ಹೇಗಿದೆ ’ಆ ಕರಾಳ ರಾತ್ರಿ’ ಸಿನಿಮಾ?

 |  First Published Jul 14, 2018, 11:10 AM IST

ಈ ವಾರ  ’ಆ ಕರಾಳ ರಾತ್ರಿ’  ಎನ್ನುವ ಚಿತ್ರ ಬಿಡುಗಡೆಯಾಗಿದೆ. ಅನುಪಮಾ ಗೌಡ, ಜೆಕೆ, ರಂಗಾಯಣ ರಘು ತಾರಾಗಣದ ಇದು ಸಸ್ಪೆನ್ಸ್ ಚಿತ್ರ. ಹೇಗಿದೆ ಆ ಕರಾಳ ರಾತ್ರಿ? ಇಲ್ಲಿದೆ ಚಿತ್ರ ವಿಮರ್ಶೆ. 


ಗುಡ್ಡಗಾಡಿನ ಪ್ರದೇಶ ಅದು. ಬರದ ಊರಿನ ಆ ಒಂಟಿ ಮನೆಯನ್ನು ಬಡತನ ಗಟ್ಟಿಯಾಗಿ ಅಪ್ಪಿಕೊಂಡಿದೆ. ಬದುಕಿನ ಭರವಸೆಗಳಿಲ್ಲದೆ ಬದುಕುತ್ತಿರುವ ಮೂರು ಜೀವಗಳ ಪೈಕಿ ಒಂದೊಂದರದ್ದು ಒಂದೊಂದು ಕನಸು. ಅಂಥ ಮನೆಗೆ ಲಕ್ಷ್ಮೀ ತಾನಾಗಿಯೇ ಬಂದರೆ ಏನಾಗುತ್ತದೆ? ಕನಸು ಆಸೆಯಾಗುತ್ತದೆ.

ಈ ಆಸೆ ಮತ್ತೊಂದು ಘೋರ ಕೃತ್ಯಕ್ಕೂ ಕಾರಣವಾಗುತ್ತದೆ. ಮನುಷ್ಯನೊಳಗೆ ಸದಾ ಜಾಗೃತವಾಗಿರುವ ಆಸೆಯ ಬೆನ್ನೇರಿದರೆ ಎಂಥ ಅನಾಹುತ ಸಂಭವಿಸುತ್ತದೆ ಎಂಬುದನ್ನು ‘ಆ ಕರಾಳ ರಾತ್ರಿ’ ಹೇಳುತ್ತದೆ. ಹಾಗೆ ನೋಡಿದರೆ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಬುದ್ಧ ಹೇಳಿದ ಮೇಲೂ ನಮಗೆ ಬುದ್ಧಿ ಬಂದಿಲ್ಲ. ಹೀಗಾಗಿ ಎಲ್ಲರು ಆಸೆಯ ಕುದುರೆಯನ್ನೇರಿದ್ದೇವೆ. ಇದರೆ ಮೇಲೆ ಸವಾರಿ ಮಾಡುತ್ತಿರುವವರು ದುಃಖವೂ ಬಂದೆರಗುತ್ತದೆ, ಸಾವು ಕೂಡ ಅಪ್ಪಿಕೊಳ್ಳುತ್ತದೆ.

Tap to resize

Latest Videos

ಒಂದು ನಾಟಕವನ್ನು ನಾಟಕದಂತೆಯೇ ಆಪ್ತವಾಗಿ ತೆರೆ ಮೇಲೂ ಕೂಡ ರೂಪಿಸುವ ಮೂಲಕ ನಿರ್ದೇಶಕ ದಯಾಳ್ ಪದ್ಮನಾಭನ್ ಮೋಹನ್ ಹಬ್ಬು ಅವರ ‘ಕರಾಳ ರಾತ್ರಿ’ ನಾಟಕಕ್ಕೆ ಗೌರವ ತಂದುಕೊಟ್ಟಿದ್ದಾರೆ. ತೀರಾ ಸೀಮಿತ ಪಾತ್ರಗಳು, ಸೀಮಿತ ಲೋಕೇಶನ್’ಗಳು. ಒಂದಿಷ್ಟು ನೆನಪಿಡುವ ಮತ್ತು ಯೋಚಿಸುವಂತಹ ಸಂಭಾಷಣೆಗಳ ಮೂಲಕವೇ ಇಡೀ ಕತೆಯನ್ನು ತೆಗೆದುಕೊಂಡು ಹೋಗುತ್ತಾರೆ  ನಿರ್ದೇಶಕರು. ಇವರ ಶ್ರಮಕ್ಕೆ ಸಾಥ್ ನೀಡುವುದು ಕ್ಯಾಮೆರಾ ಕಣ್ಣು ಹಾಗೂ ನವೀನ್ ಕೃಷ್ಣ ಅವರ ಚುರುಕಾದ ಸಂಭಾಷಣೆಗಳು.

ಪಿಕೆಹೆಚ್ ದಾಸ್ ಅವರ ಛಾಯಾಗ್ರಾಹಣ ಕತೆಯ ನೈಜತೆಯನ್ನು ಹಾಳು ಮಾಡಿಲ್ಲ. ಹೀಗಾಗಿ ಅವರ ಕ್ಯಾಮೆರಾ ಕಣ್ಣಲ್ಲಿ ಚಿತ್ರದ ಪ್ರತಿ ದೃಶ್ಯವೂ ‘ಕಲಾತ್ಮಕ’. ಜತೆಗೆ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಸೂಕ್ತ ರೀತಿಯಲ್ಲಿ ಅಲ್ಲಲ್ಲಿ ಬಳಸಿಕೊಂಡು ಮೂಲಕ ಚಿತ್ರಕ್ಕೆ ಜಾನಪದದ ಮೆರುಗು ತುಂಬಲಾಗಿದೆ. ಮೋಹನ್ ಹಬ್ಬು ನಾಟಕ ಓದಿದವರಿಗೆ ಹಾಗೂ ನೋಡಿದವರಿಗೆ ಕತೆಯ ಕುರಿತು ಹೆಚ್ಚು ಹೇಳುವ ಅಗತ್ಯವಿಲ್ಲ. ಆದರೆ, ನಾಟಕವನ್ನು ತೆರೆಗೆ ತರುವಾಗ ಏನೆಲ್ಲ ಸವಾಲುಗಳು ಎದುರಾಗುತ್ತವೆ ಎಂಬುದನ್ನು ನಿರ್ದೇಶಕರಿಗೆ ಮಾತ್ರವಲ್ಲ, ಸಿನಿಮಾ ನೋಡುವಾಗ ಪ್ರೇಕ್ಷಕನಿಗೂ ಎದುರಾಗುತ್ತದೆ.

ನಿಮ್ಮ ಮನೆಗೆ ಲಕ್ಷ್ಮೀ ಬರುತ್ತದೆ ಎಂದು ಬುಡುಬುಡಿಕೆಯವ ಹೇಳುತ್ತಾನೆ. ಅದನ್ನು ಕೇಳಿದ ವ್ಯಂಗ್ಯ ಮತ್ತು ಉಡಾಫೆಯಿಂದ ನಗುತ್ತ ಬುಡಬುಡಿಕೆಯವನನ್ನು ಬೈಯ್ದು ಕಳಿಸುತ್ತಾರೆ. ಆದರೆ, ಬುಡಬುಡಿಕೆಯವನು ಹೇಳಿದ ಮಾತು ನಿಜ ಎನಿಸುವುದು ಅದೇ ಮನೆಗೆ ಬರುವ ಅಪರಿಚಿತ ವ್ಯಕ್ತಿಯಿಂದ. ಪಟ್ಟಣದಿಂದ ಬಂದಿರುವ ಅಲೆಮಾರಿ ಒಂದು ರಾತ್ರಿಯ ಮಟ್ಟಿಗೆ ಆ ಒಂಟಿ ಮನೆಯಲ್ಲಿ ತಂಗುತ್ತಾರೆ. ಹಾಗೆ ಮನೆಯಲ್ಲಿ ಆಶ್ರಯ ಪಡೆದುಕೊಳ್ಳುವ ಆತ ಮತ್ತು ಆ ಮನೆಯ ಮೂವರು ಸದಸ್ಯರ ನಡುವೆ ಆ ರಾತ್ರಿ ಏನೆಲ್ಲ ನಡೆಯುತ್ತದೆ ಎಂಬುದು ಚಿತ್ರದ ಕತೆ

ಚಿತ್ರದ ಗುಟ್ಟು ಎಲ್ಲೂ ಬಿಟ್ಟುಕೊಡದೆ ಸಾಗುತ್ತಾರೆ ನಿರ್ದೇಶಕರು. ಆ ಕಾರಣಕ್ಕೆ ಚಿತ್ರಕ್ಕೆ ಸಸ್ಪೆನ್ಸ್ ಜತೆಗೆ ಕೊನೆಯಲ್ಲಿ ನಡೆಯುವ ಒಂದು ದುರಂತ ಸೇರಿಕೊಂಡು ಕ್ರೈಮ್ ಥ್ರಿಲ್ಲರ್ ನೆರಳಿನಂತೆ ಇಡೀ ಸಿನಿಮಾ
ಭಾಸವಾಗುತ್ತದೆ. ಆದರೆ, ಇದರ ಆಚೆಗೂ ಸಿನಿಮಾ ನೋಡುಗನನ್ನು ಆವರಿಸಿಕೊಳ್ಳುವುದು ವೀಣಾ ಸುಂದರ್ ಹಾಗೂ ರಂಗಾಯಣ ರಘು ಅವರ ಸಹಜ ನಟನೆ, ಅನುಪಮಾ ಗೌಡ ಅವರ ಮಾತುಗಳು.

ಮೇಲ್ನೋಟಕ್ಕೆ ಇವರ ಮಾತುಗಳು ಆಸೆಬುರುಕತನ, ಕಾಮ, ಹದಿಹರೆಯತನ, ಚಂಚಲ ಮನಸ್ಸಿನಿಂದ ಕೂಡಿದವು ಅನಿಸಿದರೂ ಅವರ ಇಡೀ ಪಾತ್ರ ಬದುಕಿನ ಮತ್ತೊಂದು ಮುಖವಾಡವನ್ನು ತೆರೆದಿಡುತ್ತದೆ.  ಒಂದು  ನಾಟಕವನ್ನು ಸಿನಿಮಾ ಪರದೆ ಮೇಲೂ ನಾಟಕವಾಗಿಯೇ ನೋಡುವ ಆಸಕ್ತರು ‘ಆ ಕರಾಳ ರಾತ್ರಿ’ಯನ್ನು ಸವಿಯುತ್ತ ಕೊನೆಯಲ್ಲಿ ಭಾವುಕರಾಗಬಹುದು. 

ಚಿತ್ರ: ಆ ಕರಾಳ ರಾತ್ರಿ ತಾರಾಗಣ: ರಂಗಾಯಣ ರಘು, ವೀಣಾ ಸುಂದರ್, ಅನುಪಮಾ, ಜೆಕೆ, ನವೀನ್ ಕೃಷ್ಣ, ಸಿಹಿಕಹಿ ಚಂದ್ರು, ವಿಜಯ್ ಶ್ರೀನಿವಾಸ್, ನವರಸನ್ ನಿರ್ದೇಶನ, ನಿರ್ಮಾಣ: ದಯಾಳ್ ಪದ್ಮನಾಭನ್ ಸಂಗೀತ: ಗಣೇಶ್ ನಾರಾಯಣ್ ಛಾಯಾಗ್ರಾಹಣ: ಪಿಕೆಹೆಚ್ ದಾಸ್ ರೇಟಿಂಗ್: ***

click me!