ಜೋರಾಗಿದೆ ಮಿಸ್ಟರ್ ಚೀಟರ್ ರಾಮಾಚಾರಿ ಹವಾ!

First Published Jun 23, 2018, 3:06 PM IST
Highlights

ಒನ್ ಮ್ಯಾನ್ ಆರ್ಮಿ ಎಂದು ಯಾರನ್ನಾದರೂ ಕರೆಯಲು ಇಚ್ಛಿಸಿದರೆ ನೀವು ಈ ರಾಮಾಚಾರಿಯವರನ್ನು ಧಾರಾಳವಾಗಿ ಕರೆಯಬಹುದು. ಚಿತ್ರದ ಆರಂಭದಿಂದ ಕಡೆಯವರೆಗೆ ಅವರು ಫೈಟ್ ಮಾಡುತ್ತಾರೆ, ಹಾಡುತ್ತಾರೆ, ಬೀಳುತ್ತಾರೆ, ಏಳುತ್ತಾರೆ, ಡಾನ್ಸ್ ಮಾಡುತ್ತಾರೆ ಮತ್ತು ಅಬ್ಬಾ ಎಲ್ಲವೂ ಮುಗಿಯಿತು ಅನ್ನುವಾಗ ಸಂದೇಶವನ್ನೂ ನೀಡುತ್ತಾರೆ. ಅಷ್ಟರ ಮಟ್ಟಿಗೆ ಅವರು ಶಕ್ತಿವಂತ ಮತ್ತು  ಪ್ರತಿಭಾವಂತ. 

ಒನ್ ಮ್ಯಾನ್ ಆರ್ಮಿ ಎಂದು ಯಾರನ್ನಾದರೂ ಕರೆಯಲು ಇಚ್ಛಿಸಿದರೆ ನೀವು ಈ ರಾಮಾಚಾರಿಯವರನ್ನು ಧಾರಾಳವಾಗಿ ಕರೆಯಬಹುದು. ಚಿತ್ರದ ಆರಂಭದಿಂದ ಕಡೆಯವರೆಗೆ ಅವರು ಫೈಟ್ ಮಾಡುತ್ತಾರೆ, ಹಾಡುತ್ತಾರೆ, ಬೀಳುತ್ತಾರೆ, ಏಳುತ್ತಾರೆ, ಡಾನ್ಸ್ ಮಾಡುತ್ತಾರೆ ಮತ್ತು ಅಬ್ಬಾ ಎಲ್ಲವೂ ಮುಗಿಯಿತು ಅನ್ನುವಾಗ ಸಂದೇಶವನ್ನೂ ನೀಡುತ್ತಾರೆ. ಅಷ್ಟರ ಮಟ್ಟಿಗೆ ಅವರು ಶಕ್ತಿವಂತ ಮತ್ತು  ಪ್ರತಿಭಾವಂತ.

ಚಿತ್ರದಲ್ಲಿ ಅವರು ಎಷ್ಟರ ಮಟ್ಟಿಗೆ ಪವರ್‌ಫುಲ್ ಎಂದರೆ  ಬರೀ ಒಂದು ಟೋಪಿಗಾಗಿ ಕಿಮೀಗಟ್ಟಲೆ ಓಡಿ ರೌಡಿಗಳನ್ನು ಚಿಂದಿ ಉಡಾಯಿಸುತ್ತಾರೆ. ಸ್ಟೇಷನ್‌ನಿಂದ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗುತ್ತಾರೆ. ರಾಮಾಚಾರಿ ಹಾಡುತ್ತಿದ್ದರೆ ಕೋಗಿಲೆ ಜೊತೆಯಾಗುತ್ತದೆ. ಅವರು ನರ್ತಿಸುತ್ತಿದ್ದರೆ ನವಿಲು ನಾಚಿಕೊಳ್ಳುತ್ತದೆ. ಅವರು ಮಾತಾಡಿದರೆ ಹುಲಿಯೂ ದನಿ ಕಳೆದುಕೊಂಡು ಸೈಲೆಂಟಾಗಿ ಸೈಡಿಗೆ ಹೋಗುತ್ತದೆ. ಅವರ ಕತೆ ಕೇಳಿ ಕಠೋರ ರೌಡಿ ಕೂಡ ಕಣ್ಣೀರು ಹಾಕಿ ಜೀವನ ಜಿಗುಪ್ಸೆ ಹೊಂದಿ ಹೊರಟುಹೋಗುತ್ತಾನೆ.

ಡೀಮಾನಿಟೈಸೇಷನ್ ಸಂದರ್ಭದಲ್ಲಿ ನಡೆಯುವ ಕತೆ ಇದು. ಶ್ರೀಮಂತರಿಂದ ದುಡ್ಡನ್ನು ಕಸಿದುಕೊಂಡು ಬಡವರಿಗೆ ಹಂಚುವ ರಾಬಿನ್ ಹುಡ್ ರಾಮಾಚಾರಿಗೆ ಆದರ್ಶ. ದೀನರು, ಬಡವರು ಅಂದ್ರೆ ರಾಮಾಚಾರಿಗೆ ಹೊಟ್ಟೆ ಚುರುಕ್ ಅನ್ನುತ್ತದೆ. ತಂದೆ ತಾಯಿಯನ್ನು ನೋಯಿಸುವವರು ಸಿಕ್ಕರೆ ಕಣ್ಣು ಕೆಂಪಾಗಿ ಎದುರಿನವರನ್ನು ಸುಟ್ಟು ಬಿಡು ವಷ್ಟು ಕೋಪ ಬರುತ್ತದೆ. ಹಾಗಾಗಿ ರಾಮಾಚಾರಿ ಅನ್ಯಾಯ ಮಾಡಿದವರ ದಮನ ಮಾಡಲು ರಣರಂಗಕ್ಕೆ ಇಳಿಯುತ್ತಾನೆ. ಅಲ್ಲಿ ಯವರೆಗೆ ರೌಡಿಗಳ, ದುಷ್ಟರ, ಭ್ರಷ್ಟಾಚಾರಿಗಳ ಹವಾ. ರಾಮಾಚಾರಿ ಬಂದ ಮೇಲೆ ಅವನದೇ ಹವಾ. ಇಲ್ಲಿ ಎಲ್ಲವೂ ಭರ್ಜರಿಯೇ.
ಡೈಲಾಗ್‌ಗಳೂ ಹೈವೋಲ್ಟೇಜ್ ಪವರ್ ಇದ್ದಂತೆ.

ಅದಕ್ಕೆ ಸಾಕ್ಷಿ ರೌಡಿಯೊಬ್ಬ ಹೊಡೆಯುವ ಈ ಡೈಲಾಗು: ಗಂಗಾವತಿಯಲ್ಲಿ ಗಂಗಾ ಸ್ನಾನ ಮಾಡ್ಕೊಂಡು, ಸಿಂಧನೂರಿನಲ್ಲಿ ಸಿಂಧೂರ ಇಟ್ಕೊಂಡು, ಮಾನ್ವಿಯಲ್ಲಿ ಮಾನವೀಯತೆ ಮೆರೆದು, ರಾಯಚೂರಿನಲ್ಲಿ ಮೆರೆಯುವ ರಾಜ ಕಣೋ ಈ ಕೊಂಗಿವಿ ರಾಜ. ಇಂಥಾ ಡೈಲಾಗ್ ಹೊಡೆಯುವ ಮಹಾನ್ ರೌಡಿಯ ಮನ ಪರಿವರ್ತನೆ ಮಾಡುವ ಐಡಿಯಾ ಕೂಡ ರಾಮಾಚಾರಿಯಲ್ಲುಂಟು. ಹಾಗಾಗಿ ಅಂತಿಂಥಾ ಧೀರನಲ್ಲ ಇವ. ರಾಮಾಚಾರಿಯನ್ನು ಹೊರತುಪಡಿಸಿದರೆ ಈ ಚಿತ್ರದಲ್ಲಿ  ಪ್ರಮುಖ ಪಾತ್ರಗಳು ಅಂತ ನೆನಪಿಸಿಕೊಂಡರೆ ಹೊಳೆಯುವುದು ಕೊಂಗಿವಿ ರಾಜ ಒಬ್ಬರೇ.

ಅದರಾಚೆಗೆ ಸಂಗೀತ, ಛಾಯಾಗ್ರಹಣ ಅಂತೆಲ್ಲಾ ಹುಡುಕುತ್ತಾ ಕೂರುವುದು ತಾಳ್ಮೆಗೆ ಒಡ್ಡುವ ಸವಾಲು. ಇವೆಲ್ಲಾ ಕಾರಣದಿಂದ ಮತ್ತು ಅಪಾರ ಸಹನೆಯಿಂದ ಹೇಳುವುದಾದರೆ ರಾಮಾಚಾರಿ ಎಂಬ ಲೋಕಲ್ ರಾಬಿನ್‌ಹುಡ್ ಅಲಿಯಾಸ್ ಒನ್ ಮ್ಯಾನ್ ಆರ್ಮಿ ಸಿನಿಮಾದಲ್ಲಲ್ಲದೇ ಹೊರಬಂದ ಮೇಲೂ ಕಾಡುತ್ತಾರೆ, ಗಮನದಲ್ಲಿರಲಿ 

ಚಿತ್ರ: ಮಿಸ್ಟರ್ ಚೀಟರ್ ರಾಮಾಚಾರಿ ನಿರ್ದೇಶನ: ರಾಮಾಚಾರಿ ತಾರಾಗಣ: ರಾಮಾಚಾರಿ, ಶಾಲಿನಿ, ಮೇಘನಾ, ರಾಶಿ ಮೇಘನಾ, ಕ್ಯಾಪ್ಟನ್ ಚೌಧರಿ, ಕೊಂಡವೀಟಿ ರಾಜ ನಿರ್ಮಾಣ: ಪ್ರವೀಣಾ ರವೀಂದ್ರ ಕುಲಕರ್ಣಿ ಸಂಗೀತ: ಪ್ರದ್ಯೋತನ್ ಛಾಯಾಗ್ರಹಣ: ಜಯಕುಮಾರ್ ರೇಟಿಂಗ್: ** 

click me!