಮುಖ ಪಾತ್ರಧಾರಿಯೂ ಹೌದು. ಅವರೊಂದಿಗೆ ಚೈತ್ರಾ ಮಲ್ಲಿ ಕಾರ್ಜುನ್, ಚೇತನ್, ಕಿರಣ್ ಕೂಡ್ಲಿಪೇಟೆ, ಸಿದ್ದರಾಜ್ ಕಲ್ಯಾಣ್‌ಕರ್, ಮೋಹನ್ ಮಂಡ್ಯ, ಕಾವೇರಿ ಶ್ರೀಧರ್, ನಾಗೇಶ್ ರಾವ್, ಸುಗುಣ ಮತ್ತಿತರರು ಚಿತ್ರದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.