ಚಿತ್ರ ವಿಮರ್ಶೆ: ಯಾನ

By Web Desk  |  First Published Jul 13, 2019, 9:14 AM IST

ಕಥೆ ಏನೂ ಎಂದು ಕೇಳಿದರೆ ನೀವು ಸಿನಿಮಾ ನೋಡಬೇಕು. ಯಾಕೆಂದರೆ ಒಂದು ಸಾಲಿನಲ್ಲಿ ಹೇಳುವಂತದ್ದಲ್ಲ. ಒಬ್ಬರದ್ದು ಲವ್‌ ಬ್ರೇಕಪ್‌, ಮತ್ತೊಬ್ಬರದ್ದು ತನ್ನ ನಿಜವಾದ ಅಪ್ಪನನ್ನು ಹುಡುಕುವ ತಳಮಳ, ಮತ್ತೊಬ್ಬರದ್ದು ನಂಬಿದವನಿಂದಲೇ ಮೋಸಕ್ಕೊಳಗಿರುವ ಸ್ಥಿತಿ. ಈ ಮೂವರು ಜತೆಯಾಗಿ ಗೋವಾ ಪ್ರಯಾಣ ಮಾಡುತ್ತಾರೆ. ಹೀಗೆ ಯಾನ ಶುರು ಮಾಡುವ ಮುನ್ನ ಏನೆಲ್ಲ ಆಯಿತು, ಪ್ರಯಾಣದ ನಂತರ ಏನಾಗುತ್ತದೆ ಎಂಬುದೇ ಸಿನಿಮಾ. 


ಆರ್‌ ಕೇಶವಮೂರ್ತಿ

ಅವರು ಮೂವರು ಹುಡುಗಿಯರು. ಒಬೊಬ್ಬರು ಒಂದೊಂದು ದಾರಿ, ದಿಕ್ಕು, ಹಿನ್ನೆಲೆಯಿಂದ ಬಂದವರು. ಅವರೆಲ್ಲರಿಗೂ ವೇದಿಕೆಯಾಗುವುದು ಬೆಂಗಳೂರಿನ ಇಂಜಿನಿಯರಿಂಗ್‌ ಕಾಲೇಜು. ಒಬ್ಬಳದ್ದು ಭಯ, ಭಕ್ತಿ ಮತ್ತು ಶಾಂತ ಸ್ವಭಾವ, ಮತ್ತೊಬ್ಬಳದು ಬಿಂದಾಸ್‌ ಲೈಫ್‌. ಇನ್ನೊಬ್ಬಳದ್ದು ತಾನು ತಾನಂತೆಯೇ ಸ್ವತಂತ್ರ್ಯವಾಗಿ ಬದುಕಬೇಕು ಎಂಬುದು. ಹಾಗೆ ಈ ಮೂವರಿಗೂ ಒಂದು ಗೋಲು ಇದೆ. ಸಂಗೀತ, ಆರ್ಕಿಟೆಕ್ಟ್, ಲೀಡರ್‌ ಆಗಬೇಕು ಎಂಬುದು. ಈ ಗೋಲು ಮುಟ್ಟುವ ದಾರಿಯಲ್ಲಿ ಪ್ರೀತಿ- ಪ್ರೇಮ, ಸಂಭ್ರಮ, ಜಗಳ, ಎಮೋಷನ್‌, ಕಣ್ಣೀರು ಎಲ್ಲವೂ ಬಂದು ಹೋಗುತ್ತದೆ. ಈ ಹೊತ್ತಿಗೆ ಈ ಮೂವರ ಬದುಕು ಮತ್ತೊಂದು ದಿಕ್ಕಿಗೆ ತಿರುಗುತ್ತದೆ. ಜೀವನದಲ್ಲಿ ಈ ಮೂವರಿಗೂ ಎದುರಾಗುವ ಸಮಸ್ಯೆ ಅವರನ್ನು ಹೊಸ ಬದುಕು, ಪಯಣದತ್ತ ಮುಖಮಾಡುವಂತೆ ಮಾಡುತ್ತದೆ. ಒಂದು ದೀರ್ಘ ಪಯಣ, ನೂರು ವರ್ಷ ಬದುಕಿನ ಆಯಸ್ಸು ಹೆಚ್ಚಿಸುತ್ತದೆ ಎನ್ನುವ ಸತ್ಯ ಕಂಡುಕೊಳ್ಳುತ್ತಾರೆ. ಹಾಗೆ ಹೊಸ ‘ಯಾನ’ ಶುರು ಮಾಡುವವರ ಕತೆಗಳು ತೀರಾ ಹೊಸದಲ್ಲ. ಅಲ್ಲದೆ ಇದು ಮಹಿಳಾ ಪ್ರಧಾನ ಸಿನಿಮಾ. ಹಾಗಂತ ನೋವು, ವ್ಯಥೆಗಳನ್ನು ಹೇಳಿಕೊಳ್ಳುವ ಚಿತ್ರವಲ್ಲ. ಪ್ರಸ್ತುತ ತಲೆಮಾರಿನ ಹುಡುಗ- ಹುಡುಗಿಯರ ಬದುಕು, ತವಕ, ತಲ್ಲಣಗಳನ್ನು ತೆರೆದಿಡುವ ಹೊಸ ಪ್ರಯಣ. ಅದೇ ‘ಯಾನ’ದ ಮುಖ್ಯ ಕೇಂದ್ರಬಿಂದು.

Tap to resize

Latest Videos

ತಾರಾಗಣ: ವೈಸಿರಿ, ವೈನಿಧಿ, ವೈಭವಿ, ಅನಂತ್‌ನಾಗ್‌, ಸುಹಾಸಿನಿ, ರಂಗಾಯಣ ರಘು, ಓಂ ಪ್ರಕಾಶ್‌ ರಾವ್‌, ರವಿಶಂಕರ್‌, ಗಡ್ಡಪ್ಪ, ಹುಚ್ಚ ವೆಂಕಟ್‌, ವೀಣಾ ಸುಂದರ್‌, ಚಕ್ರವರ್ತಿ, ಅಭಿಷೇಕ್‌ ರೈ, ಸುಮುಖ್‌.

ನಿರ್ದೇಶನ: ವಿಜಯ್‌ ಲಕ್ಷ್ಮೀ ಸಿಂಗ್‌

ನಿರ್ಮಾಣ: ಹರೀಶ್‌ ಶೇರಿಗಾರ್‌

ಸಂಗೀತ: ಜೋಶ್ವ ಶ್ರೀಧರ್‌

ಛಾಯಾಗ್ರಹಣ: ಕರಮ್‌ ಚಾವ್ಲಾ

ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್‌ ಅವರು ಈ ಜನರೇಷನ್‌ನ ಯುವ ಮನಸ್ಸುಗಳನ್ನು ಗುರಿಯಾಗಿಟ್ಟುಕೊಂಡೇ ಇಡೀ ಸಿನಿಮಾ ರೂಪಿಸಿದ್ದಾರೆ. ಜೀವನದಲ್ಲಿ ಯಾವುದು ಮುಖ್ಯ, ಯಾವುದು ಅನಾವಶ್ಯಕ ಎಂದು ತಮ್ಮದೇ ಸ್ಟೈಲಿನಲ್ಲಿ ಹೇಳುತ್ತ ಸರಿ-ತಪ್ಪುಗಳನ್ನು ನೋಡುಗರಿಗೆ ಬಿಡುತ್ತಾರೆ. ಇದೇ ಚಿತ್ರದ ಪ್ಲಸ್‌ ಪಾಯಿಂಟ್‌. ಇವರ ಈ ಕತೆ ಕಟ್ಟುವಿಕೆಗೆ ಬೆನ್ನೆಲುಬಾಗಿ ನಿಲ್ಲುವುದು ಕರಮ್‌ ಚಾವ್ಲಾ ಅವರ ಕ್ಯಾಮೆರಾ, ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುವ ಅನೂಪ್‌ ಸೀಳಿನ್‌ ಅವರ ಹಿನ್ನೆಲೆ ಸಂಗೀತ. ಇದರ ಜತೆಗೆ ಸಂಕಲನ ಕೂಡ ಕೊಂಚ ಚುರುಕಾಗಬೇಕಿತ್ತು ಅನಿಸುತ್ತದೆ. ಜತೆಗೆ ಇಡೀ ಕಥೆ ಮೂವರು ಹುಡುಗಿಯರ ಸುತ್ತಲೇ ತಿರುಗುತ್ತದೆ.

ಕತೆಯ ಮೊದಲ ಬಾಗ ಮಾಮೂಲಿಯಾಗಿ ಸಾಗುತ್ತಲೇ, ವಿರಾಮದ ನಂತರ ಗಂಬೀರವಾಗುತ್ತದೆ. ಹುಡುಗಾಟಿಕೆ ಮತ್ತು ಜವಾಬ್ದಾರಿ ಎರಡೂ ತಳಹದಿಗಳ ಮೇಲೆ ನಿಂತ ಕತೆಯಲ್ಲಿ ಜೈಗದೀಶ್‌ ಹಾಗೂ ವಿಜಯಲಕ್ಷ್ಮೀ ಸಿಂಗ್‌ ಮಕ್ಕಳ ನಟನೆ ಹೇಗಿದೆ ಎಂಬುದಕ್ಕೆ ಗ್ಲಾಮರ್‌ ಮತ್ತು ಗ್ರಾಮರ್‌ ಎರಡೂ ಜತೆಯಾದಂತೆ. ಉಳಿದಿದ್ದು ಕಲಿತರೆ ಕನ್ನಡಕ್ಕೆ ಭರವಸೆಯ ತಾರೆಗಳಾಗುತ್ತಾರೆ. ಅದರಲ್ಲೂ ಕಾಲೇಜು ಚುನಾವಣೆಗೆ ನಿಂತು, ಮೋಸ ಹೋಗುವ, ತನಗಾದ ಅನ್ಯಾಯವನ್ನು ತೆರೆದಿಡುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ವೈನಿಧಿ, ಮೂವರ ಪೈಕಿ ಹೆಚ್ಚು ಗಮನ ಸೆಳೆಯುತ್ತಾರೆ. ಅನಂತ್‌ನಾಗ್‌ ಹಾಗೂ ಸುಹಾಸಿನಿ ಅವರದ್ದು ತೂಕವಾದ ಪಾತ್ರ. ಉಳಿದಂತೆ ಚಿಕ್ಕಣ್ಣ ನಗಿಸುವ ಪ್ರಯತ್ನ ಮಾಡಿದ್ದಾರೆ. ಉಳಿದವರದ್ದು ಬಂದು ಹೋಗುವ ಸರದಿ. ಜೋಶ್ವಾ ಶ್ರೀಧರ್‌ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ.

click me!