ಸ್ಟಾರ್‌ಗಳ ಸಾಕುಪ್ರಾಣಿಗಳಿಗೂ ಉಂಟು ಇನ್‌ಸ್ಟಾಅಕೌಂಟು

By Kannadaprabha NewsFirst Published Sep 11, 2019, 11:52 AM IST
Highlights

ತಮ್ಮ ಹೆಸರಲ್ಲಿ ಅಥವಾ ಮಗುವಿನ ಹೆಸರಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಸೃಷ್ಟಿಸಿ, ಫುಲ್ ಫೇಮಸ್ ಆಗಿರುವ ಹಲವು ನಟರಿದ್ದಾರೆ. ಈ ಸಾಲಲ್ಲೇ ರಘು ದೀಕ್ಷಿತ್, ಮಾನ್ವಿತಾ ಸೇರಿ ತಮ್ಮ ಸಾಕು ಪ್ರಾಣಿಗಳ ಹೆಸರಲ್ಲೇ ಇನ್‌ಸ್ಟಾ ಅಕೌಂಟ್ ಮಾಡಿ, ಸಕತ್ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಇವರೆಲ್ಲ ಹೇಳುವುದೇನು? 

- ಮೇಘ ಎಂ.ಎಸ್‌

ರಘು ದೀಕ್ಷಿತ್‌ ನಾಯಿಮರಿ ತುಂಟಿ

ಕಂದು ಬಣ್ಣದ ಮೈಕಟ್ಟಿಗೆ ಕಪ್ಪು ದೃಷ್ಟಿಬೊಟ್ಟು ಮೂಗಿಗೆ, ಕಿವಿ-ಕಣ್ಣು ತೀಕ್ಷ$್ಣ. ಇವಳು ಸಂಗೀತ ನಿರ್ದೇಶಕ, ಹಾಡುಗಾರ ರಘು ದೀಕ್ಷಿತ್‌ ಅವರ ಪ್ರೀತಿಯ ಮುದ್ದು ಮಗಳು ತುಂಟಿ. ನಾಯಿ ಎನ್ನದೆ ಮನೆಯಲ್ಲಿ ಮಗಳಂತಿರುವ ಸಾಕು ಪ್ರಾಣಿ. ಟೈಂ ಸಿಕ್ಕಾಗೆಲ್ಲಾ ಅಪ್ಪ ಮಗಳಿಬ್ಬರು ಮೋಜು-ಮಸ್ತಿ, ಕೀಟ್ಲೆ, ಮಕ್ಕಳಾಟ. ಟ್ರಿಪ್‌ ಹೋಗೋದು ಇಷ್ಟ. ಪಕ್ಕಾ ಸಸ್ಯಹಾರಿಯಾದ ಇವಳು ಅಪ್ಪನ ಕೈಯಿಂದ ತುತ್ತು ತಿನ್ನೋದು ಇಷ್ಟ. ಅಪ್ಪನಿಗೆ ಹುಷಾರಿಲ್ಲ ಎಂದರೆ ಪಕ್ಕಕ್ಕೆ ಕೂರುವುದು, ಅಪ್ಪನಿಗೆ ಕೋಪ ಬಂದರೆ ಕಾಲು ಸವರಿ ಪುಸಲಾಯಿಸೋದು, ಮಲಗಿದಾಗ ಸಂದಿಯಲ್ಲಿ ಹೋಗಿ ಮಲಗೋದು ಇಷ್ಟ. ಮನೆಗೆ ಯಾರೇ ಬಂದರೂ ಕಚ್ಚುವುದು, ಬೊಗಳುವುದು ಇಲ್ಲ. ಬದಲಾಗಿ ಕಳ್ಳ ಬಂದರೂ ಕರೆದು ನಿನಗೇನು ಬೇಕು ತೆಗೆದುಕೊಂಡು ಹೋಗು ಎನ್ನುವ ಗುಣದವಳು. ಅಪ್ಪನ ಇನ್ಸಟ್ರುಮೆಂಟ್‌ಗಳ ಬಗ್ಗೆ ಅಪಾರ ಗೌರವ ಹಾಗೂ ಕಾಳಜಿ ಇವಳಿಗೆ. ಪಕ್ಕಾ ಭಾರತದ ಮನೆ ಮಗಳು ತುಂಟಿ.

ಒಂದು ಎನ್‌ಜಿಒಗೆ ಹೋದಾಗ 8 ವರ್ಷದ ದೊಡ್ಡ ನಾಯಿಗೆ 20 ದಿನದ ಒಂದು ಚಿಕ್ಕನಾಯಿ ಬೊಗಳುತ್ತ ಅಟ್ಟಿಸಿಕೊಂಡು ಹೋಗುತ್ತಿತ್ತು. ಜೋರು ಮಾಡಿ ನಿಲ್ಲು ಎಂದಾಗ ನನ್ನ ಕಾಲಬಳಿ ಬಂದು ನಿಂತಳು. ಅಂದಿನಿಂದ ನನ್ನ ಮಗಳಾದಳು ತುಂಟಿ. ಅವಳು ಬಂದಮೇಲೆಯೇ ಒಂದು ಜೀವಕ್ಕೆ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡೆ. ಅವಳು ಮನೆಗೆ ಬಂದಾಗಿನಿಂದ ಒಂದೊಂದು ಹೊಸ ಕತೆ ಶುರು. ಅಂದ್ರೆ ಮನೆಯಲ್ಲಿನ ಫರ್ನಿಚ​ರ್‍ಸ್, ಟೇಬಲ್‌, ತಿಂಡಿ, ಚಪ್ಪಲಿ, ಶೂ, ಚಾರ್ಜರ್‌ ಎಲ್ಲವನ್ನೂ ಕಡಿದುಬಿಡೋಳು. ಅವಳ ಈ ತುಂಟತನವನ್ನು ಜನರಿಗೆ ಪರಿಚಯಿಸಬೇಕೆಂದು ಅಕೌಂಟ್‌ ಕ್ರಿಯೇಟ್‌ ಮಾಡಿದೆ.

- ರಘು ದೀಕ್ಷಿತ್‌

ಅಕೌಂಟ್‌: @life_and_adventures_of_thunti

ವರ್ಷ: 2.5

ಫಾಲೋಯರ್ಸ್: 4,653

ಪೋಸ್ಟ್‌: 90

ಡೂಡಲ್‌ ಅಂದ್ರೆ ಮಾನ್ವಿತಾಗೆ ಭಾರಿ ಇಷ್ಟ

ಅಡ್ಡ ಕಣ್ಣು, ಯಾವಾಗಲೂ ಮೂಗು ಸುರಿಸುತ್ತಾ, ಮೈಮೇಲೆ ಜೋತುಬಿದ್ದ ಕೂದಲು ಇರುವುದರಿಂದ ಎಲ್ಲರಿಗೂ ಬಹಳ ಬೇಗ ಇಷ್ಟವಾಗುವುದೇ ಇವನ ಸ್ಪೆಷಾಲಿಟಿ. ಇವನ ಹೆಸರು ಡೂಡಲ್‌ ನಟಿ ಮಾನ್ವಿತಾ ಹರೀಶ್‌ರ ಪೆಟ್‌. ಮಾನ್ವಿತಾ ಮನೆಯಲ್ಲಿಲ್ಲ ಎಂದರೆ ಒಂದೇ ಸಮನೆ ಅಳುವುದು, ಬೇಸರ ಮಾಡಿಕೊಳ್ಳುವುದು ಹೆಚ್ಚು. ಕೊಂಕಣಿ ಭಾಷೆ ಇವನಿಗೆ ಅರ್ಥ ಆಗುತ್ತೆ ಎಂದರೆ ಇವನೆಷ್ಟುಸ್ಮಾರ್ಟ್‌ ಎಂದು ನೀವೇ ತಿಳಿಯಿರಿ. ಮನೆಗೆ ಯಾರೇ ಬಂದರೂ ಅವರನ್ನು ನೆಕ್ಕಿ, ಮುದ್ದಾಡಿಸಿಕೊಂಡು, ಪ್ರೀತಿ ಹಂಚಿ ಫ್ರೆಂಡ್ಶಿಪ್‌ ಮಾಡಿಕೊಳ್ಳುತ್ತಾನೆ ಈ ಡೂಡಲ್‌.

 

ಮನೆಯಲ್ಲಿದ್ದರೆ ಬಹಳ ಹೊತ್ತು ಡೂಡಲ್‌ ಜೊತೆಗಿರ್ತೀನಿ. ನಾಯಿಗಳು ತರುವುದಕ್ಕಿಂತ ಅವುಗಳನ್ನು ಸಾಕುವುದು ಬಹಳ ಮುಖ್ಯ. ಪ್ರೀತಿ ತೋರಿಸುವವರನ್ನು ಬಹಳ ಬೇಗ ಹಚ್ಚಿಕೊಳ್ಳುವುದರಿಂದ ಅಷ್ಟೇ ಬೇಗ ಡಿಪ್ರೆಷನ್‌ಗೆ ಹೋಗುತ್ತವೆ. ನಮ್ಮಿಬ್ಬರ ಬಾಂಧವ್ಯ, ಸ್ನೇಹ, ಸಾಕು ಪ್ರಾಣಿಗಳು ಮನುಷ್ಯನಿಗೆ ಎಷ್ಟುಮುಖ್ಯ, ಪ್ರಾಣಿಗಳ ಬಗ್ಗೆ ಅರಿವು ಮೂಡಿಸಲು ಈ ಅಕೌಂಟ್‌ ಕ್ರಿಯೆಟ್‌ ಮಾಡಿದೆ. ಅವನು ಬೆಳೆಯುವ ಪ್ರತೀ ಸ್ಟೇಜ್‌ ಅನ್ನು ದಾಖಲಿಸಬೇಕು. ಫ್ಯಾನ್ಸ್‌ ಫಾಲೋಯ​ರ್ಸ್ ಅವನಿಗೂ ಇದ್ದಾರೆ.-

ಮಾನ್ವಿತಾ ಹರೀಶ್‌.

ಅಕೌಂಟ್‌: @doodle_thekingsman_

ಫಾಲೋವರ್ಸ್: 316

ಪೋಸ್ಟ್‌: 6

ಸೂರಜ್‌ ಗೌಡ ಮುದ್ದಿನ ಬೆಕ್ಕು ಚಾರ್ಲಿ ಗೌಡ

ಸೊಕ್ಕಿನ ನಡೆ, ಗತ್ತಿನ ಲುಕ್‌, ತನ್ನನ್ನು ತಾನು ಹುಲಿ ಎಂದುಕೊಂಡಿರುವ ಈ ಚಾರ್ಲಿ ಗೌಡ, ನಟ ಸೂರಜ್‌ ಗೌಡ ಮನೆಯಲ್ಲಿ ಮೋಸ್ಟ್‌ ಫೇವರಿಟ್‌ ಬೆಕ್ಕು. ಸೂರಜ್‌ ಜೊತೆ ಸೆಟ್‌ಗೆ ಹೋದರೆ ಕ್ಯಾರವಾನ್‌ ಬಿಟ್ಟು ಅಲ್ಲಾಡೋಲ್ಲ. ಯಾರೇ ಕರೆದರು ಹೋಗುವ ಈತ ಹೆಣ್ಣು ಮಕ್ಕಳು ಕರೆದರೆ ಜಿಗಿದುಕೊಂಡು ಹೋಗ್ತಾನೆ. ಈತನ ಬರ್ತ ಡೇಗೆ ವಿಶ್‌ ಮಾಡುವುದು, ಗಿಫ್ಟ್‌ ಕೊಡುವುದು ಯಾರೂ ಮರೆಯೋದಿಲ್ಲ. ಮನೆಯಲ್ಲಿನ ರೆಡ್‌ ಬೀಮ್‌ ಬ್ಯಾಗ್‌ ಫೇವರಿಟ್‌ ಜಾಗ. ಎಲ್ಲರೂ ಆತನ ಕಡೆಗೇ ಕಣ್ಣು ನೆಟ್ಟಿರಬೇಕೆಂದು ಆಶಿಸುವ ಕಿತಾಪತಿ ಬೆಕ್ಕು ಈತ.

ಪ್ರಾಣಿಗಳ ಜೀವಿತಾವಧಿ ಬಹಳ ಕಡಿಮೆ. ನಮಗೆ ಗೊತ್ತಿಲ್ಲದೆ ಅವು ನಮ್ಮ ಜೀವನದ, ಕುಟುಂಬದ ಅವಿಭಾಜ್ಯ ಅಂಗವಾಗಿಬಿಡುತ್ತವೆ. ನಮಗೆ ಅವನ ಸಣ್ಣದರಿಂದ ಹಿಡಿದು ಆತನ ಕೊನೆಯ ಕ್ಷಣಗಳವರೆಗೂ ನಮ್ಮ ಅವನ ಮೆಮೋರಿ ಹಿಡಿದಿಡಬೇಕು. ಅಷ್ಟೇ ಅಲ್ಲದೆ ಸ್ನೇಹಿತರು ‘ದಿನವೂ ಚಾರ್ಲಿ ಜೊತೆ ನೀನೇ ಟೈಂ ಕಳಿಯುತ್ತೀಯ. ನಮಗೂ ಅವನ ತುಂಟ ತರ್ಲೆಗಳನ್ನು ತೋರಿಸು’ ಎಂದಾಗ ಈ ಅಕೌಂಟ್‌ ಕ್ರಿಯೇಟ್‌ ಮಾಡಿದೆ.

- ಸೂರಜ್‌ ಗೌಡ

ಅಕೌಂಟ್‌:@charliegowda_17

ವರ್ಷ: 3- 4

ಫಾಲೋಯರ್ಸ್ಸ್: 739

ಪೋಸ್ಟ್‌: 117

ಸಂಯುಕ್ತ ಹೊರನಾಡು ಮೆಚ್ಚಿದ ಲೈಲಾ

ಮೂತಿ ಅಪ್ಪಚ್ಚಿ, ದಪ್ಪದಾಗಿರುವ ಬಾಲ, ಕೆಂಪು ಕಣ್ಣು, ಬೂದು, ಬಿಳಿ, ಕಂದು, ಕಪ್ಪು ಮಿಶ್ರಿತ ಮೈ ಬಣ್ಣ. ಇದು ಪ್ರಾಣಿ ಪ್ರಿಯೆ ನಟಿ ಸಂಯುಕ್ತ ಹೊರನಾಡುವಿನ ಮಗಳು ಲೈಲಾ. ಕರೆಕ್ಟಾಗಿ ಈಕೆಗೀಗ ಒಂದು ವರ್ಷ. ಲೈಲಾ ಹೆಸರು ಬಂದಿದ್ದು ಇಂಗ್ಲಿಷ್‌ ಹಾಡಿನಿಂದ ‘what do you do when feeling lonely when nobody your side’ ಎಂದು. ಹಾಗಾಗಿ ಸಂಯುಕ್ತಾ ಅವರಿಗೆ ಲೈಲಾ ಬಿಟ್ಟು ಇರಲು ಇಷ್ಟವಿಲ್ಲ. ಬೆಕ್ಕಿನಂತಿದ್ದರೂ ಲೈಲಾ ನಾಯಿಯ ಹಾಗೆ. ಗುಗ್ಗು ಎಂಬ ಇಲಿ ನೋಡಿ ಹೆದರುವ ಇವಳು, ಬೇರೆ ಪ್ರಾಣಿಗಳ ಜೊತೆ ಹೋಗೋದಿಲ್ಲ. ಆಟ ಆಡಲು ಮನುಷ್ಯರೇ ಬೇಕು.

ಮೊದಲಿನಿಂದಲೂ ನಾನು ಪ್ರಾಣಿ ಪ್ರಿಯೆ. ಮನುಷ್ಯರಿಗಿಂತ ಪ್ರಾಣಿಗಳೆಂದರೆ ಅಟ್ಯಾಚ್‌ಮೆಂಟ್‌ ಜಾಸ್ತಿ. ಪ್ರಾಣಿಗಳ ಕುರಿತು ಈಗಾಗಲೇ ನಾಲ್ಕು ಟ್ರಸ್ಟ್‌ ನಡೆಸುತ್ತಿದ್ದೇನೆ. ಜೊತೆಗೆ ಆನೆ, ಹುಲಿ, ಕರಡಿಗಳನ್ನು ದತ್ತು ಪಡೆದಿದ್ದೇನೆ. ನನ್ನದೆಂದು ಇರುವುದು ಮಗಳು ಲೈಲಾ ಮಾತ್ರ. ನನಗೆ ಚಾನ್ಸ್‌ ಕೊಟ್ಟರೆ ನನ್ನ ಅಕೌಂಟ್‌ ಅಲ್ಲಿ ಬರೀ ಬೆಕ್ಕು, ನಾಯಿಗಳೇ ಇರುತ್ತೆ. ಪ್ರಾಣಿಗಳ ಬಗ್ಗೆ ಜನರಲ್ಲಿ ಪ್ರೀತಿ ಆಸಕ್ತಿ ಹೆಚ್ಚಬೇಕು. ಜೊತೆಗೆ ನಿನಗಿಂತ ನಿನ್ನ ಪ್ರಾಣಿಗಳ ಬಗ್ಗೆ ಹೆಚ್ಚು ಗೊತ್ತು ಎಂದು ಜನರೇ ಹೇಳ್ತಾರೆ. ನನ್ನ ಬಗ್ಗೆ ಹೇಳುವುದರ ಜೊತೆಗೆ ನನ್ನ ಕೆಲಸಗಳ ಬಗ್ಗೆಯೂ ಹೇಳಬೇಕೆಂದು ಹಾಗೂ ಲೈಲಾ ಬಗ್ಗೆ, ಅವಳ ರೀತಿಯಲ್ಲೇ ಮಾತಾಡಲು ಈ ಅಕೌಂಟ್‌ ಕ್ರಿಯೆಟ್‌ ಮಾಡಿದೆ.

- ಸಂಯುಕ್ತಾ ಹೊರನಾಡು


ಅಕೌಂಟ್‌:@laylahornad
ವರ್ಷ: 1

ಫಾಲೋಯರ್ಸ್: 160

ಪೋಸ್ಟ್‌: 82

click me!