
ಕನ್ನಡ ಚಿತ್ರರಂಗದಲ್ಲಿ (Sandalwood) ಈಗ ಎಲ್ಲೆಲ್ಲೂ ಒಂದೇ ಹೆಸರಿನ ಗುಂಗು, ಅದೇ ‘ಪ್ರೇಮದ ಊರಲಿ’. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜಾಗರಣೆ ಶುರುವಾಗಿದ್ದು, ಅಕ್ಷರಶಃ ‘ಸಿನಿಮಾ ಕ್ರೇಜ್’ ಅಂದರೆ ಏನು ಎಂಬುದನ್ನು ಈ ಸಿನಿಮಾ ಸಾಬೀತುಪಡಿಸುತ್ತಿದೆ. ಥಿಯೇಟರ್‌ಗಳಲ್ಲಿ ಗಾಂಧಿ ಕ್ಲಾಸ್ ಸೀಟುಗಳು ಭರ್ತಿಯಾಗಿದ್ದರೂ, ಸಿನಿಮಾವನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡದ ಪ್ರೇಕ್ಷಕರು ನೆಲದ ಮೇಲೆಯೇ ಕುಳಿತು ಸಿನಿಮಾ ಕಣ್ತುಂಬಿಕೊಳ್ಳುತ್ತಿರುವ ಅಪರೂಪದ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ! ಈ ಮೂಲಕ ಕಳೆದೊಂದೆರಡು ದಶಕಗಳಿಂದ ಪ್ರೇಕ್ಷಕರು ನೆಲದ ಮೇಲೆ ಕುಳಿತು ನೋಡಿರುವ ಸಿನಿಮಾ ಯಾವುದೂ ಇರಲಿಲ್ಲ. ಇದೀಗ ಪ್ರೇಮದ ಊರಲಿ ದಶಕಗಳ ದಾಖಲೆಯನ್ನು ಬರೆದಿದೆ.
ಕನ್ನಡ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ಇಂತಹದೊಂದು ಅಭೂತಪೂರ್ವ ಪ್ರೇಕ್ಷಕರ ಸಂಭ್ರಮವನ್ನು ಕಂಡಿರಲಿಲ್ಲ. ಸೀಟುಗಳ ಕೊರತೆಯಿದ್ದರೂ ಪ್ರೇಕ್ಷಕರು ನೆಲದ ಮೇಲೆ ಕುಳಿತು ಸಿನಿಮಾ ವೀಕ್ಷಿಸುತ್ತಿರುವುದು, ಕನ್ನಡ ಪ್ರೇಕ್ಷಕರಿಗೆ ಸಿನಿಮಾದ ಮೇಲಿರುವ ಅಗಾಧ ಪ್ರೀತಿ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. 'ಒಂದು ಚಿತ್ರದಲ್ಲಿ ಗಟ್ಟಿಯಾದ ಕಥೆ, ಅದ್ಭುತ ಚಿತ್ರಕಥೆ ಮತ್ತು ಪ್ರೇಕ್ಷಕರ ಹೃದಯ ಮುಟ್ಟುವ ಶಕ್ತಿಯಿದ್ದರೆ ಜನ ಯಾವುದೇ ಸಂದರ್ಭದಲ್ಲೂ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ' ಎಂಬುದಕ್ಕೆ ‘ಪ್ರೇಮದ ಊರಲಿ’ ಚಿತ್ರವೇ ಜ್ವಲಂತ ಉದಾಹರಣೆ.
ಬಾಕ್ಸ್ ಆಫೀಸ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಬರೆಯುತ್ತಿರುವ ಈ ಚಿತ್ರ, ಈಗ ಕಲೆಕ್ಷನ್ ವಿಚಾರದಲ್ಲಿ ಮಹತ್ತರ ಮೈಲಿಗಲ್ಲು ತಲುಪಿದೆ. ತಾಜಾ ವರದಿಗಳ ಪ್ರಕಾರ, ಸಿನಿಮಾ ಇದುವರೆಗೆ ವಿಶ್ವದಾದ್ಯಂತ ಬರೋಬ್ಬರಿ ₹111 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಧೂಳೆಬ್ಬಿಸಿದೆ! ಈ ಮೂಲಕ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳ (Highest-Grossing Kannada Films) ಸಾರ್ವಕಾಲಿಕ ಪಟ್ಟಿಯಲ್ಲಿ ‘ಪ್ರೇಮದ ಊರಲಿ’ ಚಿತ್ರ 6ನೇ ಸ್ಥಾನವನ್ನು ಅಲಂಕರಿಸಿ ಹೊಸ ಇತಿಹಾಸ ಸೃಷ್ಟಿಸಿದೆ.
ಕಂಟೆಂಟ್ ಗಟ್ಟಿಯಾಗಿದ್ದರೆ ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಬಲ್ಲವು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ. ಪ್ರೇಕ್ಷಕರು ಕೇವಲ ಚಿತ್ರವನ್ನು ನೋಡುತ್ತಿಲ್ಲ, ಚಿತ್ರವನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿ ಸ್ವೀಕರಿಸಿ ಪ್ರೀತಿಯ ಮಳೆಗರೆಯುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಮತ್ತಷ್ಟು ಎತ್ತರಕ್ಕೆ ಹಾರಿದೆ. ಇಡೀ ಚಿತ್ರತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ‘ಪ್ರೇಮದ ಊರಲಿ’ ನಾಗಾಲೋಟ ಮುಂದುವರಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.