600 ಕೋಟಿ ವೆಚ್ಚದ ರಜನಿ ಹೊಸ ಸಿನಿಮಾ ರೆಡಿ

By Web DeskFirst Published Nov 4, 2018, 9:45 AM IST
Highlights

 ರಜನಿಕಾಂತ್‌ ಹಾಗೂ ಬಾಲಿವುಡ್‌ನ ಅಕ್ಷಯ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಹಾಗೂ ಬಹು ತಾರಾಗಣದ ಚಿತ್ರ ಸಿದ್ಧವಾಗಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಸುಭಾಸ್ಕರನ್‌ ಅವರು 600 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಈ ತಿಂಗಳ 29ರಂದು ಚಿತ್ರ ಬಿಡುಗಡೆಯಾಗಲಿದೆ.

ಚೆನ್ನೈ :  ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ಬಾಲಿವುಡ್‌ನ ಅಕ್ಷಯ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಹಾಗೂ ಬಹು ತಾರಾಗಣದ ‘2.0’ ಚಿತ್ರದ ಟ್ರೇಲರ್‌ ಮೂರು ಭಾಷೆಗಳಲ್ಲಿ ಬಿಡುಗಡೆಯಾಯಿತು.

ಶನಿವಾರ ಚೆನ್ನೈನಲ್ಲಿರುವ ಸತ್ಯಂ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರದ ಟ್ರೇಲರ್‌ ಅನಾವರಣಗೊಂಡಿತು. ಶಂಕರ್‌ ನಿರ್ದೇಶನದ ಈ ಚಿತ್ರ ತಾಂತ್ರಿಕವಾಗಿಯೂ ಗುಣಮಟ್ಟದಿಂದ ಕೂಡಿದ್ದು, ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಹಾಲಿವುಡ್‌ ತಂತ್ರಜ್ಞಾನ ಹೊಂದಿರುವ 4ಡಿ ಸೌಂಡಿಂಗ್‌ ವ್ಯವಸ್ಥೆ ಒಳಗೊಂಡಿದೆ. ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲೇ ನಟ ಶಿವರಾಜಕುಮಾರ್‌ ಹಾಗೂ ಉಪೇಂದ್ರ ಅವರು ರಜನೀಕಾಂತ್‌ ಅವರಿಗೆ ಶುಭ ಕೋರಿದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಸುಭಾಸ್ಕರನ್‌ ಅವರು 600 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಈ ತಿಂಗಳ 29ರಂದು ಚಿತ್ರ ಬಿಡುಗಡೆಯಾಗಲಿದೆ.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರ ಸಮ್ಮುಖದಲ್ಲಿ ಚೆನ್ನೈನ ಸತ್ಯಂ ಚಿತ್ರಮಂದಿರದಲ್ಲಿ ಟ್ರೇಲರ್‌ ಬಿಡುಗಡೆ ಮಾಡಲಾಯಿತು. ರಜನಿಕಾಂತ್‌, ಅಕ್ಷಯ್‌ ಕುಮಾರ್‌, ಆ್ಯಮಿ ಜಾಕ್ಸನ್‌, ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌, ನಿರ್ದೇಶಕ ಶಂಕರ್‌, ರಸೂಲ್‌ ಪೂಕುಟ್ಟಿಹಾಜರಿದ್ದರು. ಶಿವಾಜಿ ಹಾಗೂ ಎಂದಿರನ್‌ ಚಿತ್ರಗಳ ಬಳಿಕ ಶಂಕರ್‌ ಮತ್ತು ರಜನಿಕಾಂತ್‌ ಜೋಡಿಯಾಗಿ ಬರುತ್ತಿರುವ ಚಿತ್ರ 2.0.

ತಡವಾದರೂ ಜಬರದಸ್ತ್ ಚಿತ್ರ: ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಜನಿಕಾಂತ್‌, ನನ್ನ ಮತ್ತು ಶಂಕರ್‌ ಕಾಂಬಿನೇಶನ್‌ನಲ್ಲಿ ಬಂದಿದ್ದ ಹಿಂದಿನ ಚಿತ್ರಗಳು ಹಿಟ್‌ ಆಗಿವೆ. ಅದೇ ರೀತಿ 2.0 ಚಿತ್ರ ಸೂಪರ್‌ ಹಿಟ್‌ ಆಗಲಿದೆ. ಚಿತ್ರ ಮುಗಿಸುವುದು ತಡವಾಯಿತು. ಆದರೆ ತಡವಾದರೂ ಚೆನ್ನಾಗಿ ಮೂಡಿಬರಬೇಕೆಂದು ಸಾಕಷ್ಟುಶ್ರಮ ವಹಿಸಿದ್ದೇವೆ. ಥ್ರಿಲ್ಲರ್‌, ಆ್ಯಕ್ಷನ್‌ ಜೊತೆಗೆ ಜಾಗತಿಕ ಮಟ್ಟದಲ್ಲಿ ಯೋಚಿಸುವಂಥ ಸಂದೇಶ ಚಿತ್ರದಲ್ಲಿದೆ ಎಂದರು.

ನಿರ್ದೇಶಕ ಶಂಕರ್‌ ಮಾತನಾಡಿ, 3ಡಿ ತಂತ್ರಜ್ಞಾನದಲ್ಲಿ ಚಿತ್ರ ಮೂಡಿಬಂದಿದ್ದು, ಸೌಂಡ್‌ 4ಡಿ ತಂತ್ರಜ್ಞಾನದಲ್ಲಿದೆ. ಹೀಗಾಗಿ ಪ್ರೇಕ್ಷಕನ ಕಾಲ ಕೆಳಗೆ ಶಬ್ದ ಮೂಡಿಬರಲಿದೆ. ರಸೂಲ್‌ ಪೂಕುಟ್ಟಿಅದ್ಭುತ ಸೌಂಡಿಂಗ್‌ ಮಾಡಿದ್ದಾರೆ. ಇದು ದೊಡ್ಡ ಬಜೆಟ್‌ ಚಿತ್ರ. ಸೈನ್ಸ್‌ ಫಿಕ್ಷನ್‌ ಜತೆ ಮೈಂಡ್‌ಗೇಮ್‌ ಸಿನಿಮಾ ಎಂದು ಹೇಳಿಕೊಂಡರು.

ಶಿವಣ್ಣ ಸಿನಿಮಾ ನಿರ್ದೇಶಿಸಲು ಶಂಕರ್‌ ಒಲವು

ಅವಕಾಶ ಸಿಕ್ಕರೆ ಶಿವರಾಜಕುಮಾರ್‌ ಅವರೊಂದಿಗೆ ಕನ್ನಡದಲ್ಲಿ ಕೆಲಸ ಮಾಡಲಾಗುವುದು ಎಂದು ಇದೇ ವೇಳೆ ನಿರ್ದೇಶಕ ಶಂಕರ್‌ ಪ್ರಕಟಿಸಿದರು.

ಚಿತ್ರತಂಡಕ್ಕೆ ಶುಭ ಕೋರುವ ವಿಡಿಯೋ ಸಂದೇಶದಲ್ಲಿ ನಟ ಶಿವರಾಜಕುಮಾರ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಂಕರ್‌, ಶಿವರಾಜಕುಮಾರ್‌ ದೊಡ್ಡ ನಟರು. ಅವರು ನನ್ನ ಚಿತ್ರದಲ್ಲಿ ನಟಿಸುತ್ತೇನೆ ಎಂದಿರುವುದು ದೊಡ್ಡ ವಿಷಯ. ಖಂಡಿತ ಅವಕಾಶ ಸಿಕ್ಕರೆ ಅವರ ಜತೆ ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಉಪೇಂದ್ರ ಅವರ ಶುಭಾಶಯಗಳನ್ನು ಕೇಳಿದ ಅವರು, ಉಪೇಂದ್ರ ಅವರ ಎ ಸಿನಿಮಾ ನೋಡಿ ಸ್ಫೂರ್ತಿ ಪಡೆದವನು ನಾನು. ಚಿತ್ರದ ಕ್ಲೈಮಾಕ್ಸ್‌ ದೃಶ್ಯವನ್ನು ಸಿನಿಮಾ ಆರಂಭದಲ್ಲೇ ತೋರಿಸಿದವರು ಉಪೇಂದ್ರ. ಅವರು ಕನ್ನಡದಲ್ಲಿ ದೊಡ್ಡ ನಿರ್ದೇಶಕ ಹಾಗೂ ನಟ. ಅವರಿಗೆ ಸಲಹೆ ಕೊಡುವಷ್ಟುದೊಡ್ಡವನಲ್ಲ ನಾನು ಎಂದು ಹೇಳಿದರು.

ಚಿತ್ರರಂಗದಲ್ಲಿ 28 ವರ್ಷದಿಂದ ಇದ್ದೇನೆ. 2.0 ಚಿತ್ರಕ್ಕಾಗಿ ಮೇಕಪ್‌ಗೆ ಪ್ರತಿದಿನ ಮೂರು ಗಂಟೆ ಹಾಗೂ ಅದನ್ನು ತೆಗೆಯಲು ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದೆ. ಇಷ್ಟುಅವಧಿಯನ್ನು ಬೇರೆ ಯಾವುದೇ ಚಿತ್ರಕ್ಕೆ ತೆಗೆದುಕೊಂಡಿಲ್ಲ. ಶಂಕರ್‌ ಒಬ್ಬ ನಿರ್ದೇಶಕ ಎನುವುದಕ್ಕಿಂತ ಒಬ್ಬ ಸಿನಿಮಾ ವಿಜ್ಞಾನಿ.

- ಅಕ್ಷಯ್‌ ಕುಮಾರ್‌, ನಟ

ಈ ಚಿತ್ರದಲ್ಲಿ ನಟಿಸುವಾಗ ನರ್ವಸ್‌ ಆಗಿದ್ದೆ. ನಿರ್ದೇಶಕ ಶಂಕರ್‌ ಧೈರ್ಯ ತುಂಬಿ ಕೆಲಸ ಮಾಡಲು ಸಹಕರಿಸಿದರು. ಮೂರ್ನಾಲ್ಕು ವರ್ಷಗಳ ಹಿಂದೆ ನಿರ್ದೇಶಕರು ಕಥೆ ಹೇಳಿದ್ದರು. ಇಬ್ಬರು ಸೂಪರ್‌ ಸ್ಟಾರ್‌ ಜೊತೆ ನಟಿಸಿದ್ದು ಖುಷಿ ಕೊಟ್ಟಿದೆ.

- ಆ್ಯಮಿ ಜಾಕ್ಸನ್‌, ನಟಿ

ಆರ್‌.ಕೇಶವಮೂರ್ತಿ

click me!