
ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಅಂಗಳದಲ್ಲಿ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ 'ಜನತಾ ಪಕ್ಷ'ದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶದ ಬಿರುಗಾಳಿ ಎದ್ದಿದೆ. ಅನೇಕ ಬಾಲಿವುಡ್ ತಾರೆಯರು ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದರೂ, ಕ್ರಿಕೆಟ್ ಜಗತ್ತಿನ ಪ್ರಮುಖರು ಮೌನಕ್ಕೆ ಶರಣಾಗಿದ್ದರು. ಆದರೆ ಸಚಿನ್ ಅವರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸಪೂರ್ಣ ವಿವರ ಇಲ್ಲಿದೆ.
ಕ್ರೀಡಾಲೋಕದಿಂದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಮತ್ತು ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಇದೀಗ ಭಾರತೀಯ ಕ್ರಿಕೆಟ್‌ನ 'ದೇವ' ಎಂದೇ ಪೂಜಿಸಲ್ಪಡುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಈ ವಿಷಯದ ಕುರಿತು ಮೌನ ಮುರಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ವಿದ್ಯಾರ್ಥಿಗಳ ಸುದೀರ್ಘ ಹೋರಾಟ ಮತ್ತು ಕಣ್ಣೀರಿಗೆ ಸ್ಪಂದಿಸಿ ದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಚಿನ್ ತೆಂಡೂಲ್ಕರ್, ತಮ್ಮ ತಂದೆಯವರನ್ನು ನೆನಪಿಸಿಕೊಂಡಿದ್ದಾರೆ. "ನನ್ನ ತಂದೆ ಒಬ್ಬ ಪ್ರಾಧ್ಯಾಪಕರಾಗಿದ್ದರು. ಅವರು ಸಾವಿರಾರು ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಬಾಲ್ಯದಿಂದಲೂ ನನ್ನ ಮನಸ್ಸಿನಲ್ಲಿ ಒಂದು ಮಹತ್ವದ ವಿಚಾರವನ್ನು ಆಳವಾಗಿ ಬಿತ್ತಿದ್ದರು—'ಜೀವನದಲ್ಲಿ ವೈಫಲ್ಯವನ್ನು ಒಪ್ಪಿಕೊಳ್ಳಬಹುದು, ಆದರೆ ಮೋಸ ಮಾಡುವುದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಯಶಸ್ಸಿಗಾಗಿ ಎಂದಿಗೂ ಶಾರ್ಟ್‌ಕಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ'" ಎಂದು ಸಚಿನ್ ಬರೆದುಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಸಚಿನ್, "ಸಮಾಜದಲ್ಲಿ ಹಿರಿಯರಾಗಿ, ಯುವಜನತೆಗೆ ಒಳ್ಳೆಯ ಸಂಸ್ಕೃತಿಯನ್ನು ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇಂದಿನ ಸಮಾಜವು ಕಠಿಣ ಪರಿಶ್ರಮಕ್ಕಿಂತ ಫಲಿತಾಂಶಕ್ಕೆ ಹಾಗೂ ಗುಣಮಟ್ಟ ಮತ್ತು ಪ್ರಾಮಾಣಿಕತೆಗಿಂತ 'ಶಾರ್ಟ್‌ಕಟ್'ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ದುರಂತ," ಎಂದು ಖೇದ ವ್ಯಕ್ತಪಡಿಸಿದ್ದಾರೆ.
ದೇಶದ ಭವಿಷ್ಯವಾಗಿರುವ ಯುವಜನತೆಯ ಮನಸ್ಸಿನಲ್ಲಿ ಉಂಟಾಗಿರುವ ನಿರಾಶೆಯನ್ನು ಉಲ್ಲೇಖಿಸಿದ ಸಚಿನ್, "ರಾತ್ರಿ-ಹಗಲೆನ್ನದೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂಬ ಭಾವನೆ ಮೂಡಿರುವುದು ಸಹಜ ಮತ್ತು ಅರ್ಥವಾಗುವಂತಹದ್ದು. ಆದರೆ, ನಮ್ಮ ದೇಶದ ಯುವಕರು ಅಪಾರ ಕನಸು ಮತ್ತು ಶಕ್ತಿಯಿಂದ ತುಂಬಿದ್ದಾರೆ. ಅವರೇ ಭಾರತದ ನಿಜವಾದ ಶಕ್ತಿ. ಅವರು ಮತ್ತೆಂದೂ ಈ ರೀತಿ ಭ್ರಮನಿರಸನಗೊಳ್ಳದಂತೆ ಪೋಷಕರು, ಶಿಕ್ಷಕರು, ಸ್ನೇಹಿತರು, ಶಾಲೆಗಳು ಮತ್ತು ಆಡಳಿತ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡಬೇಕು," ಎಂದು ಕರೆ ನೀಡಿದ್ದಾರೆ. ಕಠಿಣ ಪರಿಶ್ರಮಕ್ಕೆ ಸೂಕ್ತ ಬೆಲೆ ಸಿಗುವ, ಪ್ರಾಮಾಣಿಕತೆಯನ್ನು ಗೌರವಿಸುವ ಮತ್ತು ಅರ್ಹತೆಗೆ ಜಯ ಸಿಗುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕಿದೆ. ನಮ್ಮ ಮಕ್ಕಳ ಆಕಾಂಕ್ಷೆಗಳನ್ನು ರಕ್ಷಿಸುವ ಪರಿಹಾರವನ್ನು ನಾವೆಲ್ಲರೂ ಒಟ್ಟಾಗಿ ಕಂಡುಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ," ಎಂದು ಅವರು ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಕುತೂಹಲಕಾರಿ ವಿಷಯವೆಂದರೆ, ಸಚಿನ್ ತೆಂಡೂಲ್ಕರ್ ಅವರ ಈ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿನ್ ಅವರು ನೀಟ್ ಪತ್ರಿಕೆ ಸೋರಿಕೆ ಅಕ್ರಮದ ವಿರುದ್ಧ ಅಥವಾ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಪರವಾಗಿ ನೇರ ಹಾಗೂ ಸ್ಪಷ್ಟ ನಿಲುವು ತಳೆಯುವ ಬದಲು, ಅತ್ಯಂತ 'ರಾಜತಾಂತ್ರಿಕ' ಹಾಗೂ ಸಾಮಾನ್ಯ ಮಾತುಗಳನ್ನು ಆಡಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸರ್ಕಾರದ ಲೋಪದೋಷಗಳನ್ನು ನೇರವಾಗಿ ಪ್ರಶ್ನಿಸದೆ, ಮೂಲ ಸಮಸ್ಯೆಯಿಂದ ಕೊಂಚ ದೂರ ಸರಿದು ನೈತಿಕತೆಯ ಪಾಠ ಹೇಳಿದ್ದಾರೆ ಎಂದು ಹಲವು ನೆಟಿಜನ್‌ಗಳು ಕಮೆಂಟ್ ಮಾಡುತ್ತಿದ್ದಾರೆ. ಏನೇ ಆದರೂ, ಪರೀಕ್ಷಾ ಅಕ್ರಮದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೈಪ್ರೊಫೈಲ್ ವ್ಯಕ್ತಿಗಳ ಪ್ರವೇಶದಿಂದಾಗಿ ಈ ಹೋರಾಟ ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.