ಸ್ಟಾರ್‌ಗಳಿಗೆ ಕತೆ ಬರೆದು ಸಿನಿಮಾ ಮಾಡೋನಲ್ಲ ನಾನು: ನಾಗಾಭರಣ

By Kannadaprabha NewsFirst Published Jan 17, 2019, 8:47 AM IST
Highlights

ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿ ‘ಜುಗಾರಿಕ್ರಾಸ್‌’ ದೃಶ್ಯರೂಪಕ್ಕೆ ಬರಲಿದೆ. ಚಿತ್ರಕತೆ ಪೂರ್ತಿಯಾಗಿದ್ದು, ಕಲಾವಿದರು ಹಾಗೂ ತಂತ್ರಜ್ಞರು ಫೈನಲ್‌ ಆಗುವುದು ಮಾತ್ರ ಬಾಕಿಯಿದೆ. ಮಾರ್ಚ್ ತಿಂಗಳಿನಿಂದಲೇ ‘ಜುಗಾರಿಕ್ರಾಸ್‌’ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಈ ಕುರಿತು ಚಿತ್ರದ ನಿರ್ದೇಶಕ ನಾಗಾಭರಣ ಪೂರ್ತಿ ಮಾಹಿತಿ ನೀಡಿದ್ದಾರೆ.

ಛಾಯಾಗ್ರಾಹಕ ವೇಣು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಶಶಿಧರ ಅಡಪ ಕಲೆ ಈ ಚಿತ್ರಕ್ಕಿದೆ.

ಅಂದಿನ ಮಲೆನಾಡು ಈಗಿಲ್ಲ, ಕತೆ ಈ ಕಾಲಕ್ಕೆ ತಕ್ಕಂತಿದೆ

ತೇಜಸ್ವಿ ಅವರು ಈ ಕಾದಂಬರಿ ಬರೆದಿದ್ದು ಸುಮಾರು 20 ವರ್ಷಗಳ ಹಿಂದೆ. ಆಗಿನ ಮಲೆನಾಡು ಬೇರೆಯೇ ಇತ್ತು. ಹಾಗಿಯೇ ಅಲ್ಲಿನ ಜೀವ ವೈವಿದ್ಯತೆಯೂ ವಿಭಿನ್ನವಾಗಿತ್ತು. ಮೊಬೈಲ್‌ ಕೂಡ ಬಂದಿರಲಿಲ್ಲ. ಎಲ್ಲಾ ಒಂದು ಕಡೆ ಟೆಲಿಫೋನ್‌ ಸಂಪರ್ಕ ಇತ್ತು ಎನ್ನುವುದನ್ನು ತೇಜಸ್ವಿ ಅವರೇ ಕಾದಂಬರಿಯಲ್ಲಿ ಹೇಳುತ್ತಾರೆ. ಅಂತಹ ಕಾಲಘಟ್ಟದ ಒಂದು ಕತೆಯನ್ನು ಸಿನಿಮಾಕ್ಕೆ ತರುವಾಗ ಈ ಕಾಲದ ಅರಿವು ಕೂಡ ಮುಖ್ಯ. ಯಾಕಂದ್ರೆ, ಅವತ್ತಿನ ಮಲೆನಾಡು ಈಗಿಲ್ಲ. ಹಾಗೆಯೇ ಅದರ ಜೀವ ವೈವಿಧ್ಯೆತೆಯಲ್ಲೂ ಸಾಕಷ್ಟುಚೇಂಜಸ್‌ ಕಾಣುತ್ತಿದೆ. ಟೆಲಿಪೋನ್‌ ಬದಲಿಗೆ ಇವತ್ತು ಮಲೆನಾಡಿನ ಉದ್ದಗಲಕ್ಕೂ ಮೊಬೈಲ್‌ ಕ್ರಾಂತಿ ಆಗಿದೆ. ಅದರ ಅರಿವಿಲ್ಲದೆ 20 ವರ್ಷಗಳ ಕತೆಯನ್ನು ಯಾಥಾವತ್ತಾಗಿ ತೆರೆಗೆ ತಂದರೆ, ಅದರ ಪ್ರಸ್ತುತತೆಯೇ ಗೌಣವಾಗಿ ಬಿಡುತ್ತದೆ. ಹಾಗಾಗಿಯೇ ಹತ್ತು ತಿಂಗಳಿನಿಂದ ಚಿತ್ರ ಕತೆ ಬರೆಯುತ್ತಾ ಬರೆಯುತ್ತಾ ಬರೋಬ್ಬರಿ 17ನೇ ವರ್ಷನ್‌ಗೆ ಅದು ಓಕೆ ಆಗಿದೆ. ಅಷ್ಟೊಂದು ಚೇಂಜಸ್‌ ಯಾಕಾಯಿತು ಎಂದರೆ, ಕಾಲಕ್ಕೆ ತಕ್ಕಂತೆ ಅದನ್ನು ತೆರೆ ಮೇಲೆ ತೋರಿಸಬೇಕೆನ್ನುವ ಕಾರಣ.

ಕತೆಗೆ ತಕ್ಕ ಸ್ಟಾರ್‌ ಹುಡುಕುತ್ತೇನೆ

ನಾನು ಸ್ಟಾರ್‌ಗಳಿಗೆ ಕತೆ ಬರೆದು ಸಿನಿಮಾ ಮಾಡುವವನಲ್ಲ. ಕತೆ, ಚಿತ್ರಕತೆ, ಸಂಭಾಷಣೆ ಬರೆದು ಅದಕ್ಕೆ ತಕ್ಕಂತೆ ಸ್ಟಾರ್‌ ಯಾರು ಬೇಕು ಅಂತ ಆಯ್ಕೆ ಮಾಡಿಕೊಳ್ಳುವುದು ನನ್ನ ಸ್ವಭಾವ. ಈಗಷ್ಟೇ ಸ್ಕಿ್ರಪ್ಟ್‌ ವರ್ಕ್ ಮುಗಿದಿದೆ. ಈಗ ಸೂಕ್ತ ಕಲಾವಿದರನ್ನು ಹುಡುಕಬೇಕಿದೆ. ಇಲ್ಲಿ ತನಕ ಯಾರು, ಏನು ಅಂತ ನಾನಿನ್ನು ಯೋಚಿಸಿಯೂ ಇಲ್ಲ. ಏನೇನೋ ಸುದ್ದಿ ಬಂದರೆ ಅದೆಲ್ಲ ನಿಜ ಅಂತ ನಾನು ಹೇಳೋದಿಲ್ಲ. ಅಧಿಕೃತ ಅಂತ ಆಗುವುದು ಮಾತುಕತೆ ಫೈನಲ್‌ ಆದ ನಂತರವೇ. ಇಷ್ಟರಲ್ಲೇ ಆ ಪ್ರಕ್ರಿಯೆ ಶುರುವಾಗುತ್ತದೆ. ಕತೆಯ ಪಾತ್ರಕ್ಕೆ ಯಾರು ಹೊಂದಿಕೆ ಆಗಬಲ್ಲರೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

click me!