ಎಚ್ ಎಸ್ವಿ ನಿರ್ದೇಶನದ ಹಸಿರು ರಿಬ್ಬನ್ ಈ ವಾರ ತೆರೆ ಕಂಡಿದೆ. ಬಾಲ್ಯದ ಅನುಭವವನ್ನು ತೆರೆಗೆ ತರುವ ಪ್ರಯತ್ನವನ್ನು ಮಾಡಿದ್ದಾರೆ ಎಚ್ ಎಸ್ವಿ. ಹೇಗಿದೆ ಹಸಿರು ರಿಬ್ಬನ್? ಇಲ್ಲಿದೆ ಚಿತ್ರ ವಿಮರ್ಶೆ.
‘ಹಸಿರು ರಿಬ್ಬನ್’ ಎಂಬ ಹೆಸರಲ್ಲಿಯೇ ಮುಗ್ಧತೆ, ಸಂಸ್ಕೃತಿ ಹಾಗೂ ಸಮೃದ್ಧಿಗಳ ಸಂಕೇತವಿದೆ. ಇವೆಲ್ಲವನ್ನೂ ನಿರ್ದೇಶಕರಾದ ಖ್ಯಾತ ಸಾಹಿತಿ ಡಾ ವೆಂಕಟೇಶ ಮೂರ್ತಿ ಅವರು ಮೊದಲ ಚಿತ್ರವೆನ್ನುವ ಯಾವುದೇ ಅಳುಕಿಲ್ಲದೇ ಸಮರ್ಥವಾಗಿ ಪ್ರಸ್ತುತಪಡಿಸಿದ್ದಾರೆ.
ಕತೆ, ಚಿತ್ರಕತೆ, ಹಾಡುಗಳನ್ನೂ ಬರೆದು ನಿರ್ದೇಶಿಸಿದ್ದಾರೆ. ಮಾಗಿದ ಸಾಹಿತಿಯು ತಮ್ಮ ಬಾಲ್ಯದ ಅನುಭವಗಳನ್ನು ತೆರೆಗೆ ತರುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದಾರಂತೆ. ತಮ್ಮದೇ ‘ಅನಾತ್ಮ ಕಥನ’ ಪುಸ್ತಕದಲ್ಲಿನ ಒಂದು ಅಧ್ಯಾಯವನ್ನು ತಮ್ಮ ಮೊದಲ ಚಿತ್ರದ ಕತೆಯನ್ನಾಗಿಸಿದ್ದಾರೆ. ಚಿತ್ರದ ಆರಂಭದಲ್ಲೇ ‘ಹಸಿರು ರಿಬ್ಬನ್’ ಅನ್ನು ಸಂಬಂಧದ ಕೊಂಡಿಯಂತೆ ತೋರಿಸಿ ಕ್ಲೈಮ್ಯಾಕ್ಸ್‌ನಲ್ಲಿ ಇದೇ ಹಸಿರು ರಿಬ್ಬನ್ ಮೂಲಕ ಮುಗ್ಧ ಮನಸ್ಸಿನ ಮುಗ್ಧ ಭಾವನೆಗಳನ್ನು ಪ್ರತಿಬಿಂಬಿಸುವಲ್ಲಿ ಚಿತ್ರ ಮುಗಿಸುತ್ತಾರೆ.
ಎಚ್ ಎಸ್ ವಿ ಮೂಲತಃ ಸಾಹಿತಿಯಾಗಿರುವುದರಿಂದ ಕತೆ ಹೇಳುವ ರೀತಿ ಹಾಗೂ ಸಂಭಾಷಣೆಯನ್ನು ಅರ್ಥಗರ್ಭಿತ ಕಟ್ಟಿ ಕೊಟ್ಟು ಪ್ರೇಕ್ಷಕರ ಮನ ಮುಟ್ಟುತ್ತಾರೆ. ‘ಚಿನ್ನಾರಿ ಮುತ್ತ’ದಂತಹ ಚಿತ್ರದ ಹಾಡುಗಳಲ್ಲಿ ಕನ್ನಡಿಗರ ಮನಗೆದ್ದ ಎಚ್‌ಎಸ್‌ವಿ ಅವರ ಮಗುವಿನಂತಹ ಮನಸ್ಸು ಈಗಲೂ ಅಷ್ಟೇ ತಾಜಾತನದಲ್ಲಿದೆ ಎಂಬುದನ್ನು ಈ ಚಿತ್ರದ ದೃಶ್ಯಗಳು ನಿರೂಪಿಸಿವೆ. ಮಕ್ಕಳ ಮನದ ಮಾತುಗಳನ್ನೂ, ಹಾಡಿನ ಸಾಹಿತ್ಯವನ್ನೂ ಆಗಿನಷ್ಟೆ ಚೆಂದವಾಗಿಸಿದ್ದಾರೆ.
ಚಿತ್ರದಲ್ಲಿ ಬರುವ ಎರಡು ಬಾಲ ಪಾತ್ರಗಳಾದ ಚಂಪಾ ಹಾಗೂ ಚಂದ್ರು ಅವರ ಮಾತುಗಳು ಎಚ್ ಎಸ್‌ವಿ ಅವರ ಮಗು ಮನಸ್ಸನ್ನು ತೆರೆದಿಡುತ್ತದೆ. ಎರಡು ಹಳ್ಳಿಗಳ ನಡುವೆ ನಡೆಯುವ ಕತೆಗೆ ಸಂಪರ್ಕವಾದ ಹಿನ್ನೀರು, ತೆಪ್ಪದ ಪಯಣವು ಚಿತ್ರಕ್ಕೆ ಸೊಗಸನ್ನು ತಂದು ಕೊಟ್ಟಿದೆ. ಅಮ್ಮ-ಮಗಳು-ಮೊಮ್ಮಗಳು ಹೀಗೆ ಒಂದು ಬಡತನದ ಕುಟುಂಬದವರ ಬಾಗಿಲಿಗೆ ಬರುವ ಅನಾಮಿಕನೊಬ್ಬನ ಮೋಸ ಪುಟಾಣಿ ಚಂಪಾಳ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದು ಹೇಗೆ ಎನ್ನುವುದೇ ಚಿತ್ರದ ತಿರುಳು.
ಇಲ್ಲಿ ದೊಡ್ಡವರ ಜಗಳವನ್ನು ಮಕ್ಕಳು ನೋಡುವ ರೀತಿಗಳನ್ನೂ, ಸಣ್ಣ ಸಣ್ಣ ಸಂಗತಿಗಳನ್ನೂ ನಿರ್ದೇಶಕರು ಅಷ್ಟೇ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ. ಮಕ್ಕಳ ಮಾತಲ್ಲಿ ದೊಡ್ಡವರ ತಪ್ಪುಗಳನ್ನು ಬಟಾಬಯಲಾಗಿಸುವ ತಂತ್ರ ಮೆಚ್ಚುವಂತಹದ್ದು. ಮಕ್ಕಳ ಮೂಲಕ ದೊಡ್ಡವರಿಗೊಂದು ಸಂದೇಶವನ್ನೂ ಈ ಚಿತ್ರ ಕೊಡುತ್ತದೆ. ಸಂಗೀತ ನಿರ್ದೇಶಕ ಉಪಾಸನ ಮೋಹನ್ ಭಾವಗೀತೆಯಿಂದ ಸ್ವಲ್ಪ ಹೊರ ಬಂದು ಹಾಡುಗಳನ್ನು ಕಟ್ಟಿ ಕೊಟ್ಟಿದ್ದಾರೆ. ರೀರೆಕಾರ್ಡಿನಲ್ಲೂ ಅದನ್ನೇ ಉಳಿಸಿಕೊಂಡಿದ್ದಾರೆ.
ಸಾಕಷ್ಟು ಚಿತ್ರಗಳಿಗೆ ಹಾಡುಗಳನ್ನು ಬರೆದಿರುವ ಎಚ್‌ಎಸ್‌ವಿ ಈ ಚಿತ್ರದ ಎಲ್ಲಾ ಹಾಡುಗಳ ಸಾಹಿತ್ಯವನ್ನೂ ಅಷ್ಟೇ ಚೆನ್ನಾಗಿಸಿದ್ದಾರೆ. ವಿಜಯ ಪ್ರಕಾಶ್, ಎಂ ಡಿ ಪಲ್ಲವಿ, ನಾಗಚಂದ್ರಿಕಾ ಭಟ್, ಮಂಗಳಾ ರವಿ ಹಾಗೂ ಚಿನ್ಮಯೀ ಚಂದ್ರಶೇಖರ್ ಹಾಡಿ ಚಿತ್ರದ ಲಯವನ್ನು ಉಳಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ನಿಖಿಲ್ ಮಂಜು ಗಮನ ಸೆಳೆಯುತ್ತಾರೆ. ತಮ್ಮ ಪಾತ್ರಕ್ಕೆ ತಾವೇ ಒಂದು ಫ್ರೇಮ್ ಹಾಕಿಕೊಂಡು ನಟಿಸಿದ್ದಾರೆ. ಗಿರಿಜಾ ಲೋಕೇಶ್ ನೋವಲ್ಲಿ ಬೆಂದ ಮಹಿಳೆಯ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ.
ಸುಪ್ರಿಯಾ ಎಸ್ ರಾವ್ ಗಿರಿಜಾ ಲೋಕೇಶ್ ಅವರಿಗೆ ಪೈಪೋಟಿ ನೀಡುವತ್ತ ಹೆಜ್ಜೆ ಹಾಕಿದ್ದಾರೆ. ಎರಡು ಪುಟಾಣಿಗಳೂ ತಮ್ಮ ಮುಗ್ಧತೆಯನ್ನು ಉಳಿಸಿಕೊಂಡಿದ್ದಾರೆ. ಬಿ ಜಯಶ್ರೀ ತಮ್ಮ ಎಂದಿನ ಶೈಲಿಯಲ್ಲೇ ಕಾಣಿಸಿಕೊಂಡಿದ್ದಲ್ಲದೇ ಹಾಡಿನ ದೃಶ್ಯದಲ್ಲೂ ಅಷ್ಟೇ ತಲ್ಲೀನತೆಯಲ್ಲಿ ನಟಿಸಿದ್ದಾರೆ. ಸಾಹಿತಿಯಾಗಿ, ನಾಟಕಕಾರಾಗಿ ಖ್ಯಾತರಾಗಿರುವ ಎಚ್‌ಎಸ್‌ವಿ ಚಿತ್ರ ನಿರ್ದೇಶಕರೂ ಆಗಿ ಯಶದತ್ತ ಹೆಜ್ಜೆ ಹಾಕಿದ್ದಾರೆ.
ಚಿತ್ರ: ಹಸಿರು ರಿಬ್ಬನ್ ನಿರ್ದೇಶನ: ಡಾ ಎಚ್. ಎಸ್ ವೆಂಕಟೇಶಮೂರ್ತಿ ತಾರಾಗಣ: ನಿಖಿಲ್ ಮಂಜು, ಚೈತ್ರ, ಸುಪ್ರಿಯ ಎಸ್ ರಾವ್, ಗಿರಿಜಾ ಲೋಕೇಶ್, ಬಿ ಜಯಶ್ರೀ ಮುಂತಾದವರು. ನಿರ್ಮಾಣ: ಆರ್ ಶಿವಕುಮಾರ್ ಸಂಗೀತ: ಉಪಾಸನ ಮೋಹನ್ ರೇಟಿಂಗ್: ***
-ಸಂಕೇತ್ ಗುರುದತ್