’ಮಸ್ತ್ ಕಲಂದರ್’ ಕಲರ್’ಫುಲ್ ಆಗಿದೆಯಾ?

Published : Jun 23, 2018, 01:09 PM ISTUpdated : Jun 23, 2018, 01:10 PM IST
’ಮಸ್ತ್ ಕಲಂದರ್’ ಕಲರ್’ಫುಲ್ ಆಗಿದೆಯಾ?

ಸಾರಾಂಶ

’ಮಸ್ತ್ ಕಲಂದರ್’ ಚಿತ್ರ  ಪ್ರೀತಿ-ಪ್ರೇಮ, ವಂಚನೆ, ಮೋಸ, ಭಗ್ನಪ್ರೇಮದ ಸುತ್ತಲ ಹಳೇ ಸರಕು. ತಾಯಿ ಇಲ್ಲದೆ ಅಪ್ಪನ ಆಶ್ರಯದಲ್ಲಿ ಬೆಳೆದ ಹುಡುಗ ಕಥಾ ನಾಯಕ ರವಿ. ಹಾಗೆಯೇ, ತಂದೆಯಿಲ್ಲದೆ ಅಮ್ಮನ ಆಶ್ರಯದಲ್ಲಿ ಬೆಳೆದ ಹುಡುಗಿ ಶಶಿ. ಅವರಿಬ್ಬರ ಪ್ರೀತಿಯ ಆಟ, ಹುಡುಗಾಟದ ದಿಕ್ಕು ದೆಸೆ ಇಲ್ಲದ ಜರ್ನಿ ಇದು. 

ಹೆಸರು: ರವಿ, ವಯಸ್ಸು: 28, ಊರು: ಬೆಂಗಳೂರು. ಆತ ಮನೋರೋಗಿಗಳ ಆಸ್ಪತ್ರೆಯಿಂದ ತಪ್ಪಿಸಿಕೊಂಡವ. ಗೋಡೆಗಳ ಮೇಲೆ ಅಂಟಿಸಿರುವ ಆತನ ಭಾವ ಚಿತ್ರವುಳ್ಳ ಪೋಸ್ಟರ್ ಮೇಲೆ ಹಾಗಂತ ಬರೆಯಲಾಗಿದೆ. ಅಷ್ಟೇ ಯಾಕೆ, ಚಿತ್ರದ ಆರಂಭದಲ್ಲಿ ಆತನೇ ಹಾಗಂತ ಪರಿಚಯಿಸಿಕೊಳ್ಳುತ್ತಾನೆ.

ಇಷ್ಟಕ್ಕೂ ಆತ ಕಾಣೆಯಾಗಿದ್ದು ಯಾಕೆ, ಹೇಗೆ? ಆತನೇನು ನಿಜವಾಗಿಯೂ ಮನೋ ರೋಗಿಯಾ? ಅದು ಈ ಚಿತ್ರದ ಕತೆಯ ಒಳ ತಿರುಳು ಮತ್ತು ತಿರುವು. ಹಾಗಂತ, ಇಲ್ಲೇನೋ ಬಹುದೊಡ್ಡ ಸಸ್ಪೆನ್ಸ್ ಸಂಗತಿಯೊಂದು ಇರಬಹುದೇ ಅಂತ ತಲೆಗೆ ಹುಳ ಬಿಟ್ಟು ಕೊಳ್ಳಬೇಕಿಲ್ಲ. ಇದು ಪ್ರೀತಿ-ಪ್ರೇಮ, ವಂಚನೆ, ಮೋಸ, ಭಗ್ನಪ್ರೇಮದ ಸುತ್ತಲ ಹಳೇ ಸರಕು. ತಾಯಿ ಇಲ್ಲದೆ ಅಪ್ಪನ ಆಶ್ರಯದಲ್ಲಿ ಬೆಳೆದ ಹುಡುಗ ಕಥಾ ನಾಯಕ ರವಿ. ಹಾಗೆಯೇ, ತಂದೆಯಿಲ್ಲದೆ ಅಮ್ಮನ ಆಶ್ರಯದಲ್ಲಿ ಬೆಳೆದ ಹುಡುಗಿ ಶಶಿ. ಅವರಿಬ್ಬರ ಪ್ರೀತಿಯ ಆಟ, ಹುಡುಗಾಟದ ದಿಕ್ಕು ದೆಸೆ ಇಲ್ಲದ ಜರ್ನಿ ಇದು. ಇಲ್ಲಿ  ಕೆಲಸವಿಲ್ಲದೆ ತಿರುಗಾಡುವವನು ರವಿ. ಮತ್ತೊಂದೆಡೆ, ಬದುಕಿಗೊಂದು ಕೆಲಸ ಬೇಕು, ಅದಕ್ಕಾಗಿ ಒಂದು ಕೆಲಸ ಮಾಡು ಅಂತ ಬುದ್ಧಿ ಹೇಳುವವಳು ನಾಯಕಿ.

ಅವಳ ಮಾತಿಗೆ ಕಟ್ಟುಬಿದ್ದು ರವಿ ಕೆಲಸಕ್ಕೂ ಹೋಗುತ್ತಾನೆ. ಕೆಲಸ ಸೇರಿದ ಮರುದಿನವೇ ಅದಕ್ಕೆ ಗುಡ್‌ಬೈ ಹೇಳಿ ಬರುತ್ತಾನೆ. ಅದು ಅವನ ಚಾಳಿ. ಆತನಿಗೆ ಶಶಿ ಮತ್ತೆ ಬುದ್ದಿ ಹೇಳುತ್ತಾಳೆ. ಆದರೂ ರವಿ, ತನ್ನ ಮಾತು ಕೇಳದೇ ಹೋದಾಗ ಪ್ರೀತಿಯನ್ನೇ ಧಿಕ್ಕರಿಸಿ ಬರುತ್ತಾಳೆ ಶಶಿ. ಮುಂದಿನದು ಕ್ಲೈಮ್ಯಾಕ್ಸ್. ಹಳಿ ಇಲ್ಲದೆ ಓಡುವ ರೈಲಿನ ಹಾಗೆ, ಇದು ಕತೆ ಇಲ್ಲದೆ ಓಡುವ ಸಿನಿಮಾ. ಟೈಟಲ್‌ಗೂ ಚಿತ್ರದ ಕತೆಗೂ ಸಂಬಂಧವೇ ಇಲ್ಲ. ಆದರೂ, ಇದು ಒಂದು ಹುಡುಗಿಯನ್ನು ಪ್ರೀತಿಸುವುದಕ್ಕಾಗಿ ನಾಯಕ ನಡೆಸುವ ವ್ಯರ್ಥ ಪ್ರಲಾಪದ ಹಳೇ ಪುರಾಣ. ಇಲ್ಲಿ ನಿರ್ದೇಶಕರ ಸಾಹಸವೂ ಅದೇ ಆಗಿದೆ.

ಇದೊಂದು ಹೊಸತನವಿಲ್ಲದ ದುಸ್ಸಾಹಸದ ಪ್ರಯತ್ನ. ಬಿಗಿಹಿಡಿತವಿಲ್ಲದ ನಿರೂಪಣೆ, ಹೊಂದಾಣಿಕೆ ಇಲ್ಲದ ದೃಶ್ಯಗಳ ಚೌಕಟ್ಟು, ಎಲ್ಲವೂ ಪ್ರೇಕ್ಷಕರ ಪಾಲಿಗೆ ಬೋರೋ ಬೋರ್. ಹಾಗೆ ನೋಡಿದ್ರೆ, ಇಲ್ಲೊಂದಿಷ್ಟು ರಿಲ್ಯಾಕ್ಸ್ ಸಿಗುವುದು ಪ್ರೇಮ್ ಕುಮಾರ್ ಸಂಗೀತದ ಮೂಲಕ. ಮಧ್ಯಂತರದ ವೇಳೆಗೆ ಬರುವ ‘ಚೆಂದದ ಅಪರಾಧವೊಂದು...’ ಹಾಡಿನ ಸಾಹಿತ್ಯ ಮನ ತಟ್ಟುತ್ತದೆ. ಅದು ಬಿಟ್ಟರೆ ಕಲಾವಿದರ ಅಭಿನಯ, ವಿನ್ಸೆಂಟ್ ಛಾಯಾಗ್ರಹಣ ಎಲ್ಲವೂ ಸಹಿಸಿಕೊಳ್ಳುವುದಕ್ಕೆ ಕಷ್ಟ. ನಾಯಕ ನಿತಿನ್‌ಗೆ ಇದು ಮೊದಲ ಸಿನಿಮಾ. ನಟನೆ, ನೃತ್ಯ ಎರಡು ಹೊಸತು.

ಅವರೆಡರ ಕಲಿಕೆ ಇನ್ನಷ್ಟು ಬೇಕಿದೆ. ನಾಯಕಿ ಆರೋಹಿ, ನಾಯಕನ ತಂದೆ ಪಾತ್ರಧಾರಿ ಶ್ರೀಧರ್, ನಾಯಕಿ ತಾಯಿ ಪಾತ್ರಧಾರಿ ಸ್ವಾತಿ ಅಭಿನಯ ಇಷ್ಟವಾಗುತ್ತದೆ. ಉಳಿದಿದ್ದು ಬರಿ ಬೋರು, ಬೇಸರ. ಕಟ್ಟಕಡೆಗೂ ಕಾಡುವ ಪ್ರಶ್ನೆ, ಪ್ರೀತಿಗಾಗಿ ಇಷ್ಟೆಲ್ಲ ಬೇಕಿತ್ತಾ? 

ಚಿತ್ರ : ಮಸ್ತ್ ಕಲಂದರ್ ತಾರಾಗಣ: ನಿತಿನ್, ಆರೋಹಿ ನಾರಾಯಣ್, ಶ್ರೀಧರ್, ಸ್ವಾತಿ, ಗಿರಿ, ರಾಕ್‌ಲೈನ್ ಸುಧಾಕರ್, ನಿರ್ದೇಶನ: ರಾಜ ಕುಮಾರ್ ಆದಿತ್ಯ ಸಂಗೀತ : ಪ್ರೇಮ್ ಕುಮಾರ್ ಛಾಯಾಗ್ರಹಣ: ವಿನ್ಸೆಂಟ್ ನಿರ್ಮಾಣ: ಚಂದ್ರು, ಕುಮಾರ ಸ್ವಾಮಿ, ಲಿಯಾ ಕೆ. ರೇಟಿಂಗ್: **

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟಿ ಮಂಜು ಭಾಷಿಣಿ ಫ್ಯಾನ್ಸ್​ ಕಣ್ಣಿಗೆ ಕಾಣಿಸಿದ್ರೆ ನಿಮ್​ ಕಥೆ ಗೋವಿಂದ: Bigg Boss ಡಾಗ್​ ಸತೀಶ್​ಗೆ ಯಾಕಿಂತ ಎಚ್ಚರಿಕೆ?
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!