ಪೈಲ್ವಾನ್ ಪೈರಸಿ ವಿವಾದದಲ್ಲಿ ಅಭಿಮಾನಿಗಳ ನಡುವೆ ಪತ್ರಯುದ್ಧ ನಡೆಯುತ್ತಿರುವ ಹೊತ್ತಲ್ಲಿ ಕಿಚ್ಚ ಸುದೀಪ್, ಅಭಿಮಾನಿಗಳಿಗೆ ಸಂಯಮದ ಪತ್ರ ಬರೆದಿದ್ದಾರೆ. ಅನಗತ್ಯ ಸಂಗತಿಗಳಿಗೆ ಪ್ರತಿಕ್ರಿಯಿಸಬೇಡಿ. ನಾವು ಕೆಲಸ ಮಾಡಿ ತೋರಿಸೋಣ. ನಮ್ಮನ್ನು ಪ್ರೀತಿಸುವವರನ್ನು ಮತ್ತಷ್ಟುಪ್ರೀತಿಸೋಣ ಎಂದು ಕಿವಿಮಾತು ಹೇಳಿ, ಇಡೀ ವಿವಾದವನ್ನು ತಣ್ಣಗಾಗಿಸಿದ್ದಾರೆ.
ಕೆಲವು ದಿನಗಳಿಂದ ಸೋಷಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅನಪೇಕ್ಷಿತ ಘಟನೆಗಳಿಗೆ ತೆರೆಯೆಳೆಯಲು ಸುದೀಪ್ ಮುಂದಾಗಿದ್ದಾರೆ. ಅವರು ನಟಿಸಿದ ಮಾಣಿಕ್ಯ ಚಿತ್ರದಲ್ಲಿ ‘ಎರಡು ಊರುಗಳ ಮಧ್ಯೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಒಬ್ಬ ಕತ್ತಿ ಕೆಳಗೆ ಹಾಕಿದರಷ್ಟೇ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂಬ ಸಂಭಾಷಣೆಯಿದೆ. ಅದರಂತೆ ಸುದೀಪ್ ಕೂಡ ಹಿರಿತನದ ಘನತೆ ಮೆರೆದಿದ್ದಾರೆ. ಅಭಿಮಾನಿಗಳಿಗೆ ಸುದೀರ್ಘವಾದ ಪತ್ರವೊಂದನ್ನು ಬರೆದು, ಜೀವನದಲ್ಲಿ ಯಾವುದು ಮುಖ್ಯ ಅನ್ನುವುದನ್ನು ಸೂಚಿಸಿದ್ದಾರೆ.
ಸುದೀಪ್ ಬರೆದ ಪತ್ರದ ಸಾರಾಂಶ ಹೀಗಿದೆ:
ಹಲೋ ಗೆಳೆಯರೇ,
ನಾವೆಲ್ಲ ನಮ್ಮ ನಮ್ಮ ಬದುಕು ಮತ್ತು ಒಳ್ಳೆಯ ಸಂಗತಿಗಳತ್ತ ಗಮನ ಹರಿಸೋಣ. ಇಂಥ ಅನಗತ್ಯ ವಿಚಾರಗಳಿಗೆ ಪ್ರತಿಕ್ರಿಯಿಸುವುದು ಬೇಡ. ಕೆಲವು ಧ್ವನಿಗಳಿಗೆ ನಾವು ಕಿವುಡಾಗಿರುವುದೇ ಮೇಲು. ಸತ್ಯ ಯಾವತ್ತಿದ್ದರೂ ಸತ್ಯವೇ. ಬಿಟ್ಟು ಬಿಡಿ, ಹಾಗೆ ಮಾಡೋದರಿಂದ ಯಾರೂ ಸಣ್ಣವರಾಗುವುದಿಲ್ಲ.
ಛೇ..ಬಿಡುಗಡೆ ದಿನವೇ ಪೈಲ್ವಾನ್ ಫುಲ್ ಮೂವಿ ಲೀಕ್..
ಈಗ ಏನೇನೋ ನಡೆಯುತ್ತಿದೆ ಮತ್ತು ಅದು ಯಾರಿಗೂ ಒಳಿತನ್ನೇನೂ ಮಾಡುತ್ತಿಲ್ಲ. ಯಾರೂ ಒಬ್ಬ ನಟನ ಮೇಲೆ ಪೈರೆಸಿಯ ಆರೋಪ ಹೊರಿಸಿಲ್ಲ. ನಾನಾಗಲೀ ನಿರ್ಮಾಪಕರಾಗಲೀ ಯಾರ ಹೆಸರನ್ನೂ ಹೇಳಿಲ್ಲ. ಯಾರೆಲ್ಲ ರಣೋತ್ಸಾಹದಿಂದ ಪೈರಸಿ ಲಿಂಕ್‌ಗಳನ್ನು ಹಂಚುತ್ತಿದ್ದಾರೋ ಅವರ ಹೆಸರನ್ನು ಸೈಬರ್ ಪೊಲೀಸರಿಗೆ ಕೊಟ್ಟಿದ್ದೇವೆ. ಅವರದನ್ನು ನೋಡಿಕೊಳ್ಳುತ್ತಾರೆ, ಸತ್ಯ ಹೊರಗೆ ಬರುತ್ತದೆ. ಈಗ ಚಾಲ್ತಿಯಲ್ಲಿರುವ ಪತ್ರ ಮತ್ತು ಸದ್ದುಗಳಿಗೆ ನಾವು ಕಿವಿಗೊಡುವುದು ಬೇಡ. ಅದು ಅಲ್ಲಿಗೇ ಮುಗಿದುಹೋಗಲಿ. ಯಾರೇ ಆದರೂ ಪರೋಕ್ಷವಾಗಿ ನನ್ನನ್ನು ಹೆಸರು ಹಿಡಿದು ಕರೆಯುವುದೋ, ಕಾಲೆಳೆಯುವುದನ್ನೋ ಮಾಡಿದರೆ ಮಾಡಿಕೊಳ್ಳಲಿ ಬಿಡಿ. ಅದರಿಂದ ನಿಮಗೆಲ್ಲ ನೋವಾಗುತ್ತದೆ ಅಂತ ನನಗೆ ಗೊತ್ತಿದೆ. ಆದರೆ ಅಂಥ ಕೆಲಸಗಳಿಂದ ನಾನೇನೂ ಕುಸಿಯುವುದಿಲ್ಲ.
ನನ್ನ ಸಿನಿಮಾವನ್ನು ಮತ್ತು ನಿರ್ಮಾಪಕರನ್ನು ಕಾಪಾಡಿಕೊಳ್ಳುವುದು ನನ್ನ ಕರ್ತವ್ಯ. ನನ್ನ ಟ್ವೀಟ್ ಮತ್ತು ಮಾತು ಹೇಳಿದ್ದು ಅಷ್ಟನ್ನೇ. ಯಾರನ್ನೋ ತುಳಿದು ನಾನು ಮೇಲೇರಬೇಕಾಗಿಲ್ಲ. ಉದ್ಯಮ ಮತ್ತು ನನ್ನ ಸಹೋದ್ಯೋಗಿಗಳು ನನಗೆ ಕೊಟ್ಟಿರುವ ಬೆಂಬಲ ಅವರ ಒಳ್ಳೆಯತನ. ಅವರಿಗೆ ನನ್ನ ಮೇಲಿರುವ ಪ್ರೀತಿಗೆ ಅದು ಸಾಕ್ಷಿ. ಅವರ ಮತ್ತು ನನ್ನ ಸಂಬಂಧಕ್ಕೆ ಸಂಕೇತ. ಎಲ್ಲರೂ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದಾರೆ. ಅವರ ಬೆಂಬಲ ಸೂಚಿಸುತ್ತಿದ್ದಾರೆ. ಅಷ್ಟುಸಾಕು. ಇಷ್ಟೆಲ್ಲ ಪ್ರೀತಿ ಸಿಗುತ್ತಿರುವಾಗ ಇನ್ನೂ ಏನು ಮಾತಾಡಿ ಸಾಬೀತು ಮಾಡÜಬೇಕಿದೆ?
ಎರವಲು ತಂದ ಸಾಲುಗಳು, ಎಚ್ಚರಿಕೆ ಕೊಡುವಂಥ ಮಾತುಗಳು ನನಗೆ ಇಷ್ಟವಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ಅಷ್ಟಕ್ಕೂ ಮಾತು ಯಾರನ್ನಾದರೂ ಎಲ್ಲಿಗಾದರೂ ಒಯ್ದಿದೆಯೇ?
ನಾನು ಒಬ್ಬ ನಟನ ಬಗ್ಗೆ ಕಾಮೆಂಟ್ ಮಾಡಿದ್ದ ದಿನಗಳಿದ್ದವು. ಅದನ್ನು ನನಗಾಗಿ ಮಾಡಿರಲಿಲ್ಲ ನಾನು. ಹಾಗೆ ಮಾತಾಡಲಿಕ್ಕೆ ಕಾರಣಗಳಿದ್ದರೂ, ಅದರ ಅಗತ್ಯ ಇಲ್ಲ ಅಂತ ನಾನೇ ಅರ್ಥಮಾಡಿಕೊಂಡೆ. ನಾನೂ ಕೆಲವರ ಜೊತೆ ವಾದಕ್ಕಿಳಿದಿದ್ದೇನೆ. ಎಲ್ಲರೂ ಇಂಥದ್ದೊಂದು ದಾರಿಯಲ್ಲಿ ನಡೆದವರೇ. ಆದರೆ ಅದನ್ನೆಲ್ಲ ಅರ್ಥಮಾಡಿಕೊಂಡು ಮುಂದಕ್ಕೆ ಸಾಗುವವನೇ ಒಳ್ಳೆಯ ಮನುಷ್ಯನಾಗುತ್ತಾನೆ. ಜಗತ್ತಿನ ಎಲ್ಲರ ಮನಸ್ಸನ್ನೂ ಗೆಲ್ಲುತ್ತಾನೆ. ನಾನು ಮಾಡಿದ್ದು ಅದನ್ನೇ. ನಾನು ಯಾವತ್ತೂ ಕ್ಷಮಿಸು ಅಂತ ಹೇಳಲು ಹಿಂದೆ ಮುಂದೆ ನೋಡಿದವನಲ್ಲ. ಯಾರಾದರೂ ಕ್ಷಮಿಸಿ ಅಂದಾಗ ಅದನ್ನು ಸ್ವೀಕರಿಸಲೂ ಹಿಂಜರಿದವನಲ್ಲ. ಇವೆಲ್ಲವೂ ಸಾರ್ವಜನಿಕವಾಗಿಯೇ ನಡೆದಿವೆ. ಆ ಬಗ್ಗೆ ನನಗೆ ಖುಷಿಯಿದೆ.
ನಾನು ನನ್ನ ಕೆಲಸದ ಮೂಲಕ ಜನರ ಮನಸ್ಸು ಗೆಲ್ಲುವ ನಿರ್ಧಾರ ಮಾಡಿದ್ದೇನೆ. ಹಾಗೆಯೇ ಬದುಕುತ್ತಿದ್ದೇನೆ. ಈ ಉದ್ಯಮದಲ್ಲಿ ಅನೇಕರು ತಮ್ಮ ಬದುಕಿನಲ್ಲಿ ನನಗೂ ಒಂದು ಸ್ಥಾನ ಕೊಟ್ಟಿದ್ದರೆ ಅದಕ್ಕೆ ಕಾರಣ ಪರಸ್ಪರರ ಬಗ್ಗೆ ಇರುವ ಗೌರವ. ಸಣ್ಣ ಪುಟ್ಟಬಿರುಕುಗಳನ್ನು ಸರಿಪಡಿಸಿಕೊಂಡು ಜೊತೆಯಾಗಿ ಬಾಳುತ್ತಿದ್ದೇವೆ ಅನ್ನುವುದೇ ನನ್ನ ಸಂತೋಷ.
ನೀವೆಲ್ಲರೂ ನನ್ನ ಮತ್ತು ನನ್ನ ಕುಟುಂಬಕ್ಕೆ ನೀಡುತ್ತಿರುವ ಬೆಂಬಲ, ತೋರಿಸುತ್ತಿರುವ ಪ್ರೀತಿ ನನ್ನನ್ನು ವಿನೀತನನ್ನಾಗಿ ಮಾಡಿದೆ. ನೀವು ತೋರಿಸಿರುವ ಪ್ರೀತಿ, ಆಡಿರುವ ಒಳ್ಳೆಯ ಮಾತುಗಳನ್ನು ನಾನು ಮರೆತಿಲ್ಲ, ಮರೆಯುವುದೂ ಇಲ್ಲ. ನಾವೆಲ್ಲ ನಶ್ವರರು. ಎಲ್ಲವನ್ನು ಮರೆತು ಮುಂದೆ ಸಾಗೋಣ. ಕಾಲ ಎಲ್ಲಕ್ಕೂ ಉತ್ತರಿಸಲಿದೆ.
ಪೈಲ್ವಾನ್ ಗೆಲ್ಲಿಸುವ ತೂಕ ದೊಡ್ಮಗ ಸುದೀಪ್‌ಗೆ ಇದೆ: ರವಿಚಂದ್ರನ್
ಮರೆತ ಮಾತು: ಇಡೀ ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೂಡ ಬರಿಗೈಯಲ್ಲೇ ಹೊರಟು ಹೋದ. ಒಳ್ಳೆಯ ಕ್ಷಣಗಳನ್ನು ಅನುಭವಿಸೋಣ, ಸುಮಧುರ ನೆನಪುಗಳನ್ನು ಬಿಟ್ಟುಹೋಗೋಣ. ನೆನಪುಗಳೇ ಎಲ್ಲರನ್ನೂ ಜೀವಂತವಾಗಿಡುತ್ತವೆ.
ಪ್ರತಿಯೊಬ್ಬರಿಗೂ ತುಂಬು ಪ್ರೀತಿ
ನಿಮ್ಮ
ಕಿಚ್ಚ ಸುದೀಪ್