ಮಗಳ ಬೆಂಬಲಕ್ಕೆ ಆಕ್ಷನ್ ಕಿಂಗ್ ಖಡಕ್ ನಿಲುವು: ಸುಳ್ಳು ಆರೋಪಗಳ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ

Published : Nov 19, 2026, 06:24 PM IST
Arjun Sarja daughter

ಸಾರಾಂಶ

ಮಗಳು ಐಶ್ವರ್ಯ ಅರ್ಜುನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುಳ್ಳು ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ನಟ ಅರ್ಜುನ್ ಸರ್ಜಾ ಮೌನ ಮುರಿದಿದ್ದಾರೆ. ಮಗಳ ಗೌರವಕ್ಕೆ ಧಕ್ಕೆ ತರುವ ಅಪಪ್ರಚಾರವನ್ನು ಖಂಡಿಸಿದ್ದಾರೆ.

ನಟ ಹಾಗೂ ನಿರ್ದೇಶಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಹಿರಿಯ ಮಗಳು ಐಶ್ವರ್ಯ ಅರ್ಜುನ್ ಅವರ ವೈಯಕ್ತಿಕ ಜೀವನದ ಕುರಿತು ಹರಿದಾಡುತ್ತಿರುವ ವದಂತಿಗಳು ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಗಳ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಖಂಡಿಸಿರುವ ಅವರು, ಆಕೆಯ ವ್ಯಕ್ತಿತ್ವದ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ತಮ್ಮ ಕಿರಿಯ ಮಗಳು ಅಂಜನಾ ಅವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಅರ್ಜುನ್ ಸರ್ಜಾ ತಮ್ಮ ಹೇಳಿಕೆಯನ್ನು ಆರಂಭಿಸಿದ್ದಾರೆ. ಆದರೆ, ಕುಟುಂಬದ ಖಾಸಗಿ ವಿಚಾರವೊಂದರ ಕುರಿತು ಸಾರ್ವಜನಿಕವಾಗಿ ಮಾತನಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಗಳ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಇಷ್ಟವಿರಲಿಲ್ಲ!

ಐಶ್ವರ್ಯ ಅವರ ವೈಯಕ್ತಿಕ ಜೀವನದ ವಿಚಾರದಲ್ಲಿ ಈ ಹಿಂದೆ ತಾವು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದುದಕ್ಕೆ ಕಾರಣವನ್ನೂ ಅರ್ಜುನ್ ಸರ್ಜಾ ವಿವರಿಸಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಸ್ವತಂತ್ರವಾಗಿ ಬದುಕುವ ಹಕ್ಕಿದೆ ಎಂಬುದು ತಮ್ಮ ನಂಬಿಕೆ. ಹೀಗಾಗಿ ಮಗಳ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದೆ ಆಕೆಯ ಆಯ್ಕೆಗಳನ್ನು ಗೌರವಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ.

ಆದರೆ, ಇದೀಗ ಮಗಳ ವ್ಯಕ್ತಿತ್ವ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಸುಳ್ಳು ಮತ್ತು ಅತ್ಯಂತ ಅವಹೇಳನಕಾರಿ ಆರೋಪಗಳು ಹರಿದಾಡುತ್ತಿರುವುದನ್ನು ಕಂಡು ಸುಮ್ಮನಿರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅದರಲ್ಲೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಆರೋಪಗಳು ಬೇಜವಾಬ್ದಾರಿಯುತವಾಗಿದ್ದು, ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಚಾರಕ್ಕಾಗಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದೇಕೆ?

ಮಾಧ್ಯಮಗಳ ಕೆಲವು ವಿಭಾಗಗಳ ವರ್ತನೆಯ ಬಗ್ಗೆಯೂ ಅರ್ಜುನ್ ಸರ್ಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸದೆ ಆಧಾರರಹಿತ ಆರೋಪಗಳು ಮತ್ತು ವೈಯಕ್ತಿಕ ವಿಚಾರಗಳನ್ನು ವೈಭವೀಕರಿಸಿ ಪ್ರಚಾರ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ. ಸತ್ಯ ಅಥವಾ ವಿಶ್ವಾಸಾರ್ಹತೆಗಿಂತ ಹೆಚ್ಚು ಗಮನ ಸೆಳೆಯುವುದು ಮತ್ತು ಸುದ್ದಿಗಳನ್ನು ಮಾರಾಟ ಮಾಡುವುದಕ್ಕೆ ಆದ್ಯತೆ ನೀಡುತ್ತಿರುವುದು ಬೇಸರದ ಸಂಗತಿ ಎಂದಿದ್ದಾರೆ. ಸಾರ್ವಜನಿಕ ವ್ಯಕ್ತಿಗಳ ಜೀವನದ ಬಗ್ಗೆ ಚರ್ಚೆ ನಡೆಯಬಹುದು. ಆದರೆ, ಅದನ್ನೇ ನೆಪವಾಗಿಟ್ಟುಕೊಂಡು ವ್ಯಕ್ತಿಯ ಚಾರಿತ್ರ್ಯಕ್ಕೆ ಧಕ್ಕೆ ತರುವ ಅಥವಾ ವ್ಯಕ್ತಿತ್ವ ಹರಣ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಮಗಳ ಬೆಂಬಲಕ್ಕೆ ನಿಂತ ಅರ್ಜುನ್ ಸರ್ಜಾ; ಕಾನೂನು ಕ್ರಮದ ಎಚ್ಚರಿಕೆ

ಈ ವಿಚಾರ ಕೇವಲ ತಮ್ಮ ಕುಟುಂಬಕ್ಕೆ ಸೀಮಿತವಾಗಿಲ್ಲ ಎಂದಿರುವ ಅರ್ಜುನ್ ಸರ್ಜಾ, ವೈಯಕ್ತಿಕ ನಿರ್ಧಾರಗಳ ಕಾರಣಕ್ಕೆ ಮಹಿಳೆಯರು ಸಮಾಜದ ಮುಂದೆ ಅನಗತ್ಯ ತೀರ್ಪು ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಆರೋಪಗಳು ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅದರಲ್ಲೂ ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಪರಿಸ್ಥಿತಿ ಮತ್ತಷ್ಟು ನೋವುಂಟುಮಾಡಬಹುದು ಎಂದು ಹೇಳಿದ್ದಾರೆ.

ಇನ್ನು ತಮ್ಮ ಮಗಳು ಗೌರವ, ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಹಕ್ಕಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲುವುದಾಗಿ ಅರ್ಜುನ್ ಸರ್ಜಾ ಪುನರುಚ್ಚರಿಸಿದ್ದಾರೆ. ಇದೇ ವೇಳೆ, ಈ ಸಂಬಂಧ ಕುಟುಂಬದ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಮಾನಹಾನಿಕರ ಆರೋಪಗಳನ್ನು ಮತ್ತೆ ಹರಡುವುದು ಅಥವಾ ಅವುಗಳಿಗೆ ಪ್ರಚಾರ ನೀಡುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕೊನೆಯಲ್ಲಿ, 'ಗೌರವ ಮತ್ತು ಘನತೆ ಎಂದಿಗೂ ರಾಜಿ ಮಾಡಿಕೊಳ್ಳುವ ವಿಷಯಗಳಲ್ಲ' ಎಂಬ ದೃಢ ಸಂದೇಶದೊಂದಿಗೆ ಅರ್ಜುನ್ ಸರ್ಜಾ ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾದ ಗ್ಲಾಮರ್ ಬದಿಗಿಟ್ಟು ರಂಗಭೂಮಿ ತರಬೇತಿಯಲ್ಲಿ ತೊಡಗಿದ ನಟಿ ಸಂಯುಕ್ತಾ: ಫೋಟೋಸ್ ವೈರಲ್
Dr Rajkumar ಸಿನಿಮಾ ಪಯಣಕ್ಕೆ 'ಮೊದಲ ಮೆಟ್ಟಿಲು' ಆಗಿದ್ದೇ ಈ ಮಠ; ಮುತ್ತುರಾಜ್‌ಗೆ ಸಿನಿಮಾ ಅವಕಾಶ ಒಲಿದಿದ್ದು ಇಲ್ಲೇ!