ಚಿತ್ರ ವಿಮರ್ಶೆ : ಪತಿಬೇಕು.ಕಾಮ್

By Web Desk  |  First Published Sep 8, 2018, 12:53 PM IST

ಈ ವಾರ ಪತಿಬೇಕು.ಕಾಮ್ ಸಿನಿಮಾ ಬಿಡುಗಡೆಯಾಗಿದೆ. ಟೀಸರ್‌ನಿಂದಲೇ ಈ ಚಿತ್ರ ಭಾರೀ ಸದ್ದು ಮಾಡಿದೆ.  ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 


ಬೆಂಗಳೂರು (ಸೆ. 08): ಮಧ್ಯಮ ವರ್ಗದ ರಿಟೈರ್ಡ್ ತಂದೆಯೊಬ್ಬರು ತನ್ನ ಮಗಳಿಗೆ ಮದುವೆ ಹೇಗಪ್ಪಾ ಮಾಡ್ಲಿ ಎಂದು ಶ್ರೀಕೃಷ್ಣ ದೇಗುಲದ ಮುಂದೆ ಮುಂದೆ ಆರ್ತರಾಗಿ ಕಂಗಾಲಾಗುವ ದೃಶ್ಯದಿಂದ ಆರಂಭವಾದ ಕತೆ ಅವರು ತಮ್ಮ ಪತ್ನಿಯೊಂದಿಗೆ ಲಕ್ಷ್ಮೀ ನರಸಿಂಹ ಸನ್ನಿಧಿಯಲ್ಲಿ ಡಾನ್ಸ್ ಮಾಡುವುದರೊಂದಿಗೆ ಮುಗಿಯುತ್ತದೆ.

ಮಧ್ಯಮವರ್ಗದ ಹೆಣ್ಣು ಮಗಳೊಬ್ಬಳಿಗೆ ಹೇಗಾದರೂ ಮಾಡಿ ಮದುವೆ ಮಾಡಿಸಬೇಕು ಎಂದು ನಿರ್ದೇಶಕರು ಮತ್ತು ಇಡೀ ತಂಡ ಮೊದಲೇ ನಿರ್ಧರಿಸಿದ್ದರಿಂದ ಪೂರ್ತಿ ಸಿನಿಮಾ ಆ ಹುಡುಗಿಯ ಸುತ್ತಲೇ ಸುತ್ತುತ್ತದೆ. ಹಾಗಾಗಿ ಆ ಹುಡುಗಿಯ ಪಾತ್ರ ಮಾಡಿದ ಶೀತಲ್ ಶೆಟ್ಟಿ ಈ ಚಿತ್ರದ ಹೈಲೈಟ್.

Tap to resize

Latest Videos

ಕುಟುಂಬ ನಿರ್ವಹಣೆಗಾಗಿ ಒದ್ದಾಡುವ, ಹೆಣ್ಮಕ್ಕಳಿಗೆ ತೊಂದರೆ ಕೊಡುವವರಿಗೆ ಪಟಾರನೆ ಕೆನ್ನೆಗೆ ಬಾರಿಸುವ, ತನ್ನ ಜೀವನ ಸಾಗಿಸಲು ಸಣ್ಣ ಪುಟ್ಟ ವಂಚನೆಗೆ ಕೈ ಹಾಕುವ, ತನಗೊಂದು ಮದುವೆ ಆಗಬೇಕು ಎಂದು ಜೀವನಪೂರ್ತಿ ಕಷ್ಟಪಡುವ ಹುಡುಗಿಯ ತುಂಟತನ, ಕಷ್ಟ, ಪೇಚಾಟ, ಧೈರ್ಯವಂತಿಕೆ, ಏನಾದರೂ ಮಾಡೇ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಸಮರ್ಥವಾಗಿ ದಾಟಿಸುವ ಶೀತಲ್ ಇಲ್ಲಿ ಹೀರೋ, ಹೀರೋಯಿನ್ ಎಲ್ಲವೂ.

ಈ ಚಿತ್ರದ ಭಾರವನ್ನು ಪೂರ್ತಿ ತಮ್ಮ ಮೇಲೆ ಹೊತ್ತುಕೊಂಡಿರುವುದು ಕಲಾವಿದರೇ. ಮಧ್ಯಮ ವರ್ಗದ ಪೆನ್ನಿಲೆಸ್ ತಂದೆಯಾಗಿ ಕೃಷ್ಣ ಅಡಿಗ, ಜೀವನಪೂರ್ತಿ ಮನೆಯೊಳಗಿದ್ದು ಮಗಳ ಮದುವೆಯನ್ನು ಕಣ್ತುಂಬಿಸಿಕೊಳ್ಳಲು ಹವಣಿಸುವ ತಾಯಿಯಾಗಿ ಹರಿಣಿ ಅಲ್ಲಲ್ಲಿ ನಗಿಸುತ್ತಾ ಚೂರು ಬೇಸರ ಹಂಚುತ್ತಾ ಲೈವ್ಲೀ ವಾತಾವರಣವನ್ನು ಸೃಷ್ಟಿಮಾಡುತ್ತಾರೆ. ಅದರಲ್ಲೂ ಹರಿಣಿಯವರಂತೂ ಎಕ್ಸ್‌ಪ್ರೆಷನಲ್ಲೇ ನಗು ಮೂಡಿಸುತ್ತಾರೆ.

ಅದೇ ಥರ ಮೆಚ್ಚುಗೆಗೆ ಪಾತ್ರವಾಗುವ ಮತ್ತೊಬ್ಬರು ಅರು ಗೌಡ. ನಿರ್ಲಿಪ್ತವಾಗಿ ಅಮಾಯಕನಂತೆ ನಟಿಸುವ ಅರು ಸ್ಕ್ರೀನ್ ಎಂಟ್ರಿ ಕೊಟ್ಟ ಮೇಲೆ ಚಿತ್ರ ವೇಗ ಪಡೆಯುತ್ತದೆ. ನಿರ್ದೇಶಕ ರಾಕೇಶ್ ವರದಕ್ಷಿಣೆ ವಿರುದ್ಧ ಸಮರ ಸಾರಿದ್ದಾರೆ. ವರದಕ್ಷಿಣೆಯಿಂದಾಗಿಯೇ ಮಧ್ಯಮ ವರ್ಗದ ಹೆಣ್ಣು ಮಕ್ಕಳ ಕುಟುಂಬ ಕಷ್ಟ ಪಡುತ್ತದೆ ಅನ್ನುವುದು ಅವರ ಐಡಿಯಾ. ಆ ಒಂದು ಕಾರಣದಿಂದ ಅವರು ಆಚೆ ಈಚೆ ಹೋಗಿಲ್ಲ. ಹೆಣ್ಣು ನೋಡಲು ಬಂದ 61 ಗಂಡು ಮಕ್ಕಳೂ ವರದಕ್ಷಿಣೆಯಿಂದಲೇ ಮದುವೆ ಮುರಿದುಕೊಂಡರು ಎಂದು ನಂಬಿಸುತ್ತಾರೆ.

ಅದರಿಂದ ಬೇಸತ್ತ ಹುಡುಗಿ ಲವ್ ಮ್ಯಾರೇಜ್‌ನತ್ತ ವಾಲುತ್ತಾಳೆ ಎಂಬುದು ಅವರ ಆಲೋಚನೆ. ಅಷ್ಟರ ಮಟ್ಟಿಗೆ ಅವರು ನೇರ. ಒಂದೊಳ್ಳೆಯ ಕಾನ್ಸೆಪ್ಟು ದಾರಿ ತಪ್ಪಿದರೆ ಬರೀ ಕಾಮಿಡಿಯಾಗಿ ಹೇಗೆ ಉಳಿದುಹೋಗುತ್ತದೆ ಅನ್ನುವುದಕ್ಕೆ ಈ ಚಿತ್ರ ಉದಾಹರಣೆ. ಪ್ರತೀ ಸೀನಲ್ಲೂ ನೋಡುಗರನ್ನು ನಗಿಸಬೇಕು ಎಂಬ ಹಠ ತೊಟ್ಟಿದ್ದಾರೆ ನಿರ್ದೇಶಕರು. ಅದಕ್ಕೆ ತಕ್ಕಂತೆ ಹೋರಾಡಿದ್ದಾರೆ. ಈ ಹಠದಿಂದಾಗಿ ಒಮ್ಮೊಮ್ಮೆ ಕಾಮಿಡಿ ಸಿಲ್ಲಿ ಅನ್ನಿಸುತ್ತದೆ.

ಬೇಕು ಬೇಕಂತಲೇ ಒಂದೊಂದೇ ಪಾತ್ರಗಳನ್ನು ತುರುಕಿದಂತೆ ಭಾಸವಾಗುತ್ತದೆ. ಇದು ನೈಜ ಅಂತನ್ನಿಸದೇ ಹೋಗುವುದೇ ಬೇಸರ. ಅನವಶ್ಯಕವಾಗಿ ಹೇಳಿದ್ದನ್ನೇ ಹೇಳುವುದು ತಡೆ ಹಿಡಿದು ಉದ್ದ ಕಡಿಮೆ ಮಾಡಿದ್ದರೆ ಸ್ವಲ್ಪ ತೂಕ ಹೆಚ್ಚುತ್ತಿತ್ತು. ಇಂಟರೆಸ್ಟಿಂಗ್ ಕಾನ್ಸೆಪ್ಟ್ ಚಿತ್ರದ ಜೀವಾಳ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಕಾಮಿಡಿ ಸಿನಿಮಾ. ಕಲಾವಿದರ ಟೈಮಿಂಗು, ಆ್ಯಕ್ಟಿಂಗು ನೋಡುಗರನ್ನು ಕೈಹಿಡಿದು ಕರೆದೊಯ್ಯುವುದೇ ಇದರ ಹೆಚ್ಚುಗಾರಿಕೆ.  

ಚಿತ್ರ: ಪತಿಬೇಕು.ಕಾಮ್ ತಾರಾಗಣ: ಶೀತಲ್ ಶೆಟ್ಟಿ, ಕೃಷ್ಣ ಅಡಿಗ, ಹರಿಣಿ, ಅರು ಗೌಡ ನಿರ್ದೇಶನ: ರಾಕೇಶ್ ರೇಟಿಂಗ್: ***

-ರಾಜೇಶ್ ಶೆಟ್ಟಿ 

click me!