ಹೇಗಿದೆ ’ಥಿಯರಿ’ ಸಿನಿಮಾ ವಿಮರ್ಶೆ?

By Web DeskFirst Published Aug 4, 2018, 5:40 PM IST
Highlights

ಈ ವಾರ ಥಿಯರಿ ಎನ್ನುವ ಸಿನಿಮಾ ಬಿಡುಗಡೆಯಾಗಿದೆ. ನೂರು ಜನ ಇನ್ನೂರು ರೀತಿ ಮಾತಾಡುತ್ತಾರೆ. ಹೀಗಿರುವಾಗ ಒಂದು ಕೊಲೆ ನಡೆದೆರೆ ಹೇಗೆಲ್ಲಾ ಕತೆಗಳು ಹುಟ್ಟತ್ತವೆ, ಅದಕ್ಕೆ ಏನೆಲ್ಲಾ ಆಯಾಮಗಳಿರುತ್ತವೆ, ಕತೆ ಹೇಳುವವರ  ಮೂಲ ಥಿಯರಿಗಳೇನು ಎನ್ನುವ ಭಿನ್ನ ಕಥಾವಸ್ತುವಿನೊಂದಿಗೆ ತೆರೆಗೆ ಬಂದಿರುವ ಚಿತ್ರ ‘ಥಿಯರಿ’

ಒಂದು ಸಾಮಾನ್ಯ ಘಟನೆಗೆ ಸಂಬಂಧಿಸಿದಂತೆ ನೂರು ಜನ ಇನ್ನೂರು ರೀತಿ ಮಾತಾಡುತ್ತಾರೆ. ಹೀಗಿರುವಾಗ ಒಂದು ಕೊಲೆ ನಡೆದೆರೆ ಹೇಗೆಲ್ಲಾ ಕತೆಗಳು ಹುಟ್ಟತ್ತವೆ, ಅದಕ್ಕೆ ಏನೆಲ್ಲಾ ಆಯಾಮಗಳಿರುತ್ತವೆ, ಕತೆ ಹೇಳುವವರ ಮೂಲ ಥಿಯರಿಗಳೇನು ಎನ್ನುವ ಭಿನ್ನ ಕಥಾವಸ್ತುವಿನೊಂದಿಗೆ ತೆರೆಗೆ ಬಂದಿರುವ ಚಿತ್ರ ‘ಥಿಯರಿ’.

ಒಂದು ಕೊಲೆಯ ಸುತ್ತಲೇ ಗಿರಕಿ ಹೊಡೆಯುವ ಚಿತ್ರ ಆಮೆಗತಿಯ ವೇಗದಿಂದ ನೋಡುಗನ ತಾಳ್ಮೆ ಪರೀಕ್ಷೆ ಮಾಡುವುದು ಒಂದು ಕಡೆಯಾದರೆ, ಸಸ್ಪೆನ್ಸ್, ಇಂಟರೆಸ್ಟಿಂಗ್ ಥಿಂಗ್ಸ್‌ಗಳನ್ನು ಅಲ್ಲಲ್ಲಿ ಹೊತ್ತುಕೊಂಡು ಬಂದು ಕುತೂಹಲ ಹುಟ್ಟಿಸುತ್ತದೆ. ಕುತೂಹಲ ಹುಟ್ಟುವ ವೇಳೆಯಲ್ಲೇ ಇಲ್ಲಿ ಏನು ನಡೆಯುತ್ತಿದೆ? ಯಾರು ಹೀರೋ, ಯಾರು ವಿಲನ್, ಕತೆ ಏನು ಹೇಳಲು ಹೊರಟಿದೆ? ಎನ್ನುವ ಸಹಜ ಪ್ರಶ್ನೆಗಳು ಎದುರಾಗಿ ಗೊಂದಲ ಉಂಟಾಗುತ್ತದೆ.

ಈ ಗೊಂದಲ ನಿವಾರಣೆಯಾಗಬೇಕು ಎಂದರೆ ಕೊನೆಯ ವರೆಗೂ ಚಿತ್ರವನ್ನು ತಾಳ್ಮೆಯಿಂದ ನೋಡಬೇಕು. ಹೀಗೆ ಕೊನೆಯ ದೃಶ್ಯದವರೆಗೂ ಸಸ್ಪನ್ಸ್ ಕಾಯ್ದುಕೊಳ್ಳುವಲ್ಲಿ ನಿರ್ದೇಶಕ ಪವನ್ ಶಂಕರ್ ಹಾಕಿರುವ ಶ್ರಮ ಒಂದಷ್ಟು ಕೆಲಸ ಮಾಡಿದೆ. ಒಂದು ಕೊಲೆ, ಮೂರು ದಿಕ್ಕಿನಲ್ಲಿ ತನಿಖೆ, ಒಬ್ಬೊಬ್ಬರದ್ದೂ ಒಂದೊಂದು ವಾದ. ಆ ವಾದಕ್ಕೆ ಒಪ್ಪುವಂತೆ ಅವರು ತಮ್ಮದೇ ಥಿಯರಿಗಳನ್ನು ಮುಂದಿಡುತ್ತಾರೆ. ಮೂವರ ಮಾತನ್ನೂ ಪ್ರೇಕ್ಷಕ ಹೌದಲ್ಲಾ ಹೀಗೂ ಆಗಿರಬಹುದಲ್ಲಾ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುವ ಹೊತ್ತಿಗೆ ಕತೆ ಕೊನೆಯ ಹಂತಕ್ಕೆ ಬಂದಾಗಿರುತ್ತದೆ.

ಹೀಗೆ ಕತೆ ತುದಿಗೆ ತಲುಪಿದಾಗಲೇ ನಿರ್ದೇಶಕ ದೊಡ್ಡ ತಿರುವು ತಂದು ಪ್ರೇಕ್ಷಕನ ಥಿಯರಿಯನ್ನೇ ತಿರುಗಾಮುರುಗ ಮಾಡುವುದು. ಕೊಲೆ ಯಾಕಾಯಿತು? ಕೊಲೆ ಮಾಡಿದ್ದು ಯಾರು? ಮೂವರ ತನಿಖೆಯಲ್ಲಿ ನಿಜವಾದದ್ದು ಯಾವುದು? ಎನ್ನುವ ಪ್ರಶ್ನೆ ಹಾಕಿಕೊಂಡಾಗಲೇ ತೆಗೆದುಕೊಳ್ಳುವ ತಿರುವು ಏನು ಎನ್ನುವುದನ್ನು ನೋಡಬೇಕಿದ್ದರೆ ಸಿನಿಮಾ ನೋಡಬೇಕು.

ತನಿಖೆಯ ಜಾಡು, ಅದಕ್ಕೆ ಬೇಕಾದ ಭಾಷೆ, ಟೆಕ್ನಿಕಲ್ ಟರ್ಮ್‌ಗಳೆಲ್ಲವನ್ನೂ ನೋಡಿದರೆ ಚಿತ್ರತಂಡ ಸಾಕಷ್ಟು ಅಧ್ಯಯನ ಮಾಡಿಯೇ ಚಿತ್ರ ಮಾಡಿದೆ ಎಂದು ಗೊತ್ತಾಗುತ್ತಾದರೂ, ತನಿಖಾ ಚಿತ್ರಕ್ಕೆ ಬೇಕಾಗುವ ಆರ್ಥಿಕ ಶಕ್ತಿ ಒದಗಿಸುವಲ್ಲಿ ನಿರ್ಮಾಪಕರು ವಿಫಲವಾಗಿದ್ದಾರೆ. ಅದೇ ಕಾರಣಕ್ಕೆ ಮೇಕಿಂಗ್, ಲೊಕೇಷನ್, ಸಂಗೀತದಲ್ಲಿ ಗಟ್ಟಿತನವಿಲ್ಲ. ಅದರ ಜೊತೆಗೆ ಅವಸರಕ್ಕೆ ಬೀಳದೇ ಮತ್ತೊಂದಷ್ಟು ಅಧ್ಯಯನ ಮಾಡಿ ಚಿತ್ರಕತೆಯಲ್ಲಿ ನೈಪುಣ್ಯತೆ ತೋರಿದ್ದರೆ ಚಿತ್ರ ಮತ್ತೊಂದು ಮಜಲಿಗೆ ಖಂಡಿತಕ್ಕೂ ಜಿಗಿಯುವ ಎಲ್ಲಾ ಸಾಧ್ಯತೆಗಳಿದ್ದವು. ಅದನ್ನು ಕೈ ಚೆಲ್ಲಿರುವುದರ ನಷ್ಟವಾಗಿರುವುದು ಇಡೀ ಚಿತ್ರ ತಂಡಕ್ಕೆ.

ಇಲ್ಲಿ ಹೆಣೆದಿರುವ ಒಂದೊಂದು ಘಟನೆಗೂ ಸರಿಯಾದ ಬಂಧ ಏರ್ಪಡಿಸುವ ಕೆಲಸ ಮಾಡಿದ್ದರೆ ಸಾಮಾನ್ಯ ಪ್ರೇಕ್ಷಕನಿಗೂ ಚಿತ್ರ ಒಂದು ಹಂತಕ್ಕೆ ಅರ್ಥವಾಗುತ್ತಿತ್ತು. ಆದರೆ ಆ ಕೆಲಸ ಅಚ್ಚುಕಟ್ಟಾಗಿ ನಡೆಯದ ಕಾರಣ ತಲೆಗೆ ಒಂದಷ್ಟು ಹುಳು ಬಿಟ್ಟುಕೊಳ್ಳಲೇಬೇಕು. ಹಾಗಿದ್ದರೂ ಹೊಸ ನಟರ‌್ಯಾರು ಬಲವಂತವಾಗಿ ನಟಿಸಿಲ್ಲ. ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇದರ ಜೊತೆಯಲ್ಲೇ ಸ್ವಾಭಾವಿಕ ಎಂಬಂತೆ ಇರುವ ಕುತೂಹಲ
ಸೇರಿ ನೋಡುಗನ ಹಾದಿ ಸುಗಮ ಮಾಡುತ್ತವೆ.

ಚಿತ್ರಕತೆಯ ನಿಧಾನಗತಿ, ಹುಟ್ಟುಹಾಕುವ ಗೊಂದಲ, ಸಂಗೀತ, ಛಾಯಾಗ್ರಹಣದಲ್ಲಿನ ಸಪ್ಪೆಯಿಂದಾಗಿ ಭಿನ್ನ ಕತೆಯೊಂದು ಸಾಧಾರಣ ಹಂತಕ್ಕೆ ತಲುಪುವಷ್ಟಕ್ಕೆ ಸುಸ್ತಾಗಿ ನಿಂತಿದ್ದರೂ ಸಿಕ್ಕ ಅವಕಾಶದಲ್ಲಿ ನಿರ್ದೇಶಕ ಪವನ್ ಶಂಕರ್ ನೋಡುಗನ ಮೈಂಡ್‌ಗೆ ಒಂದಷ್ಟು ಕೆಲಸ  ಕೊಟ್ಟಿರುವುದಂತೂ ಖಚಿತ. 

-ಕೆಂಡಪ್ರದಿ

ಚಿತ್ರ: ಥಿಯರಿ ತಾರಾಗಣ: ಯದುಶ್ರೇಷ್ಠ,
ತೇಜಸ್ವಿನಿ ಮುಂಡಾಸಾದ್, ದೀಪಕ್‌ಗೌಡ,
ಸಂತೋಷ್ ಪ್ರಭು, ವಿಜಯನ್, ಆತ್ಮಾನಂದ
ವಾಸನ್, ನಾಗಾರ್ಜುನ್ ಆರಾಧ್ಯ,
ಡಾ. ಚಿದಾನಂದ ಸೊರಬ ನಿರ್ದೇಶನ: ಪವನ್
ಶಂಕರ್ ನಿರ್ಮಾಣ: ಎಸ್.ಬಿ. ಶಿವು
ಛಾಯಾಗ್ರಹಣ: ಇನೋಷ್ ಓಲಿವೆರಾ,
ಮಧುಸೂದನ್‌ಭಟ್ ರೇಟಿಂಗ್: ***

click me!