
ಪ್ರಕಾಶ್ ರೈ ಗಹಗಹಿಸಿ ನಕ್ಕರು. ಕಾರಣ ಅವರ ಮುಂದಿದ್ದ ಪ್ರಶ್ನೆ: ನೀವು ಸಿನಿಮಾಗಳಲ್ಲಿ ಅವಕಾಶ ಇಲ್ಲದ ಕಾರಣಕ್ಕೆ ರಾಜಕಾರಣಕ್ಕೆ ಬಂದಿದ್ದೀರಂತೆ ಹೌದೇ? ಆಮೇಲೆ ಅವರೆಂದರು:
‘ಇಂಥ ಆರೋಪಗಳನ್ನು ನಾನು ಕೇಳುತ್ತಲೇ ಬಂದಿದ್ದೇನೆ. ನೀನು ಸರಿಯಾಗಿ ಕೆಲಸ ಮಾಡಿಲ್ಲ ಅಂತ ಯಾರಿಗಾದರೂ ನಾನು ಹೇಳಿದಾಗ ಅವರು ನನ್ನ ಜೊತೆ ಚರ್ಚೆಗಿಳಿದು, ಯಾವ ಕೆಲಸ ಮಾಡಿಲ್ಲ ಅಂತ ಹೇಳಿ. ನಾನು ಮಾತು ಕೊಟ್ಟದ್ದು ಇದು, ಮಾಡಿದ್ದು ಇಷ್ಟು ಅಂತ ಸಮರ್ಥಿಸಿಕೊಳ್ಳಲು ಬರಲಿಲ್ಲ. ಅದರ ಬದಲಾಗಿ ಅದನ್ನು ಕೇಳೋದಕ್ಕೆ ನೀನ್ಯಾರು ಅಂತ ನನ್ನ ಮೇಲೆ ಮುಗಿಬಿದ್ದರು. ಅದು ನಡೆಯುವುದಿಲ್ಲ ಅಂತ ಗೊತ್ತಾದ ನಂತರ ನನಗೆ ಕೆಲಸ ಇಲ್ಲ ಅಂತ ಹೇಳಿಕೊಂಡು ಓಡಾಡಲಿಕ್ಕೆ ಶುರುಮಾಡಿದರು. ಅವರ ಆಕ್ಷೇಪಗಳಿಗೆಲ್ಲ ನಾನು ಉತ್ತರಿಸಿಕೊಂಡು ಕೂರಬೇಕಾಗಿಲ್ಲ ಅನ್ನಿಸುತ್ತದೆ.
ಕಳೆದ ನಾಲ್ಕು ತಿಂಗಳಲ್ಲಿ ನಾನು ನಟಿಸಿದ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಮೂರು ಕೂಡ ಸೂಪರ್ ಹಿಟ್ ಸಿನಿಮಾಗಳೇ. ರಂಗಸ್ಥಳಂ ಮತ್ತು ಭರತ್ ಅನೆ ನೇನು ಎಲ್ಲರ ಮೆಚ್ಚುಗೆ ಗಳಿಸಿದ್ದೂ ಅಲ್ಲದೇ, ಅತ್ಯಂತ ಹೆಚ್ಚು ಗಳಿಕೆ ಕಂಡ ಸಿನಿಮಾ ಅನ್ನಿಸಿಕೊಂಡಿವೆ. ಇಂದು ತೆರೆಕಾಣುತ್ತಿರುವ ಮಹಾನಟಿ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ.
ಈ ಚಿತ್ರದಲ್ಲಿ ನಾನು ಹಿರಿಯ ನಿರ್ಮಾಪಕ ಚಕ್ರಪಾಣಿಯ ಪಾತ್ರದಲ್ಲಿ ನಟಿಸಿದ್ದೇನೆ. ದುಲ್ಕರ್ ಸಲ್ಮಾನ್ ನಟಿಸಿರುವ ಸಿನಿಮಾ ಇದು. ಸಾವಿತ್ರಿ ಎಂಬ ಹಿರಿಯ ನಟಿಯ ಜೀವನದ ಕತೆ ಅದು. ಇದರ ಜೊತೆಗೇ ಗೋಧಿಬಣ್ಣದ ತಮಿಳು ಅವತರಣಿಕೆ ಮುಗಿಸಿದ್ದೇನೆ. ಅದು ಬಿಡುಗಡೆಗೆ ಕಾಯುತ್ತಿದೆ. ಈ ಕೆಲಸಗಳಿಗಾಗಿ ಇಪ್ಪತ್ತು ದಿನ ರಜೆ ತೆಗೆದುಕೊಂಡಿದ್ದೆ. ಇದೀಗ ಮತ್ತೆ ಕೆಲಸಕ್ಕೆ ಮರಳುತ್ತಿದ್ದೇನೆ. ಭಾನುವಾರದಿಂದ ಕುಲು ಮನಾಲಿಯಲ್ಲಿ ಎರಡು ದೊಡ್ಡ ಸಿನಿಮಾಗಳ ಶೂಟಿಂಗು. ಒಟ್ಟು ಲೆಕ್ಕ ಹಾಕಿದರೆ ಕೈಯಲ್ಲಿ ಹನ್ನೆರಡು ಸಿನಿಮಾಗಳಿವೆ.
ಒಂದು ಮಾತಂತೂ ನಿಜ. ಯಾರು ನನಗೆ ಕೆಲಸ ಇಲ್ಲ ಅಂತ ಹೇಳಿದ್ದಾರೋ ಅವರ ಸಿನಿಮಾ ಒಟ್ಟು ಬಜೆಟ್ಟಿಗಿಂತ ಹೆಚ್ಚು ಮೊತ್ತದ ಸಂಭಾವನೆಯನ್ನು ಭರತ್ ಅನೆ ನೇನು ಚಿತ್ರಕ್ಕೆ ತೆಗೆದುಕೊಂಡಿದ್ದೇನೆ. ಅಷ್ಟೇ ಅಲ್ಲ, ನನ್ನ ವಿರುದ್ಧ ಟೀಕೆ ಮಾಡುವವರ ಸಿನಿಮಾ ಬಿಡುಗಡೆಯಾಗಿ ಒಟ್ಟಾರೆಯಾಗಿ ಗಳಿಸುವ ಗಲ್ಲಾಪೆಟ್ಟಿಗೆ ಮೊತ್ತ ನಾನು ಪಡೆದುಕೊಳ್ಳುವ ಸಂಭಾವನೆಯಷ್ಟು ಇರುವುದಿಲ್ಲ. ಸಮುದ್ರದಲ್ಲಿ ಈಜಾಡುವ ಮೀನು ತೊಟ್ಟಿಯಲ್ಲಿ ಈಜುತ್ತಿರುವ ಮೀನಿಗೆ ಉತ್ತರ ಕೊಡುವ ಅಗತ್ಯ ಇಲ್ಲವಷ್ಟೇ.’
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.