ಸೂರ್ಯವಂಶದ ಫ್ಲೇವರ್ ನಿಖಿಲ್ ಪವರ್

By Kannadaprabha NewsFirst Published Nov 23, 2018, 9:07 AM IST
Highlights

‘ಕೆ.ಜಿ.ಎಫ್’ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹೀಗೆ ಪ್ರೆಸ್ ಮಾಡಿಕೊಂಡವು. ಆ ನಂತರ ಅಂಥ ಅದ್ದೂರಿಯಾಗಿ ಕನ್ನಡಕ್ಕೇ ಸೀಮಿತ ಎನಿಸುವಂತೆ ಪ್ರೆಸ್ ಮೀಟ್ ಮಾಡಿಕೊಂಡಿದ್ದು ನಿಖಿಲ್ ಕುಮಾರ್ ನಟನೆಯ ‘ಸೀತಾರಾಮ ಕಲ್ಯಾಣ’. 

ಅದ್ದೂರಿ ಸಿನಿಮಾ ಮೇಕಿಂಗ್ ನೋಡಿದ್ದೇವೆ. ಅದ್ದೂರಿ ಬಜೆಟ್‌ನಲ್ಲಿ ಮೂಡುವ ಚಿತ್ರಗಳನ್ನೂ ನೋಡಿದ್ದೇವೆ. ಅದ್ದೂರಿಯಾಗಿ ಸಿನಿಮಾ ತೆರೆಗೆ ಬರುವುದನ್ನೂ ಕಂಡಿದ್ದೇವೆ. ಅದ್ದೂರಿ ಹೆಸರಿನ ಸಿನಿಮಾ ಕೂಡಾ ಗೊತ್ತು. ಆದರೆ, ಚಿತ್ರದ  ಪತ್ರಿಕಾಗೋಷ್ಠಿಯೇ ಅದ್ದೂರಿಯಾಗಿರುವುದನ್ನು ನೋಡಿದ್ದೀರಾ? ಇಲ್ಲ ಎನ್ನುವವರಿಗೆ ‘ಸೀತಾರಾಮ ಕಲ್ಯಾಣ’ ಚಿತ್ರ ಉತ್ತರವಾಗಿ ನಿಲ್ಲುತ್ತದೆ.

ಅಂದುಕೊಂಡಂತೆ ಚಿತ್ರೀಕರಣ ಮುಗಿಸಿರುವ ಈ ಬಹು ತಾರಾಗಣದ ಚಿತ್ರತಂಡ, ಅಷ್ಟೇ ಸಂಖ್ಯೆಯಲ್ಲಿ ಮಾಧ್ಯಮಗಳ ಮುಂದೆ ಹಾಜರಾಯಿತು. ಹಾಗಾದರೆ ಚಿತ್ರ ನಿರ್ದೇಶಕರಿಂದ ಶುರುವಾಗಿ ಕಲಾವಿದರು, ತಂತ್ರಜ್ಞರು ಹೇಳಿದ್ದೇನು? ಅಂದಹಾಗೆ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ತೆಗೆದುಕೊಂಡಿದೆ. 

ನಿಖಿಲ್ ಕುಮಾರ್ ನಾಯಕ

ನನ್ನ ಜೀವನದಲ್ಲೇ ಮರೆಯಲಾಗದ ಸಿನಿಮಾ ಇದು. ಇಂಥದ್ದೊಂದು ಅದ್ಭುತ ಮತ್ತು ಅಪರೂಪದ ಸಂಭ್ರಮದ ಸಿನಿಮಾ ಸಿಗುವುದಕ್ಕೆ ಮತ್ತು ಅದು ಅದ್ದೂರಿಯಾಗಿ ರೂಪಗೊಳ್ಳುವುದಕ್ಕೆ ಕಾರಣವಾಗಿದ್ದು, ನಿರ್ದೇಶಕ ಎ ಹರ್ಷ ಅವರು. ನಾನು ತೆರೆ ಮೇಲೆ ಏನೇ ಮಾಡಿದ್ದರೂ ಅದು ತುಂಬಾ ಚೆನ್ನಾಗಿ ಕಂಡಿದ್ದರೆ ಅದರ ಕ್ರೆಡಿಟ್ಟು ಹರ್ಷ ಅವರಿಗೇ ಸೇರಬೇಕು. ಒಂದು ಫ್ಯಾಮಿಲಿ ಸಿನಿಮಾ ಹೇಗಿರುತ್ತದೆ ಎಂಬುದಕ್ಕೆ ನಮ್ಮ ‘ಸೀತಾರಾಮ ಕಲ್ಯಾಣ’ ಸಾಕ್ಷಿ. ಆಕ್ಷನ್‌ಗೆ ರಾಮ್- ಲಕ್ಷ್ಮಣ್, ಡ್ಯಾನ್ಸ್, ಫ್ಯಾಮಿಲಿ ಫ್ಲೇವರ್‌ಗೆ ನಿರ್ದೇಶಕ ಹರ್ಷ. ತೆರೆಯನ್ನು ಶ್ರೀಮಂತಗೊಳಿಸುವುದಕ್ಕೆ ಹತ್ತಾರು ತಾರೆಗಳು. ಇವರೆಲ್ಲರು ಸೇರಿದ್ದಕ್ಕೇ ಈ ಚಿತ್ರ ಹುಟ್ಟಿಕೊಳ್ಳುವುದಕ್ಕೆ ಸಾಧ್ಯವಾಯಿತು. ಇದು ಯಾವ ರೀತಿ ಸಿನಿಮಾ ಎಂದರೆ ನಮ್ಮದೇ ಬ್ಯಾನರ್‌ನಲ್ಲಿ ಈ ಹಿಂದೆ ಬಂದ ‘ಸೂರ್ಯವಂಶ’ದ ಪ್ಲೇವರ್, ನನ್ನ ಆಕ್ಷನ್ ಪವರ್ ಈ ಎರಡು ಸೇರಿದರೆ ‘ಸೀತಾರಾಮ ಕಲ್ಯಾಣ’. ಕನ್ನಡಕ್ಕೆ ಇದು ದಿ ಬೆಸ್ಟ್ ಸಿನಿಮಾ ಆಗುತ್ತದೆ. 

ರಚಿತಾ ರಾಮ್ ನಾಯಕಿ


ನಾನು ಸೀತಾರಾಮ ಕಲ್ಯಾಣ ಚಿತ್ರದ ನಾಯಕಿ ಎಂದು ಹೇಳಿಕೊಳ್ಳುವುದಕ್ಕೇ ಹೆಮ್ಮೆ ಆಗುತ್ತದೆ. ನನ್ನ ಅಭಿನಯದಲ್ಲಿ ಬಂದ ಚಿತ್ರಗಳ ಪೈಕಿ ಅತಿ ಹೆಚ್ಚು ದಿನ ಚಿತ್ರೀಕರಣ ಮಾಡಿಕೊಂಡ ಸಿನಿಮಾ ಇದು. ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಪಕ್ಕಾ ಹೋಮ್ಲಿ ಹುಡುಗಿ ಪಾತ್ರ. ಮಾಸ್ ನೆರಳಿನಲ್ಲಿ ಒಂದು ಮನರಂಜನಾತ್ಮಕವಾಗಿ ಒಂದು ಫ್ಯಾಮಿಲಿ ಕತೆಯನ್ನು ಹೇಳಿದ್ದಾರೆ. ಇಲ್ಲಿ ನಾನು ಹಳ್ಳಿಯಿಂದ ಬರುವ ಕಾಲೇಜು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 

ಎ ಹರ್ಷ ನಿರ್ದೇಶಕ


130 ದಿನಗಳ ಚಿತ್ರೀಕರಣ, 200ಕ್ಕೂ ಹೆಚ್ಚು ಮುಖ್ಯ ಕಲಾವಿದರು, ಬಹುಭಾಷಾ ನಟರು, ಎರಡು ಭಾಷೆಗಳಲ್ಲಿ ರೂಪಗೊಂಡಿರುವ ಈ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಆದರೆ, ಚಿತ್ರ ಶುರುವಾದಾಗಿನಿಂದಲೂ ಇದು ‘ರೀಮೇಕ್ ಸಿನಿಮಾ’ ಎನ್ನುತ್ತಿದ್ದಾರೆ. ಖಂಡಿತ ಇದು ಸುಳ್ಳು. ಯಾರು ರೀಮೇಕ್ ಎನ್ನುತ್ತಿದ್ದಾರೋ, ಯಾಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಆದರೆ, ‘ಸೀತಾರಾಮ ಕಲ್ಯಾಣ’ ಮಾತ್ರ ಅಪ್ಪಟ ಕನ್ನಡದ ಸಿನಿಮಾ. ಸ್ವಮೇಕ್ ಕತೆ. ರೀಮೇಕ್ ಮಾಡುವುದೇ ಆಗಿದ್ದರೆ ಬೇರೆ ಭಾಷೆಗೆ ಈ ಸಿನಿಮಾ ಹೋಗುತ್ತಿರಲಿಲ್ಲ. ಒಬ್  ನಿರ್ದೇಶಕನಾಗಿ ತುಂಬಾ ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡಿದ್ದೇನೆ. ಆದರೂ ರೀಮೇಕ್ ಎಂದು ಗಾಸಿಪ್ ಹಬ್ಬಿಸುತ್ತಿರುವವರಿಗೆ ಸಿನಿಮಾ ತೆರೆ ಕಂಡ ಮೇಲೆ ಉತ್ತರ ಸಿಗುತ್ತದೆ. ಕನ್ನಡದಲ್ಲಿ ಇಂಥದ್ದೊಂದು ಬಹುತಾರಾಗಣ ಸಿನಿಮಾ ಇತ್ತೀಚಿನ ದಿನಗಳಲ್ಲಿ ಬಂದಿಲ್ಲ ಎನ್ನುವವರಿಗೆ ಈ ಸಿನಿಮಾ ಹಬ್ಬದ ಸಂಭ್ರಮ ಮೂಡಿಸಲಿದೆ. 

ಶರತ್ ಕುಮಾರ್, ಅದಿತ್ಯ ಮೆನನ್ ಪೋಷಕ ಪಾತ್ರಗಳು
ನನ್ನದು ಚಿತ್ರದ ನಾಯಕ ನಿಖಿಲ್ ಕುಮಾರ್ ಅವರ ತಂದೆ ಪಾತ್ರ. ಇನ್ನೂ ಅದಿತ್ಯ ಮೆನನ್ ಪಾತ್ರ ಏನೂ ಅಂತ ಹೇಳಿದರೆ ಕತೆಯ ಗುಟ್ಟು ಬಿಟ್ಟುಕೊಟ್ಟಂತಾಗುತ್ತದೆ. ಈ ಚಿತ್ರ ತೆರೆಗೆ ಬಂದ ಮೇಲೆ ಮತ್ತಷ್ಟು ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತದೆಂಬ ಭರವಸೆ ಇದೆ. ಇದು ಎಷ್ಟು ದೊಡ್ಡ ಸಿನಿಮಾ ಎಂಬುದಕ್ಕೆ ವೇದಿಕೆ ಮೇಲೆ ಹಾಗೂ ವೇದಿಕೆ ಮುಂಬಾಗ ಇರುವ ಕಲಾವಿದರ ದಂಡೇ ಹೇಳುತ್ತದೆ. ಇವರ ಜತೆಗೆ ಗಿರಿಜಾ ಲೋಕೇಶ್, ಲಹರಿ ವೇಲು, ಶಿವರಾಜ್ ಕೆ ಆರ್ ಪೇಟೆ, ನಯನ, ಮಧೂ, ಚೇತನ್, ಭಾಗ್ಯಶ್ರೀ, ಸಂಭಾಷಣೆಗಾರ ರಘು ನಿಡುವಳ್ಳಿ, ಚಿತ್ರಕ್ಕೆ ಹಾಡು ಬರೆದಿರುವ ಸಾಯಿ ಸುಕಮನ್ಯಾ, ಕಾರ್ಯ ಕಾರಿ ನಿರ್ಮಾಪಕ ಸುನಿಲ್ ಗೌಡ, ಛಾಯಾಗ್ರಾಹಕ ಸ್ವಾಮಿ ಸೇರಿದಂತೆ ಹಲವರು ಚಿತ್ರದ ಕುರಿತು ಮಾತನಾಡಿದರು. 

 

 

click me!