ತೆರೆ ಮೇಲೆ ಆರ್ಭಟಿಸಲು ಸಜ್ಜಾಗಿದೆ ಟಗರು; ನಿರ್ದೇಶಕ ಸೂರಿ ಚಿತ್ರದ ಬಗ್ಗೆ ಹೇಳುವುದೇನು?

By Suvarna Web DeskFirst Published Feb 9, 2018, 11:47 AM IST
Highlights

ಬೆಂಗಳೂರು (ಫೆ.09): ‘ದೊಡ್ಮನೆ ಹುಡುಗ’ ಬಂದು ಹೆಚ್ಚು ಕಡಿಮೆ ಒಂದೂವರೆ ವರ್ಷ. ನಿರ್ದೇಶಕ ಸೂರಿ ದುನಿಯಾದಲ್ಲಿ ಈಗ ‘ಟಗರು’ ಆರ್ಭಟಿಸುತ್ತಿದೆ. ಆಡಿಯೋ ಹಿಟ್ ಆಗಿದೆ. ಫೆ. 23 ಕ್ಕೆ ‘ಟಗರು’ ತೆರೆ ಮೇಲೆ ಬರುವುದು ಖಾತರಿ ಆಗಿದೆ. ‘ಕಡ್ಡಿ ಪುಡಿ’ ನಂತರ ಶಿವಣ್ಣ ಜತೆಗೆ ಸೂರಿ ಹೇಳ ಹೊರಟ ಕತೆಯೇನು ಅನ್ನೋದೇ ಇಲ್ಲಿರುವ ಬಹುದೊಡ್ಡ ಕುತೂಹಲ. ರಿಲೀಸ್ ಸಿದ್ಧತೆಯಲ್ಲಿ ನಿರ್ದೇಶಕ ಸೂರಿ ಟಗರು ಬಗ್ಗೆ ಹೇಳಿದ್ದೇನು? ಅವರ ಮಾತುಗಳು ಇಲ್ಲಿವೆ.

ಬೆಂಗಳೂರು (ಫೆ.09): ‘ದೊಡ್ಮನೆ ಹುಡುಗ’ ಬಂದು ಹೆಚ್ಚು ಕಡಿಮೆ ಒಂದೂವರೆ ವರ್ಷ. ನಿರ್ದೇಶಕ ಸೂರಿ ದುನಿಯಾದಲ್ಲಿ ಈಗ ‘ಟಗರು’ ಆರ್ಭಟಿಸುತ್ತಿದೆ. ಆಡಿಯೋ ಹಿಟ್ ಆಗಿದೆ. ಫೆ. 23 ಕ್ಕೆ ‘ಟಗರು’ ತೆರೆ ಮೇಲೆ ಬರುವುದು ಖಾತರಿ ಆಗಿದೆ. ‘ಕಡ್ಡಿ ಪುಡಿ’ ನಂತರ ಶಿವಣ್ಣ ಜತೆಗೆ ಸೂರಿ ಹೇಳ ಹೊರಟ ಕತೆಯೇನು ಅನ್ನೋದೇ ಇಲ್ಲಿರುವ ಬಹುದೊಡ್ಡ ಕುತೂಹಲ. ರಿಲೀಸ್ ಸಿದ್ಧತೆಯಲ್ಲಿ ನಿರ್ದೇಶಕ ಸೂರಿ ಟಗರು ಬಗ್ಗೆ ಹೇಳಿದ್ದೇನು? ಅವರ ಮಾತುಗಳು ಇಲ್ಲಿವೆ.

 ‘ದೊಡ್ಮನೆ ಹುಡುಗ’ದ ನಂತರ ಮತ್ತೆ ಆ್ಯಕ್ಷನ್ ಕಟ್ ಜತೆ ಬರಲು ತಡವಾಯಿತು ಅಂತ ಅನಿಸಿಲ್ವಾ?

ಅವಸರಕ್ಕೆ ಸಿನಿಮಾ ಮಾಡುವ ಸ್ವಭಾವ ನಂದಲ್ಲ. ಸಿನಿಮಾ ಮಾಡೋದಕ್ಕೆ ನನ್ನ ಪ್ರಕಾರ ಒಂದಷ್ಟು ಸಮಯ, ಸಿದ್ಧತೆ ಬೇಕು. ಅದು ನಾನು ಸಿನಿಮಾ ಮಾಡುವ ಶೈಲಿ, ರೀತಿ, ನೀತಿ. ತಡವಾಗೋದಕ್ಕೆ ಅವೆಲ್ಲವೂ ಕಾರಣ ಇರುತ್ತವೆ. ಅದರಾಚೆ, ತಡವಾಯಿತು, ಯಾಕಾಯಿತು ಎನ್ನುವ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇಲ್ಲ. 135 ದಿನಗಳ ಚಿತ್ರೀಕರಣದ ಸಮಯ ಅಂದ್ರೆ ಅದು ತಮಾಷೆಯೂ ಅಲ್ಲ.

ಟಗರು ಫೆ.23 ಕ್ಕೆ ರಿಲೀಸ್ ಆಗ್ತಿದೆ, ಅದರ ಸಿದ್ಧತೆ ಹೇಗಿದೆ?

ರಿಲೀಸ್ ಸಿದ್ಧತೆ ನಂದಲ್ಲ. ಚಿತ್ರವನ್ನು ಎಷ್ಟು ಥಿಯೇಟರ್‌ನಲ್ಲಿ ರಿಲೀಸ್ ಮಾಡ್ಬೇಕು, ಪ್ರಮೋಷನ್ ಹೇಗಿರ್ಬೇಕು ಅನ್ನೋದೆಲ್ಲವು ನಿರ್ಮಾಪಕ ಶ್ರೀಕಾಂತ್ ಅವರದ್ದೇ ನಿರ್ಧಾರ. ಅದರಲ್ಲಿ ಅವರೇ ಹೆಚ್ಚು ಅನುಭವಿಗಳು. ಅವರಿಗೆ ಬೆಂಬಲವಾಗಿ ನಿಲ್ಲೋದು ನಮ್ಮ ಕೆಲಸ. ಸದ್ಯಕ್ಕೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಾನು ಬ್ಯುಸಿ. ಯಾಕಂದ್ರೆ, ಗುಣಮಟ್ಟ ಮುಖ್ಯ. ಅದೆಲ್ಲವನ್ನು ಹೇಗೆ ಕೊಡ್ಬೇಕು, ಏನ್ ಮಾಡ್ಬೇಕು ಅನ್ನೋದೇ ಈಗ ನನ್ನ ಮುಂದಿರುವ ಕೆಲಸ. ಅದರಲ್ಲೇ ಓಡಾಟ ನಡೆದಿದೆ.

'ಟಗರು' ಅನ್ನೋ ಟೈಟಲ್ ಮೂಲಕ ನೀವು ತೆರೆ ಮೇಲೆ ಹೇಳ ಹೊರಟಿದ್ದೇನು?

ಇದೊಂದು ಪೊಲೀಸ್ ಕತೆ. ಪೊಲೀಸ್ ಅಂದ್ರೆ ಪಾಸಿಟಿವ್ ಆಲೋಚನೆಗಿಂತ ನೆಗೆಟಿವ್ ಮಾತುಗಳೇ ಜಾಸ್ತಿ. ಸೊಸೈಟಿಯಲ್ಲಿ ಅಂಥದೊಂದು ವ್ಯವಸ್ಥೆ ಇರುವ ಕಾರಣಕ್ಕಾಗಿಯೇ ನಾವೆಲ್ಲ ಸೇಫ್ ಆಗಿದ್ದೇವೆ ಅನ್ನೋದು ಅಷ್ಟಾಗಿ ಚರ್ಚೆ ಆಗೋಲ್ಲ. ಅವರ ಬಗ್ಗೆ ಮೆಚ್ಚುಗೆ ಬರೋಲ್ಲ. ಬದಲಿಗೆ ಅವರ ಒರಟುತನ, ಥರ್ಡ್‌ಗ್ರೇಡ್ ಲ್ಯಾಂಗ್ವೇಜ್ ಬಳಕೆ, ಕೆಲವರು ಮಾಡಿದ ವಸೂಲಿ ಕೆಲಸಗಳೇ ಹೈಲೆಟ್ ಆಗುತ್ತಿವೆ. ಅದರಾಚೆ ಪೊಲೀಸ್ ಅನ್ನೋದು ಸೊಸೈಟಿಗೆ ಯಾಕೆ ಮುಖ್ಯ ಅನ್ನೋದನ್ನು ಇಲ್ಲಿ ಒಂದು ಪೊಲೀಸ್ ಪಾತ್ರದ ಮೂಲಕ ಹೇಳಹೊರಟಿದ್ದೇನೆ. ಅದರ ಸುತ್ತ ಒಂದಷ್ಟು ಪಾತ್ರಗಳು, ಸಿನಿಮಾ ಶೈಲಿಗೆ ಬೇಕಾಗುವ ಟ್ವಿಸ್ಟ್‌ಗಳು, ಪ್ರೇಕ್ಷಕರನ್ನು ರಂಜಿಸಲು ಹಾಡುಗಳು ಇವೆ.

ಟಗರು ಅನ್ನೋ ಟೈಟಲ್‌ಗೂ ಈ ಕತೆಗೂ ಲಿಂಕ್ ಹೇಗೆ?

ನಿರ್ಮಾಪಕರಾದ ಶ್ರೀಕಾಂತ್ ಬಳಿ ನಾಗಿ ಅಂತ ಒಬ್ಬರು ಇದ್ದಾರೆ. ಅವರೇ ಈ ಟೈಟಲ್‌ನ ಸೃಷ್ಟಿ ಕರ್ತರು. ಅವರಿಗೆ ಸಿಕ್ಕಾಪಟ್ಟೆ ಟಗರು ಕ್ರೇಜ್. ಅವರು ಸೃಷ್ಟಿಸಿದ ಟೈಟಲ್ ಸುತ್ತ ಒಂದಷ್ಟು ಕತೆಗಳನ್ನು ಅವರೇ ಸೃಷ್ಟಿಸಿದ್ದರು. ಜತೆಗೆ ಅದು ಸಕತ್ ಫೋರ್ಸ್ ಇರೋ ಟೈಟಲ್, ಹಾಗೆಯೇ ಸಾಮಾನ್ಯವಾಗಿ ಜನರಲ್ಲೂ ಟಗರಿನ ಶಕ್ತಿ, ಯುಕ್ತಿ ಗೊತ್ತಿದೆ. ಅದನ್ನೇ ಯಾಕೆ ಕತೆಗೆ ಟೈಟಲ್ ಆಗಿ ಬಳಸಿಕೊಳ್ಳಬಾರದು ಅನ್ನೋ ಚರ್ಚೆಯಲ್ಲಿ ಫೈನಲ್ ಆದ ಟೈಟಲ್ ಇದು. ಅದಕ್ಕೆ ಪೂರಕವಾಗಿಯೇ ಆ ಪಾತ್ರದ ಶಕ್ತಿ ಮತ್ತು ಯುಕ್ತಿಯ ಗುಣಗಳನ್ನು ಸೃಷ್ಟಿಸಲಾಯಿತು. ಅದೇ ಇವತ್ತು ದೊಡ್ಡ ಕ್ರೇಜ್ ಆಗಿರೋದು ಖುಷಿ ತರುತ್ತಿದೆ.

ಸೂರಿ ಅಂದ್ರೆ ಸುಕ್ಕ ಅನ್ನುತ್ತೆ ಗಾಂಧಿನಗರ. ಈ ಕತೆಗೂ ಏನಾದ್ರು ಅಂತಹ ನೈಜ ಘಟನೆಯ ಪ್ರಭಾವ ಇದೆಯಾ?

ಪ್ರತಿ ಕತೆಗಳು ನೈಜ ಘಟನೆಗಳ ಪ್ರಭಾವದಿಂದಲೇ ಹುಟ್ಟುತ್ತವೆ. ಕತೆ ಬರೆ ಯುವ ಲೇಖಕರಿಗೆ ಅಂತಹ ಘಟನೆಗಳು ಕಂಡಾಗಲೇ ಅದು ಹೊಸದೊಂದು ರೂಪದಲ್ಲಿ ಒಂದು ಕತೆಯಾಗಿ ಅಥವಾ ಕಾದಂಬರಿ ಆಗಿ ಓದುಗರ ಮುಂದೆ ಬರುತ್ತದೆ. ಸಿನಿಮಾ ಅನ್ನೋದು ಕೂಡ ಹಾಗೆಯೇ. ಕಾಲ್ಪನಿಕ ಕತೆ ಅಂತ ಹೇಳಿದ್ರೂ ಯಾವುದೋ ಒಂದು ನೈಜ ಘಟನೆ ಅದರ ಹಿಂದಿರುತ್ತದೆ. ಅಂಥದ್ದೇ ಒಂದು ಘಟನೆಯಿಂದ ಹುಟ್ಟಿಕೊಂಡ ಕತೆಯಿದು. ಆದರಾಚೆ, ಇಂಥದ್ದೇ ವ್ಯಕ್ತಿಯ ಕತೆ ಅಂತ ಹೇಳೋದಕ್ಕೆ ಆಗೋದಿಲ್ಲ.

‘ಕಡ್ಡಿಪುಡಿ’ ನಂತರ ಮತ್ತೆ ನೀವು ಶಿವಣ್ಣ ಜತೆಗೆಯೇ ಸಿನಿಮಾ ಮಾಡ್ಬೇಕು ಅಂತಂದುಕೊಂಡಿದ್ದೇಕೆ?

ಹಾಗೆ ಅಂದುಕೊಂಡು ಶುರುವಾದ ಸಿನಿಮಾ ಇದಲ್ಲ. ಕೆಲವನ್ನು ಊಹೆ ಮಾಡೋದಕ್ಕೆ ಆಗೋದಿಲ್ಲ. ಸಂದರ್ಭ ಮತ್ತು ಸನ್ನಿವೇಶ ಅಷ್ಟೆ. ಟಗರು ಅನ್ನೋ ಟೈಟಲ್, ಅದರಷ್ಟೇ ಬಲವುಳ್ಳ ಒಂದು ಪಾತ್ರ, ಅದಕ್ಕೆ ಯಾರು ಸೂಕ್ತ ಅಂತ ಅಂತಂದುಕೊಂಡಾಗ ಶಿವಣ್ಣ ಫಿಕ್ಸ್ ಆದ್ರು. ಆಡಿಯೋ ಹಿಟ್ ಆಗಿದ್ದು ಒಂದೆಡೆಯಾದ್ರೆ, ರಿಲೀಸ್‌'ಗೂ ಮುನ್ನವೇ ಒಂದು ಹಾಡು ಡಿಜೆ ನೈಟ್ಸ್‌ಗೆ ಪ್ರೇರಣೆ ಆಗುವಷ್ಟು ದೊಡ್ಡ ಕ್ರೇಜ್ ಇದೆ. ಇದು ಹೇಗೆ ಅಂತ.. ಅದನ್ನು ಹೇಗೆ ಅಂತ ಹೇಳೋದು. ಶಿವರಾಜ್ ಕುಮಾರ್ ಅದರ ಕಾರಣ.

ಅವರಿಂದಲೇ ಇವತ್ತು ಟಗರು ಇಷ್ಟು ದೊಡ್ಡ ಹವಾ ಎಬ್ಬಿಸಿದೆ. ಇನ್ನೊಂದು ವಿಶೇಷ ಅಂದ್ರೆ ಶುಕ್ರವಾರದ (ಫೆ.10)ಡಿಜೆ ನೈಟ್ಸ್‌ಗೆ ಪ್ರೇರಣೆ ಆದ ಟಗರು ಬಂತು ಟಗರು ಹಾಡು ಮೊದಲು ಚಿತ್ರದಲ್ಲಿಯೇ ಇರಲಿಲ್ಲ. ಅದು ಬೇಡ ಅಂತ ನಾನು ಮತ್ತು ಸಂಗೀತ ನಿರ್ದೇಶಕ ಚರಣ್‌ರಾಜ್  ಡಿಸೈಡ್ ಮಾಡಿದ್ದೆವು. ಇರಲಿ ಅಂತ ಆಡಿಯೋದಲ್ಲಿ ಅದನ್ನು ಬಿಟ್ಟೆವು. ನೋಡಿದ್ರೆ ಇವತ್ತು ಅದೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಹೀಗೆ ಮಾಡಿದ್ರೆ, ಹೀಗೆ ಆಗುತ್ತೆ ಅಂತ ನಿರ್ಧರಿಸಿ ಏನನ್ನು ಮಾಡೋದಕ್ಕೆ ಆಗೋದಿಲ್ಲ ಅನ್ನೋದಕ್ಕೆ ಇದು ಸಾಕ್ಷಿ. ನಮ್ಮ ಕೆಲಸವನ್ನು ನಾವ್ ಶ್ರದ್ಧೆಯಿಂದ ನೀಟಾಗಿ ಮಾಡ್ಬೇಕು ಅಷ್ಟೆ. ಅದು ಏನಾಗುತ್ತೋ ಮುಂದಿನದ್ದು.

‘ಕಾಗೆ ಬಂಗಾರ’ ಶುರುವಾಗುವುದು ಯಾವಾಗ?

ರೈಟಿಂಗ್ ವರ್ಕ್ ಕಂಪ್ಲೀಟ್ ಆಗಿದೆ. ಕತೆ, ಚಿತ್ರಕತೆ ಹಾಗೂ ಡೈಲಾಗ್ ಎಲ್ಲವೂ ರೆಡಿ ಆಗಿವೆ. ಶೂಟಿಂಗ್ ಶುರುವಾಗಬೇಕು. ಟಗರು 135 ದಿನಗಳ ಶೆಡ್ಯೂಲ್ ಆಗಿದ್ದ ಕಾರಣಕ್ಕೆ ಅತ್ತ ಹೆಚ್ಚು ಗಮನ ಕೊಡುವುದಕ್ಕೆ ಆಗಲಿಲ್ಲ. ಈಗ ಚಿತ್ರ ರಿಲೀಸ್‌ಗೆ ಫಿಕ್ಸ್ ಆಗಿದೆ. ಮುಂದೆ ಅದರದ್ದೇ ಕೆಲಸ. ಮಾರ್ಚ್‌ನಲ್ಲಿ ಶೂಟಿಂಗ್ ಶುರು.

-ಸಂದರ್ಶನ:ದೇಶಾದ್ರಿ ಹೊಸ್ಮನೆ

 

click me!