
ಕನ್ನಡ ಚಿತ್ರರಂಗದಲ್ಲಿ ಬೇರೆ ಬೇರೆ ರೀತಿಯಲ್ಲಿ ಕ್ರಾಂತಿ ಮಾಡುತ್ತಿರುವ ನಿರ್ದೇಶಕ ಜೋಗಿ ಪ್ರೇಮ್ ಈಗ ಮತ್ತೊಂದು ದೊಡ್ಡ ಚಿತ್ರದ ತಯಾರಿಯಲ್ಲಿದ್ದಾರೆ.
ಆ ಚಿತ್ರಕ್ಕೆ ನಾಯಕ ಬೇರಾರು ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್. ಪ್ರಸ್ತುತ ಪ್ರೇಮ್ ‘ದಿ ವಿಲನ್’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇನ್ನೂ 40 ದಿನಗಳ ಚಿತ್ರೀಕರಣ ಬಾಕಿ ಇದೆ ಎನ್ನಲಾಗುತ್ತಿದೆ. ಈ ಮಧ್ಯೆಯೇ ಈ ಬ್ರೇಕಿಂಗ್ ನ್ಯೂಸ್ ಬಂದಿದೆ.
ಈ ಹೊಸ ಚಿತ್ರದ ನಿರ್ಮಾಪಕ ‘ಹೆಬ್ಬುಲಿ’ ಖ್ಯಾತಿಯ ಉಮಾಪತಿ ಎನ್ನಲಾಗಿದೆ. ಹಾಗಂತ ಈ ಚಿತ್ರ ಶೀಘ್ರದಲ್ಲಿ ಶುರುವಾಗುವ ಲಕ್ಷಣಗಳಿಲ್ಲ. ದರ್ಶನ್ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ನಂತರ ಬಿ. ಸುರೇಶ್ ನಿರ್ಮಾಣದ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅನಂತರ ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರವೂ ಸಾಲಿನಲ್ಲಿದೆ. ಈಗ ಪ್ರೇಮ್ ಚಿತ್ರದ ಸುದ್ದಿ ಬಂದಿದ್ದು, ಯಾವಾಗ ಶುರು ಮಾಡುತ್ತಾರೆ ಅನ್ನುವುದು ಖಚಿತವಾಗಿಲ್ಲ. ಪ್ರೇಮ್ ಈ ಚಿತ್ರದ ಜೊತೆ ರಕ್ಷಿತಾ ಪ್ರೇಮ್ ಅವರ ಸಂಬಂಧಿ ಅಭಿಷೇಕ್ ನಟನೆಯ ಚಿತ್ರವನ್ನು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಪ್ರೇಮ್‌ಗಾಗಿ ರೂಲ್ಸ್ ಮುರಿದ ದರ್ಶನ್: ಈ ಹಿಂದೆ ದರ್ಶನ್ ‘ತಾರಕ್’ ಚಿತ್ರದ ನಂತರ ತನ್ನ ಇನ್ನು ಮುಂದಿನ ಚಿತ್ರಗಳಿಗೆ ಕೇವಲ 65 ದಿನ ಕಾಲ್ ಶೀಟ್ ನೀಡುವುದಾಗಿ ಹೇಳಿಕೊಂಡಿದ್ದರು.
ಆದರೆ ಪ್ರೇಮ್‌ಗಾಗಿ ಈ ನಿಯಮವನ್ನು ಮುರಿದಿದ್ದಾರೆ. ಮೂಲಗಳ ಪ್ರಕಾರ ಪ್ರೇಮ್‌ಗೆ 65 ದಿನಗಳ ಬದಲಿಗೆ 85 ದಿನ ಕಾಲ್‌ಶೀಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಹೇಳಿಕೇಳಿ ಜೋಗಿ ಪ್ರೇಮ್ ಅಂದುಕೊಂಡಿದ್ದನ್ನು ಮಾಡದೇ ಬಿಡುವವರಲ್ಲ, ಹಾಗಾಗಿ ದರ್ಶನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ‘ದಿ ವಿಲನ್’ನಲ್ಲಿ ಸುದೀಪ್-ಶಿವಣ್ಣರನ್ನು ಒಟ್ಟುಗೂಡಿಸಿ ಆ್ಯಕಿ ಜಾಕ್ಸನ್, ಮಿಥುನ್ ಚಕ್ರವರ್ತಿ ಮುಂತಾದವರನ್ನೆಲ್ಲಾ ಕರೆಸಿರುವ ಪ್ರೇಮ್ ಅವರು ದರ್ಶನ್ ಚಿತ್ರದಲ್ಲಿ ಏನೇನು ಮ್ಯಾಜಿಕ್ ಮಾಡುತ್ತಾರೋ ಕಾದು ನೋಡಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.