
ದಕ್ಷಿಣ ಭಾರತದ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ದೇಶಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ತಮ್ಮ ಸರಳ ವ್ಯಕ್ತಿತ್ವ, ವಿಭಿನ್ನ ಸ್ಟೈಲ್ ಹಾಗೂ ಅದ್ಭುತ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ರಜನಿಕಾಂತ್, ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಮದ್ಯಪಾನದ ಚಟಕ್ಕೆ ಒಳಗಾಗಿದ್ದ ಬಗ್ಗೆ ಈ ಹಿಂದೆ ಹಲವು ಬಾರಿ ಮಾತನಾಡಿದ್ದಾರೆ. ಇದೀಗ ಅವರು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಲು ಕಾರಣವಾದ ವ್ಯಕ್ತಿ ಯಾರು? ಆ ನಿರ್ಧಾರಕ್ಕೆ ಕಾರಣವಾದ ಘಟನೆ ಏನು? ಎಂಬುದರ ಕುರಿತು ನೀಡಿದ್ದ ಹಳೆಯ ಸಂದರ್ಶನದ ಮಾತುಗಳು ಮತ್ತೆ ಚರ್ಚೆಗೆ ಬಂದಿವೆ.
ಶೂಟಿಂಗ್ ವೇಳೆ ಮದ್ಯ ಸೇವಿಸಿದ್ದ ರಜನಿಕಾಂತ್!
ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ರಜನಿಕಾಂತ್, ಒಂದು ಬಾರಿ ಶೂಟಿಂಗ್ ವೇಳೆ ನಡೆದ ಘಟನೆಯನ್ನು ವಿವರಿಸಿದ್ದರು. “ಒಮ್ಮೆ ಶೂಟಿಂಗ್ ನಡೆಯುತ್ತಿತ್ತು. ಬಳಿಕ ‘ಪ್ಯಾಕ್‌ಅಪ್’ ಎಂದು ಹೇಳಿದ್ದರು. ಶೂಟಿಂಗ್ ಮುಗಿದ ತಕ್ಷಣ ನಾನು ಸ್ವಲ್ಪ ಮದ್ಯ ಸೇವಿಸಿದ್ದೆ. ಅಷ್ಟರಲ್ಲಿ ಸಹಾಯಕ ನಿರ್ದೇಶಕರು ಬಂದು, ‘ಸರ್, ಒಂದು ಸೀನ್ ಮಿಸ್ ಆಗಿದೆ. ಅದನ್ನು ಶೂಟ್ ಮಾಡಬೇಕು. ನಿರ್ದೇಶಕರು ಕರೆಯುತ್ತಿದ್ದಾರೆ’ ಎಂದು ಹೇಳಿದರು” ಎಂದು ರಜನಿಕಾಂತ್ ಹೇಳಿದ್ದರು.
ಆ ಸಂದರ್ಭದಲ್ಲಿ ತಾನು ಮದ್ಯ ಸೇವಿಸಿರುವುದು ಗೊತ್ತಾಗಬಾರದು ಎಂಬ ಕಾರಣಕ್ಕೆ ಮತ್ತೆ ಸ್ನಾನ ಮಾಡಿ, ಬಟ್ಟೆ ಬದಲಿಸಿಕೊಂಡು ಶೂಟಿಂಗ್‌ಗೆ ತೆರಳಿದ್ದಾಗಿ ಅವರು ನೆನಪಿಸಿಕೊಂಡಿದ್ದರು. ಆದರೆ ರಜನಿಕಾಂತ್ ಅವರಿಂದ ವಿಷಯ ಮುಚ್ಚಿಡಲು ಸಾಧ್ಯವಾಗಲಿಲ್ಲ. ಅವರು ಮದ್ಯ ಸೇವಿಸಿರುವುದನ್ನು ನಿರ್ದೇಶಕ ಕೆ. ಬಾಲಚಂದರ್ ಅವರು ಕೂಡಲೇ ಗುರುತಿಸಿದ್ದರು.
‘ನಾಗೇಶ್ ಅವರನ್ನು ಗೊತ್ತಾ?’ ಎಂದು ಕೇಳಿದ ಬಾಲಚಂದರ್!
ರಜನಿಕಾಂತ್ ಅವರ ಬಳಿ ಬಂದ ಬಾಲಚಂದರ್ ಅವರು, “ನಿನಗೆ ನಾಗೇಶ್ ಅವರು ಗೊತ್ತಾ?” ಎಂದು ಪ್ರಶ್ನಿಸಿದ್ದರಂತೆ. ಅದಕ್ಕೆ ರಜನಿಕಾಂತ್, “ಗೊತ್ತು ಸರ್” ಎಂದು ಉತ್ತರಿಸಿದ್ದರು. ಆಗ ಬಾಲಚಂದರ್ ಅವರು ನಟ ನಾಗೇಶ್ ಅವರ ಪ್ರತಿಭೆಯನ್ನು ನೆನಪಿಸಿ, ಮದ್ಯದ ಚಟದಿಂದ ಅವರ ಜೀವನ ಹಾಗೂ ವೃತ್ತಿಜೀವನಕ್ಕೆ ಆದ ಹಾನಿಯ ಬಗ್ಗೆ ರಜನಿಕಾಂತ್‌ಗೆ ಎಚ್ಚರಿಕೆ ನೀಡಿದ್ದರಂತೆ.
“ಅವರು ಎಂತಹ ಅದ್ಭುತ ನಟ ಗೊತ್ತಾ? ಅವರ ಮುಂದೆ ನೀನು ಏನೂ ಅಲ್ಲ. ಆದರೆ ಮದ್ಯಪಾನದ ಚಟದಿಂದ ಅವರೇ ತಮ್ಮ ಜೀವನವನ್ನು ಹಾಳು ಮಾಡಿಕೊಂಡರು. ಇನ್ನು ಮುಂದೆ ಶೂಟಿಂಗ್‌ನಲ್ಲಿ ನೀನು ಕುಡಿಯುತ್ತಿರುವುದು ನನ್ನ ಗಮನಕ್ಕೆ ಬಂದರೆ, ಕೇಳಿದರೂ ಸಹ ನಿನ್ನನ್ನು ಬಿಡುವುದಿಲ್ಲ” ಎಂದು ಬಾಲಚಂದರ್ ಕಠಿಣವಾಗಿ ಎಚ್ಚರಿಸಿದ್ದಾಗಿ ರಜನಿಕಾಂತ್ ಹೇಳಿದ್ದರು.
ಅಂದೇ ಮದ್ಯಕ್ಕೆ ಗುಡ್‌ಬೈ ಹೇಳಿದ ರಜನಿಕಾಂತ್!
ಬಾಲಚಂದರ್ ಅವರ ಆ ಮಾತು ರಜನಿಕಾಂತ್ ಅವರ ಮೇಲೆ ದೊಡ್ಡ ಪರಿಣಾಮ ಬೀರಿತಂತೆ. ಅಂದೇ ಮದ್ಯಪಾನವನ್ನು ತ್ಯಜಿಸುವ ನಿರ್ಧಾರ ಕೈಗೊಂಡೆ ಎಂದು ರಜನಿಕಾಂತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. “ಆ ದಿನದಿಂದ ನಾನು ಕುಡಿಯುವುದನ್ನು ಬಿಟ್ಟೆ. ನಂತರ ಜಮ್ಮು-ಕಾಶ್ಮೀರ ಸೇರಿದಂತೆ ಅತ್ಯಂತ ಚಳಿ ಇರುವ ಪ್ರದೇಶಗಳಲ್ಲಿ ಶೂಟಿಂಗ್ ನಡೆದಾಗಲೂ ಮದ್ಯವನ್ನು ಮುಟ್ಟಲಿಲ್ಲ” ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದರು.
ರಜನಿಕಾಂತ್ ಅವರ ಸಿನಿ ಪಯಣದಲ್ಲಿ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ವಿಶೇಷ ಸ್ಥಾನವಿದೆ. ಅವರೇ ರಜನಿಕಾಂತ್ ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಚಿತ್ರರಂಗದಲ್ಲಿ ದೊಡ್ಡ ಅವಕಾಶಗಳನ್ನು ನೀಡಿದವರಲ್ಲಿ ಪ್ರಮುಖರು. ಇದೀಗ ರಜನಿಕಾಂತ್ ಅವರ ಹಳೆಯ ಸಂದರ್ಶನದ ಈ ಮಾತುಗಳು ಮತ್ತೆ ವೈರಲ್ ಆಗುತ್ತಿದ್ದು, ಒಬ್ಬ ಗುರು ನೀಡಿದ ಕಠಿಣ ಎಚ್ಚರಿಕೆ ಹೇಗೆ ಅವರ ವೈಯಕ್ತಿಕ ಜೀವನದಲ್ಲೇ ಮಹತ್ವದ ಬದಲಾವಣೆಗೆ ಕಾರಣವಾಯಿತು ಎಂಬುದು ಗಮನ ಸೆಳೆಯುತ್ತಿದೆ. ಇನ್ನು ಸಿನಿಮಾ ಶೂಟಿಂಗ್‌ನಲ್ಲಿನ ಒಂದು ಸಣ್ಣ ಘಟನೆ ತಮ್ಮ ಜೀವನದ ಪ್ರಮುಖ ತಿರುವಾಗಿ ಬದಲಾಯಿತು ಎಂಬ ರಜನಿಕಾಂತ್ ಅವರ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಮತ್ತೊಮ್ಮೆ ಚರ್ಚೆಯಾಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.