
ಸ್ಯಾಂಡಲ್‌ವುಡ್ ಇರಲಿ, ಮಾಲಿವುಡ್ ಇರಲಿ.. ಕೆಲವು ಕಾಂಬಿನೇಷನ್‌ಗಳ ಅಂದ್ರೆ ಹೀಗೇನೆ!
ಕನ್ನಡದಲ್ಲಿ ಯೋಗರಾಜ್ ಭಟ್- ಗಣೇಶ್ ಜೋಡಿ 'ಮುಂಗಾರು ಮಳೆ' ಮೂಲಕ ಮಾಡಿದ್ದ ಮೋಡಿಯಂತೆ ಮಲಯಾಳಂ ಚಿತ್ರರಂಗದಲ್ಲಿ ಅಂತಹದ್ದೇ ಒಂದು ಮ್ಯಾಜಿಕ್ ಮಾಡಿದ್ದ ಜೋಡಿ ಅಂದ್ರೆ ಅದು ನಟ ನಿವಿನ್ ಪೌಲಿ (Nivin Pauly) ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ (Alphonse Puthren). 'ನೇರಂ' ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಈ ಜೋಡಿ, 'ಪ್ರೇಮಂ' (Premam) ಚಿತ್ರದ ಮೂಲಕ ಇಡೀ ದಕ್ಷಿಣ ಭಾರತವನ್ನೇ ಪ್ರೀತಿಯ ಅಮಲಿನಲ್ಲಿ ತೇಲಿಸಿದ್ದ ಈ ಜೋಡಿ ಈಗ ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಒಂದಾಗಿದೆ. ಈ ಸುದ್ದಿ ಕೇಳಿ ಮಲಯಾಳಂ ಸಿನಿರಸಿಕರು ಮಾತ್ರವಲ್ಲದೆ, ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಸಂಭ್ರಮಿಸುತ್ತಿದೆ.
ಹೌದು, 'ಪ್ರೇಮಂ' ಅಂತಹ ಎವರ್‌ಗ್ರೀನ್ ಹಿಟ್ ಸಿನಿಮಾ ನೀಡಿದ ನಂತರ ಈ ಜೋಡಿ ಯಾವಾಗ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಹಲವರಲ್ಲಿ ಇತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಎನ್ನಬಹುದು. ಈ ಹೊಸ ಚಿತ್ರಕ್ಕೆ 'ವಿಜಯಂ' ಎಂದು ಹೆಸರಿಡಲಾಗಿದ್ದು, ಇದು ನಟ ನಿವಿನ್ ಪೌಲಿ ಅವರ ವೃತ್ತಿಜೀವನದ ಮೈಲಿಗಲ್ಲಿನ 50ನೇ ಸಿನಿಮಾ ಆಗಿರುವುದು ವಿಶೇಷ. ಹತ್ತು ವರ್ಷಗಳ ಬಳಿಕ ಇಬ್ಬರು ದಿಗ್ಗಜರು ಒಂದಾಗುತ್ತಿರುವ ಕಾರಣಕ್ಕೆ ಸಹಜವಾಗಿಯೇ ಚಿತ್ರ ಭಾರಿ ಹೈಪ್ ಕ್ರಿಯೇಟ್ ಮಾಡಿದೆ, ನಿರೀಕ್ಷೆ ಸೃಷ್ಟಿಸಿದೆ.
ಈ ಬಾರಿ ರೇಸಿಂಗ್ ಲೋಕದ ಕಥೆ!
ಆಲ್ಫೋನ್ಸ್ ಪುತ್ರೇನ್ ಅಂದ್ರೆ ನಮಗೆ ನೆನಪಾಗೋದು ಸುಂದರವಾದ ಲವ್ ಸ್ಟೋರಿಗಳು. ಆದರೆ ಈ ಬಾರಿ ಅವರು ತಮ್ಮ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. 'ವಿಜಯಂ' ಚಿತ್ರವು ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಮೂಡಿಬರಲಿದ್ದು, ಒಂದು ರೋಚಕ ಕಥಾಹಂದರವನ್ನು ಹೊಂದಿದೆ. ಆಲ್ಫೋನ್ಸ್ ಅವರೇ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ, ಸಂಕಲನದ (Editing) ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅಂದಹಾಗೆ, ಇತ್ತೀಚೆಗಷ್ಟೇ ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಈ ಚಿತ್ರದ ಟೈಟಲ್ ಲಾಂಚ್ ಅದ್ಧೂರಿಯಾಗಿ ನಡೆದಿದೆ.
ಚಿತ್ರಕ್ಕೆ ಸಂಗೀತ ನೀಡಲು ಪ್ರತಿಭಾವಂತ ಸಂಗೀತ ನಿರ್ದೇಶಕ ಸ್ಟೀವ್ ಕೊಟ್ಟೂರ್ ಸಜ್ಜಾಗಿದ್ದಾರೆ. ಇವರು ಈ ಹಿಂದೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ 'ಸ್ಟಾರ್‌ಡಮ್' ವೆಬ್ ಸರಣಿಯ ಸಂಗೀತ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು ಈ ಚಿತ್ರವನ್ನು 'ಪೌಲಿ ಜೂನಿಯರ್ ಪಿಕ್ಚರ್ಸ್' ಮತ್ತು 'ಸಿನೆಹೋಲಿಕ್ಸ್' ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಹಾಗೂ ಸುನಿಲ್ ರಾಮದಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ನಿವಿನ್ ಪೌಲಿ ಅವರ ಭರ್ಜರಿ ಕಮ್‌ಬ್ಯಾಕ್!
ಇತ್ತೀಚೆಗಷ್ಟೇ ನಿವಿನ್ ಪೌಲಿ ಅಭಿನಯದ 'ವರ್ಷಂಗಳ್ಕ್ಕು ಶೇಷಂ' (Varshangalkku Shesham) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಬಹಳ ಕಾಲದ ಬಳಿಕ ನಿವಿನ್ ಅವರಿಗೆ ಈ ಸಿನಿಮಾ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಸದ್ಯ ಅದೇ ಹುಮ್ಮಸ್ಸಿನಲ್ಲಿರುವ ನಿವಿನ್, ತಮ್ಮ 50ನೇ ಸಿನಿಮಾವನ್ನು ಆಲ್ಫೋನ್ಸ್ ಅವರೊಂದಿಗೆ ಮಾಡುತ್ತಿರುವುದು ಅವರ ಕೆರಿಯರ್‌ಗೆ ಹೊಸ ಚೈತನ್ಯ ನೀಡಿರುವುದರ ಜೊತೆಗೆ ಸಿನಿಪ್ರೇಕ್ಷಕರಲ್ಲಿ ಹೊಸ ಭರವಸೆ ಮೂಡಿಸಿದೆ.
ಒಟ್ಟಾರೆಯಾಗಿ 'ವಿಜಯಂ' ಸಿನಿಮಾ ಕೇವಲ ಹೆಸರಿಗೆ ಮಾತ್ರವಲ್ಲದೆ, ಬಾಕ್ಸ್ ಆಫೀಸ್‌ನಲ್ಲೂ ದೊಡ್ಡ ವಿಜಯ ಸಾಧಿಸಲಿದೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಉಳಿದಂತೆ, ಚಿತ್ರದ ಮಿಕ್ಕ ತಾರಾಗಣದ ಬಗ್ಗೆ ಮಾಹಿತಿ ಪಡೆಯಲು ಸಿನಿರಸಿಕರು ಕುತೂಹಲದಿಂದ ಕಾಯುತ್ತಿದ್ದಾರೆ. ಸಿನೆಮಾ ಅಂದ್ರೆ ಬರಿ ಎಂಟರ್ಟೈನ್ಮೆಂಟ್ ಅಲ್ಲ, ಅದು ಅಭಿಮಾನಿಗಳ ಎಮೋಷನ್ ಎಂಬುದನ್ನು ಈ ಜೋಡಿ ಮತ್ತೊಮ್ಮೆ ಸಾಬೀತು ಮಾಡಲು ರೆಡಿಯಾಗಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.