ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ: ಚಂದನ್ ನಡೆಗೆ ನೆಟ್ಟಿಗರು ಗರಂ

By Web DeskFirst Published Oct 5, 2019, 11:33 AM IST
Highlights

ಯುವ ದಸರಾ ವೇದಿಕೆಯಲ್ಲಿಯೇ ಕನ್ನಡ ಗಾಯಕ ಚಂದನ್ ಶೆಟ್ಟಿ ತಮ್ಮ ಗೆಳತಿ ನಿವೇದಿತಾ ಗೌಡರಿಗೆ ಮದುವೆ ಪ್ರಪೋಸಲ್ ಇಟ್ಟು, ಉಂಗುರ ತೊಡಿಸಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಮೈಸೂರು ಉಸ್ತುವಾರಿ ಸಚಿವ ಸೋಮಣ್ಣ ಹಾಗೂ ಖುದ್ದು ಚಂದನ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಹೀಗೆ...

ಬೆಂಗಳೂರು (ಅ.05): ಕರುನಾಡ ನಾಡಹಬ್ಬ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಅದೇ ಸೀಸನ್‌ನಲ್ಲಿ ಸಹ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡರನ್ನು ಪ್ರಪೋಸ್ ಮಾಡಿ, ಉಂಗುರ ತೊಡಿಸಿದ್ದಾರೆ. ಕನ್ನಡ ಕನ್ನಡವೆಂದು ಕನ್ನಡ ಪರ ಹೋರಾಡುವ ಚಂದನ್ ಶೆಟ್ಟಿ ಈ ನಡೆ ಹಾಗೂ ದಸರಾ ಸಮಿತಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ವೈಯಕ್ತಿಕ ಕಾರ್ಯಗಳಿಗೆ ದಸರೆಯಂಥ ವೇದಿಕೆಯನ್ನು ಬಳಸಿಕೊಂಡಿದ್ದು, ನೆಟ್ಟಿಗರನ್ನು ಸಿಕ್ಕಾಪಟ್ಟೆ ಕೆರಳಿಸಿದೆ. ಜತೆಗೆ ಚಂದನ್ ನಡೆಯಲ್ಲಿ ತಪ್ಪೇನಿಲ್ಲ ಎಂಬುದನ್ನೂ ಕೆಲವರು ವಾದಿಸುತ್ತಿದ್ದಾರೆ. 

ಬಹಳ ವರ್ಷಗಳಿಂದ ಈ ಯವ ಜೋಡಿ ಬಗ್ಗೆ ಹಲವು ಗಾಳಿ ಸುದ್ದಿಗಳು ಕೇಳಿ ಬರುತ್ತಿದ್ದು, ಮಾಧ್ಯಮದಲ್ಲಿ ಈ  ವಿಷಯ ಚರ್ಚೆಯಾಗುತ್ತಲೇ ಇತ್ತು. ಆದರೆ, ನಿವೇದಿತಾ ಆಗಲಿ, ಚಂದನ್ ಆಗಲಿ ಈ  ವಿಷಯದ ಬಗ್ಗೆ ಯಾವತ್ತೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಆದರೆ, ದಸರಾ ವೇದಿಕೆಯಲ್ಲಿ ನಿವೇದಿತಾಳಿಗೆ ಮದುವೆ ಆಗುತ್ತೀಯಾ ಎಂದು ಕೇಳಿ, ಕೈಗೆ ಉಂಗುರ ತೊಡಿಸಿ, ಶೀಘ್ರವೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ನೆರೆದಿದ್ದ ಜನರ ಆಶೀರ್ವಾದ ಕೋರಿ, ಇಬ್ಬರ ಸಂಬಂಧ ನೆರೆದಿದ್ದ ಅಪಾರ ಜನರ ಮುಂದೆಯೇ ಒಪ್ಪಿಕೊಂಡಿದ್ದಾರೆ. 

ಚಂದನ್ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ವಿರೋಧ ವ್ಯಕ್ತವಾಗುತ್ತಿದೆ.  'ನೆರೆ ಪರಿಹಾರಕ್ಕೆ ದುಡ್ಡಿಲ್ಲ ಎಂದು ಸರಕಾರ ಹೇಳುತ್ತಿದ್ದೆ, ಆದರೆ, ನಿಶ್ಚಿತಾರ್ಥಕ್ಕೆ ಎಲ್ಲಿಂದ ಬಂತು ದುಡ್ಡು?' ಎಂದೇ ಪ್ರಶ್ನಿಸಲಾಗುತ್ತಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೆ ಹಿಗ್ಗೂ ಮುಗ್ಗಾ ಟೀಕಿಸುತ್ತಿರುವ ನೆಟ್ಟಿಗರು, ದಸರಾದಲ್ಲಿ ನಿಶ್ಚಿತಾರ್ಥ, ಆಹಾರ ಮೇಳದಲ್ಲಿ ಬೀಗರ ಊಟ...ಮುಂತಾದ ಪೋಸ್ಟ್ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

 


ಚಂದನ್ ನಡೆಯಲ್ಲಿ ತಪ್ಪೇನಿದೆ? 
ಯುವ ಜನರೇ ನೆರೆದಿದ್ದ ಸಾವಿರಾರು ಜನರ ಮುಂದೆಯೇ ಪ್ರೇಮ ನಿವೇದಿಸಿಕೊಂಡ ಚಂದನ್ ಶೆಟ್ಟಿ ಪರವಾಗಿ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ದೇವರ ಮುಂದೆ ನಿಶ್ಚಿತಾರ್ಥ, ಮದುವೆ ಆಗುವುದು ನಮ್ಮ ಸಂಪ್ರದಾಯ, ಅದರಲ್ಲಿ ತಪ್ಪೇನು ಎಂದೂ ಪ್ರಶ್ನಿಸುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ತೆರಳಿ ಸುರಪಾನ ಮಾಡುವುದನ್ನು ವಿರೋಧಿಸದ ಜನ, ಕರುನಾಡ ಪ್ರತಿಭೆಯೊಂದು ಪ್ರೇಮ ನಿವೇದಿಸಿಕೊಂಡಿದ್ದನ್ನು ವಿರೋಧಿಸುವುದೇಕೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. 

ಸರಕಾರಿ ಕಾರ್ಯಕ್ರಮದಲ್ಲಿ ಹೋಗಿ ರಾಜಕೀಯ ಭಾಷಣ ಮಾಡಲಾಗುತ್ತದೆ. ಅಲ್ಲಿಯೇ ತಮ್ಮಿಷ್ಟ ಬಂದಂತೆ ರಾಜಕಾರಣಿಗಳು ನಡೆದುಕೊಳ್ಳುತ್ತಾರೆ. ಅಂಥದ್ರಲ್ಲಿ ಚಂದನ್ ಶೆಟ್ಟಿ ಯಾವ ಶಿಷ್ಟಚಾರವನ್ನೂ ಉಲ್ಲಂಘಿಸಿಲ್ಲ, ಎಂದು ಚಂದನ್ ಪರ ವಾದವೂ ಕೇಳಿ ಬರುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸೋಮಣ್ಣ ಸಹ 'ಚಂದನ್ ನಡೆ ಅಕ್ಷಮ್ಯ ಅಪರಾಧ...' ಎಂದು ಹೇಳಿದ್ದು. ಈ ಬಗ್ಗೆ ಪರ, ವಿರೋಧ ಚರ್ಚೆಗಳು ಮುಂದುವರಿಯುತ್ತಲೇ ಇವೆ. ಈ ಎಲ್ಲ ಪರ, ವಿರೋಧಕ್ಕೆ ಫುಲ್ ಸ್ಟಾಪ್ ಇಡಲು, ಚಂದನ್ ಸುವರ್ಣನ್ಯೂಸ್‌ನೊಂದಿಗೆ ಮಾತನಾಡಿ, 'ತಪ್ಪಾಗಿದೆ ಕ್ಷಮಿಸಿ...' ಎಂದು ಆಗ್ರಹಿಸಿದ್ದಾರೆ. 

ಅಷ್ಟಕ್ಕೂ ಚಂದನ್ ತಮ್ಮ ಗೆಳತಿಗೆ ದಸರಾ ವೇದಿಕೆಯಲ್ಲಿ ಮದುವೆ ಪ್ರಪೋಸಲ್ ಇಟ್ಟಿದ್ದಕ್ಕೆ ನೀವೇನು ಹೇಳುತ್ತೀರಿ? 

"

click me!