ಅನಾರೋಗ್ಯದ ನಡುವೆಯೂ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ನೋಡಿದ ಅಂಬರೀಶ್

Published : Sep 17, 2018, 09:50 AM ISTUpdated : Sep 19, 2018, 09:27 AM IST
ಅನಾರೋಗ್ಯದ ನಡುವೆಯೂ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ನೋಡಿದ ಅಂಬರೀಶ್

ಸಾರಾಂಶ

ಹಿರಿಯ ನಟ ಅಂಬರೀಶ್ ಅನಾರೋಗ್ಯದ ಹಿನ್ನೆಲೆಯಲ್ಲೇ ಭಾನುವಾರಕ್ಕೆ ಫಿಕ್ಸ್ ಆಗಿದ್ದ ಬಹು ನಿರೀಕ್ಷಿತ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಮುಂದಕ್ಕೋಗಿದೆ. ಆದರೆ, ಅನಾರೋಗ್ಯದ ನಡುವೆಯೂ ಅಂಬರೀಶ್ ಅಂಬ್ಯುಲೆನ್ಸ್ ಮೂಲಕವೇ ಶನಿವಾರ ರಾತ್ರಿ ಕಲಾವಿದರ ಸಂಘಕ್ಕೆ ಹೋಗಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ನೋಡಿದ್ದಾರೆ.

ಅಂಬರೀಶ್ , ಸುದೀಪ್, ಸುಹಾಸಿನಿ, ಶೃತಿ ಹರಿಹರನ್ ಅಭಿನಯದ ಕಾರಣಕ್ಕೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಬಹುತೇಕ ಅಂಬರೀಶ್ ಅವರದ್ದೇ ಬದುಕಿನ ಸಿನಿಮಾ ಅಂತಲೂ ಅಭಿಮಾನಿಗಳು ಅಂದುಕೊಂಡಿದ್ದಾರೆ. ಹಾಗೆಯೇ ಅಂಬರೀಶ್ ತಮ್ಮ ಸಿನಿ ಜರ್ನಿಯ ವಿಶೇಷವಾದ ಸಿನಿಮಾ ಅಂತಲೂ ಹೇಳಿಕೊಂಡಿದ್ದಾರೆ. ಈ ನಡುವೆಯೇ ಚಿತ್ರದ ರಿಲೀಸ್ ದಿನಾಂಕ ಸೆಪ್ಟೆಂಬರ್ ೨೭ಕ್ಕೆ ಫಿಕ್ಸ್ ಆಗಿದೆ. ಇದರ ಪೂರ್ವ ಭಾವಿ ಪ್ರಚಾರಕ್ಕೆ ಚಿತ್ರ ತಂಡ ಸೆಪ್ಟೆಂಬರ್ 16ರಂದು ಭಾನುವಾರ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಮಾಡಲು ಸಿದ್ಧತೆ ನಡೆಸಿತ್ತು.

ಚಿತ್ರೋದ್ಯಮದ ಸ್ಟಾರ್ ನಟ- ನಟಿಯರಿಗೆಲ್ಲ ಕಾರ್ಯಕ್ರಮ ಆಹ್ವಾನ ಹೋಗಿತ್ತು. ಆದರೆ ಶನಿವಾರ ಸಂಜೆ ಅಂಬರೀಶ್ ದಿಢೀರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದರು. ಈ ಹಿನ್ನೆಲೆಯಲ್ಲಿ ಆಡಿಯೋಲಾಂಚ್ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಈಮಧ್ಯೆ ಆಸ್ಪತ್ರೆಯಲ್ಲಿದ್ದ ನಟ ಅಂಬರೀಶ್ ಶನಿವಾರ ರಾತ್ರಿಯೇ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ನೋಡುವುದಾಗಿ ಹೇಳಿಕೊಂಡರು. ಆಸ್ಪತ್ರೆಯ ವೈದ್ಯರು ಆರೋಗ್ಯದಲ್ಲಿ ಸುಧಾರಣೆ ಆಗುವ ತನಕ ವಿಶ್ರಾಂತಿ ಬೇಕು. ಈಗಲೇ ಸಿನಿಮಾ ನೋಡುವುದು ಬೇಡ ಎಂದು ಸಲಹೆ ನೀಡಿದರು. ಆದರೂ ಹಠ ಹಿಡಿದ ಅಂಬರೀಶ್, ಆಸ್ಪತ್ರೆಗೆ ತಕ್ಷಣವೇ ಸುದೀಪ್‌ಅವರನ್ನು ಕರೆಸಿಕೊಂಡು ತಾವು ಸಿನಿಮಾ ನೋಡಲೇಬೇಕೆಂದು ಹೇಳಿದರು. ತಕ್ಷಣವೇ ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಸಿನಿಮಾ ಪ್ರದರ್ಶನದ ವ್ಯವಸ್ಥೆ ಆಯಿತು. ಅಲ್ಲಿಗೆ ಅಂಬ್ಯುಲೆನ್ಸ್ ಮೂಲಕವೇ ಬಂದ ಅಂಬರೀಶ್, ಇಡೀ ಸಿನಿಮಾ ನೋಡಿ ಚಿತ್ರ ಮಂದಿರದಿಂದ ಹೊರಬಂದರು. ಅವರೊಂದಿಗೆ ಪತ್ನಿ ಸುಮಲತಾ
ಅಂಬರೀಶ್ ಸಾಥ್ ನೀಡಿದರು.
 14 ವರ್ಷಗಳ ನಂತರ ನಾನು ಅಭಿನಯಿಸಿದ ಇಡೀ ಸಿನಿಮಾ ನೋಡಿದೆ. ತುಂಬಾನೆ ಖುಷಿ ಆಗಿದೆ. ಸಿನಿಮಾ ನೋಡುತ್ತಲೇ ನನ್ನೊಳಗೆ ನಾನು ಭಾವುಕನಾದೆ. ಚಿತ್ರದಲ್ಲಿನ ಅಷ್ಟು ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ. ಸಿನಿಮಾ ನೋಡಲೇಬೇಕು ಅಂತ ಅನಿಸುತ್ತಿತ್ತು. ಅದು ಈಗ ಈಡೇರಿದೆ ಅಂತ ಚಿತ್ರ ತಂಡದ ಜೊತೆ ಅಂಬರೀಶ್ ಹೇಳಿಕೊಂಡರೆಂದು ಮೂಲಗಳು ತಿಳಿಸಿವೆ. ಅಲ್ಲಿಂದ ಅವರು ನೇರವಾಗಿ ಮನೆಗೆ ತೆರಳಿದರು. ಭಾನುವಾರ ಮನೆಯಲ್ಲೇ ವಿಶ್ರಾಂತಿ ಪಡೆದು ಮತ್ತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆಂದು ಹೇಳಲಾಗಿದೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜಾಕ್ ಮಂಜು ನಿರ್ಮಿಸಿರುವ ಈ ಚಿತ್ರಕ್ಕೆ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಿದ್ದು, ಸೆಪ್ಟೆಂಬರ್ 27ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!