
ಕೆಲ ಸಮಯದ ಹಿಂದೆ ತಮಗೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬನನ್ನು ಸಂಪೂರ್ಣವಾಗಿ ನಂಬಿ ಆತ ಹೇಳಿದಂತೆ ಹಣ ವಿನಿಯೋಗ ಮಾಡಿದ್ದರಿಂದ ತಮ್ಮ ಜೀವನದ ಉಳಿಕೆ ಎಲ್ಲವನ್ನು ಕೆಲ ಕ್ಷಣಗಳಲ್ಲಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾಗಿ ಹಿಂದಿ ಕಿರುತೆರೆಯಲ್ಲಿ ಕೆಲಸ ಮಾಡುವ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗ ಹಣಕಾಸಿಗೆ ಸಂಬಂಧಿಸಿದ ಸೈಬರ್ ಅಪರಾಧಗಳು ತೀವ್ರವಾಗಿ ಹೆಚ್ಚಳವಾಗಿದ್ದು, ಯಾರೋ ಕಷ್ಟಪಟ್ಟು ದುಡಿದ ಹಣವನ್ನು ಇನ್ಯಾರೋ ಕ್ಷಣದಲ್ಲಿ ಇಲ್ಲವಾಗಿಸುತ್ತಿದ್ದಾರೆ. ಈ ಮೋಸದ ಜಾಲಕ್ಕೆ ಏನೂ ತಿಳಿಯದವರಿಗಿಂತ ಶಿಕ್ಷಣ ಇರುವ ವಿದ್ಯಾವಂತರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ಈ ಕಿರುತೆರೆ ಜೋಡಿ. ಹಿಂದಿ ಕಿರುತೆರೆಯ ಖ್ಯಾತ ನಟಿ ಪೂಜಾ ಬ್ಯಾನರ್ಜಿ ಹಾಗೂ ಈಕೆ ಪತಿ ನಟ ಕುನಾಲ್ ವರ್ಮಾ ಹೀಗೆ ಮೋಸಕ್ಕೊಳಗಾದವರ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.
ತಮಗೆ ಇತ್ತೀಚೆಗೆ ಪರಿಚಯವಾದ ವ್ಯಕ್ತಿಯನ್ನು ನಂಬಲು ಹೋಗಿ ತಮ್ಮ ಸಂಪೂರ್ಣ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿದ್ದಾಗಿ ಈ ಜೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹೇಳಿಕೊಂಡಿದ್ದಾರೆ. 'ತುಜ್ ಸಂಗ್ ಪ್ರೀತ್ ಲಗೈ ಸಜ್ನಾ' ಎಂಬ ಹಿಂದಿ ಸೀರಿಯಲ್‌ನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ಈ ಜೋಡಿ ನಂತರ 2020ರಲ್ಲಿ ಮದುವೆಯಾಗಿದ್ದು, ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಈ ಜೋಡಿ ಈಗ
ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ಆದ ಪೂಜಾ & ಕುನಾಲ್‌ನಲ್ಲಿ ವ್ಲಾಗ್ ಮಾಡುವ ಮೂಲಕ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್‌ಸ್‌ಗಳಿಗೆ ತಾವು ಹಣಕಾಸಿನ ವಂಚನೆಗೊಳಗಾಗಿ ಎಲ್ಲವನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.
ಕಳೆದ ಎರಡು ಮೂರು ತಿಂಗಳುಗಳು ನಮಗೆ ತುಂಬಾ ಕಷ್ಟಕರವಾಗಿದ್ದವು. ಮುಂದೆ ಏನಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ನಾವು ಹಣಕಾಸಿನ ಹಗರಣಕ್ಕೆ ಬಲಿಯಾಗಿದ್ದೇವೆ. ನಾವು ನಮ್ಮ ಜೀವನದ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದೇವೆ. ನಮ್ಮ ಜೀವನದ ಎಲ್ಲಾ ಉಳಿತಾಯವನ್ನು ಕಳೆದುಕೊಂಡಿದ್ದೇವೆ. ಈಗ ನಾವು ನಮ್ಮ ಜೀವನವನ್ನು ಶೂನ್ಯದಿಂದ ಪ್ರಾರಂಭಿಸಬೇಕು ಆದರೆ ನಾವು ಸೋತಿಲ್ಲ, ನಾವು ನಮ್ಮನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಈ ಕಠಿಣ ಸಮಯದಲ್ಲಿ, ನಮಗೆ ಬೇಕಾಗಿರುವುದು ನಿಮ್ಮ ಬೆಂಬಲ ಮತ್ತು ಪ್ರಾರ್ಥನೆಗಳು. ನಮಗೆ ದೇವರಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಪೂಜಾ ಬ್ಯಾನರ್ಜಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಜೀವಮಾನದ ಸಂಪೂರ್ಣ ಉಳಿತಾಯವನ್ನು ಕಳೆದುಕೊಂಡಿದ್ದೇವೆ ಎಂದು ನಟಿ ಪೂಜಾ ಹೇಳಿದ್ದರೂ ತಾವು ಕಳೆದುಕೊಂಡ ನಿಖರವಾದ ಮೊತ್ತ ಎಷ್ಟು ಎಂಬುದನ್ನು ಈ ಜೋಡಿ ಹೇಳಿಕೊಂಡಿಲ್ಲ. ವಿಡಿಯೋದಲ್ಲಿ, ನಟ ಕುನಾಲ್ ವರ್ಮಾ ಅವರು ತಾವು ನಂಬಿದ ವ್ಯಕ್ತಿಯಿಂದ ಮೋಸ ಹೋಗಿದ್ದೇವೆ ಎಂದು ಹೇಳಿದ್ದಾರೆ. ಅವರು ಎರಡು ಮೂರು ವರ್ಷಗಳಿಂದ ಮನೆಗೆ ಬರುತ್ತಿದ್ದರು ಎಂದು ಕುನಾಲ್ ವರ್ಮಾ ಅವರು ಹೇಳಿದರು.
ನಾವು ನಿಮ್ಮ ಪ್ರೀತಿ ಮತ್ತು ಬೆಂಬಲದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಉದ್ಯಮಕ್ಕೆ ಸೇರಿದವರಾಗಿದ್ದೇವೆ. ನೀವು ಅದನ್ನು ನೋಡದಿದ್ದರೆ ನಮ್ಮ ಕೆಲಸವು ಸಂಕಷ್ಟಕ್ಕೀಡಾಗುತ್ತದೆ. ಈ ವಂಚನೆಯ ಹಿಂದೆ ಒಬ್ಬ ವ್ಯಕ್ತಿ ಇದ್ದಾನೆ ಮತ್ತು ನಾವು ದೊಡ್ಡ ಬಲಿಪಶುಗಳಾಗಿದ್ದೇವೆ ಎಂದು ನಿಮಗೆ ತಿಳಿಸಲು ನಾವು ಬಯಸುತ್ತೇವೆ ಎಂದು ಕುನಾಲ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.