ನನ್ನ ಕಥೆ ಕದ್ದು 'ಆಪರೇಷನ್ ಅಲಮೇಲಮ್ಮ' ಮಾಡಿದ್ದಾರೆ: ಯುವ ನಿರ್ದೇಶಕ ತೇಜಸ್ ಆರೋಪ

By Suvarna Web DeskFirst Published Oct 30, 2016, 1:39 PM IST
Highlights

ತಮ್ಮ ಚಿತ್ರದಲ್ಲಿರುವ 2 ಸಾವಿರಕ್ಕೂ ಹೆಚ್ಚು ಶಾಟ್'ಗಳಲ್ಲಿ ಒಂದರಲ್ಲಾದರೂ ತೇಜಸ್'ರ ಕಥೆಯ ಹೋಲಿಕೆ ಇದ್ದರೆ ತೋರಿಸಲಿ ಎಂದು ಸವಾಲೆಸೆದಿದ್ದಾರೆ.

ಬೆಂಗಳೂರು(ಅ. 30): ಸಿಂಪಲ್ ಸುನಿ ನಿರ್ದೇಶನದ "ಆಪರೇಷನ್ ಅಲಮೇಲಮ್ಮ" ಸಿನಿಮಾ ಹೊಸ ವಿವಾದ ಸೃಷ್ಟಿಸಿದೆ. ಈ ಚಿತ್ರದ ಕಥೆ ನನ್ನದು. ನನ್ನ ಕಥೆಯನ್ನು ಕದ್ದು ಸಿನಿಮಾ ಮಾಡಿದ್ದಾರೆ ಎಂದು ಯುವ ನಿರ್ದೇಶಕ ತೇಜಸ್ ಅವರು ಆರೋಪಿಸಿದ್ದಾರೆ. ಆದರೆ, ತೇಜಸ್ ಆರೋಪವನ್ನು ಸಿಂಪಲ್ ಸುನಿ ತಳ್ಳಿಹಾಕಿದ್ದಾರೆ. ತೇಜಸ್ ಹೇಳಿದ ಕಥೆಗೂ ತನ್ನ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಂಪಲ್ ಸುನಿ ಸ್ಪಷ್ಟಪಡಿಸಿದ್ದಾರೆ.

ಸುವರ್ಣನ್ಯೂಸ್ ಜೊತೆ ಮಾತನಾಡಿದ ತೇಜಸ್, ತಾನು ಎರಡು ವರ್ಷಗಳ ಹಿಂದೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ನೈಜ ಸಂಬಂಧ ಎಳೆ ಇಟ್ಟುಕೊಂಡು ಈ ಕಥೆ ಮಾಡಿದ್ದೆ. ಆ ಬಳಿಕ ಅನೇಕ ನಿರ್ಮಾಪಕರನ್ನು ಭೇಟಿಯಾಗಿದ್ದೆ.. ಹಾಗೆಯೇ ಈಗಿನ ಆಪರೇಷನ್ ಅಲಮೇಲಮ್ಮ ಸಿನಿಮಾದ ನಿರ್ಮಾಪಕರನ್ನೂ ಭೇಟಿಯಾಗಿ ಕಥೆಯ ಒಂದು ಎಳೆ ತಿಳಿಸಿದ್ದೆ ಎಂದು ತೇಜಸ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಂಪಲ್ ಸುನಿ, ತಮ್ಮ ಚಿತ್ರದಲ್ಲಿರುವ 2 ಸಾವಿರಕ್ಕೂ ಹೆಚ್ಚು ಶಾಟ್'ಗಳಲ್ಲಿ ಒಂದರಲ್ಲಾದರೂ ತೇಜಸ್'ರ ಕಥೆಯ ಹೋಲಿಕೆ ಇದ್ದರೆ ತೋರಿಸಲಿ ಎಂದು ಸವಾಲೆಸೆದಿದ್ದಾರೆ. ತೇಜಸ್ ಒಂದೂವರೆ ವರ್ಷದ ಹಿಂದೆ ತನ್ನನ್ನು ಭೇಟಿಯಾಗಿದ್ದನ್ನ ಒಪ್ಪಿಕೊಂಡ ಸಿಂಪಲ್ ಸುನಿ, ಆ ಸಂದರ್ಭದಲ್ಲಿ ತೇಜಸ್ ಹೇಳಿದ್ದು ಹಾರರ್ ಕಥೆಯೇ ಹೊರತು ಆಪರೇಷನ್ ಅಲಮೇಲಮ್ಮಗೆ ಸಂಬಂಧಿಸಿದ್ದಲ್ಲ ಎಂದು ವಿವರಿಸಿದ್ದಾರೆ. "ನನ್ನ ಸಿನಿಮಾದ ಕಥೆ ಬೇರೆಯೇ ಇದೆ... ಮೀಡಿಯಾಗೆ ಹೋಗಬೇಡ ಎಂದು ತೇಜಸ್'ಗೆ ಹೇಳಿದ್ದೆ. ಆದರೆ ಅವರು ಪ್ರಚಾರಕ್ಕೋಸ್ಕರ ಈ ರೀತಿ ಮಾಡುತ್ತಿದ್ದಾರೆಂದು ಅನಿಸುತ್ತಿದೆ" ಎಂದು ಸುವರ್ಣನ್ಯೂಸ್'ನಲ್ಲಿ ಸಿಂಪಲ್ ಸುನಿ ಪ್ರತ್ಯಾರೋಪ ಮಾಡಿದ್ದಾರೆ.

ಆದರೆ, ತಾನು ಪ್ರಚಾರಕ್ಕೋಸ್ಕರ ಈ ಕೆಲಸ ಮಾಡುತ್ತಿಲ್ಲವೆಂದು ತೇಜಸ್ ಈ ವೇಳೆ ಸ್ಪಷ್ಪಪಡಿಸಿದ್ದಾರೆ. ತಾನೊಬ್ಬ ಆರ್ಟಿಸ್ಟ್ ಆಗಿದ್ದು, ಕಿರುತೆರೆಯಲ್ಲಿ ಅಭಿನಯಿಸಿ ತಕ್ಕಷ್ಟು ಖ್ಯಾತನಾಗಿದ್ದೇನೆ. ಈ ರೀತಿ ತಾನು ಪ್ರಚಾರ ಪಡೆದುಕೊಳ್ಳುವ ಅಗತ್ಯ ತನಗಿಲ್ಲ ಎಂದು ತೇಜಸ್ ವಾದಿಸಿದ್ದಾರೆ.

click me!