
ಇದು ಮಕ್ಕಳ ಸಾಮ್ರಾಜ್ಯ, ಅವರದ್ದೇ ರಾಮರಾಜ್ಯ. ಮಕ್ಕಳು ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸನ್ನು ಹೇಗೆ ತಮ್ಮದೇ ಹೋರಾಟದಲ್ಲಿ ನನಸಾಗಿಸುತ್ತಾರೆನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ನಿರ್ದೇಶಕರು ಇಲ್ಲಿ ನಾಲ್ಕು ಶಾಲಾ ಮಕ್ಕಳ ನಡುವೆ ಗಾಢವಾದ ಗೆಳೆತನದ ಬೆಸುಗೆ ಹಾಕಿದ್ದಾರೆ. ಅವರೇ ರಘುಪತಿ,ರಾಘವ, ರಾಜ ಮತ್ತು ರಾಮ. ಅದರಲ್ಲಿ ರಾಘವ ತಂದೆ ಇಲ್ಲದೆ ಅಮ್ಮನ ಆಶ್ರಯದಲ್ಲಿ ಬೆಳೆದ ಹುಡುಗ. ಆತನಿಗೆ ದೊಡ್ಡ ಕ್ರಿಕೆಟ್ ಸ್ಟಾರ್ ಆಗಬೇಕೆನ್ನುವ ಆಸೆ.
ಅಕಸ್ಮಿಕವಾಗಿ ಒಂದು ದಿನ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ಸೇರಿದಾಗ ಉಳಿದ ಮೂರು ಮಕ್ಕಳು ಆಸ್ಪತ್ರೆ, ಪೊಲೀಸು ಹಾಗೂ ಕೋರ್ಟ್ ವ್ಯವಸ್ಥೆಯ ಕಣ್ಣುತೆರೆಸಿ, ತಮ್ಮ ಸ್ನೇಹಿತ ರಾಘವನ ಕನಸು ಹೇಗೆ
ನನಸಾಗುವಂತೆ ಮಾಡುತ್ತಾರೆನ್ನುವುದು ಚಿತ್ರದ ಒಟ್ಟು ಕತೆ.
ನಿರ್ದೇಶಕರು ಅದನ್ನು ಪ್ರೇಕ್ಷಕರ ಮನ ಮುಟ್ಟುವ ಹಾಗೆಯೇ ತೆರೆಗೆ ತಂದಿದ್ದಾರೆ. ಇದೊಂದು ಮಕ್ಕಳ ಸಿನಿಮಾ ಅಂದುಕೊಂಡರೂ, ಕತೆಯ ಒಟ್ಟು ತಿರುಳು ದೊಡ್ಡವರನ್ನು ಚಿಂತನೆಗೆ ಹಚ್ಚುತ್ತದೆ. ಕತೆ ಚೆನ್ನಾಗಿದೆ ಎನ್ನುವು ದನ್ನು ಬಿಟ್ಟರೆ, ನಿಧಾನಗತಿಯ ನಿರೂಪಣೆ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ತಾಂತ್ರಿಕವಾಗಿಯೂ ಈ ಚಿತ್ರ ಸಾಧಾರಣ. ಮಾಸ್ಟರ್ ಏಕಾಂತ್ ಪ್ರೇಮ್, ಮಾಸ್ಟರ್ ಶೋಯೆಬ್, ಮಾಸ್ಟರ್ ಕಾರ್ತಿಕ್, ಮಾಸ್ಟರ್ ಹೇಮಂತ್ ಅಭಿನಯ ಸೊಗಸಾಗಿದೆ. ಹನುಮಂತೇಗೌಡ, ನಿಜವಾದ ರಾಜಕಾರಣಿಯಂತೆಯೇ ನಟಿಸಿದ್ದಾರೆ. ವಕೀಲರಾಗಿ ಯತಿರಾಜ್, ನಾಗೇಂದ್ರ ಪ್ರಸಾದ್, ತಾಯಿ ಪಾತ್ರದಲ್ಲಿ ಅಶ್ವಿನಿ ನಟನೆಯಲ್ಲಿ ಸಹಜತೆ ಇದೆ.
ದೇಶಾದ್ರಿ ಹೊಸ್ಮನೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.