‘ಎಲ್ಟಿಟಿಇ’ಯಲ್ಲಿ ನವಾಜುದ್ದೀನ್ ಸಿದ್ದೀಕಿ?

By Suvarna Web DeskFirst Published Dec 25, 2017, 11:52 AM IST
Highlights

ಎಎಂಆರ್ ರಮೇಶ್ ನಿರ್ದೇಶನದ ಚಿತ್ರ ‘ಆಸ್ಫೋಟ’ಎಲ್ಲಿಗೆ ಬಂತು ಎನ್ನುವ ಹೊತ್ತಿಗೆ ಅಲ್ಲಿಂದ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

ಎಎಂಆರ್ ರಮೇಶ್ ನಿರ್ದೇಶನದ ಚಿತ್ರ ‘ಆಸ್ಫೋಟ’ಎಲ್ಲಿಗೆ ಬಂತು ಎನ್ನುವ ಹೊತ್ತಿಗೆ ಅಲ್ಲಿಂದ ಸ್ಫೋಟಕ ಸುದ್ದಿಯೊಂದು ಹೊರಬಿದ್ದಿದೆ.

ಈಗ ಈ ಚಿತ್ರದ ಟೈಟಲ್ ಬದಲಾಗಿದೆ. ‘ಆಸ್ಫೋಟ’ದ ಬದಲಿಗೆ ‘ಎಲ್‌ಟಿಟಿಇ’ ಹೆಸರಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಅಲ್ಲದೇ ನಿರ್ಮಾಣಕ್ಕೀಗ ಟಾಲಿವುಡ್‌ನ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ‘ರಾಮಾ ನಾಯ್ಡು ಪ್ರೊಡಕ್ಷನ್ ಹೌಸ್’ ಸಾಥ್ ನೀಡಿದೆ.

ಕನ್ನಡ, ತಮಿಳು ಜತೆಗೆ ಈ ಚಿತ್ರವನ್ನು ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ತೆರೆಗೆ ತರಲು ನಿರ್ದೇಶಕ ಎಎಂಆರ್ ರಮೇಶ್ ಮತ್ತು ರಾಮಾನಾಯ್ಡು ಪ್ರೊಡಕ್ಷನ್ ಹೌಸ್‌ನ ಸುರೇಶ್ ಬಾಬು ನಿರ್ಧರಿಸಿದ್ದಾರಂತೆ. ಅಲ್ಲಿಗೆ ‘ಆಸ್ಫೋಟ’ಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಅದರ ಕತೆಯಲ್ಲೂ ಚೇಂಜಸ್ ಆಗುವ ಸುಳಿವು ಸಿಕ್ಕಿದೆ.

ಇಂಟರೆಸ್ಟಿಂಗ್‌ ಅಂದ್ರೆ ಚಿತ್ರದಲ್ಲಿ ರಾಣಾ ದಗ್ಗು ಬಾಟಿ, ವೆಂಕಟೇಶ್ ಜತೆಗೀಗ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರಕ್ಕೆ ಅವರನ್ನು ಕರೆ ತರುವ ಪ್ರಯತ್ನ ನಡೆದಿದೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಮುಗಿದಿದ್ದು, ಮಾರ್ಚ್‌ತಿಂಗಳಿಂದ ಶೂಟಿಂಗ್ ಶುರುವಂತೆ. ಶ್ರೀಲಂಕಾ, ಜಾಫ್ನಾದಲ್ಲಿಯೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ ರಮೇಶ್.

ಟೈಟಲ್ ಬದಲಾಗಿದ್ದರ ಕತೆ ಕೇಳಿ..

‘ಮೊದಲು ಈ ಚಿತ್ರಕ್ಕೆ ಆಸ್ಪೋಟ ಅಂತ ಟೈಟಲ್ ಇಟ್ಟಿದ್ದು ನಿಜ. ಆ ಸಮಯದಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಮಾತ್ರ ಈ ಚಿತ್ರವನ್ನು ನಿರ್ಮಾಣ ಮಾಡುವ ಯೋಚನೆಯಿತ್ತು. ಆದರೆ ಈಗ ಚಿತ್ರದ ನಿರ್ಮಾಣಕ್ಕೆ ಟಾಲಿವುಡ್’ನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ರಾಮಾ ನಾಯ್ಡು ಪ್ರೊಡಕ್ಷನ್ ಹೌಸ್ ಸಾಥ್ ನೀಡಿದೆ. ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗು ಬಾಟಿ ತಂದೆ ಸುರೇಶ್ ಬಾಬು ಇದರ ರೂವಾರಿ. ಅವರು ಈ ಪ್ರಾಜೆಕ್ಟ್‌ಗೆ ಬಂದ ನಂತರ ಆನೆ ಬಲ ಬಂದಂತಾಗಿದೆ. ಕನ್ನಡ, ತಮಿಳು ಮಾತ್ರವಲ್ಲದೆ, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ನಿರ್ಮಾಣ ಮಾಡುವ ಯೋಚನೆ ಇದೆ. ಆ ಎಲ್ಲಾ ಭಾಷೆಗಳಿಗೂ ಕ್ಯಾಚಿ ಆಗುವಂತಹ ಒಂದು ಟೈಟಲ್ ಬೇಕಿತ್ತು. ಹಾಗೆ ಹುಡುಕುತಾ ಹೋದಾಗ ನಮಗೆ ಸರಿ ಎನಿಸಿದ್ದು ‘ಎಲ್‌ಟಿಟಿಇ’ ಅನ್ನುವ ಪದವೇ. ಅದನ್ನೇ ಆಯ್ಕೆ ಮಾಡಿಕೊಂಡೆವು. ಹಾಗಾಗಿ ಚಿತ್ರದ ಮೊದಲ ಶೀರ್ಷಿಕೆ ಬದಲಾಗಿದೆ’ಎನ್ನುತ್ತಾರೆ ನಿರ್ದೇಶಕ ಎಎಂಆರ್ ರಮೇಶ್.

ರಾಜೀವ್ ಗಾಂಧಿ ಹತ್ಯೆ ಪ್ರಕರಣ ಚಿತ್ರದ ಒಂದು ಭಾಗ:

ಈ ಚಿತ್ರ ಮಾಡುತ್ತೇನೆಂದು ಹೊರಟಾಗ ನಿರ್ದೇಶಕ ಎಎಂಆರ್ ರಮೇಶ್, ಇದು ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಕಥಾ ಹಂದರ ಎಂದು ಹೇಳಿದ್ದರು.

ಚಿತ್ರದ ಪೋಸ್ಟರ್‌ಗಳಲ್ಲೂ ರಾಜೀವ್ ಭಾವಚಿತ್ರ ಮತ್ತು ಎಲ್‌ಟಿಟಿಇ ಉಗ್ರವಾದಿ ಸಂಘಟನೆಯ ಕೆಲವರ ಫೋಟೋಗಳು ಕಾಣಿಸಿಕೊಂಡಿದ್ದವು. ಈಗ ಬದಲಾದ ಚಿತ್ರದ ಟೈಟಲ್‌ಗೆ ತಕ್ಕಂತೆ ಕತೆಯ ಸ್ವರೂಪ ಕೂಡ ಬದಲಾಗಿದೆಯಂತೆ. ‘ಟೈಟಲ್‌ಗೆ ತಕ್ಕಂತೆ ಚಿತ್ರದ ಕತೆಯಲ್ಲೂ ಒಂದಷ್ಟು ಚೇಂಜಸ್ ಆಗುತ್ತಿದೆ. ಕನ್ನಡ, ತಮಿಳು ಮಾತ್ರವಲ್ಲದೆ, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ನಿರ್ಮಾಣ ಮಾಡುವ ಯೋಚನೆ ಇದೆ. ಈ ಎಲ್ಲಾ ಭಾಷೆಗಳಿಗೂ ಕ್ಯಾಚಿ ಆಗುವಂತಹ ಒಂದು ಟೈಟಲ್ ಬೇಕಿತ್ತು. ಅದಕ್ಕೆ ಸರಿ ಎನಿಸಿದ್ದು ‘ಎಲ್‌ಟಿಟಿಇ’ ಶೀರ್ಷಿಕೆ. ಪ್ರಮುಖವಾಗಿ ಎಲ್‌ಟಿಟಿಇ ಉಗ್ರ ಸಂಘಟನೆಯ ಹುಟ್ಟು ಮತ್ತದರ ಪ್ರಮುಖ ಘಟನಾವಳಿಗಳ ಜತೆಗೆ ರಾಜೀವ್ ಗಾಂಧಿ ಹತ್ಯಾ ಪ್ರಕರಣವನ್ನು ಫೋಕಸ್ ಮಾಡುವ ಚಿಂತನೆ ಇದೆ. ಇದಕ್ಕಾಗಿ ಸಾಕಷ್ಟು ಸುತ್ತಾಟ ನಡೆದಿದೆ’ ಎನ್ನುತ್ತಾರೆ ರಮೇಶ್.

ಬದಲಾದ ಚಿತ್ರದ ಟೈಟಲ್‌ಗೆ ನಿರ್ದೇಶಕರು ಒಂದು ಆಕರ್ಷಕ ಟ್ಯಾಗ್‌ಲೈನ್ ಕೊಟ್ಟಿದ್ದಾರೆ. ಎಲ್‌ಟಿಟಿಇ ಒಂದು ಉಗ್ರ ಸಂಘಟನೆ ಅಂತ ಕೆಂಡಕಾರುವವವರು ಒಂದು ಕ್ಷಣ ಆಲೋಚಿಸುವ ಹಾಗಿದೆ ಆ ಟ್ಯಾಗ್ ಲೈನ್. ಒನ್ ಮ್ಯಾನ್ಸ್ ಟೆರರಿಸ್ಟ್ ಈಸ್ ಅನದರ್ ಮ್ಯಾನ್ಸ್ ಫ್ರಿಡಂ ಫೈಟರ್ ಎನ್ನುತ್ತಿದೆ ಆ ಟ್ಯಾಗ್‌ಲೈನ್.

ಸುತ್ತು ಹಾಕಿದ್ದು ಹಲವು ದೇಶ: ಮೊದಲಿಗಿಂತ ಹೆಚ್ಚು ತಲೆಕೆಡಿಸಿಕೊಂಡು ಸಿನಿಮಾ ಮಾಡಲು ಹೊರಟಿದ್ದಾರಂತೆ ರಮೇಶ್. ಕತೆ, ಚಿತ್ರಕತೆಗೆ ಬೇಕಾದ ಸರಕಿಗಾಗಿ ಸಾಕಷ್ಟು ಸುತ್ತಾಡಿದ್ದಾರೆ. ಶ್ರೀಲಂಕಾ, ಫ್ರಾನ್ಸ್, ಸ್ವಿಡ್ಜರ್‌ಲ್ಯಾಂಡ್’ಗೂ ಹೋಗಿ ಬಂದಿದ್ದಾರಂತೆ. ಜನವರಿಗೆ ಮತ್ತೆ ಶ್ರೀಲಂಕಾ ಹೊರಟಿದ್ದಾರೆ.

ಇದೆಲ್ಲ ಸುತ್ತಾಟಕ್ಕೆ ಕಾರಣವೇ ಎಲ್‌ಟಿಟಿಇ ಗಳ ಬಗ್ಗೆ ಇದ್ದ ವಾಸ್ತವದ ಹುಡುಕಾಟಕ್ಕೆ. ‘ಎಲ್‌ಟಿಟಿಇ ಒಂದು ಉಗ್ರ ಸಂಘಟನೆ. ಹಾಗಾಗಿಯೇ ಅದು ತನ್ನ ನಾಶಕ್ಕೆ ಆಹ್ವಾನ ತಂದುಕೊಂಡಿತು. ಆದರೂ ಆ ಸಂಘಟನೆಯ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಆ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇನೆ. ಬಹುಮುಖ್ಯವಾಗಿ ಅದರ ಉಗ್ರ ಮುಖ ಹೇಗಿತ್ತು ಅನ್ನೋದನ್ನು ಹೇಳಹೊರಟಿದ್ದೇನೆ’ ಎನ್ನುತ್ತಾರೆ ರಮೇಶ್.

-ಕನ್ನಡಪ್ರಭ ಸಿನಿವಾರ್ತೆ

click me!