ರಿಕ್ತ ವಿಮರ್ಶೆ: ನರ ಮನುಷ್ಯನ ಕೈಗೆ ಸಿಲುಕಿ ನಲುಗಿದ ದೆವ್ವ

Published : Jan 22, 2017, 09:25 AM ISTUpdated : Apr 11, 2018, 01:00 PM IST
ರಿಕ್ತ ವಿಮರ್ಶೆ: ನರ ಮನುಷ್ಯನ ಕೈಗೆ ಸಿಲುಕಿ ನಲುಗಿದ ದೆವ್ವ

ಸಾರಾಂಶ

ಸಂಚಾರಿ ವಿಜಯ್‌ ಅವರ ಪಾತ್ರದಲ್ಲಿ ಪ್ರೇಕ್ಷಕರನ್ನು ಕಾಡಿಸುವ, ನೋಡಿಸುವ ಗುಣವೇ ಇಲ್ಲ. ಪ್ರೇಕ್ಷಕರಲ್ಲಿ ಕಾಡುವ ಪ್ರಶ್ನೆಯಂದ್ರೆ, ವಿಜಯ್‌ ಅವರಂತಹ ಒಬ್ಬ ನಟನನ್ನು ನಿರ್ದೇಶಕರಿಗೆ ಸರಿಯಾಗಿ ದುಡಿಸಿಕೊಳ್ಳುವುದಕ್ಕೆ ಬಂದಿಲ್ಲ. ನಿರ್ದೇಶಕರು ಹೇಳಿದಷ್ಟನ್ನು ಒಪ್ಪಿಸಿದಂತೆ ಕಾಣುತ್ತಾರೆ ವಿಜಯ್‌. 

ಚಿತ್ರ: ರಿಕ್ತ
ಭಾಷೆ : ಕನ್ನಡ
ತಾರಾಗಣ: ಸಂಚಾರಿ ವಿಜಯ್‌, ಅದ್ವಿಕಾ, ರಮ್ಯಾವೈಷ್ಣವಿ
ನಿರ್ದೇಶನ: ಅಮೃತ್‌ ಕುಮಾರ್‌
ಛಾಯಾಗ್ರಹಣ: ಮುರುಳೀಧರ್‌
ಸಂಗೀತ: ರಾಕಿ ಸೋನು
ನಿರ್ಮಾಣ: ಜಿ ಅರುಣ್‌ ಕುಮಾರ್‌

ರೇಟಿಂಗ್: **

ದೆವ್ವ ಅಂದಾಕ್ಷಣ ಭಯ. ಯಾಕಂದ್ರೆ ಅನಾದಿ ಕಾಲದಿಂದ ದ್ವೆವದ ಬಗೆಗಿನ ಕಲ್ಪನೆಯೇ ಹಾಗೆ. ಆದ್ರೆ ಇಲ್ಲಿ ಬರುವ ದೆವ್ವ ಮಾತ್ರಕ್ಕೆ ಅಂತಹ ಭಯ ಗುಣವಿಲ್ಲ. ಅದು ಸಿಹಿಯಾದ ದೆವ್ವ. ತಮಾಷೆ ಅಂದ್ರೆ ಈ ದೆವ್ವ ಕಾಮಿಡಿ ಮಾಡುತ್ತದೆ. ಒಮ್ಮೊಮ್ಮೆ ಮನುಷ್ಯರನ್ನು ಕಂಡರೆ ಭಯಪಡುತ್ತದೆ. ರಾತ್ರಿ ಹೊತ್ತು ಚಳಿಗೆ ಹೆದರಿ, ರಕ್ಷಿಸಿಕೊಳ್ಳಲು ಬ್ಲಾಂಕೆಟ್‌ ಹುಡುಕುತ್ತದೆ. ಪ್ರೀತಿಗೆ ಪರಿತಪಿಸುತ್ತದೆ. ಹೀಗಾಗಿ ದೆವ್ವ ಅಂದ್ರೆ ಹೀಗು ಇರುತ್ತವೆಯೇ ಎನ್ನುವ ಲೆಕ್ಕಚಾರದ ನಡುವೆ ಈ ದೆವ್ವದ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಅಂದ ಹಾಗೆ, ಇದು ‘ರಿಕ್ತ' ದೊಳಗೆ ಕಾಣುವ ಹೊಸ ಬಗೆಯ ದೆವ್ವ. ಕನ್ನಡದ ಹಾರರ್‌ ಸಿನಿಮಾಗಳ ದಯನೀಯ ಸ್ಥಿತಿ ಸದ್ಯಕ್ಕೆ ಇಲ್ಲಿಗೆ ಬಂದು ನಿಂತಿದೆ.

ಹೊಸ ಬಗೆಯ ಸಿನಿಮಾ ಮಾಡುವ ಆಸೆಯಲ್ಲಿ ನಿರ್ದೇಶಕ ಅಮೃತ್‌ ಕುಮಾರ್‌, ಸಾವಿನ ನಂತರವೂ ಪ್ರೀತಿಗಾಗಿ ಪರಿತಪಿಸುವ ಆತ್ಮದ ಕತೆಯನ್ನು ತಮ್ಮ ಚೊಚ್ಚಲ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ವಿಶೇಷ. ಆದರೆ, ಅದನ್ನು ಗಟ್ಟಿಯಾದ ಕತೆಯೊಂದಿಗೆ ನಿರೂಪಿಸುವ ಬಗೆಯಲ್ಲಿ ಎಳಷ್ಟು ಹೊಸತನ ತೋರಿಸಿಲ್ಲ. ಹಾರರ್‌ ಸ್ಪರ್ಶ ನೀಡುವ ಭರಾಟೆಯಲ್ಲಿ ಹೊಸ ಬಗೆಯ ದೆವ್ವದ ದರ್ಶನ ಮಾಡಿಸಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಇಲ್ಲಿ ಬರುವ ದೆವ್ವವನ್ನು ಕಂಡರೆ, ಪ್ರೇಕ್ಷಕ ಬೆಚ್ಚಿ ಬೀಳುವ ಬದಲಿಗೆ ಬಿದ್ದು ಬಿದ್ದು ನಗುವಂತಾಗುತ್ತದೆ. ಅದೇ ಈ ಚಿತ್ರದ ಬಹುದೊಡ್ಡ ಲೋಪ.

ಹಳ್ಳಿಗಾಡಿನ ಒಬ್ಬ ಹುಡುಗನ ಬದುಕಲ್ಲಿ ಆಕಸ್ಮಿಕವಾಗಿ ಬಂದವಳು ಪ್ರಕೃತಿ. ಆಕೆ ಕೂಡ ಹಳ್ಳಿ ಹುಡುಗಿ. ಈ ಕಾಲದ ಹುಡುಗಿಯರ ಹಾಗೆ ಸ್ವಲ್ಪ ಬೋಲ್ಡ್‌. ಹೋದಲ್ಲಿ, ಬಂದಲ್ಲಿ ಚಿತ್ರದ ನಾಯಕನ ಕಾಲೆಳೆಯುತ್ತಾ, ಸಿಕ್ಕ ಸಿಕ್ಕಲ್ಲಿ ಕೆಡವಿ ತಮಾಷೆ ಮಾಡುವ ಹೊತ್ತಲ್ಲಿ, ತಮಾಷೆ ಎನ್ನುವುದು ಅಮಾಸೆ ಆಗುತ್ತದೆ. ಹುಡುಗಾಟ ಪ್ರೀತಿಗೆ ತಿರುಗುತ್ತದೆ. ನಾಯಕ ತನ್ನ ಪ್ರೀತಿಯ ನಿವೇದನೆಯನ್ನು ಪ್ರಕೃತಿಯ ಬಳಿ ಹೇಳಿಕೊಂಡಾಗ, ಆಕೆ ತನ್ನ ನಿರ್ಧಾರ ತಿಳಿಸಲು ಒಂದು ದಿನದ ಸಮಯ ತೆಗೆದುಕೊಳ್ಳುತ್ತಾಳೆ. ಹಾಗೆ ಹೋದವಳು, ನಾಪತ್ತೆ. ಅವಳಿಲ್ಲದ ದುಃಖದಲ್ಲಿ ಕುಡಿತಕ್ಕೆ ದಾಸನಾದ ನಾಯಕ, ಒಂದು ದಿನ ಕುಡಿದು ತೂರಾಡುತ್ತಾ ಬರುವಾಗ ದಾರಿ ಮಧ್ಯೆ ಹೆಣ ಹೂಳಲು ಅಗೆದ ಗುಂಡಿಗೆ ಬಿದ್ದು ಸಮಾದಿ ಆಗುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಹಾರರ್‌ ಕತೆ.

ವಿಚಿತ್ರ ಅಂದ್ರೆ, ಈ ಹೊತ್ತಿಗೆ ಚಿತ್ರ 20 ನಿಮಿಷಗಳಷ್ಟು ಕಾಲ ಮುಗಿದು ಹೋಗಿರುತ್ತದೆ. ಆಗ ಚಿತ್ರದ ಟೈಟಲ್‌ ಕಾರ್ಡ್‌'ಗಳು ಪರದೆ ಮೇಲೆ ಕಾಣಿಸಿಕೊಳ್ಳುತ್ತವೆ. ಆಗಷ್ಟೇ ಬಂದವರಿಗೆ ನಿಜವಾದ ಚಿತ್ರ ಈಗ ಶುರುವಾಗಿರಬಹುದು ಎನ್ನುವ ಕುತೂಹಲ. ಆದರೆ, ಅದು ಕೇವಲ ಕುತೂಹಲವಷ್ಟೇ. ಮುಂದೆ ಸಾಗುತ್ತಾ ಹೋದಾಗ ವಿಶೇಷ ಎನಿಸುವಂಥದ್ದು ಯಾವುದು ಇಲ್ಲ. ಅದೇ ದೆವ್ವದ ತಮಾಷೆ, ಅಳು, ಪ್ರೀತಿಗಾಗಿ ಅದು ಪರದಾಡುವ ಪರಿ ಮಾತ್ರ. ‘ನಾನು ಅವನಲ್ಲ ಅವಳು' ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿಗೆ ಭಾಜನರಾದ ನಟ ಸಂಚಾರಿ ವಿಜಯ್‌, ಇಂಥದೊಂದು ಚಿತ್ರಕ್ಕೆ ಯಾವ ಕಾರಣಕ್ಕೆ ನಾಯಕರಾಗಿದ್ದರೋ ಗೊತ್ತಿಲ್ಲ. ಅವರ ಪಾತ್ರದಲ್ಲಿ ಪ್ರೇಕ್ಷಕರನ್ನು ಕಾಡಿಸುವ, ನೋಡಿಸುವ ಗುಣವೇ ಇಲ್ಲ. ಪ್ರೇಕ್ಷಕರಲ್ಲಿ ಕಾಡುವ ಪ್ರಶ್ನೆಯಂದ್ರೆ, ವಿಜಯ್‌ ಅವರಂತಹ ಒಬ್ಬ ನಟನನ್ನು ನಿರ್ದೇಶಕರಿಗೆ ಸರಿಯಾಗಿ ದುಡಿಸಿಕೊಳ್ಳುವುದಕ್ಕೆ ಬಂದಿಲ್ಲ. ನಿರ್ದೇಶಕರು ಹೇಳಿದಷ್ಟನ್ನು ಒಪ್ಪಿಸಿದಂತೆ ಕಾಣುತ್ತಾರೆ ವಿಜಯ್‌. 

ನಾಯಕಿ ಅದ್ವಿಕಾ ಅವರ ಪಾತ್ರದಲ್ಲೂ ಅಂಥದ್ದೇನು ವಿಶೇಷತೆ ಇಲ್ಲ. ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶ ಪಡೆದ ನಟಿಗೆ ಜನರು ಗುರುತಿಸಬಹುದಾದ ಪಾತ್ರವೂ ಸಿಕ್ಕಿಲ್ಲ, ಇರುವ ಪಾತ್ರದಲ್ಲೂ ಅವರು ಗಮನ ಸೆಳೆಯುವಂತೆ ನಟಿಸಿಲ್ಲ.ಅವರ ಹಾಗೆಯೇ ಅಲ್ಲಿ ಬರುವ ಪಾತ್ರಗಳು ಅಷ್ಟೇ. ತೆರೆಯಲ್ಲಿ ಕಂಡಷ್ಟೇ ವೇಗದಲ್ಲಿ ನೋಡುಗರ ಮನಸ್ಸಿನಿಂದಲೂ ಕಾಣೆಯಾಗುತ್ತವೆ. ರಾಕಿ ಸೋನು ಸಂಗೀತ ಮಾತ್ರ ಒಂದಷ್ಟುಮನಸ್ಸಿಗೆ ಮುದು ನೀಡುತ್ತದೆ. ಚಿತ್ರದಲ್ಲಿರುವ ನಾಲ್ಕು ಹಾಡುಗಳ ಪೈಕಿ ಎರಡು ಹಾಡುಗಳು ಮಾತ್ರ ಹಿತ ಎನಿಸುತ್ತವೆ. ಮುರುಳೀಧರ್‌ ಛಾಯಾಗ್ರಹಣದಲ್ಲೂ ಯಾವುದೇ ತಾಜಾತನ ಕಾಣಿಸದು. ಮಲೆನಾಡಿನ ಹಸಿರು ಒಂದಷ್ಟು ನೋಡುಗರ ಕಣ್ಣು ತಂಪಾಗಿಸುತ್ತದೆ. ಉಳಿದಂತೆ ಅಭಿಷೇಕ್‌ ಚಿತ್ರಕತೆಯಲ್ಲಿ ಯಾವುದೇ ಹಿಡಿತವೇ ಇಲ್ಲ. ಕತೆ ಎಲ್ಲಿಂದೆಲ್ಲಿಗೆ, ಯಾಕಾಗಿ ಸಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ದೃಶ್ಯಗಳ ಜೋಡಿಯಲ್ಲಿ  ಸಾಕಷ್ಟು ದೋಷಗಳಿವೆ. 

- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!