ಬಾಲಿವುಡ್‌ 'ಹೀರೋ'ಗಿಂತ ಭಿನ್ನ ಆರ್‌.ಮಾಧವನ್‌ ಪುತ್ರ, ಖೇಲೋ ಇಂಡಿಯಾದಲ್ಲಿ 5 ಸ್ವರ್ಣ ಗೆದ್ದ ವೇದಾಂತ್!

By Santosh NaikFirst Published Feb 12, 2023, 10:42 PM IST
Highlights

ಬಾಲಿವುಡ್‌ನ ಖ್ಯಾತನಾಮ ಹೀರೋಗಳು ತಮ್ಮ ಪುತ್ರನನ್ನು ಹೀರೋ ಮಾಡ್ಬೇಕು, ನನ್ನ ಮಗಳನ್ನು ಹೀರೋಯಿನ್‌ ಮಾಡ್ಬೇಕು ಅಂತಾ ಓಡಾಡುತ್ತಿರುವಾಗ, ನಟ ಆರ್‌.ಮಾಧವನ್‌ ಮಾತ್ರ ತಮ್ಮ ಮಗನನ್ನು ಕ್ರೀಡಾಪಟುವಾಗಿಸಿದ್ದಾರೆ. ಸ್ವಿಮ್ಮಿಂಗ್‌ನಲ್ಲಿ ಈಗಾಗಲೇ ಗಮನಸೆಳೆದಿರುವ ಅವರ ಪುತ್ರ ವೇದಾಂತ್‌, ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ 5 ಸ್ವರ್ಣ ಗೆಲ್ಲುವ ಮೂಲಕ ಮಿಂಚಿದ್ದಾರೆ.
 

ನವದೆಹಲಿ (ಫೆ.12): ಬಾಲಿವುಡ್‌ನ ಹೀರೋಗಿರಿಯ ಅಟ್ಟದಲ್ಲಿರುವ 'ಖಾನ್‌'ಗಳು ತಮ್ಮ ಕುಟುಂಬದವರು, ಸಂಬಂಧಿಗಳು, ಸ್ನೇಹಿತರ ಮಕ್ಕಳನ್ನು ರಂಗೀನ್‌ ದುನಿಯಾ ಲೋಕಕ್ಕೆ ತರಲು ಶಿಫಾರಸು ಮಾಡುತ್ತಿರುವಾಗ ನಟ ಆರ್‌.ಮಾಧವನ್‌ ಭಿನ್ನ ಹಾದಿ ತುಳಿದಿದ್ದರು. ಖ್ಯಾತ ನಟನಾಗಿದ್ದರೂ, ಮಗನಿಗೆ ತನ್ನದೇ ಆಯ್ಕೆಯನ್ನು ನೀಡಿದ್ದರು. ಮಗನ ಆಸೆಯಂತೆ ಆತನನ್ನು ಸ್ವಿಮ್ಮರ್‌ ಮಾಡಿದ್ದ ಆರ್‌.ಮಾಧವನ್‌ ಇಂದು ಹೆಮ್ಮೆಯಿಂದ ಬೀಗುತ್ತಿದ್ದಾರೆ. ಅದಕ್ಕೆ ಕಾರಣ, ತಮ್ಮ ಮಗ ಪ್ರಮುಖ ಸ್ಪರ್ಧೆಗಳಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶದ ಗಮನಸೆಳೆಯುತ್ತಿದ್ದಾರೆ. ಮಾಧವನ್‌ ಮಗನ ಪ್ರತಿ ಸಾಧನೆಗೆ ಹಿರಿ ಹಿರಿ ಹಿಗ್ಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಮಗನ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಮಾಧವನ್‌ ಅವರ ಪುತ್ರ ವೇದಾಂತ್‌ ಸ್ವಿಮ್ಮಿಂಗ್‌ನಲ್ಲಿ ಐದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಜಯಿಸಿದ್ದಾರೆ. ಆ ಮೂಲಕ ಸ್ವಿಮ್ಮಿಂಗ್‌ ಕ್ರೀಡೆಯಲ್ಲಿ ತಮ್ಮ ಛಾಪನ್ನು ಮುಂದುವರಿಸಿದ್ದಾರೆ. ಆರ್‌.ಮಾಧವನ್‌ ಈ ವಿಚಾರವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by R. Madhavan (@actormaddy)


ಇನ್ಸ್‌ಟಾಗ್ರಾಮ್‌ ಮೂಲಕ ಖೇಲೋ ಇಂಡಿಯಾ ಗೇಮ್ಸ್‌ 2023ಯಲ್ಲಿ ಟೀಮ್‌ ಮಹಾರಾಷ್ಟ್ರದಲ್ಲಿ ಸ್ಪರ್ಧೆ ಮಾಡಿದ್ದ ಪುತ್ರ ವೇದಾಂತ್‌ಗೆ ಅಭಿನಂದಿಸಿದ್ದಾರೆ. ಅದರ ಚಿತ್ರಗಳನ್ನು ಕೂಡ ಮಾಧವನ್‌ ಹಂಚಿಕೊಂಡಿದ್ದಾರೆ. '2 ಟ್ರೋಫಿ ಗೆದ್ದ ಟೀಮ್ ಮಹಾರಾಷ್ಟ್ರಕ್ಕೆ ಅಭಿನಂದನೆಗಳು. ಬಾಲಕರ ತಂಡ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ ಮಹಾರಾಷ್ಟ್ರ ತಂಡ ಖೇಲೋ ಗೇಮ್ಸ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಎಲ್ಲರ ಪ್ರದರ್ಶನದಿಂದ ನನಗೆ ಬಹಳ ಖುಷಿಯಾಗಿದೆ. ಆಪೇಕ್ಷಾ ಫೆರ್ನಾಂಡಿಸ್‌ (6 ಚಿನ್ನ, 1 ಬೆಳ್ಳಿ, ವೈಯಕ್ತಿಕ ಶ್ರೇಷ್ಠ ಹಾಗೂ ಇತರ ದಾಖಲೆ) ಮತ್ತು ವೇದಾಂತ್‌ ಮಾಧವನ್‌ (5 ಚಿನ್ನ, 2 ಬೆಳ್ಳಿ) ಪ್ರದರ್ಶನದಿಂದ ಬಹಳ ಖುಷಿಯಾಗಿದೆ. ಪ್ರದೀಪ್‌ ಸರ್‌, ಅಕ್ವಾ ನೇಷನ್‌, ಮಧ್ಯಪ್ರದೇಶ ಸರ್ಕಾರ, ಮುಖ್ಯಮಂತ್ರಿ ಶಿವರಾಜ್‌ ಸಿಗ್‌ ಚೌಹಾಣ್‌, ಅನುರಾಗ್‌ ಠಾಕೂರ್‌ ಅವರಿಗೆ ಧನ್ಯವಾದಗಳು. ತುಂಬಾ ಖುಷಿಯಾಗಿದೆ ಹಾಗೂ ಹೆಮ್ಮೆಯಾಗಿದೆ' ಎಂದು ಮಾಧವನ್‌ ಬರೆದುಕೊಂಡಿದ್ದಾರೆ.

ಅಪ್ಪನ ನೆರಳಿನಲ್ಲಿ ಇರೋಕೆ ಇಷ್ಟವಿಲ್ಲ ಎಂದಿದ್ದ ವೇದಾಂತ್‌: ಅಪ್ಪ ಖ್ಯಾತ ನಟ ಹಾಗೂ ನಿರ್ದೇಶಕನಾಗಿದ್ದರೂ, ತಮಗೆಂದೂ ನಟನಾಗಬೇಕೆಂದು ಅನಿಸಿರಲಿಲ್ಲ ಎಂದು ವೇದಾಂತ್‌ ಮಾಧವನ್ ಹಿಂದೊಮ್ಮೆ ಹೇಳಿದ್ದರು. ಡಿಡಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, 'ಅಪ್ಪನ ನೆರಳಿನ ಅಡಿಯಲ್ಲಿ ಇರೋಕೆ ನನಗೆ ಇಷ್ಟವಿಲ್ಲ. ನನ್ನದೇ ಆದ ಹೆಸರು ಸಂಪಾದಿಸಬೇಕೆನ್ನುವುದು ನನ್ನ ಆಸೆ. ಆರ್‌. ಮಾಧವನ್‌ ಅವರ ಮಗ ಎಂದಷ್ಟೇ ಹೇಳಿಸಿಕೊಳ್ಳೋಕೆ ನನಗೆ ಇಷ್ಟವಿಲ್ಲ' ಎಂದು ಹೇಳಿದ್ದರು.

ಆರ್‌ ಮಾಧವನ್‌ ಈ ಬಾಲಿವುಡ್‌ ನಟಿಗೆ ಆಕರ್ಷಿತರಾಗಿದ್ದರಂತೆ!

ಅದಲ್ಲದೆ, ತಂದೆ ಹಾಗೂ ತಾಯಿ, ತಾನು ಸ್ವಿಮ್ಮರ್‌ ಆಗಲು ಮಾಡಿದ್ದ ತ್ಯಾಗವನ್ನೂ ಕೂಡ ವೇದಾಂತ್‌ ಈ ವೇಳೆ ನೆನಪಿಸಿಕೊಂಡಿದ್ದರು. 'ಅವರಿಬ್ಬರೂ ಕೂಡ ನನ್ನ ಪ್ರತಿ ಅಗತ್ಯವನ್ನು ಪೂರೈಸಲು ಶ್ರಮಿಸುತ್ತಾರೆ. ಇಬ್ಬರೂ ಕೂಡ ಸಾಕಷ್ಟು ಶ್ರಮಿಸಿದ್ದಾರೆ. ನನ್ನ ತಂದೆ ತಾಯಿ ಮಾಡಿದ ಪ್ರಮುಖ ತ್ಯಾಗಗಳಲ್ಲಿ ನನಗೆ ನೆನಪಾಗೋದು ಏನೆಂದರೆ, ಕೇವಲ ನನ್ನ ತರಬೇತಿಗೋಸ್ಕರ ಅವರು ದುಬೈಗೆ ಶಿಫ್ಟ್‌ ಆಗಿದ್ದರು' ಎಂದು ನೆನಪಿಸಿಕೊಂಡಿದ್ದರು.

Rocketry: The Nambi Effect: ದೇಶಭಕ್ತನ ಸಂಕಟದ ಕತೆ, ಹಿಂದೂಫೋಬಿಯಾದಂತೆ ಕಂಡಿದ್ಹೇಗೆ?

ಕೆಲ ವರ್ಷಗಳ ಹಿಂದೆ ಆರ್‌.ಮಾಧವನ್‌ ತಮ್ಮ ಇಡೀ ಕುಟುಂಬದೊಂದಿಗೆ ದುಬೈಗೆ ಶಿಫ್ಟ್‌ ಆಗಿದ್ದರು. ಒಲಿಂಪಿಕ್ಸ್‌ಗಾಗಿ ಮಗ ಉತ್ತಮ ತರಬೇತಿ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ದುಬೈಗೆ ಶಿಫ್ಟ್‌ ಆಗಿದ್ದರು.

click me!