
ಬೆಂಗಳೂರು (ಜ.13): ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನ ಅವ್ಯವಹಾರ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಹೆಸರಾದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಜೀವನ ಚರಿತ್ರೆ ಆಧರಿಸಿದ ಸಿನಿಮಾ ಬರುತ್ತಿದೆ ಅನ್ನುವುದು ಇತ್ತೀಚೆಗೆ ಸುದ್ದಿಯಾಗಿತ್ತು. ನಿರ್ದೇಶಕ ಎಎಂಆರ್ ರಮೇಶ್ ಆ ಸಿನಿಮಾ ಮಾಡಲು ಹೊರಟಿದ್ದರು. ಆದರೆ ಇಲ್ಲಿ ಕುತೂಹಲ ಇದ್ದಿದ್ದು, ರಮೇಶ್ ಚಿತ್ರಕ್ಕೆ ಐಪಿಎಸ್ ರೂಪಾ ಅನುಮತಿ ಕೊಟ್ಟಿದ್ದಾರಾ ಅನ್ನುವುದು. ಅದಕ್ಕೀಗ ಉತ್ತರ ಸಿಕ್ಕಿದೆ. ಸ್ವತಃ ರೂಪ ಅವರೇ ಆ ವಿಚಾರ ಬಹಿರಂಗ ಪಡಿಸಿದ್ದಾರೆ.
ಪಿಎಸ್ ರೂಪಾ ಹೇಳಿದ್ದಿಷ್ಟು: ‘ನನ್ನ ಸಿನಿಮಾ ಮಾಡಿ ಅಂತ ನಾನು ಯಾರಿಗೂ ಹೇಳಿಲ್ಲ. ಆ ರೀತಿಯ ಆಸಕ್ತಿಯೂ ನನಗಿಲ್ಲ. ಆದ್ರೆ ನಿರ್ದೇಶಕ ಎಎಂಆರ್ ರಮೇಶ್ ಒಮ್ಮೆ ಆಫೀಸ್‌ಗೆ ಬಂದಿದ್ದರು. ಒಬ್ಬ ಮಹಿಳಾ ಐಪಿಎಸ್ ಅಧಿಕಾರಿಯಾಗಿ ತಾವು ಸಲ್ಲಿಸುತ್ತಿರುವ ಸೇವೆಯ ಕುರಿತು ಒಂದು ಸಿನಿಮಾ ಮಾಡ್ಬೇಕು ಅಂತಂದುಕೊಂಡಿದ್ದೇನೆ. ಅದಕ್ಕೆ ನಿಮ್ಮ ಅನುಮತಿ ಬೇಕು. ಜತೆಗೆ ಸಹಕಾರ ಬೇಕು ಅಂತ ಕೇಳಿದ್ರು. ಆಗಲೇ ಅವರೊಂದು ಸ್ಟೋರಿ ಲೈನ್ ಹೇಳಿದ್ರು. ಬಹುತೇಕ ಆ ಸ್ಟೋರಿ ಪಾಸಿಟಿವ್ ಆಗಿತ್ತು.
ಯಾವುದೇ ಕಾಂಟ್ರೋವರ್ಸಿ ಇನ್ಸಿಡೆಂಟ್ ತೆಗೆದುಕೊಂಡಿರಲಿಲ್ಲ. ಹಾಗಾಗಿ, ಸಿನಿಮಾ ಮಾಡಿ ಪರ್ವಾಗಿಲ್ಲ. ಆದ್ರೆ, ಜೈಲು ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಮಾರ್ ರಿಪೋರ್ಟ್ ಸರ್ಕಾರಕ್ಕೆ ಸಲ್ಲಿಕೆ ಆಗಬೇಕಿದೆ. ಅದು ತುಂಬಾ ತಡವಾಗಿದೆ. ತಡವಾಗಿದ್ದು ಯಾಕೆ ಅಂತ ನಾನೇ ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದೇನೆ. ಹಾಗಾಗಿ ಒಂದಷ್ಟು ಕಾಯಿರಿ, ಆಮೇಲೆ ಸಿನಿಮಾ ಮಾಡಿ ಅಂತ ಹೇಳಿದ್ದೇನೆ’. ಪ್ರಿಯಾಂಕ ಉಪೇಂದ್ರ ಅಭಿನಯದ ‘ಸೆಕೆಂಡ್ ಹಾಫ್’ ಚಿತ್ರದ ಟ್ರೈಲರ್ ಲಾಂಚ್‌ಗೆ ಅತಿಥಿಯಾಗಿ ಬಂದಾಗ ಅವರು ಈ ವಿಷಯ ಹೇಳಿಕೊಂಡರು. ಆ ನಂತರ ‘ಸೆಕೆಂಡ್ ಹಾಫ್’ ಚಿತ್ರದ ಬಗ್ಗೆ ಮಾತನಾಡಿದರು.
‘ಈ ಚಿತ್ರ ಬಹಳ ವಿಶೇಷವಾದದ್ದು. ನಾವೆಲ್ಲ ನೋಡಿದ ಹಾಗೆ ಸಿನಿಮಾಗಳಲ್ಲಿ ಹಿರಿಯ ಅಧಿಕಾರಿಗಳನ್ನೇ ಹೆಚ್ಚಾಗಿ ತೋರಿಸಲಾಗುತ್ತದೆ. ಅವರೇ ದಕ್ಷತೆ ತೋರುತ್ತಾರೆ ಅನ್ನೋದು ತೆರೆ ಮೇಲೆ ಹೆಚ್ಚು ಕಾಣುತ್ತದೆ. ಆದರೆ, ಈ ಚಿತ್ರ ಒಬ್ಬ ಸಾಮಾನ್ಯ ಮಹಿಳಾ ಪೇದೆ ವೃತ್ತಿ ಬದುಕನ್ನು ತೋರಿಸಲು ಹೊರಟಿದೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.