ಬೋಲ್ಡ್ ಸೀನ್ಸ್‌ಗೆ ಓಕೆ, ಆದರೆ ಈ ಕಂಡೀಷನ್ ಇರಲೇಬೇಕು: ಕನ್ನಡತಿ ಕಯಾದು ಲೋಹರ್ ಸ್ಪಷ್ಟನೆ

Published : Sep 06, 2026, 03:54 PM IST
Kayadu Lohar

ಸಾರಾಂಶ

ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಪ್ರೇಕ್ಷಕರ ಗಮನ ಸೆಳೆಯುವ ಅಲಂಕಾರಿಕ ವಸ್ತುಗಳಂತೆ ತೋರಿಸುವ ಪ್ರವೃತ್ತಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಯಂಗ್ ಹೀರೋಯಿನ್ ಕಯಾದು ಲೋಹರ್ ಸ್ಪಷ್ಟಪಡಿಸಿದ್ದಾರೆ.

ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಪ್ರೇಕ್ಷಕರ ಗಮನ ಸೆಳೆಯುವ ಅಲಂಕಾರಿಕ ವಸ್ತುಗಳಂತೆ ತೋರಿಸುವ ಪ್ರವೃತ್ತಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲ ಎಂದು ಯಂಗ್ ಹೀರೋಯಿನ್ ಕಯಾದು ಲೋಹರ್ ಸ್ಪಷ್ಟಪಡಿಸಿದ್ದಾರೆ. ಕಥೆ ಮತ್ತು ಪಾತ್ರದ ಔಚಿತ್ಯಕ್ಕೆ ಅಗತ್ಯವಿದ್ದರೆ, ಮಿತಿಯೊಳಗೆ ಬೋಲ್ಡ್ ಆಗಿ ನಟಿಸಲು ಯಾವುದೇ ಆಕ್ಷೇಪವಿಲ್ಲ. ಆದರೆ ಕೇವಲ ಲೈಮ್‌ಲೈಟ್‌ಗಾಗಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಬೇಕೆಂಬ ಕಾರಣಕ್ಕೆ ಅಶ್ಲೀಲ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ತಮ್ಮ ಮನಸ್ಸಾಕ್ಷಿಗೆ ಒಪ್ಪುವುದಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಕಯಾದು ಲೋಹರ್, ಕನ್ನಡ, ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ತಮಿಳಿನ ‘ಡ್ರ್ಯಾಗನ್’ ಚಿತ್ರದ ಮೂಲಕ ಭರ್ಜರಿ ಕ್ರೇಜ್ ಸಂಪಾದಿಸಿರುವ ಈ ಬೆಡಗಿ, ಸದ್ಯ ನಾನಿ ನಟನೆಯ ‘ದಿ ಪ್ಯಾರಡೈಸ್’ ಸೇರಿದಂತೆ ಸೂರ್ಯ, ರಜನಿಕಾಂತ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರತಿಭೆ ಮತ್ತು ಸೌಂದರ್ಯ ಎರಡನ್ನೂ ಹೊಂದಿರುವ ನಾಯಕಿಯರಿಗೆ ಕೊರತೆಯೇನಿಲ್ಲ. ಆದರೆ ಕಡಿಮೆ ಅವಧಿಯಲ್ಲೇ ಭಾಷೆಯ ಗಡಿಗಳನ್ನು ದಾಟಿ ವಿಭಿನ್ನ ಕಥಾಹಂದರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂತಹ ಅಪರೂಪದ ಸಾಲಿನಲ್ಲಿ ಗುರುತಿಸಿಕೊಂಡಿರುವ ನಟಿ ಕಯಾದು ಲೋಹರ್.

ಅಸ್ಸಾಂನಲ್ಲಿ ಜನಿಸಿ ಪುಣೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕಯಾದು, ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿ ಬಳಿಕ ಬೆಳ್ಳಿತೆರೆಗೆ ಕಾಲಿಟ್ಟರು. ಸದ್ಯ ದಕ್ಷಿಣ ಭಾರತದ ಹಲವು ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಅವರು, ಸಿನಿಮಾಗಳಲ್ಲಿ ಮಹಿಳೆಯರನ್ನು ತೋರಿಸುವ ರೀತಿಯ ಬಗ್ಗೆಯೂ ತಮ್ಮದೇ ನಿಲುವು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಯಾದು, ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳನ್ನು ಚಿತ್ರಿಸುವ ವಿಧಾನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೇವಲ ಮನರಂಜನೆಗಾಗಿ ಅಥವಾ ವೀಕ್ಷಕರ ಗಮನ ಸೆಳೆಯುವ ಉದ್ದೇಶದಿಂದ ಮಹಿಳೆಯರನ್ನು ಅಸಭ್ಯವಾಗಿ ತೋರಿಸುವುದನ್ನು ತಾನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ.

ಯಾವುದೇ ತೃಪ್ತಿ ಸಿಗುವುದಿಲ್ಲ

'ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಸುಂದರ ವಸ್ತುವಿನಂತೆ, ಅಲಂಕಾರಿಕವಾಗಿ ಮಾತ್ರ ತೆರೆ ಮೇಲೆ ತೋರಿಸುವುದನ್ನು ನಾನು ಒಪ್ಪುವುದಿಲ್ಲ. ಒಂದು ದೃಶ್ಯದಲ್ಲಿ ಬೋಲ್ಡ್‌ನೆಸ್ ಕಥೆಗೆ ಎಷ್ಟು ಅಗತ್ಯ ಎಂಬುದೇ ನನಗೆ ಮುಖ್ಯ. ಪಾತ್ರದ ಔಚಿತ್ಯಕ್ಕೆ ಅದು ಬೇಕಾದರೆ, ಒಂದು ಹಂತದವರೆಗೆ ಮಿತಿಯೊಳಗೆ ನಟಿಸಲು ನನಗೆ ಯಾವುದೇ ತೊಂದರೆ ಇಲ್ಲ. ಆದರೆ ಕೇವಲ ಪ್ರೇಕ್ಷಕರ ಗಮನ ಸೆಳೆಯಲು ಅಸಭ್ಯತೆಯನ್ನು ಸೇರಿಸಿದರೆ ಅಂತಹ ಸಿನಿಮಾಗಳನ್ನು ನಾನು ಒಪ್ಪುವುದಿಲ್ಲ. ಆ ರೀತಿಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಬಹುದು. ಆದರೆ ಒಬ್ಬ ನಟಿಯಾಗಿ ನನ್ನ ಮನಸ್ಸಾಕ್ಷಿಗೆ ಅದರಿಂದ ಯಾವುದೇ ತೃಪ್ತಿ ಸಿಗುವುದಿಲ್ಲ' ಎಂದು ಕಯಾದು ಹೇಳಿದ್ದಾರೆ.

‘ಟೈಮ್ಸ್ ಫ್ರೆಶ್ ಫೇಸ್’ ಸ್ಪರ್ಧೆಯಲ್ಲಿ ವಿಜೇತರಾಗಿ ಗಮನ ಸೆಳೆದ ಕಯಾದು, ಬಳಿಕ ನಟನೆಯತ್ತ ಮುಖ ಮಾಡಿದರು. ಕನ್ನಡದ ‘ಮುಗಿಲ್‌ಪೇಟೆ’ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಅವರು, ಮಲಯಾಳಂನ ಐತಿಹಾಸಿಕ ಚಿತ್ರ ‘ಪತ್ತೊಂಬತಾಂ ನೂಟ್ಟಾಂಡು’ನಲ್ಲಿ ‘ನಂಗೇಲಿ’ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿ ವಿಮರ್ಶಕರ ಮೆಚ್ಚುಗೆ ಪಡೆದರು.

ಸಾಲು ಸಾಲು ಅವಕಾಶ

ಆ ಬಳಿಕ ಮರಾಠಿ ಚಿತ್ರರಂಗಕ್ಕೂ ಕಾಲಿಟ್ಟ ಕಯಾದು, ತೆಲುಗಿನಲ್ಲಿ ಶ್ರೀವಿಷ್ಣು ಜೊತೆಗಿನ ‘ಅಲ್ಲೂರಿ’ ಚಿತ್ರದ ಮೂಲಕ ಕಾಣಿಸಿಕೊಂಡರು. ನಂತರ ವಿಶ್ವಕ್ ಸೇನ್ ಅಭಿನಯದ ‘ಫಂಕಿ’ ಪ್ರಾಜೆಕ್ಟ್ ಮೂಲಕ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ತಮಿಳಿನಲ್ಲಿ ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿದ ‘ಡ್ರ್ಯಾಗನ್’ ಸಿನಿಮಾ ಕಯಾದು ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಚಿತ್ರದಲ್ಲಿನ ‘ಪಲ್ಲವಿ’ ಪಾತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರಿಂದ ಅವರಿಗೆ ಸಾಲು ಸಾಲು ಅವಕಾಶಗಳು ಬಂದವು.

ಸದ್ಯ ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಆ್ಯಕ್ಷನ್ ಸಿನಿಮಾ ‘ದಿ ಪ್ಯಾರಡೈಸ್’ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕಯಾದು, ತಮಿಳಿನಲ್ಲಿ ಸೂರ್ಯ (ಸೂರ್ಯ 48), ಶಿಂಬು ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ಯ ಕಯಾದು ಲೋಹರ್ ಮಿಂಚುತ್ತಿರುವ ಮೋಸ್ಟ್ ವಾಂಟೆಡ್ ನಾಯಕಿಯರ ಪೈಕಿ ಒಬ್ಬರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Hanuman Ansh: ಸ್ಮಾಲ್ ಬಜೆಟ್ ಚಿತ್ರದ ಬಿಗ್ ಕಮಾಲ್! 100 ಕೋಟಿ ಕ್ಲಬ್‌ ಸಮೀಪ ಬಂದ 'ಹನುಮಾನ್ ಅಂಶ್'
ಕಿಚ್ಚನ ಮುಂದೆ ಕನ್ನಡದಲ್ಲಿ ಮಾತಾಡಿದ ವಿಜಯ್ ಸೇತುಪತಿ: ಬಿಗ್ ಬಾಸ್ 13 ಪ್ರೋಮೋ ಫುಲ್ ವೈರಲ್