'ನಾಗರಹಾವು' ವಿಮರ್ಶೆ: ಹಾವಿನ ರೋಷ, ಗ್ರಾಫಿಕ್ಸ್ ವೇಷ, ಮಿಕ್ಕ 9 ನಿಮಿಷ

Published : Oct 15, 2016, 06:11 AM ISTUpdated : Apr 11, 2018, 12:45 PM IST
'ನಾಗರಹಾವು' ವಿಮರ್ಶೆ: ಹಾವಿನ ರೋಷ, ಗ್ರಾಫಿಕ್ಸ್ ವೇಷ, ಮಿಕ್ಕ 9 ನಿಮಿಷ

ಸಾರಾಂಶ

ದಿವ್ಯಶಕ್ತಿಯ ನಾಗಮಣಿ, ದೇವರ ಪ್ರತಿಮೆಗಳ ಅಪಹರಣದ ಸುತ್ತ ಈಗಾಗಲೇ ಸಾಕಷ್ಟುಸಿನಿಮಾಗಳು ಬಂದುಹೋಗಿವೆ. ಕೋಡಿ ರಾಮಕೃಷ್ಣ ಅವರನ್ನು ದೊಡ್ಡ ನಿರ್ದೇಶಕರನ್ನಾಗಿಸಿದ ತೆಲುಗಿನಲ್ಲೇ ಅನುಷ್ಕಾ ಶೆಟ್ಟಿನಟನೆಯ ‘ಪಂಚಾಕ್ಷರಿ', ಜೂ. ಎನ್‌ಟಿಆರ್‌ ನಟನೆಯ ‘ಶಕ್ತಿ', ಶ್ರೀಕಾಂತ್‌ ಅಭಿನಯದ ‘ದೇವರಾಯ' ಇದೇ ಹಾದಿಯಲ್ಲೇ ಸಾಗಿದ ಚಿತ್ರಗಳು. ಈ ಚಿತ್ರಗಳ ಮತ್ತೊಂದು ರೂಪವೇ ‘ನಾಗರಹಾವು'!

ರೇಟಿಂಗ್: 2/5

ಈ ‘ನಾಗರಹಾವು' ಕೆರೆ ಹಾವಂತೂ ಅಲ್ಲ. ಹಾಗಂತ, ಹೆಬ್ಬಾವು ಕೂಡ ಅಲ್ಲವೇ ಅಲ್ಲ. ಇವೆರಡರ ನಡುವಿನ ಸಾಧಾರಣ ಹಾವು! ಹಾಗಾದರೆ ‘ಗ್ರಾಫಿಕ್ಸ್‌ ವಿಷ್ಣು, ನಾಗಿಣಿ ಅವತಾರದ ರಮ್ಯಾ ಮೋಡಿ ಮಾಡಿಲ್ಲವೇ?' ಎಂದರೆ ಉತ್ತರಿಸುವುದು ಕಷ್ಟ. ಗ್ರಾಫಿಕ್ಸ್‌ ಹಾವು, ರಮ್ಯಾ ಡ್ಯಾನ್ಸು, ವಿಷ್ಣು ಫೈಟು ನಿಮಗೆ ಖುಷಿ ಕೊಡಬಹುದು. ಯಾಕೆಂದರೆ ಇದು ಹೊಸತು ಮತ್ತು ಹಳೆಯದರ ಸಮ್ಮಿಲನ. ಐದು ವರ್ಷದ ಮಗುವಿಗೆ ಅಂಗಿ ಹೊಲಿಯಲು ಅಳತೆ ತೆಗೆದುಕೊಂಡ ಟೈಲರ್‌, ಹತ್ತು ವರ್ಷಗಳ ನಂತರ ಅದೇ ಕಟ್‌ ಪೀಸ್‌ಗಳನ್ನು ಜೋಡಿಸಿ ಅಂಗಿ ಸಿದ್ಧಪಡಿಸಿದರೆ ಹೇಗಿರುತ್ತದೆ? ದೇಹದ ಫಿಟ್ನೆಸ್‌ಗೆ ಹೊಂದಿಕೆ ಆಗೋದು ಕಷ್ಟಅಲ್ಲವೇ? ಈ ‘ನಾಗರಹಾವು' ಸ್ಥಿತಿಯೂ ಅದೇ! ಇಲ್ಲಿ ಐದು ವರ್ಷದ ಮಗು ದಿಗಂತ್‌, ಹತ್ತು ವರ್ಷಗಳ ನಂತರ ತಯಾರಾಗುವ ಷರ್ಟ್‌ ಗ್ರಾಫಿಕ್ಸ್‌ ವಿಷ್ಣುವರ್ಧನ್‌!
ಈ ಕಾರಣಕ್ಕೆ ಚಿತ್ರದ ಪ್ರತಿ ದೃಶ್ಯವೂ ಅಬ್ರಾಪ್ಟ್‌ ಆಗಿ ಕೊನೆಯಾಗುತ್ತದೆ. ಇದ್ದಕ್ಕಿದಂತೆ ದೃಶ್ಯ ಕಟ್‌ ಆಗಿ ಮತ್ತೊಂದು ದೃಶ್ಯ ಆರಂಭವಾಗುತ್ತದೆ. ಧಾರಾವಾಹಿ ಎಪಿಸೋಡ್‌'ಗಳಂತೆ ಕಟ್‌ ಆಗುವ ನಿರೂಪಣೆಯೇ ಚಿತ್ರದ ಮುಖ್ಯ ಕೊರತೆ. ‘ನಾಗರಹಾವು' ನೋಡಿದಾಗ ಒಳ್ಳೆಯ ಊಟ, ಆದರೂ ಯಾಕೋ ರುಚಿ ಕೆಟ್ಟಿದೆಯಲ್ಲ ಎಂಬ ಭಾವ ಮೂಡುತ್ತದೆ. ದೇವರ ದಿವ್ಯಶಕ್ತಿ ಕುಂದಿದಾಗ ಕ್ಷುದ್ರ ಶಕ್ತಿಗಳ ಅಬ್ಬರ ಹೆಚ್ಚಾಗುತ್ತದೆ. ಈ ವೇಳೆ ತಮ್ಮನ್ನು ನಂಬಿದ ಭೂಲೋಕವನ್ನು ರಕ್ಷಿಸಲು ಎಲ್ಲ ದೇವರು ಸೇರಿ ಒಂದು ಕಳಶ ಮಾಡಿ, ಅದನ್ನು ಭೂಮಂಡಲದಲ್ಲಿ ಸ್ಥಾಪಿಸುತ್ತಾರೆ. ಆ ಕಳಶ ಯಾರ ಕೈ ಸೇರುತ್ತದೋ ಅವರು ಮಹಾನ್‌ ಶಕ್ತಿವಂತರಾಗುತ್ತಾರೆ. ಈ ಕಳಶವನ್ನು ಕೈವಶ ಮಾಡಿಕೊಳ್ಳುವುದಕ್ಕೆ ಕ್ಷುದ್ರ ಶಕ್ತಿಗಳು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಭೂಲೋಕದ ಆ ಕಳಶವನ್ನು ವಂಶಪಾರಂಪರ್ಯವಾಗಿ ಕಾಪಾಡಿಕೊಂಡು ಬರುತ್ತಿರುವ ಶಿವಯ್ಯನ ಕುಟುಂಬವನ್ನೂ ನಾಶ ಮಾಡಿರುತ್ತಾರೆ. ಹಾಗಾದರೆ ಆ ಕಳಶ ಕ್ಷುದ್ರ ಶಕ್ತಿಗಳ ಕೈ ಸೇರುತ್ತದೆಯೇ? ನಾಗಿಣಿ ಪಾತ್ರದ ರಮ್ಯಾಗೂ ಆ ಕಳಶಕ್ಕೂ ಏನು ಸಂಬಂಧ? ನಾಗದೇವತೆ ರೂಪದ ರಮ್ಯಾ, ಹಾಡುಗಾರ ದಿಗಂತ್‌ ಮನೆ ಸೇರುವುದು ಯಾಕೆ? ಇಷ್ಟಕ್ಕೂ ಚಿತ್ರದ ಕೊನೆಯಲ್ಲಿ ವಿಷ್ಣು ಭರ್ಜಿ ಹಿಡಿದು ಅಬ್ಬರಿಸುವುದು ಯಾಕೆ? ಈ ಪ್ರಶ್ನೆಗಳನ್ನು ಮುಂದಿಡುತ್ತದೆ ‘ನಾಗರಹಾವು'.
ದಿವ್ಯಶಕ್ತಿಯ ನಾಗಮಣಿ, ದೇವರ ಪ್ರತಿಮೆಗಳ ಅಪಹರಣದ ಸುತ್ತ ಈಗಾಗಲೇ ಸಾಕಷ್ಟುಸಿನಿಮಾಗಳು ಬಂದುಹೋಗಿವೆ. ಕೋಡಿ ರಾಮಕೃಷ್ಣ ಅವರನ್ನು ದೊಡ್ಡ ನಿರ್ದೇಶಕರನ್ನಾಗಿಸಿದ ತೆಲುಗಿನಲ್ಲೇ ಅನುಷ್ಕಾ ಶೆಟ್ಟಿನಟನೆಯ ‘ಪಂಚಾಕ್ಷರಿ', ಜೂ. ಎನ್‌ಟಿಆರ್‌ ನಟನೆಯ ‘ಶಕ್ತಿ', ಶ್ರೀಕಾಂತ್‌ ಅಭಿನಯದ ‘ದೇವರಾಯ' ಇದೇ ಹಾದಿಯಲ್ಲೇ ಸಾಗಿದ ಚಿತ್ರಗಳು. ಈ ಚಿತ್ರಗಳ ಮತ್ತೊಂದು ರೂಪವೇ ‘ನಾಗರಹಾವು'! ಹೆಚ್ಚು ಕಮ್ಮಿ ‘ಪಂಚಾಕ್ಷರಿ'ಯನ್ನೇ ಹೋಲುವಂತಿರುವ ‘ನಾಗರಹಾವು' ಮೇಕಿಂಗ್‌ ದೃಷ್ಟಿಯಿಂದ ‘ಅನಕೊಂಡ' ಅಂತಲೇ ಹೇಳಬೇಕು. ಅಷ್ಟುಅದ್ಧೂರಿಯಾಗಿ ಮೂಡಿಬಂದಿದೆ. ನಿರ್ದೇಶಕರ ಈ ಸಾಹಸಕ್ಕೆ ನಿರ್ಮಾಪಕ ಸಾಜಿದ್‌ ಖುರೇಷಿ ಧಾರಾಳವಾಗಿ ಖರ್ಚು ಮಾಡಿದ್ದಾರೆ. ಆದರೆ ನಟ ದರ್ಶನ್‌ ಹಾಡು, ರಂಗಾಯಣ ರಘು ಪಾತ್ರ ಬಂದಿದ್ದು ಯಾಕೆಂಬುದಕ್ಕೆ ಇಲ್ಲಿ ಕಾರಣ ಸಿಗುವುದಿಲ್ಲ. ಹಾಗೆಯೇ ಕ್ಲೈಮ್ಯಾಕ್ಸ್‌ನಲ್ಲಿ ದಿಗಂತ್‌ ಇದ್ದಕ್ಕಿದ್ದಂತೆ ಮರೆಯಾತ್ತಾರೆ. ಇಲ್ಲಿಯ ತನಕ ಸೋಮಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್‌ ಇದೇ ಮೊದಲ ಬಾರಿಗೆ ಗಂಭೀರತೆಯನ್ನು ಧರಿಸಿದ್ದಾರೆ. ರಮ್ಯಾ ಎಂದಿನಂತೆ ನೋಡಲು ಚೆಂದ. ಅಘೋರಿ ಪಾತ್ರಧಾರಿ ಕಾಮಿಡಿ ಪೀಸ್‌ನಂತೆ ಕಾಣುತ್ತಾರೆ. ಸಾಯಿಕುಮಾರ್‌ ಇದ್ದಷ್ಟುಹೊತ್ತು ಗುಡುಗಿದ್ದಾರೆ. ಉಳಿದ ಪಾತ್ರಗಳು ಅಷ್ಟಕಷ್ಟೇ. ಆರಂಭಕ್ಕಿಂತ ವಿರಾಮದ ನಂತರ ಹೆಚ್ಚು ಆಪ್ತವಾಗುವ ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡವರಿಗೆ ನಿರಾಸೆ ನಿಶ್ಚಿತ. ಗುರುಕಿರಣ್‌ ಹಿನ್ನೆಲೆಸಂಗೀತ, ಎಚ್‌ಸಿ ವೇಣು ಕ್ಯಾಮೆರಾ, ಮುಕುಟ ಸಂಸ್ಥೆಯ ವಿಎಫ್‌ಎಕ್ಸ್‌ ತಂತ್ರಜ್ಞಾನ ಚಿತ್ರಕ್ಕೆ ಮೆರುಗು ತಂದಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!