ವಿಭಿನ್ನ ಕಥಾ ಹಂದರದ ಮೂಲಕ ಚಂದನವನದಲ್ಲೀಗ ಸಾಕಷ್ಟುಸುದ್ದಿಯಲ್ಲಿರುವ ಚಿತ್ರ‘ಮಹಿರ’. ಈ ವಾರ ತೆರೆ ಕಾಣುತ್ತಿರುವ ಮೂರು ಚಿತ್ರಗಳ ಪೈಕಿ ಇದು ಕೂಡ ಒಂದು. ಸಸ್ಪೆನ್ಸ್ -ಥ್ರಿಲ್ಲರ್ ಕಥಾ ಹಂದರದ ಚಿತ್ರ. ಜತೆಗೆ ಅಮ್ಮ-ಮಗಳ ಸೆಂಟಿಮೆಂಟ್ ಇದರ ಹೈಲೈಟ್ಸ್. ಇದೇ ಕಾರಣಕ್ಕೆ ಚಿತ್ರದ ಟ್ರೇಲರ್ ಸಾಕಷ್ಟುಸದ್ದು ಮಾಡಿದೆ. ಕುತೂಹಲದ ಕತೆಯ ಜತೆಗೆ ನಿರ್ದೇಶನ ಮತ್ತು ನಿರ್ಮಾಣದ ಶೈಲಿಗೂ ಅಪಾರ ಮೆಚ್ಚುಗೆ ಸಿಕ್ಕಿದೆ. ಇದರ ನಿರ್ಮಾಣದ ಹಿಂದೆ ಹಲವು ಮಂದಿ ಲಂಡನ್ ನಿವಾಸಿ ಕನ್ನಡಿಗರಿದ್ದಾರೆ. ಅವರಲ್ಲಿ ಸಾಫ್ಟ್‌ವೇರ್ ಉದ್ಯೋಗಿ ವಿವೇಕ್ ಕೊಂಡಪ್ಪ ಕೂಡ ಒಬ್ಬರು. ಚಿತ್ರದ ವಿಶೇಷತೆ, ಸಿನಿಮಾ ಜರ್ನಿ ಕುರಿತು ಅವರೊಂದಿಗೆ ಮಾತುಕತೆ.
ದೇಶಾದ್ರಿ ಹೊಸ್ಮನೆ
ನಿಮ್ಮ ಊರು, ಉದ್ಯೋಗ, ಇತ್ಯಾದಿಯ ಕತೆ ಏನು?
undefined
ಬೆಂಗಳೂರು ಸಮೀಪದ ನೆಲಮಂಗಲ ನನ್ನ ಹುಟ್ಟೂರು. ಅಲ್ಲಿಯೇ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದೆ. ಮುಂದೆ ಕಾಲೇಜು ಶಿಕ್ಷಣಕ್ಕೆ ಬೆಂಗಳೂರಿಗೆ ಬಂದೆ. ಇಂಜಿನಿಯರಿಂಗ್ ಮುಗಿಸಿ, ಇಸ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆದೆ. ಉದ್ಯೋಗದ ಮೂಲಕವೇ ಒಂದಷ್ಟುವರ್ಷ ಸ್ಕಾಟ್‌ಲೆಂಡ್ ಸೇರಿ ಹಲವು ದೇಶಗಳನ್ನು ಸುತ್ತಿದೆ. ಈಗ ಗೆಳೆಯರ ಜತೆಗೆ ಸೇರಿ ನಮ್ಮದೇ ಫಿಂಟೆಕ್ ಹೆಸರಿನ ಸ್ಟಾರ್ಟಪ್ ಶುರು ಮಾಡಿಕೊಂಡು ಇಂಗ್ಲೆಂಡ್ ನಿವಾಸಿ ಆಗಿರುವೆ. ಇದಿಷ್ಟುನನ್ನ ಬಯೋಡೇಟಾ.
ಸ್ಟಾಫ್ಟ್‌ವೇರ್ ಉದ್ಯೋಗಿಯಾದ ನಿಮಗೆ ಸಿನಿಮಾ ನಿರ್ಮಾಣ ಮಾಡ್ಬೇಕು ಅಂತೆನಿಸಿದ್ದೇಕೆ?
ಸಿನಿಮಾ ಒಂದು ಆಕರ್ಷಕ ಜಗತ್ತು. ಅದು ಯಾರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳದೆ ಬಿಡುವುದಿಲ್ಲ. ಅದರಲ್ಲಿ ನಾನು ಕೂಡ ಒಬ್ಬ. ಕಾಲೇಜು ದಿನಗಳಿದ್ದಾಗಲೇ ಸಿನಿಮಾ ನೋಡುವ ವಿಪರೀತ ಹುಚ್ಚಿತ್ತು. ಅದೇ ಕಾರಣಕ್ಕೆ ಸಿನಿಮಾದ ವಿವಿಧ ಆಯಾಮಗಳಲ್ಲೂ ಕೆಲಸ ಮಾಡಬೇಕೆನ್ನುವ ಆಸೆ ಚಿಗುರಿತ್ತು. ಆದರೆ ಉದ್ಯೋಗದ ಕಾರಣಕ್ಕೆ ವಿದೇಶಕ್ಕೆ ಹೋದೆ. ಅದೇ ಕಾರಣಕ್ಕೆ ನನ್ನೊಳಗಿನ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದ ಕನಸು ನನಸಾಗದೆ ಉಳಿದು ಹೋಯಿತು. ಒಂದಷ್ಟುವರ್ಷಗಳು ಹಾಗೆಯೇ ಕಳೆದು ಹೋದವು. ಆನಂತರವೀಗ ನಿರ್ದೇಶಕ ಮಹೇಶ್ ಗೌಡ ಪರಿಚಯದೊಂದಿಗೆ ಆ ಕನಸು ನನಸಾದ ಸಂಭ್ರಮದಲ್ಲಿದ್ದೇನೆ, ಖುಷಿ ಆಗುತ್ತಿದೆ.
‘ಮಹಿರ’ದ ನಿರ್ಮಾಪಕರಲ್ಲಿ ನೀವು ಕೂಡ ಒಬ್ಬರಾಗಿದ್ದು ಹೇಗೆ ಮತ್ತು ಯಾಕೆ?
ನಿರ್ದೇಶಕ ಮಹೇಶ್ ಗೌಡ ಇದಕ್ಕೆ ಮೂಲ ಕಾರಣ. ಅವರ ಪರಿಚಯದ ಮೂಲಕ ಚಿತ್ರಕ್ಕೆ ಮೊದಲು ನಿರ್ಮಾಪಕನಾಗಿ ಎಂಟ್ರಿ ಆಗಿದ್ದೇ ನಾನು. ಆ ನಂತರ ಬೇರೆಯವರು ಬಂದರು. ಅವರೆಲ್ಲರೂ ಲಂಡನ್ ನಿವಾಸಿಗಳು. ಕೆಲವರು ಗೆಳೆತನದ ಕಾರಣಕ್ಕೆ ಕೈಜೋಡಿಸಿದರು. ಮತ್ತೆ ಕೆಲವರು ಕತೆ ಚೆನ್ನಾಗಿದೆ, ಪ್ರೇಕ್ಷಕರಿಗೂ ಹಿಡಿಸುತ್ತೆ ಎನ್ನುವ ವಿಶ್ವಾಸದಲ್ಲಿ ಹಣ ತೊಡಗಿಸಿದರು. ಇದರಲ್ಲಿ ಬರೀ ಕನ್ನಡಿಗರು ಮಾತ್ರವಲ್ಲ, ತೆಲುಗು, ತಮಿಳು, ಮರಾಠಿ ಸೇರಿ ವಿವಿಧ ಭಾಷಿಕ ಸ್ನೇಹಿತರು ಇದ್ದಾರೆ. ಅವರೆಲ್ಲ ಲಾಭ-ನಷ್ಟಎನ್ನುವುದಕ್ಕಿಂತ ಒಂದೊಳ್ಳೆ ಸಿನಿಮಾ ಮಾಡುವ ಬಯಕೆಯಲ್ಲಿ ಹಣ ತೊಡಗಿಸಿದ್ದಾರೆ. ಅವರ ನಿರೀಕ್ಷೆ ಹುಸಿಯಾಗಿಲ್ಲ ಎನ್ನುವ ವಿಶ್ವಾಸವೂ ಇದೆ. ಅವರ ಮೊದಲು ನೋಡಿದ್ದು ಕತೆ. ಆ ಕತೆ ನನಗೂ ಇಷ್ಟವಾಗಿ ನಿರ್ಮಾಣಕ್ಕಿಳಿದೆ.
‘ಮಹಿರ ’ಅಂದ್ರೇನು ಮತ್ತು ಚಿತ್ರದ ಕತೆಯ ವಿಶೇಷತೆ ಏನು?
ಮಹಿರ ಎನ್ನುವುದು ಸಂಸ್ಕೃತ ಪದ. ಓರ್ವ ಬುದ್ಧಿವಂತ ಮತ್ತು ಚಾಣಾಕ್ಷ ಮಹಿಳೆ ಎಂದರ್ಥ. ಅದಕ್ಕೆ ತಕ್ಕಂತೆಯೇ ಕಥಾ ಹಂದರವಿರುವ ಸಸ್ಪೆನ್ಸ್ -ಥ್ರಿಲ್ಲರ್ ಸಿನಿಮಾ ಇದು. ಅಮ್ಮ-ಮಗಳ ಸೆಂಟಿಮೆಂಟ್ ಇಲ್ಲಿ ಪ್ರಧಾನ. ಆ್ಯಕ್ಷನ್ ಇದೆ. ಹಾಗೆಯೇ ಕಾಮಿಡಿಯೂ ಇದೆ. ಅದರ ಜತೆಗೆ ರೋಚಕತೆಯ ತನಿಖೆಯ ಜಾಡು ಸಿನಿಮಾದ ಹೈಲೈಟ್ಸ್. ಟ್ವಿಸ್ಟ್ ಆ್ಯಂಡ್ ಟರ್ನ್ ಚಿತ್ರ ಪ್ರತಿ ದೃಶ್ಯದಲ್ಲೂ ನೋಡುಗರನ್ನು ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಏನೋ ಸಂದೇಶ ಹೇಳುತ್ತೇವೆ ಎನ್ನುವುದಕ್ಕಿಂತ ರಂಜನೀಯವೇ ನಮ್ಮ ಆದ್ಯತೆ ಆಗಿತ್ತು. ಹಾಲಿವುಡ್ ಶೈಲಿಯಲ್ಲಿ ಈ ಸಿನಿಮಾ ಮಾಡಿದ್ದೇವೆ. ಕೆಲವು ದಿನಗಳ ಹಿಂದಷ್ಟೇ ಲಂಡನ್‌ನಲ್ಲಿ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಅಲ್ಲಿಗೆ ನಿರ್ಮಾಪಕರೆಲ್ಲರೂ ಬಂದಿದ್ದರು. ಒಳ್ಳೆಯ ಸಿನಿಮಾ ಮಾಡಿದ್ದೀರಿ ಅಂತ ಹೇಳಿದರು. ಕೊನೆಯದಾಗಿ ಪ್ರೇಕ್ಷಕರಿಂದ ಯಾವ ತರಹದ ಅಭಿಪ್ರಾಯ ಬರುತ್ತದೆಯೋ ಅಂತ ನಮಗೂ ಕುತೂಹಲವಿದೆ.
ಚಿತ್ರದ ತಾರಾಗಣಕ್ಕೆ ಹೊಸಬರೇ ಬೇಕೆನಿಸಿದ್ದು ಯಾಕೆ?
ಚಿತ್ರ ತಂಡದ ಪ್ರಕಾರ ಕತೆಯೇ ಈ ಚಿತ್ರದ ನಿಜವಾದ ಹೀರೋ. ಅದಕ್ಕೆ ತಕ್ಕಂತೆಯೇ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳೋಣ ಅಂತ ನಿರ್ಧರಿಸಿದ್ದೇವು. ಆ ಪ್ರಕಾರ ಮೊದಲು ಆಯ್ಕೆ ಮಾಡಿಕೊಂಡಿದ್ದು ವರ್ಜೀನಿಯಾ ರೊಡ್ರಿಗಸ್ ಅವರನ್ನು. ಚಿತ್ರದಲ್ಲಿ ಅವರು ಓರ್ವ ಸಿಬಿಐ ಅಂಡರ್ ಕಾಪ್. ಆ ಪಾತ್ರಕ್ಕೆ ಖಡಕ್ ಆಗಿ ಅಭಿನಯಿಸುವ ನಟಿಯ ಅವಶ್ಯಕತೆಯಿತ್ತು. ಆ ನಿಟ್ಟಿನಲ್ಲಿ ನಾವು ಹುಡುತ್ತಿದ್ದಾಗ ನಿರ್ಮಾಪಕ ಅವಿನಾಶ್ ಶೆಟ್ಟಿಮೂಲಕ ನಮ್ಮ ತಂಡಕ್ಕೆ ಸೇರಿದವರು ರೊಡ್ರಿಗಸ್. ಇನ್ನು ಮತ್ತೊರ್ವ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಸೀರಿಯಸ್ ಅಷ್ಟೇ ಕಾಮಿಡಿ ಮಾಡುವ ನಟ ಬೇಕಿತ್ತು. ಆಗ ನಮಗೆ ಸೂಕ್ತ ಎನಿಸಿದ್ದು ರಾಜ್.ಬಿ. ಶೆಟ್ಟಿ. ಇನ್ನು ಮಗಳ ಪಾತ್ರಕ್ಕೆ ಚೈತ್ರಾ ಆಚಾರ್ಯ ಆಡಿಷನ್ ಮೂಲಕ ಆಯ್ಕೆಯಾದರು. ಬಾಲಾಜಿ ಮನೋಹರ್ ಕೂಡ ನಮ್ಮದೇ ಆಯ್ಕೆಯಂತೆ ತಂಡದಲ್ಲಿ ಒಬ್ಬರಾದರು. ನಾವು ಅಂದುಕೊಂಡಂತೆ ಪ್ರತಿಯೊಬ್ಬರ ಅಭಿನಯವೂ ಅದ್ಭುತವಾಗಿದೆ.
ಉದ್ಯೋಗದ ನಡುವೆ ಸಿನಿಮಾ ನಿರ್ಮಾಣದ ಅನುಭವ ಹೇಗಿತ್ತು?
ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ ಅಂದಾಗಲೇ ಕೆಲವರು ನಮ್ಮನ್ನು ಎಚ್ಚರಿಸಿದ್ದರು. ಅದನ್ನು ತಲೆಯಲ್ಲಿಟ್ಟುಕೊಂಡೇ ಸಿನಿಮಾ ನಿರ್ಮಾಣದ ಪಯಣ ಶುರುವಾಯಿತು. ನಾನೇ ಹೆಚ್ಚು ಜವಾಬ್ದಾರಿ ತೆಗೆದುಕೊಂಡಿದ್ದರಿಂದ ಸುಮಾರು ಎರಡ್ಮೂರು ತಿಂಗಳು ಕೆಲಸಕ್ಕೆ ರಜೆ ತೆಗೆದುಕೊಂಡು ಇಲ್ಲಿಗೆ ಬಂದೆ. ಒಟ್ಟು 30 ರಿಂದ 40 ದಿನಗಳ ಚಿತ್ರೀಕರಣ ಅವಧಿ ಫಿಕ್ಸ್ ಆಗಿತ್ತು. ಬೆಂಗಳೂರು, ನೆಲಮಂಗಲ, ಮಂಗಳೂರು ವಿಮಾನ ನಿಲ್ದಾಣ ಹೀಗೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯಿತು. ಎಲ್ಲೂ ಯಾವುದೇ ತರಹದಲ್ಲೂ ನಮಗೆ ಸಮಸ್ಯೆ ಆಗಲಿಲ್ಲ. ನಾನಾ ಕಾರಣಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ತಡವಾಯಿತು. ಅಷ್ಟಾಗಿಯೂ ನಮ್ಮ ಪ್ಲ್ಯಾನ್ ಪ್ರಕಾರವೇ ಸಿನಿಮಾ ರೆಡಿ ಆಗಿ ತೆರೆಗೆ ಬರುತ್ತಿದೆ.
ಅಮ್ಮ-ಮಗಳ ಸೆಂಟಿಮೆಂಟ್ ಸಿನಿಮಾದ ಹೈಲೈಟ್ಸ್ ಅಂತೀರಿ, ಏನದು ವಿಶೇಷ?
ಕತೆಯ ತಿರುಳು ಅದು.ಅದೇನು ಎನ್ನುವುದೇ ಕ್ಲೈಮ್ಯಾಕ್ಸ್. ಆದ್ರೆ ಕತೆಯ ಈ ಎಳೆಯನ್ನು ತುಂಬಾ ವಿಭಿನ್ನವಾಗಿ ತೋರಿಸಿದ್ದೇವೆ ಎನ್ನುವ ಹೆಮ್ಮೆಯಿದೆ. ಅನ್ಯೂನ್ಯವಾಗಿ ಬದುಕುವ ಅಮ್ಮ-ಮಗಳ ನಡುವೆಯೂ ಕೆಲವು ವ್ಯತ್ಯಾಸಗಳು ಆಗುತ್ತವೆ. ಅವು ಇಲ್ಲಿ ಯಾಕಾಗಿ ಆದವು, ಆನಂತರ ಅವರಿಬ್ಬರ ಸಂಬಂಧ ಏನಾಯಿತು ಎನ್ನುವುದೇ ಈ ಚಿತ್ರದ ಮುಖ್ಯಕತೆ.
ಈ ಸಿನಿಮಾವನ್ನು ಪ್ರೇಕ್ಷಕರು ಯಾಕಾಗಿ ನೋಡಬೇಕು?
ಒಳ್ಳೆಯ ಕತೆ ಕೊಟ್ಟರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆನ್ನುವ ಬಲವಾದ ನಂಬಿಕೆ ಮೇಲೆ ಈ ಸಿನಿಮಾ ಮಾಡಿದ್ದೇವೆ.ಅಂತಹ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ತುಂಬಾ ಹೊಸತಾದ ಅಂಶಗಳು ಚಿತ್ರದಲ್ಲಿವೆ. ಮೊದಲ ಚಿತ್ರವಾದರೂ ನಿರ್ದೇಶಕ ಮಹೇಸ್ ಗೌಡ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ನಿರೂಪಿಸಿದ ರೀತಿ ಅದ್ಭುತವಾಗಿದೆ. ಕತೆಗೆ ಅಗತ್ಯವಿರುವಷ್ಟುಬಂಡವಾಳವನ್ನು ಹಾಕಿದ್ದೇವೆ. ನೀಲಿಮಾ ಅವರ ಸಂಗೀತ, ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಛಾಯಾಗ್ರಹಣವೂ ಸೊಗಸಾಗಿದೆ. ಇದೆಲ್ಲ ಕಾರಣಕ್ಕೆ ಪ್ರೇಕ್ಷಕರು ಬಂದು ಸಿನಿಮಾ ನೋಡಬೇಕು. ನೀವು ಕೊಟ್ಟಕಾಸಿಗೆ ಮೋಸ ಆಗುವುದಿಲ್ಲ ಎನ್ನುವ ಭರವಸೆ ನನ್ನದು.
ಸಿನಿಮಾ ಬಿಡುಗಡೆಯ ಸಿದ್ಧತೆ ಹೇಗಿದೆ, ಎಲ್ಲೆಲ್ಲಿ ಸಿನಿಮಾ ರಿಲೀಸ್?
ರಾಜ್ಯಾದ್ಯಂತ ಎನ್. ಕುಮಾರ್ ಚಿತ್ರದ ವಿತರಣೆಯ ಹೊಣೆ ಹೊತ್ತಿದ್ದಾರೆ. ಸ್ಯಾಂಡಲ್‌ವುಡ್ ನೆಟ್ ಮೂಲಕ ಯುಕೆ, ಯುಎಸ್‌ಎ, ಕೆನಡಾ ಹಾಗೂ ಆಸ್ಚೆ್ರೕಲಿಯಾದಲ್ಲೂ ಬಿಡುಗಡೆ ಆಗುತ್ತಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹೊಸಬರ ಚಿತ್ರಕ್ಕೆ ಈ ಮಟ್ಟದ ಸಹಾಕರ ಸಿಕ್ಕಿರುವುದು ಖುಷಿ ಕೊಟ್ಟಿದೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಿದರೆ ಮತ್ತಷ್ಟುಸಿನಿಮಾ ಮಾಡುವ ಶಕ್ತಿ ನಮಗೂ ಬರುತ್ತದೆ.