
ತೆಲುಗು ಸೂಪರ್‌ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇದೆ. ಬಿಡುಗಡೆಯಾದ ಕೇವಲ 13 ದಿನಗಳಲ್ಲಿ ಈ ಚಿತ್ರ ವಿಶ್ವಾದ್ಯಂತ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಈ ವರ್ಷ ದಕ್ಷಿಣ ಭಾರತದ ಸಿನಿಮಾವೊಂದು ಮಾಡಿದ ಅತಿದೊಡ್ಡ ಕಲೆಕ್ಷನ್ ಇದಾಗಿದೆ. 'ದೃಶ್ಯಂ 3', 'ವಾಳ' ದಂತಹ ಚಿತ್ರಗಳನ್ನು ಹಿಂದಿಕ್ಕಿ 'ಪೆದ್ದಿ' ಮುನ್ನುಗ್ಗುತ್ತಿದೆ. ಇದು ರಾಮ್ ಚರಣ್ ಅವರ ವೃತ್ತಿಜೀವನದ ಅತಿದೊಡ್ಡ ಸೋಲೋ ಹಿಟ್ ಆಗಿದೆ.
ಭಾರತದಲ್ಲಿ ಮಾತ್ರ 'ಪೆದ್ದಿ' 287 ಕೋಟಿ ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಇದೀಗ ಈ ಚಿತ್ರದ ಒಟಿಟಿ ಬಿಡುಗಡೆಯ ಸುದ್ದಿಯೂ ಹೊರಬಿದ್ದಿದೆ. ಜುಲೈ 9 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ 'ಪೆದ್ದಿ' ಸ್ಟ್ರೀಮಿಂಗ್ ಆಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಬುಚಿ ಬಾಬು ಸಾನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಇದನ್ನು ನಿರ್ಮಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಈ ಬಿಗ್ ಬಜೆಟ್ ಚಿತ್ರವನ್ನು ಅರ್ಪಿಸುತ್ತಿವೆ. ಇನ್ನು ಕರ್ನಾಟಕದಲ್ಲಿ ಹಾಗೂ ತಮಿಳುನಾಡಿನಲ್ಲಿ ಚಿತ್ರದ ಕನ್ನಡ ಮತ್ತು ತಮಿಳು ವರ್ಷನ್‌ಗಳನ್ನು ಥಿಂಕ್ ಸ್ಟುಡಿಯೋಸ್ ಪ್ರದರ್ಶನಕ್ಕೆ ತಂದಿದೆ.
ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರದ ಹೈಲೈಟ್ ಅಂದ್ರೆ, ಟೈಟಲ್ ಪಾತ್ರದಲ್ಲಿ ರಾಮ್ ಚರಣ್ ಅವರ ಅದ್ಭುತ ನಟನೆ. ಈ ಚಿತ್ರಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಿಕೊಂಡಿದ್ದು, ಇದು ಅವರ ಕೆರಿಯರ್‌ನ ಬೆಸ್ಟ್ ಪರ್ಫಾರ್ಮೆನ್ಸ್ ಅಂತಾನೇ ಹೇಳಲಾಗ್ತಿದೆ. ಕನ್ನಡದ ಸೂಪರ್‌ಸ್ಟಾರ್, ನಮ್ಮ ಶಿವಣ್ಣ ಕೂಡ ಈ ಚಿತ್ರದ ತಾರಾಗಣದಲ್ಲಿರುವುದು ವಿಶೇಷ. ರಾಮ್ ಚರಣ್ ಹಾಗೂ ಶಿವರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಮೆಗಾ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಆಕ್ಷನ್, ಡ್ರಾಮಾ, ರೊಮ್ಯಾನ್ಸ್, ಥ್ರಿಲ್ ಜೊತೆಗೆ ಕ್ರಿಕೆಟ್, ಕುಸ್ತಿ, ಓಟದಂತಹ ಕ್ರೀಡೆಗಳಿಗೂ ಪ್ರಮುಖ ಸ್ಥಾನವಿದೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿಯಾಗಿದ್ದಾರೆ. ಬಾಲಿವುಡ್ ನಟ ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಬುಚಿ ಬಾಬು ಸಾನಾ ಅವರೇ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರತ್ನವೇಲು ಛಾಯಾಗ್ರಹಣ, ಎ.ಆರ್. ರೆಹಮಾನ್ ಸಂಗೀತ, ನವೀನ್ ನೂಲಿ ಸಂಕಲನ ಮತ್ತು ಅವಿನಾಶ್ ಕೊಲ್ಲಾ ಪ್ರೊಡಕ್ಷನ್ ಡಿಸೈನ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.