
ಮಹೇಶ್ ನಾರಾಯಣನ್ ನಿರ್ದೇಶನದ, ಮಮ್ಮುಟ್ಟಿ-ಮೋಹನ್‌ಲಾಲ್ ನಟನೆಯ 'ಪೇಟ್ರಿಯಾಟ್' ಸಿನಿಮಾ ಮೇಲೆ ಪ್ರೇಕ್ಷಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ ದುಲ್ಕರ್ ಸಲ್ಮಾನ್, ತಮಗೂ ಇಂಥದ್ದೊಂದು ಸಿನಿಮಾ ಮಾಡುವಂತೆ ನಿರ್ದೇಶಕರನ್ನು ಕೇಳಿದ್ದಾರೆ. 18 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ ಚಿತ್ರ 'ಪೇಟ್ರಿಯಾಟ್'. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಲು ಇದೇ ಮುಖ್ಯ ಕಾರಣ.
ಈಗಾಗಲೇ ಶುರುವಾಗಿರುವ ಅಡ್ವಾನ್ಸ್ ಬುಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಮಮ್ಮುಟ್ಟಿ, ಮೋಹನ್‌ಲಾಲ್ ಜೊತೆಗೆ ಫಹಾದ್ ಫಾಸಿಲ್, ಕುಂಚಾಕ್ಕೊ ಬೋಬನ್, ನಯನತಾರಾ ಅವರಂತಹ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಎಡಿಟರ್ ಹಾಗೂ ಡೈರೆಕ್ಟರ್ ಆಗಿ ಹೆಸರು ಮಾಡಿರುವ ಮಹೇಶ್ ನಾರಾಯಣನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ವೃತ್ತಿಜೀವನದ ಅತಿದೊಡ್ಡ ಸಿನಿಮಾ ಕೂಡ ಹೌದು.
ಇದೀಗ, ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ ದುಲ್ಕರ್ ಸಲ್ಮಾನ್ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಸಹ-ನಿರ್ಮಾಪಕರಲ್ಲಿ ಒಬ್ಬರಾದ ಸಿ.ಆರ್. ಸಲೀಂ ಹಂಚಿಕೊಂಡಿದ್ದಾರೆ. ರೇಡಿಯೋ ಸುನೋಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಣವ್ ಮೋಹನ್‌ಲಾಲ್ ಅಥವಾ ದುಲ್ಕರ್ ಸಲ್ಮಾನ್ ಅವರನ್ನು ನಟಿಸುವ ಬಗ್ಗೆ ಏನಾದರೂ ಚರ್ಚೆ ನಡೆದಿತ್ತಾ ಎಂಬ ಪ್ರಶ್ನೆಗೆ ಸಿ.ಆರ್. ಸಲೀಂ, "ಹಾಗೇನೂ ಇರಲಿಲ್ಲ.
ಆದರೆ, ಮಮ್ಮುಟ್ಟಿ ಅವರ ಮನೆಯಲ್ಲಿ ಮಹೇಶ್ ನಾರಾಯಣನ್ ಕೆಲವು ದೃಶ್ಯಗಳನ್ನು ತೋರಿಸಿದಾಗ, ದುಲ್ಕರ್ 'ನನ್ನನ್ನು ಇಟ್ಟುಕೊಂಡು ಯಾವಾಗ ಇಂಥದ್ದೊಂದು ಸಿನಿಮಾ ಮಾಡ್ತೀರಾ?' ಅಂತ ಮಹೇಶ್‌ಗೆ ಕೇಳಿದ್ರಂತೆ. ಆ ದೃಶ್ಯಗಳು ಅಷ್ಟು ಅದ್ಭುತವಾಗಿದ್ದವು ಅಂತ ಆಂಟೋ (ಜೋಸೆಫ್) ನನ್ನ ಬಳಿ ಹೇಳಿದ್ದರು. ಬಹುಶಃ ಮಹೇಶ್ ಅವರ ಮುಂದಿನ ಚಿತ್ರವನ್ನು ಆಂಟೋ ಜೋಸೆಫ್ ನಿರ್ಮಿಸಬಹುದು ಮತ್ತು ಅದರಲ್ಲಿ ದುಲ್ಕರ್ ನಾಯಕರಾಗಬಹುದು. ಅದಕ್ಕೆ ಎಲ್ಲಾ ಸಾಧ್ಯತೆಗಳಿವೆ," ಎಂದು ಹೇಳಿದ್ದಾರೆ.
ಆಂಟೋ ಜೋಸೆಫ್ ಫಿಲ್ಮ್ ಕಂಪನಿ ಮತ್ತು ಕಿಚ್ಚಪ್ಪು ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಆಂಟೋ ಜೋಸೆಫ್ ಮತ್ತು ಕೆ.ಜಿ. ಅನಿಲ್‌ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿ.ಆರ್. ಸಲೀಂ ಪ್ರೊಡಕ್ಷನ್ಸ್ ಮತ್ತು ಬ್ಲೂ ಟೈಗರ್ಸ್ ಲಂಡನ್ ಬ್ಯಾನರ್‌ಗಳ ಅಡಿಯಲ್ಲಿ ಸಿ.ಆರ್. ಸಲೀಂ ಮತ್ತು ಸುಭಾಷ್ ಜಾರ್ಜ್ ಮ್ಯಾನುಯೆಲ್ ಸಹ-ನಿರ್ಮಾಪಕರಾಗಿದ್ದಾರೆ. ಸಿ.ವಿ. ಸಾರಥಿ ಮತ್ತು ರಾಜೇಶ್ ಕೃಷ್ಣ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್‌ಗಳು. ಮೇ 1 ರಂದು ಬೆಳಗ್ಗೆ 9.15ಕ್ಕೆ ಚಿತ್ರದ ಮೊದಲ ಪ್ರದರ್ಶನ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.