
ಸಿನಿಮಾ ರಂಗದಲ್ಲಿ ‘ಪ್ಯಾನ್ ಇಂಡಿಯಾ’ ಎಂಬ ಕಾನ್ಸಪ್ಟ್ ಹೇಗೆ ಇದ್ದಕ್ಕಿದ್ದಂತೆ ಜನಪ್ರಿಯತೆ ಪಡೆದುಕೊಂಡಿತೋ, ಅಷ್ಟೇ ವೇಗವಾಗಿ ಆ ಕಾನ್ಸೆಪ್ಟ್ ಈಗ ನೆಲಕಚ್ಚುತ್ತಿದೆ. ಕೇವಲ ದೊಡ್ಡ ಬಜೆಟ್, ಅದ್ದೂರಿ ಮೇಕಿಂಗ್ ಮತ್ತು ಸ್ಟಾರ್ ನಟರನ್ನು ಹಾಕಿಕೊಂಡ ತಕ್ಷಣ ಸಿನಿಮಾ ಪ್ಯಾನ್ ಇಂಡಿಯಾ ಆಗುವುದಿಲ್ಲ ಎಂಬ ಕಹಿ ಸತ್ಯ ಈಗ ನಿರ್ಮಾಪಕರಿಗೆ ಅರ್ಥವಾಗತೊಡಗಿದೆ. ಈ ಹಣೆಪಟ್ಟಿಯ ಬೆನ್ನತ್ತಿ ಹೋದ ಸಿನಿಮಾಗಳು ಹೇಗೆ ಮುಗ್ಗರಿಸುತ್ತಿವೆ ಎಂಬುದಕ್ಕೆ ಈಗ ಬಿಡುಗಡೆಯಾಗಿರುವ ‘ಪೆದ್ದಿ’ ಚಿತ್ರವೇ ಮತ್ತೊಂದು ತಾಜಾ ಸಾಕ್ಷಿ.
ಚಿತ್ರದ ಬಿಡುಗಡೆಗೆ ಮುನ್ನ ನಟ ರಾಮ್ ಚರಣ್ ತೇಜಾ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಈ ಸಿನಿಮಾ ಕುರಿತು ಕೊಂಚ ಅತಿಯೇ ಅನ್ನಿಸುವಷ್ಟು ಬಿಲ್ಡಪ್ ಕೊಟ್ಟಿದ್ದರು. ಸಿನಿಮಾ ರಂಗದಲ್ಲೇ ಇದೊಂದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂಬಂತೆ ಮಾತನಾಡಿದ್ದರು. ಅವರ ಮಾತುಗಳನ್ನು ನಂಬಿದ ಅಭಿಮಾನಿಗಳು ಭಾರಿ ನಿರೀಕ್ಷೆಯೊಂದಿಗೆ ಕಾದು ಕುಳಿತಿದ್ದರು. ಆದರೆ, ಬಿಡುಗಡೆಯ ದಿನ ಸಿನಿಮಾ ನೋಡಿ ಹೊರಬಂದ ಅಭಿಮಾನಿಗಳಿಗೆ ಈಗ ನಿರಾಸೆಯಿಂದ ಮಾತೇ ಮರೆತುಹೋಗಿದೆ!
‘ಪೆದ್ದಿ’ ಚಿತ್ರದಲ್ಲಿ ಇರುವುದಾದರೂ ಏನು? ಅದೇ ಹಳೇ ಫಾರ್ಮುಲಾ ಕಥೆ. ಒಬ್ಬ ಕ್ರೀಡಾಪಟು ಅನಿವಾರ್ಯ ಕಾರಣಗಳಿಂದ ಕ್ರೀಡೆಯನ್ನು ತೊರೆದು ದೂರ ಸರಿದಿರುತ್ತಾನೆ. ಅವನೇಕೆ ಆಟ ನಿಲ್ಲಿಸಿದ ಎಂದು ಯಾರೋ ಒಬ್ಬರು ಹುಡುಕಿಕೊಂಡು ಬರುತ್ತಾರೆ. ಇಲ್ಲಿಯೂ ಲಾಜಿಕ್ ಎಂಬುದು ಹುಡುಕಿದರೂ ಸಿಗುವುದಿಲ್ಲ. ದೆಹಲಿಯಿಂದ ಅಷ್ಟೊಂದು ದೊಡ್ಡ ಅಧಿಕಾರಿಯೊಬ್ಬರು ಈ ಕ್ರೀಡಾಪಟುವನ್ನು ಹುಡುಕಿಕೊಂಡು ಬರುತ್ತಾರೆ, ಆದರೆ ಮಜವೆಂದರೆ ಆ ಅಧಿಕಾರಿಗೆ ಈ ಪ್ಲೇಯರ್ ಬಗ್ಗೆ ಯಾವುದೇ ಕನಿಷ್ಠ ಮಾಹಿತಿಯೂ ಇರುವುದಿಲ್ಲ! ಅಂತಿಮವಾಗಿ ಇಡೀ ಜಗತ್ತಿಗೆ ಗೊತ್ತಿರುವಂತೆ, ಆ ಕ್ರೀಡಾಪಟು ಮರಳಿ ಬಂದು ಅಂದುಕೊಂಡಂತೆ ಗೆಲ್ಲುವಲ್ಲಿ ಸಿನಿಮಾ ಮುಗಿಯುತ್ತದೆ. ಇಲ್ಲಿ ಯಾವುದೇ ಹೊಸತನವಿಲ್ಲ. ಅಲ್ಲದೇ ನಾಯಕಿಯನ್ನು ಚಿತ್ರೀಕರಿಸಿರುವ ರೀತಿ, ನಿರ್ದೇಶಕರಿಗೆ ಪ್ರೀತಿ. ಚಿತ್ರಕತೆ ರೂಪಿಸಿರುವ ವಿಧಾನಕ್ಕೆ ಎಷ್ಟು ತಾಳ್ಮೆ ಬರಿಸಿಕೊಂಡರೂ ಸಾಲದು.
ಇಲ್ಲಿ ನಿಜಕ್ಕೂ ಗಮನ ಸೆಳೆಯುವುದು ರಾಮ್ ಚರಣ್ ತೇಜಾ ಮತ್ತು ಶಿವರಾಜ್‌ಕುಮಾರ್. ಅವರ ಶ್ರಮ ಪಾಪ ನೀರಲ್ಲಿ ಹೋಮವಾಗಿದೆ. ಇಲ್ಲಿ ಕಾಡುವ ಮುಖ್ಯ ಪ್ರಶ್ನೆ ಎಂದರೆ, ಇಂಥದ್ದೊಂದು ಹೊಸತನವಿಲ್ಲದ, ಹಳಸಿಹೋದ ಕಥೆಯ ಸಿನಿಮಾಗೆ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾರೆ ಎಂದರೆ ಅದಕ್ಕೆ ಏನು ಹೇಳಬೇಕು? ಕೇವಲ ಸ್ಟಾರ್ ನಟರ ಡೇಟ್ಸ್ ಸಿಕ್ಕರೆ ಸಾಕು, ಕಂಟೆಂಟ್ ಇಲ್ಲದಿದ್ದರೂ ನೂರು ಕೋಟಿ ಸುರಿದು ಸಿನಿಮಾ ಮಾಡಬಹುದು ಎಂಬ ಚಿತ್ರರಂಗದ ಅಹಂಕಾರಕ್ಕೆ ಪ್ರೇಕ್ಷಕರೇ ಸರಿಯಾದ ಪಾಠ ಕಲಿಸಲಿದ್ದಾರೆ.
ದೊಡ್ಡ ಬಜೆಟ್‌ನ ಬೆನ್ನ ಹಿಂದೆ ಬಿದ್ದು ಕಥೆಯ ಆತ್ಮವನ್ನೇ ಮರೆಯುತ್ತಿರುವ ಇಂದಿನ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ‘ಪೆದ್ದಿ’ ಒಂದು ಎಚ್ಚರಿಕೆಯ ಗಂಟೆ. ಸ್ಟಾರ್ ವ್ಯಾಲ್ಯೂ ಮತ್ತು ಪ್ರಚಾರದ ಅಬ್ಬರದಿಂದ ಸಿನಿಮಾವನ್ನು ಕೇವಲ ಮೂರು ದಿನ ಓಡಿಸಬಹುದು, ಆದರೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಸಬೇಕಾದರೆ ಕಥೆಯಲ್ಲಿ ಗಟ್ಟಿತನವಿರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.