
‘ರಾಮಾಯಣ’ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಂಡಿರುವ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಇದೀಗ ಮತ್ತೊಮ್ಮೆ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಸೀತಾಮಾತೆಯ ಪಾತ್ರಕ್ಕೆ ಜೀವ ತುಂಬಿರುವ ಅವರ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಈ ನಡುವೆ ಅಭಿಮಾನಿಗಳ ಗಮನ ಸೆಳೆಯುತ್ತಿರುವುದು ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಜಪಮಾಲೆ. ಆನ್ಸ್ಕ್ರೀನ್ ಇರಲಿ, ಆಫ್ಸ್ಕ್ರೀನ್ ಇರಲಿ, ಅವರ ಕೈಯಲ್ಲಿ ಸದಾ ಕಾಣಿಸಿಕೊಳ್ಳುವ ಈ ಮಾಲೆಯ ಹಿಂದಿರುವ ಕಥೆ ಏನು ಗೊತ್ತಾ?
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಯಿ ಪಲ್ಲವಿಗೆ ಇರುವ ಜನಪ್ರಿಯತೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೇಕಪ್ಗಿಂತ ಸಹಜ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ಈ ನಟಿ, ಸಿನಿಮಾಗಳ ಆಯ್ಕೆಯಲ್ಲೂ ತಮ್ಮದೇ ಆದ ಹಾದಿಯಲ್ಲಿ ಸಾಗುತ್ತಿದ್ದಾರೆ. ಸೌಂದರ್ಯ ಮತ್ತು ಅದ್ಭುತ ಅಭಿನಯದ ಜೊತೆಗೆ ತಮ್ಮ ಸರಳ ವ್ಯಕ್ತಿತ್ವದಿಂದಲೂ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ.
ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ, ‘ಏಕ್ ದಿನ್’ ಚಿತ್ರದ ಮೂಲಕ ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಆ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ‘ರಾಮಾಯಣ’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಮತ್ತೆ ಚರ್ಚೆಯಲ್ಲಿದ್ದಾರೆ. ಸೀತೆಯ ಪಾತ್ರದಲ್ಲಿ ಅವರ ನಟನೆ ಹಾಗೂ ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆಯ ಹಿಂದಿದೆ ವಿಶೇಷ ಕಥೆ!
ಸಿನಿಮಾ ತಾರೆಯರ ಜೀವನಶೈಲಿಗೂ ಸಾಯಿ ಪಲ್ಲವಿಯ ಜೀವನಶೈಲಿಗೂ ಸಾಕಷ್ಟು ವ್ಯತ್ಯಾಸವಿದೆ. ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರೂ ಅವರು ಸದಾ ಸರಳವಾಗಿರಲು ಇಷ್ಟಪಡುತ್ತಾರೆ. ಜೊತೆಗೆ ಸಾಯಿ ಪಲ್ಲವಿಗೆ ದೇವರ ಮೇಲೂ ಅಪಾರ ಭಕ್ತಿ ಇದೆ. ಅವರ ವೃತ್ತಿಜೀವನದ ಆರಂಭದಿಂದಲೂ ಕೈಯಲ್ಲಿ ಒಂದು ರುದ್ರಾಕ್ಷ ಜಪಮಾಲೆ ಕಾಣಿಸಿಕೊಳ್ಳುತ್ತಿರುತ್ತದೆ.
ಇತ್ತೀಚೆಗೆ ‘ರಾಮಾಯಣ’ ಚಿತ್ರದ ಪ್ರಚಾರದ ಸಂದರ್ಭದಲ್ಲಿಯೂ ಕೈಯಲ್ಲಿ ರುದ್ರಾಕ್ಷ ಮಾಲೆ ಹಿಡಿದುಕೊಂಡಿದ್ದ ಸಾಯಿ ಪಲ್ಲವಿ ಎಲ್ಲರ ಗಮನ ಸೆಳೆದಿದ್ದರು. ಹಾಗಾದರೆ, ಸದಾ ಅವರ ಕೈಯಲ್ಲಿರುವ ಈ ಮಾಲೆ ಕೇವಲ ಫ್ಯಾಷನ್ಗಾಗಿ ಧರಿಸುವ ಆಭರಣವೇ? ಖಂಡಿತಾ ಅಲ್ಲ. ಇದರ ಹಿಂದೆ ಅಜ್ಜನೊಂದಿಗಿನ ಸುಂದರ ನೆನಪೊಂದು ಅಡಗಿದೆ.
ತಮ್ಮ ಕೈಯಲ್ಲಿರುವ ರುದ್ರಾಕ್ಷ ಜಪಮಾಲೆಯ ವಿಶೇಷತೆಯ ಬಗ್ಗೆ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಅಜ್ಜ ನೀಡಿದ ಈ ರುದ್ರಾಕ್ಷ ಮಾಲೆಯನ್ನು ತಾವು ಯಾವಾಗಲೂ ಕೈಯಲ್ಲಿ ಧರಿಸುತ್ತೇನೆ ಎಂದು ಹೇಳಿಕೊಂಡಿದ್ದರು.
'ನನಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ನಮ್ಮ ತಾತ ನನಗೆ ಈ ರುದ್ರಾಕ್ಷ ಮಾಲೆಯನ್ನು ಕೊಟ್ಟಿದ್ದರು. ಹಾಗಾಗಿ ಅದನ್ನು ಯಾವಾಗಲೂ ಕೈಯಲ್ಲಿ ಧರಿಸುತ್ತೇನೆ. ಅದು ನನಗೆ ಕೇವಲ ಆಭರಣವಲ್ಲ. ನನ್ನ ತಾತನೊಂದಿಗಿನ ಬಾಂಧವ್ಯವನ್ನು ನೆನಪಿಸುವ ಅಮೂಲ್ಯ ವಸ್ತು. ನಮ್ಮ ಜೀವನದಲ್ಲಿ ಕೆಲವು ವಸ್ತುಗಳಿಗೆ ವಿಶೇಷವಾದ ಭಾವನಾತ್ಮಕ ಮೌಲ್ಯವಿರುತ್ತದೆ. ಈ ಮಾಲೆಯೂ ನನಗೆ ಅಂಥದ್ದೇ' ಎಂದು ಸಾಯಿ ಪಲ್ಲವಿ ಹೇಳಿದ್ದರು. ಅಷ್ಟೇ ಅಲ್ಲ, ಈ ರುದ್ರಾಕ್ಷ ಮಾಲೆಯನ್ನು ಧರಿಸಿದ ಬಳಿಕವೇ ತಮ್ಮಲ್ಲಿ ಪ್ರಾರ್ಥನೆ ಮಾಡುವ ಆಸಕ್ತಿ ಹೆಚ್ಚಾಯಿತು ಎಂದೂ ಅವರು ಹಂಚಿಕೊಂಡಿದ್ದರು.
ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ತಾವು ಹೆಚ್ಚಾಗಿ ಧ್ಯಾನ ಮಾಡುತ್ತೇನೆ. ಆ ಸಂದರ್ಭದಲ್ಲಿಯೂ ಈ ರುದ್ರಾಕ್ಷ ಮಾಲೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಅವರಿಗಿದೆ. ಈ ಮಾಲೆ ತಮ್ಮ ಬಳಿ ಇದ್ದಾಗ ಆಲೋಚನೆಗಳು ನಿಯಂತ್ರಣದಲ್ಲಿರುತ್ತವೆ ಮತ್ತು ಅತಿಯಾಗಿ ಯೋಚಿಸುವ ಅಭ್ಯಾಸ ಕಡಿಮೆಯಾಗುತ್ತದೆ ಎಂದು ಸಾಯಿ ಪಲ್ಲವಿ ವಿವರಿಸಿದ್ದರು. ಹೀಗೆ, ಸಾಯಿ ಪಲ್ಲವಿ ಕೈಯಲ್ಲಿರುವ ರುದ್ರಾಕ್ಷ ಮಾಲೆ ಅವರ ಪಾಲಿಗೆ ಕೇವಲ ಧಾರ್ಮಿಕ ಸಂಕೇತವಲ್ಲ; ಅಜ್ಜನ ಪ್ರೀತಿ, ನೆನಪು ಮತ್ತು ಭಾವನಾತ್ಮಕ ನಂಟನ್ನು ಸದಾ ಜೊತೆಯಲ್ಲಿಟ್ಟುಕೊಳ್ಳುವ ಅಮೂಲ್ಯ ಉಡುಗೊರೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.