ಇಂಡಿಯಾ ವರ್ಸಸ್ ಇಂಗ್ಲೆಂಡ್; ಇದು ಕ್ರಿಕೆಟ್ ಅಲ್ಲ!

By Web DeskFirst Published Jul 15, 2019, 9:30 AM IST
Highlights

ಕನ್ನಡದ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ಕೊನೆಗೂ ಟೈಟಲ್‌ ಫಿಕ್ಸ್‌ ಆಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಎನ್ನುವ ಟೈಟಲ್‌ ಫೈನಲ್‌ ಆಗಿದೆ. ಕೊಂಚ ಕುತೂಹಲ ಹುಟ್ಟಿಸುವ ಈ ಶೀರ್ಷಿಕೆಗೆ ‘... ಆದರೆ ಇದು ಕ್ರಿಕೆಟ್‌ ಅಲ್ಲ ’ಎನ್ನುವ ಅಡಿಬರಹ ಕೊಟ್ಟು ಪ್ರೇಕ್ಷಕರ ಮನಸ್ಸಲ್ಲಿ ಹುಟ್ಟಿಕೊಳ್ಳಬಹುದಾದ ಹತ್ತು ಹಲವು ಪ್ರಶ್ನೆಗಳನ್ನು ತಣ್ಣಗೆ ಸಮಾಧಾನಿಸಿರುವ ನಾಗತಿಹಳ್ಳಿ ಚಂದ್ರಶೇಖರ್‌, ಇಂಡಿಯಾ ಮತ್ತು ಇಂಗ್ಲೆಂಡ್‌ ನಡುವೆ ‘ವರ್ಸಸ್‌’ ಲೈನ್‌ ಇಟ್ಟು ಸಿನಿ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿರುವುದು ವಿಶೇಷ.

ಸದ್ಯಕ್ಕೆ ಚಿತ್ರದ ಕತೆಯೇನು ಎನ್ನುವುದನ್ನು ಅವರು ಎಲ್ಲಿಯೂ ರಿವೀಲ್‌ ಮಾಡಿಲ್ಲ. ಕತೆಯ ಸಂಗತಿಯನ್ನು ರಹಸ್ಯವಾಗಿಟ್ಟುಕೊಂಡು ಲಂಡನ್‌ನಲ್ಲಿಯೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದರು. ಲಂಡನ್‌ ಸಿಟಿ ಮಾತ್ರವಲ್ಲದೆ ಅಲ್ಲಿಯ ಸುತ್ತಮುತ್ತಲ ವಿಲೇಜ್‌ ಲೊಕೇಷನ್ಸ್‌ಗಳಲ್ಲೂ ಚಿತ್ರೀಕರಿಸಿಕೊಂಡು ಬಂದಿರುವುದಾಗಿ ಹೇಳಿದ್ದರು.ಮತ್ತೆ ಈಗ ವಾಪಸ್‌ ಲಂಡನ್‌ಗೆ ಹೋಗಿ ಚಿತ್ರದ ಟೈಟಲ್‌ ರಿವೀಲ್‌ ಮಾಡಿ, ಕುತೂಹಲ ಹುಟ್ಟಿಸಿದ್ದಾರೆ. ಟೈಟಲ್‌ನಲ್ಲೀಗ ಇಂಡಿಯಾ ಮತ್ತು ಇಂಗ್ಲೆಂಡ್‌ ಎರಡು ಇವೆ. ಆ ಮೂಲಕ ‘ಅಮೆರಿಕಾ ಅಮೆರಿಕಾ’, ‘ಪ್ಯಾರಿಸ್‌ ಪ್ರಣಯ’ ಚಿತ್ರಗಳ ನಂತರ ಮತ್ತೆ ಈಗ ಇನ್ನೊಂದು ದೇಶದ ಹೆಸರನ್ನು ಅವರು ತಮ್ಮ ಚಿತ್ರದ ಅರ್ಧ ಶೀರ್ಷಿಕೆಗೆ ಬಳಸಿಕೊಂಡಿದ್ದು ವಿಶೇಷ.

‘ಇಷ್ಟಕಾಮ್ಯ’ ಚಿತ್ರದ ಒಂದಷ್ಟುಗ್ಯಾಪ್‌ ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಕೈಗೆತ್ತಿಕೊಂಡ ಸಿನಿಮಾ ಇದು. ಚಿಟ್ಟೆಖ್ಯಾತಿಯ ನಟ ವಸಿಷ್ಟಸಿಂಹ ಹಾಗೂ ‘ಕೆಂಡ ಸಂಪಿಗೆ’ ಚೆಲುವೆ ಮಾನ್ವಿತಾ ಹರೀಶ್‌ ಈ ಚಿತ್ರದ ಪ್ರಧಾನ ಪಾತ್ರಧಾರಿಗಳು. ಅವರೊಂದಿಗೆ ಹಿರಿಯ ಕಲಾವಿದರಾದ ಅನಂತ್‌ನಾಗ್‌, ಸುಮಲತಾ ಅಂಬರೀಶ್‌, ಸಾಧುಕೋಕಿಲ, ಪ್ರಕಾಶ್‌ ಬೆಳವಾಡಿ ಜತೆಗೆ ಬ್ರಿಟಿಷ್‌ ಕಲಾವಿದರೂ ಚಿತ್ರದಲ್ಲಿದ್ದಾರಂತೆ. ಶನಿವಾರ ರಾತ್ರಿ ಲಂಡನ್‌ನಲ್ಲಿಯೇ ಟೈಟಲ್‌ ರಿಲೀಸ್‌ ಮಾಡಿದ್ದಾರೆ.

ಟೈಟಲ್‌ಲಾಂಚ್‌ಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ‘ಕನ್ನಡ ಕಲಿ ’ಹೆಸರಿನ ಸ್ಪೆಷಲ್‌ ಸಾಂಗ್‌ ಬಿಡುಗಡೆ ಆಯೋಜಿಸಿದ್ದರು. ಈ ಹಾಡನ್ನು ಜಗತ್ತಿನ ಎಲ್ಲಾ ಕನ್ನಡಿಗರಿಗೆ, ಕನ್ನಡದ ಮಕ್ಕಳಿಗೆ ಅರ್ಪಣೆ ಮಾಡಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯ ಈ ಹಾಡಿಗೆ ಗಾಯಕಿ ಸುಪ್ರಿಯಾ ಲೋಹಿತ್‌ ಧ್ವನಿ ನೀಡಿದ್ದಾರೆ. ಈ ಹಾಡನ್ನು ಬಿಡುಗಡೆಗೊಳಿಸಿದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಎನ್ನುವ ಟೈಟಲ್‌ ಲಾಂಚ್‌ ಮಾಡಿದರು. ಕನ್ನಡದ ಮಟ್ಟಿಗೆ ನಾಗತಿಹಳ್ಳಿ ಚಂದ್ರಶೇಖರ್‌ ಅವರದ್ದು ಹಿಟ್‌ ಚಿತ್ರಗಳನ್ನು ಕೊಟ್ಟಖ್ಯಾತಿ. ವಿಶೇಷ ಅಂದ್ರೆ ಅವರ ನಿರ್ದೇಶನದ ಬಹುತೇಕ ಸಿನಿಮಾಗಳು ಯಶಸ್ವಿ ಕಂಡಿವೆ. ಅದೇ ಕಾರಣಕ್ಕೆ ಈಗ ಅವರ ಹೊಸ ಸಿನಿಮಾ ಕೂಡ ಸಾಕಷ್ಟುಸದ್ದು ಮಾಡುತ್ತಿದೆ.

click me!