
ಬಾಲಿವುಡ್ ಉದ್ಯಮದಲ್ಲಿ ವಿವಾದಗಳ ರಾಣಿ ಎಂದು ಕರೆಯಲ್ಪಡುವ ಅನೇಕ ಸುಂದರಿಯರಿದ್ದಾರೆ. ಅವರಲ್ಲಿ ಒಬ್ಬರು 50-60ರ ದಶಕದಲ್ಲಿ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿದ್ದ ನಟಿ ಮಾಲಾ ಸಿನ್ಹಾ. ನಟಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದ ನಟಿ, ಮಾಡಿಕೊಂಡ ಒಂದೇ ಒಂದು ಎಡವಟ್ಟು ಅವರ ಬದುಕನ್ನೇ ಹೇಗೆ ತಿರುಗಿಸಿತು, ಹೇಗೆ ಅವರನ್ನು ವಿವಾದಗಳಿಂದ ಸುತ್ತುವರೆದು ವಿವಾದಾತ್ಮಕ ರಾಣಿ ಎಂಬ ಬಿರುದು ಕೂಡ ಸಿಕ್ಕಿತು. ಉತ್ತುಂಗಕ್ಕೇರಿದ್ದ ಮಾಲಾ ಸಿನ್ಹಾ ಅವರ ವೃತ್ತಿಜೀವನ ಹೇಗೆ ಹಾಳಾಗಿ ಹೋಯಿತು ಎಂಬುದು ಮಾತ್ರ ಬಲು ವಿಚಿತ್ರ. ಹೌದು. ಬೆರಗುಗಣ್ಣುಗಳ ಅಪ್ರತಿಮ ಚೆಲುವೆಯಾಗಿದ್ದ ಮಾಲಾ ನೇಪಾಳಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದಾಕೆ. ಪ್ಯಾಸಾ (1957), ಧೂಲ್ ಕಾ ಫೂಲ್ (1959), ಅನಪಢ್ (1962), ಹಿಮಾಲಯ್ ಕಿ ಗೋದ್ ಮೇಂ (1965), ಆಂಖೇಂ (1968) ಹಾಗೂ ಮರ್ಯಾದಾ (1971) ಸೇರಿದಂತೆ ಹಲವು ಸೂಪರ್ಹಿಟ್ ಬಾಲಿವುಡ್ ಚಲನಚಿತ್ರಗಳನ್ನುನೀಡಿರುವ ಮಾಲಾ ಅವರ ಬದುಕಿನ ಬಹು ವಿವಾದಿತ ಪುಟವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಈಕೆ ನೀಡಿದ ಒಂದು ಹೇಳಿಕೆಯಿಂದ ಬದುಕು ಹೇಗೆ ಕತ್ತಲಾಗಿ ಹೋಯಿತು ಎನ್ನುವ ಘಟನೆಯಿತು.
1936ರಲ್ಲಿ ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದ ಈಕೆಯ ಹೆಸರು ಆಲ್ಡಾ (Alda), ಮುದ್ದು ಮೊಗದ ಈಕೆಯನ್ನು ಎಲ್ಲರೂ ಡಾಲ್ಡಾ ಎಂದು ಕರೆಯುತ್ತಿದ್ದರಂತೆ. ಮನನೊಂದುಕೊಂಡಿದ್ದ ಈಕೆಗೆ ಪಾಲಕರು ನಂತರ ಮಾಲಾ ಎಂದು ಹೆಸರಿಟ್ಟರು. ಜೈ ವೈಷ್ಣೊ ದೇವಿ, ಶ್ರೀ ಕೃಷ್ಣ ಲೀಲಾ, ಜೋಗ್ ಬಿಯೊಗ್ ಮತ್ತು ಧೂಳಿ ಎಂಬ ಬಂಗಾಳೀ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ವೃತ್ತಿಜೀವನ ಆರಂಭಿಸಿದರು. ಶಾಲಾ ನಾಟಕವೊಂದರಲ್ಲಿ ನಟಿಸುತ್ತಿದ್ದ ಮಾಲಾರನ್ನು ಗಮನಿಸಿದ ಖ್ಯಾತ ಬಂಗಾಳಿ ಚಲನಚಿತ್ರ ನಿರ್ದೇಶಕ ಅರ್ಧೇಂದು ಬೋಸ್, ಮಾಲಾರ ತಂದೆಯ ಒಪ್ಪಿಗೆ ಪಡೆದು, ತಮ್ಮ ಚಲನಚಿತ್ರ 'ರೋಷನಾರಾ ' (1952)ರಲ್ಲಿ ಮುಖ್ಯನಟಿಯಾಗಿ ಸೇರಿಸಿಕೊಂಡರು. ನಂತರ ಪ್ರದೀಪ್ ಕುಮಾರ (Pradeep Kumar) ಜೊತೆ ಅಭಿನಯಿಸಿದ ಬಾದಷಾಹ್ ಮಾಲಾರ ಮೊಟ್ಟಮೊದಲ ಹಿಂದಿ ಚಲನಚಿತ್ರ. ನಂತರ 'ಏಕಾದಶಿ' ಎಂಬ ಪೌರಾಣಿಕ ಕಥಾವಸ್ತುವಿನ ಚಲನಚಿತ್ರದಲ್ಲಿ ನಟಿಸಿದರು.
1977ರವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆಮೇಲೆ ಆದದ್ದು ಬದುಕಿನಲ್ಲಿ ಬಹು ದೊಡ್ಡ ಎಡವಟ್ಟು. 1978ರ ಸಮಯದಲ್ಲಿ ಆದ ಒಂದು ಘಟನೆಯಿದು. ಈಕೆ ರಾಶಿ ರಾಶಿ ಹಣ ಸಂಪಾದನೆ ಮಾಡಿರುವುದಾಗಿ ಈಕೆಯ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಲಾಗಿತ್ತು. ಆದಾಯ ತೆರಿಗೆ ಅಧಿಕಾರಿಗಳು ಇವರ ಮನೆಯ ಮೇಲೆ ದಾಳಿ ಮಾಡಿದಾಗ ಬಾತ್ ರೂಂನಲ್ಲಿ ಕಂತೆ ಕಂತೆ ಹಣ ಸಿಕ್ಕಿಬಿಟ್ಟಿತ್ತು. ಸ್ನಾನಗೃಹದಲ್ಲಿ 12 ಲಕ್ಷ ರೂಪಾಯಿಗಳ ಮೂಟೆಗಳು ಪತ್ತೆಯಾಗಿದ್ದವು. ಆಗಿನ ಕಾಲದಲ್ಲಿ 12 ಲಕ್ಷ ರೂಪಾಯಿ ಎಂದರೆ ಈಗಿನ ನೂರಾರು ಕೋಟಿ ರೂಪಾಯಿಗಳಿಗೆ ಸಮ. ಈ ವಿಷಯ ತಿಳಿಯುತ್ತಲೇ ಬಾಲಿವುಡ್ ತಲ್ಲಣಗೊಂಡಿತ್ತು. ಈಕೆಯ ಅಭಿಮಾನಿಗಳು ಹೌಹಾರಿ ಹೋದರು. ಇಷ್ಟೇ ಆಗಿದ್ದರೆ ಮಾಲಾ ಅವರಿಗೆ ಹೆಚ್ಚಿನ ಧಕ್ಕೆ ಏನೂ ಆಗುತ್ತಿರಲಿಲ್ಲ. ಆದರೆ ಇಷ್ಟೊಂದು ಹಣ ಹೇಗೆ ಬಂತು ಎಂದು ಅವರು ನೀಡಿದ ಹೇಳಿಕೆಯಿಂದ ಭಾರಿ ವಿವಾದಿತ ವ್ಯಕ್ತಿಯಾಗಿಬಿಟ್ಟರು. ರಾಶಿ ರಾಶಿ ಹಣ ಸಿಗುತ್ತಲೇ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೇ ವೇಳೆ ಮಾಲಾ ತನ್ನ ಹಣ ಉಳಿಸಲು ಮಾಧ್ಯಮ ಹಾಗೂ ನ್ಯಾಯಾಲಯದ ಮುಂದೆ ಏನೋ ಹೇಳಿದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು.
ನಂ.1 ನಟಿಯ ಸ್ಥಾನ ಪಡೆದು ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಎಲ್ಲಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡುಬಿಡುತ್ತದೆಯೋ ಎಂಬ ಆಲೋಚನೆಯಲ್ಲಿ ಮಾಲಾ ಸಿನ್ಹಾ ಬೆದರಿ ಹೋಗಿದ್ದರು. ಇದೇ ಕಾರಣಕ್ಕೆ ಕೋರ್ಟ್ ಮುಂದೆ ಆಕೆ ಈ ಹಣದ ಮೂಲ ವೇಶ್ಯಾವಾಟಿಕೆ ಎಂದುಬಿಟ್ಟರು! ವೇ*ಶ್ಯಾವಾಟಿಕೆ ಮೂಲಕ ಈ ಹಣವನ್ನು ಸಂಪಾದಿಸಿರುವುದಾಗಿ ಹೇಳಿಕೆ ಕೊಟ್ಟರು. ಈ ಹೇಳಿಕೆಯನ್ನು ಅವರು ತಮ್ಮ ತಂದೆ ಆಲ್ಬರ್ಟ್ ಸಿನ್ಹಾ ಅವರ ಮನವಿ ಮೇರೆಗೆ ಹೇಳಿರುವುದಾಗಿ ಹೇಳಲಾಗುತ್ತಿದೆ. ಆದರೆ ಸತ್ಯ ಏನು ಎಂಬುದು ಯಾರಿಗೂ ತಿಳಿದಿಲ್ಲ. ಈ ಹೇಳಿಕೆಯ ನಂತರ, ಅವರ ವೃತ್ತಿಜೀವನವು ಸಂಪೂರ್ಣವಾಗಿ ನಾಶವಾಯಿತು. ನಟಿಗೆ ಚಿತ್ರರಂಗದಲ್ಲಿ ಕೆಲಸ ಸಿಗುವುದು ಕೂಡ ಕಷ್ಟ ಎನಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿ ಹೋಯ್ತು. ಇವರು ನೀಡಿರುವ ಹೇಳಿಕೆ ಎಷ್ಟು ಸತ್ಯವೋ, ಸುಳ್ಳೋ ಎಂಬುದು ಇದುವರೆಗೆ ತಿಳಿದಿಲ್ಲ. ಆದರೆ ನಟಿ ಮಾತ್ರ ಹಣ ಉಳಿಸಿಕೊಳ್ಳಲು ಹೋಗಿ ಭವಿಷ್ಯವನ್ನೇ ನರಕಕ್ಕೆ ದೂಡಿಕೊಂಡು ಬಿಟ್ಟರು. ನಂತರ ಆಕೆ ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಳ್ಳುವ ಪ್ರಸಂಗ ಎದುರಾಗಿ ಹೋಗಿರುವುದು ದುರಂತ. ಈಗ ಮಾಲಾ ಅವರಿಗೆ 88 ವರ್ಷ ವಯಸ್ಸು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.